Friday, July 17, 2015
Tuesday, July 14, 2015
Gangavati Student Day_ Green Day
ಪ್ರತಿಯೊಬ್ಬ ವಿದ್ಯಾರ್ಥಿಯೂ ಹಸಿರು ರಾಯಭಾರಿಯಾಗಬೇಕು
((ವಿದ್ಯಾರ್ಥಿ ದಿನಾಚರಣೆಯಲ್ಲಿ ಪರಿಸರ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ್ ಅರಸ್ ಕರೆ))
ಗಂಗಾವತಿ: ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಹಸಿರು ರಾಯಭಾರಿಗಳಾಗಬೇಕು ಎಂದು ಪರಿಸರ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ್ ಅರಸ್ ಹರ್ತಿಮಠ ಕರೆ ನೀಡಿದರು.
ಗಂಗಾವತಿಯ ವಡ್ಡರಹಟ್ಟಿ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ದಿನಾಚರಣೆ ಹಾಗೂ ‘ಮಕ್ಕಳಲ್ಲಿ ಪರಿಸರ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಸದಾ ನೆರಳನ್ನು ಕೊಡುವ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯುತ್ತಿದ್ದೇವೆಯೇ ಹೊರತು ಬೆಳೆಸುವ ಕಾರ್ಯ ಮಾಡುತ್ತಿಲ್ಲ. ಹೀಗೆ ಮರಗಳನ್ನು ಕಡಿಯುತ್ತಾ ಸಾಗಿದರೆ ಭೀಕರ ಬರಗಾಲ, ರೈತರ ಆತ್ಮಹತ್ಯೆ, ಬೆಳೆನಾಶ, ಕುಡಿಯುವ ನೀರಿಗಾಗಿ ಹಾಹಾಕಾರ, ಅಂತರ್ಜಲ ಮಟ್ಟ ಕುಸಿತ, ಜಾನುವಾರುಗಳಿಗೆ ಮೇವು ಕೊರತೆ ಎದುರಾಗಿ ನಮ್ಮ ಸುಂದರ ಭೂಮಿ ಬಂಜರು ಭೂಮಿಗಳಾಗುತ್ತವೆ ಇದರಿಂದ ರೈತ ಗುಳೆ ಹೋಗುವ ಹಂತಕ್ಕೆ ತಲುಪುತ್ತದೆ. ಇದನ್ನು ತಡೆಯಲು ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ಗಿಡ ಮರಗಳ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಬಿಸಿಲಿನ ತಾಪಮಾನ ತಡೆಯಲು ಪರಿಸರದಲ್ಲಿ ಗಿಡ ಮರಗಳು ಅತ್ಯವಶ್ಯ. ಇಂತಹ ಗಿಡಗಳನ್ನು ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡಬೇಕು. ಮನೆಗೊಂದು ಮಗು ಎನ್ನುವಂತೆ ಮನೆಯ ಮಗುವಿಗೊಂದು ಮರ ಎಂಬ ಘೋಷಣೆ ಮೊಳಗಬೇಕು ಅಲ್ಲದೆ ಅದು ಕಾರ್ಯಗತವಾದಾಗ ಸದಾ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದವೂ ಮಲೆನಾಡಿನಂತಾಗಿ ಸಮೃದ್ಧ ಮಳೆಯಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಮಲ್ಲೇಶಪ್ಪ ಅಡ್ಡೇದಾರ್ ಮಾತನಾಡಿ, ನಾವು ವಿವಿಧ ದಿನಾಚರಣೆಗಳನ್ನು ಆಚರಿಸುತ್ತೇವೆ ಆದರೆ ಎಲ್ಲದಕ್ಕಿಂತ ವಿದ್ಯಾರ್ಥಿಗಳ ದಿನಾಚರಣೆ ಶ್ರೇಷ್ಠವಾದುದು. ವಿದ್ಯಾರ್ಥಿದೆಸೆಯಲ್ಲಿಯೇ ಎಲ್ಲರೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಾಡಿನ ಅನೇಕ ಮಹನಿಯರು ಓದುವ ಸಮಯದಲ್ಲಿ ಉತ್ತಮವಾದ ಆಯ್ಕೆ ಮಾಡಿಕೊಂಡು ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. ಮಕ್ಕಳ ದಿನಾಚರಣೆಗಿಂತ ಇದು ಮಹತ್ವ ದಿನ ಎಂದರು.
ಇಂದು ಈ ಭಾಗದಲ್ಲಿ ನೀರಿಲ್ಲದೆ ಪರದಾಡುತ್ತಿದ್ದರೇ ಕರಾವಳಿ ಭಾಗದಲ್ಲಿ ಮಳೆ ಮತ್ತೆ ಆರಂಭವಾಗಿದೆ. ರಾಜಧಾನಿಯಲ್ಲಿ ಯಾವುದೇ ರೈತರಿಲ್ಲ ಆದರೂ ಅಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಲೆನಾಡಿನಂತೆ ನಾವು ನಮ್ಮ ಜಿಲ್ಲೆಗಳನ್ನು ಹಸಿರನ್ನಾಗಿ ಮಾಡಬೇಕು ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿ ಮುಖಂಡ ರಾಮಕೃಷ್ಣ ಮೌರ್ಯ ಮಾತನಾಡಿ ಇಂದು ಮಾಧ್ಯಮಗಳು ಸಾಕಷ್ಟು ವೇಗವಾಗಿವೆ. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಟಿವಿಗಳಲ್ಲಿ ಬರುವಂತಹ ಅನೇಕ ಮಕ್ಕಳ ಕಾರ್ಯಕ್ರಮಗಳನ್ನು ಭಾಗವಹಿಸುವ ಉತ್ಸಾಜಹ ತೋರಬೇಕು. ಹಿಂದೆ ಬಡತನ ಇದ್ದಿದ್ದರಿಂದ ಅನೇಕರಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಇಂದು ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು ಶಿಕ್ಷಣ ಮನೆ ಬಾಗಿಲಿಗೆ ಬಂದಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಕರಾದ ಯರ‌್ರೆಪ್ಪ ವಿದ್ಯಾರ್ಥಿ ದಿನಾಚರಣೆಯ ಪ್ರಾಸ್ತಾವಿಕ ಮಾತುಗಳನ್ನಾಡಿ ಹಳೆಯ ನೆನಪುಗಳು ಹಾಗೂ ಹಿಂದಿನ- ಇಂದಿನ ವಿದ್ಯಾರ್ಥಿಗಳ ಜೀವನದ ಕುರಿತು ವಿವರಿಸಿದರು.
ಶಾಲೆಯ ವಿದ್ಯಾರ್ಥಿಗಳು ಒಂದೊಂದು ಸಸಿ ನೆಡುವ ಪ್ರತಿಜ್ಞೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ರಜನಿ ಪಿ ರಾವ್ ಹಾಗೂ ರುದ್ರೇಶ್ ತಬಾಲಿ ಮಾತನಾಡಿದರು. ಶಿಕ್ಷಕರಾದ ಅಕ್ಬರ್ ಸಾಬ್ ಮಂಗಳೂರು, ಜಯಶ್ರೀ, ಕೆ.ಎಂ.ಚಂದ್ರಶೇಖರ, ಈ. ಉಮಾ, ಎಸ್, ಗೌಸಿಯಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರುದ್ರೇಶ್ ಸ್ವಾಗತಿಸಿ ವಂದಿಸಿದರು.
''ಇಂದು ನಾವು ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಬೇಕಿದೆ. ಮನೆಯ ಮಗುವಿಗೊಂದು ಮರ ಎಂಬುದನ್ನು ಎಲ್ಲರೂ ರೂಢಿಸಿಕೊಂಡಾಗ ಮಾತ್ರ ಬಯಲುಸೀಮೆಯನ್ನು ಮಲೆನಾಡಿನಂತೆ ಮಾಡಬಹುದು. ಇದಕ್ಕೆ ವಿದ್ಯಾರ್ಥಿ ಸಂಘಟನೆಗಳು ಕೈ ಜೋಡಿಸಿ ಶಾಲಾ ಕಾಲೇಜಿನಲ್ಲಿ ಖಾಲಿ ಇರುವ ಜಾಗಗಳಲ್ಲಿ ಗಿಡನೆಡುವ ಕೆಲಸ ಮಾಡಬೇಕು.''
>ಮಾಲತೇಶ್ ಅರಸ್ ಹರ್ತಿಮಠ, ಪರಿಸರ ಮಾಧ್ಯಮ ಪ್ರಶಸ್ತಿ ಪುರಸ್ಕೃತರು.
Subscribe to:
Posts (Atom)