Friday, December 7, 2018

ಪಾಳುಬಿದ್ದ ಹರ್ತಿಕೋಟೆ ಮೈಲಾರಲಿಂಗೇಶ್ವರ ದೇಗುಲ


ಪಾಳುಬಿದ್ದ ಹರ್ತಿಕೋಟೆ ಮೈಲಾರಲಿಂಗೇಶ್ವರ ದೇಗುಲ
  ನಿಧಿ ಆಸೆಗೆ ನೆಲಸಮವಾದ ಮೈಲಾರಲಿಂಗೇಶ್ವರ ದೇವಾಲಯ

  ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನ ಭಕ್ತರ ನೋವು  
  ದೇಗುಲದ ಜಾಗದಲಿ ಬೆಳೆದುನಿಂತ ಜಾಲಿ,
  ದೇವಾಲಯ ಮರು ನಿರ್ಮಾಣಕ್ಕೆ ಪಣತೊಟ್ಟ ಭಕ್ತಗಣ
  ನಿಧಿ ಆಸೆಗೆ ಬಲಿಯಾದ ಮೈಲಾರಲಿಂಗೇಶ್ವರ ದೇವಾಲಯ

ಹಿರಿಯೂರು: ಸನಾತನ ಕಾಲದಿಂದಲೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಇತಿಹಾಸಕ್ಕೆ ಬೇಕಾಗಿರುವ ಪುರಾವೆಗಳನ್ನು ಒದಗಿಸುತ್ತ ಬಂದಿದೆ. ವಿಜಯನಗರ ಅರಸರ ಕಾಲದಲ್ಲಿ ಅವರ ಪ್ರಾತ್ಯದಲ್ಲಿ ನಿರ್ಮಾಣವಾದ ನೂರಾರು ದೇವಾಲಯಗಳಿವೆ. ತಾಲೂಕಿನ ಹರ್ತಿಕೋಟೆ ಐತಿಹಾಸಿಕ. ಇದು ನೂರೊಂದು ದೇಗುಲಗಳ ಊರು ಎಂದೇ ಪ್ರಖ್ಯಾತಿ ಪಡೆದಿದೆ.
  ಹಾಲುಮತ ಕುರುಬ ಸಮುದಾಯವು ಎಲ್ಲಿ ನೆಲೆಸಿರುತ್ತದೆಯೋ ಅಲ್ಲಿ ಶೈವಸಂಸ್ಕೃತಿಯ ಪ್ರತೀಕವಾಗಿ ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿಂಹಾಸನ ಮಠಗಳನ್ನು ಸ್ಥಾಪಿಸುತ್ತ ಬುಡಕಟ್ಟು ಸಂಸ್ಕೃತಿಯನ್ನು ಪಾಲಿಸುತ್ತಾ ಬಂದ ಜನಾಂಗವಾಗಿದೆ. 
   ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮವು ಹಾಲುಮತ ಸಾಂಸ್ಕೃತಿಕ ವೀರರ ದೇವಸ್ಥಾನಗಳ ನೆಲೆವೀಡಾಗಿದೆ. ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಜಿಗಳ ಜನ್ಮಸ್ಥಳ.  ಇಲ್ಲಿ ಶ್ರೀ ಮದ್ ಆದಿ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಹರತಿ ಹಾಲುಮತ ಸದ್ದರ್ಮ ಸಂಸ್ಥಾನ ಹರ್ತಿಮಠವಿದೆ. ಶ್ರೀ ಕೆಂಚಲಿಂಗೇಶ್ವರ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಶ್ರೀ ವೀರಮಾಳೇಶ್ವರ, ಅರಸುಮಾತೆ ಶ್ರೀ ಬನಶಂಕರಿ ದೇವಿ ದೇಗುಲ, ಶಕ್ತಿಮಾತೆ ವೀರಬುಡ್ರಮ್ಮ ದೇವಿ, ಜಗತ್ಮಾತೆ ಓರುಗಮ್ಮ ದೇವಿ, ಕೊಲ್ಲಾಪುರದಮ್ಮ, ಗಂಗಿಮಾಳಮ್ಮ ದೇವಿ (ಗಂಗಜ್ಜಿ ಕೋವಿ) ಹೀಗೆ ಹಾಲುಮತಸ್ಥರ ದೇಗುಲಗಳು ಪಾರಮ್ಯತೆ ಮೆರೆದಿವೆ.
ಐತಿಹಾಸಿಕ ಮೈಲಾರಲಿಂಗ ದೇಗುಲ:  ಪ್ರಮುಖವಾಗಿ ವಿಜಯನಗರ ಸಾಮ್ರಾಜ್ಯದ ಹಕ್ಕಬುಕ್ಕರು ರ್ಮಿಸಿದ್ದೆನ್ನಲಾದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯ ಕುರುಬರ ಆರಾಧ್ಯದೈವ. ಹರ್ತಿಕೋಟೆ ಗ್ರಾಮದಲ್ಲಿರುವ ಸೀಬಾರ ಹೊಂದಿದ ಕಲ್ಯಾಣಿ (ಊರಮುಂದಿನ ಬಾವಿ)ಯ ಅಭಿಮುಖವಾಗಿ ನಿರ್ಮಿಸಲಾಗಿತ್ತು.
   ಇದನ್ನು ಜೇನುಮುದ್ರೆ ಕಲ್ಲುಗಳನ್ನು ಬಳಸಿ ವಿಜಯನಗರ ಶೈಲಿಯಲ್ಲಿ ಕಟ್ಟಿದ್ದ ದೇಗುಲ ಸುಂದರವಾದ ವಿನ್ಯಾಸಗಳಿಂದ ಕೂಡಿದ ಪಂಚಕಟ್ಟೆಗಳು, ದ್ವಾರಪಾಲಕನೊಳಗೊಂಡ ಬಾಗಿಲುವಾಡಗಳು, ವಿಶಾಲವಾದ ಹಜಾರ, ಸೊಂಡಿಲೆತ್ತಿಕೊಂಡು ದ್ವಾರದ ಬಳಿ ನಿಂತಿದ್ದ ಆನೆಗಳು, ಮೈಲಾರಲಿಂಗೇಶ್ವರನ ವಾಹನ ಕುದುರೆ, ಡಮರುಗ, ತ್ರಿಶೂಲಗಳನ್ನೊಳಗೊಂಡ ಕಲ್ಲಿನ ವಿಗ್ರಹಗಳು, ಕುದುರೆ ಮೇಲೆರಿ ನಿಂತಿದ್ದ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮರ ವಿಗ್ರಹಗಳು, ಕುದುರೆಗಳ ಮೇಲೆ ಸವಾರಿ ಮಾಡುತ್ತಿರುವ  ಹಾಲುಮತ ವೀರಗಾರರು (ಈರಗಾರರು) ದೀಪಸ್ಥಂಬ ಎಲ್ಲವೂ ಇಲ್ಲಿತ್ತು ಎಂದು ಹರ್ತಿಕೋಟೆಯ ಹಿರಿಯರೂ ಪ್ರಧಾನರಾದ ಹೆಚ್.ಆರ್. ಶಿವರುದ್ರಪ್ಪ ಗೌಡ್ರು, ಕೆಂಚಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕರಾದ ಚಳ್ಳಕೆರೆಯಪ್ಪ, ಹರ್ತಿಮಠದ ಗುರುಗಳಾದ ಗುರುಸಿದ್ದಯ್ಯ ಒಡೆಯರ್ ಹೇಳುತ್ತಿದ್ದರು.
   ಈಗ ದೀಪಸ್ಥಂಬ ಹಾಗೂ ಸಮೀಪವೇ ಮೈಲಾರಲಿಂಗೇಶ್ವರ ಪೀಠ(ಪಾನಿವಾಟ) ಇದ್ದು ಅದನ್ನು ಹರ್ತಿಮಠದ ಕಾತೀಕೋತ್ಸವದಲ್ಲಿ ಹಾಲುಮತ ಪರಂಪರೆಯಂತೆ ಕಾರ್ತಿಕೋತ್ಸವದ ವೇಳೆ ದೀಪ ಹಚ್ಚಲಾಗುತ್ತಿದೆ. 
   ಸುಮಾರು ೬೫-೭೦ ವರ್ಷಗಳ ಹಿಂದೆ ದೇಗುಲ ಚೆನ್ನಾಗಿದ್ದು, ಸರಪಳಿ ಪವಾಡ ಹಾಗೂ ದೋಣೆ ಸೇವೆ ಅದ್ದೂರಿಯಾಗಿ ನಡೆಯುತ್ತಿತ್ತು.  ಈವೇಳೆಯಲ್ಲಿ ಅಣ್ಣತಮ್ಮದಿರ ಅರಸು ಕುಲ ಹಾಗೂ ಹೊನ್ನು ಉಂಗುರ ಕುಲಭಾಂದವರ ನಡುವೆ ಸರಪಳಿ ಹರಿಯುವ ವಿಚಾರದಲ್ಲಿ ಗೊಂದಲವಾಗಿ ಪೂಜೆ ಮಾಡುವ ಉದ್ದೇಶದಲ್ಲಿಯೂ ಮನಸ್ತಾಪಗೊಂಡ ವೇಳೆ ಅರ್ಚಕರು ಪೂಜೆ ಸ್ಥಗಿತಗೊಂಡು ಇಲ್ಲಿದ್ದ ಮೈಲಾರಲಿಂಗೇಶ್ವರ ದೇವರವನ್ನು ಹಿರಿಯೂರಿಗೂ ಹಾಗೂ ಪರಿಕರಗಳನ್ನು ಶಿರಾ ತಾಲೂಕು ಪಟ್ಟನಾಯಕನಹಳ್ಳಿಗೆ ಹೊತ್ತೊಯ್ದು ಪ್ರತ್ಯೇಕ ಪೂಜೆ ನಡೆಸುತ್ತಿದ್ದಾರೆ ಎಂದು ಗ್ರಾಮದ ಹಿರಿಯರಾದ ಗೌಡ್ರು ಜಯಣ್ಣ ನೆನಪಿಸಿಕೊಳ್ಳುತ್ತಾರೆ.
   ಈ ಪರಿಣಾಮ ಇಲ್ಲಿದ್ದ ದೇಗುಲ ಕಾಲಕ್ರಮೇಣ ಪೂಜೆಯಿಂದ ದೂರು ಉಳಿದು ಪಾಳುಬೀಳಲಾರಂಬಿಸಿತು. ಈ ಹಿನ್ನೆಲೆಯಲ್ಲಿ ಇದು ಹಾಳಾಗುತ್ತಾ ಬಂದ ಪರಿಣಾಮ ಅರಸು ಕುಲದವರು ಮೂಲ ಮೈಲಾರಕ್ಕೂ ಹಾಗೂ ಗುಡಿಹಳ್ಳಿಗೂ ಇಂದಿಗೂ ನಡೆದುಕೊಳ್ಳುತ್ತಿದ್ದಾರೆ ಎಂದು  ಗಣಾಚಾರ್ ಲಿಂಗಪ್ಪ ಹಾಗೂ ಗೋಡೆ ಲಿಂಗಜ್ಜ ಅವರು ಅನೇಕ ಬಾರಿ ಹೇಳಿದ್ದರು.      ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಕುರುಹುಗಳಾದಿ ಕಲ್ಲುಚಪ್ಪಡಿಗಳು ಹಾಗೂ ದೇಗುಲದ ಮುಖ್ಯ ದ್ವಾರಕಲ್ಲುಗಳು ಇದೀಗ ಗ್ರಾಮದ ರಸ್ತೆಯ ಹಿಕ್ಕೆಲಗಳಲ್ಲಿ, ವೀರಭದ್ರೇಶ್ವರ ದೇಗುಲದ ಕಾಂಪೋಡ್‌ಗೆ, ಅನೇಕರ ಮನೆ ಬಾಗಿಲಿಗೆ, ಚರಂಡಿ ಬದಿಗೆ ಹಾಗೂ ಸರ್ಕಲ್‌ನಲ್ಲಿ ಕಂಡುಬರುತ್ತವೆ ಎಂದು ಮೈಲಾರಲಿಂಗೇಶ್ವರ ಗೊರವಯ್ಯರಿಗೆ ಧೀಕ್ಷೆ ಕೊಡುವ ಹರ್ತಿಕೋಟೆ ಗಣಾಚಾರಿ ವಂಶಸ್ಥರಾದ ರಾಮಲಿಂಗಯ್ಯ ನವರು ವಿವರಿಸುತ್ತಾರೆ.
   ನಿಧಿ ಇರುವ ಕುರುಹು:  ಇದೀಗ ಹಾಲುಮತ ಕುರುಬ ಸಮುದಾಯದವರು ತಮ್ಮ ಮನೆದೇವರಾದ ಮೈಲಾರಲಿಂಗೇಶ್ವರನ ದೇಗುಲ ಜೀರ್ಣೋದ್ದಾರ ಮಾಡಲು ಜ್ಯೋತಿಷಿಗಳ ಬಳಿ ವಿಚಾರಿಸಿದಾಗ ದೇಗುಲದ ಆಳ ಅಡಿಯಲ್ಲಿ ನಿಧಿ ಇದೆ ಎಂಬ ಚಿಹ್ನೆ ಬಂದಿದ್ದು ಅನೇಕ ವರ್ಷಗಳ ಹಿಂದೆ ನಿಧಿಗಾಗಿ ದೇಗುಲ ಇದ್ದ ವೇಳೆಯೂ ದೇಗುಲ ಪಾಳುಬಿದ್ದ ವೇಳೆಯೂ ನಿಧಿಶೋಧ ವಿಫಲವಾಗಿದೆ ಎಂಬ ಅಂಶ ತಿಳಿದು ಬಂದಿದ್ದು, ದೇಗುಲದ ಸ್ಥಳದಲ್ಲಿ ಕಲ್ಲನ್ನು ನೆಡಲಾಗಿದೆ ಎಂದು ಹಿರಿಯರು ಹೇಳುತ್ತಾರೆ.
   ವಿಜಯನಗರ ಕಾಲದ ಅನೇಕ ದೇವಾಲಯಗಳು  ಹಾಗೂ ನಿಧಿ ಆಸೆಗಾಗಿ ವಿಗ್ರಹಗಳ ವಿರೂಪ ಮಾಡಿರುವುದು ನಾವು ಕೇಳಿದ್ದೇವೆ. ಅಂತೆಯೇ ಹಾಲುಮತದ ಮಠವಾಗಿರುವ ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿಯಲ್ಲಿರುವ ಹಂಪಯ್ಯನಮಠದಲ್ಲಿ ನಿಧಿ ಇರಬಹುದೆಂದು ಅನೇಕ ವಿಗ್ರಹಗಳನ್ನು ಗುಂಡಿ ತೋಡಿ ಎತ್ತಿಕೊಂಡು ಹೋಗಿದ್ದಾರೆ. ದೇಗುಲದಲ್ಲಿ ಗುಂಡಿ ಅಗೆಯಲಾಗಿದೆ. ಕೆಲವೊಂದು ವಿಗ್ರಹಗಳು ಇಲ್ಲಿನ ಸುತ್ತಮುತ್ತಲ ಜಮೀನುಗಳ ಬದುಗಳಲ್ಲಿ ಕಾಣಸಿಗುತ್ತವೆ. 
  ಅದೇ ರೀತಿ ಹರ್ತಿಕೋಟೆಯ ಶ್ರೀ ಮೈಲಾರಲಿಂಗೇಶ್ವರ ದೇವಾಲಯದಲ್ಲಿದ್ದ ಅನೇಕ ವಿಗ್ರಹಗಳನ್ನು, ಮಾಸ್ತಿಗಲ್ಲು, ವೀರಗಲ್ಲುಗಳನ್ನು ಶ್ರೀ ರೇವಣಸಿದ್ದೇಶ್ವರ ಸಿಂಹಾಸನದ ಹರ್ತಿಮಠದ ಒಡೆಯರ್‌ಗಳ ಸಮಾಧಿ ಬಳಿಯೇ ಇಡಲಾಗಿದೆ. 
  ಹಾಲುಮತ ಸಂಸ್ಕೃತಿ, ಬುಡಕಟ್ಟು ಪರಂಪರೆಯ ಅಧ್ಯಯನ ಮತ್ತು ಸಂಶೋಧನಾ ಕಾರ್ಯದಲ್ಲಿ ನಿರತರಾಗಿರುವವರು ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯ ಬಳ್ಳಾರಿ ಜಿಲ್ಲೆ ಮೈಲಾರ ಸುಕ್ಷೇತ್ರದ ಕಪಿಲಮುನಿ ಮಹಾಸಂಸ್ಥಾನದ ಗುರುಗಳಾದ ಶ್ರೀ ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿ ಅವರ ಬಳಿ ಚರ್ಚಿಸಿದಾಗ ಅವರು ಇಲ್ಲಿರುವ ಮೈಲಾರ ದೇಗುಲದ ಬಗ್ಗೆ ಮಾಹಿತಿ ನೀಡಿದ್ದು ಇದು ಪುರಾತನ ಕಾಲದ ಕುರುಹುಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. 
  ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಅಥವಾ ಸೀಬಾರ ಮರು ನಿರ್ಮಾಣ ಮಾಡಬೇಕಾಗಿರುವ ಹಿನ್ನಲೆಯಲ್ಲಿ  ಇಷ್ಟೆಲ್ಲ ಅಂಶಗಳು ಬಯಲಿಗೆ ಬಂದಿವೆ. ಎಲ್ಲಾ ದೇಗುಲಗಳು ಜೀರ್ಣೋದ್ದಾರವಾಗುತ್ತಿರುವ ವೇಳೆ  ಮೈಲಾರಲಿಂಗೇಶ್ವರ ದೇಗುಲದ ಐತಿಹಾಸಿಕ ಸ್ಥಳದಲ್ಲಿ ಮರುನಿರ್ಮಾಣಕಾರ್ಯ ನಡೆಯಲಿ ಎಂದು ನಿವೃತ್ತ ಶಿಕ್ಷಕರೂ ಗ್ರಾಮದ ಹಿರಿಯರಾದ ಹೆಚ್.ಜಿ. ಹೆಗ್ಗಯ್ಯನವರು ಆಗ್ರಹಿಸಿದ್ದಾರೆ.


ಎಲ್ಲೆಡೆ ಮಠಗಳ ಸ್ಥಾಪನೆ.
ವಿಜಯನಗರದ ಹಕ್ಕಬುಕ್ಕರ ಅವಧಿಯಲ್ಲಿ ಹಾಲುಮತ ಸಮುದಾಯವೂ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ದೊಡ್ಡೇರಿ ಮಠ. ಪರಶುರಾಂಪುರ ಹೋಬಳಿಯಲ್ಲಿ ಹೋಳ ಹಂಪಯ್ಯ ಓಡೆಯರ್ ಮಠ, ಹಿರಿಯೂರು ತಾಲೂಕಿನ ಹರ್ತಿಕೋಟೆಯಲ್ಲಿ ಹರ್ತಿಮಠ, ಹಿರಿಯೂರು ನಗರದಲ್ಲಿ ರೇವಣಸಿದ್ದೇಶ್ವರ ಮಠ, ಹೊಳಲ್ಕೆರೆ ತಾಲೂಕಿನ ತಾಳೀಕಟ್ಟೆಯಲ್ಲಿ ಬೀರಲಿಂಗೇಶ್ವರ ಮಠ. ಹೀಗೆ ಎಲ್ಲೆಡೆ ಮಠಗಳ ಸ್ಥಾಪನೆ ಜೊತೆಗೆ ಶ್ರೀ ಮೈಲಾರಲಿಂಗೇಶ್ವರ ದೇವಾಲಯಗಳೂ ಸ್ಥಾಪಿತವಾಗಿವೆ ಎಂದು ಇತಿಹಾಸ ಅಧ್ಯಯನ ಹಾಗೂ ಸಂಶೋಧನೆ ವೇಳೆ ಸ್ಪಷ್ಟವಾಗಿ ತಿಳಿಯುತ್ತದೆ ಎಂದು  ಸಂಶೋಧಕ ಲಿಂಗದಹಳ್ಳಿ ಹಾಲಪ್ಪ ತಿಳಿಸಿದ್ದಾರೆ.


ಪೋಟೋ೧ ನೆಲಸಮವಾಗಿರುವ ಮೈಲಾರ ಲಿಂಗೇಶ್ವರ ದೇಗುಲದ ಮುಂಭಾಗದ ದೀಪಸ್ಥಂಬ 
ಪೋಟೋ ೨ ದೇಗುಲದ  ಸಮೀಪವೇ ಬಿದ್ದಿರುವ ಮೈಲಾರಲಿಂಗೇಶ್ವರ ಪೀಠ(ಪಾನಿವಾಟ)
ಪೋಟೋ ೩ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಜಿ
ಪೊಟೋ ೪ ಮೈಲಾರಲಿಂಗೇಶ್ವರ ದೇಗುಲದ ಗಣಾಚಾರಿ ರಾಮಲಿಂಗಯ್ಯ



ನೆಲಸಮವಾಗಿರುವ ಮೈಲಾರ ಲಿಂಗೇಶ್ವರ ದೇಗುಲದ ಮುಂಭಾಗದ ದೀಪಸ್ಥಂಬ 

ದೇಗುಲದ  ಸಮೀಪವೇ ಬಿದ್ದಿರುವ ಮೈಲಾರಲಿಂಗೇಶ್ವರ ಪೀಠ(ಪಾನಿವಾಟ)

ದೀಪಸ್ಥಂಬ 

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಜಿ

ಮೈಲಾರಲಿಂಗೇಶ್ವರ ದೇಗುಲದ ಗಣಾಚಾರಿ ರಾಮಲಿಂಗಯ್ಯ