Wednesday, December 25, 2013

ಡಾ. ಬಿ.ಕೆ.ರವಿಗೆ ಡಿ.28ರಂದು ಅಭಿನಂದನೆ


 ಡಾ. ಬಿ.ಕೆ.ರವಿಗೆ ಡಿ.28ರಂದು ಅಭಿನಂದನೆ 
 *ಮುಖ್ಯಮಂತ್ರಿಯಿಂದ ಅಭಿನಂದನಾ ಗ್ರಂಥ ಬಿಡುಗಡೆ

 
ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ಬಾನುಲಿ ಬರಹಗಳಿಂದ ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ  ಪ್ರಾಧ್ಯಾಪಕ ಡಾ. ಬಿ.ಕೆ.ರವಿ 50 ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ಬಳಗ ಅಭಿನಂದನಾ ಸಮಾರಂಭ ಆಯೋಜಿಸಿದೆ.
 ಡಾ. ಬಿ.ಕೆ.ರವಿ ಅಭಿನಂದನಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಬಹುಮುಖ ಪ್ರತಿಭೆಯಾಗಿರುವ ಬಿ.ಕೆ.ರವಿ ಅವರನ್ನು ಅಭಿನಂದಿಸಲು ವಿದ್ಯಾರ್ಥಿ ಮಿತ್ರರು ಹಾಗೂ ಆಪ್ತರು ಡಿ.28ರಂದು ಬೆಂಗಳೂರು ವಿವಿಯ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾರೆ ಎಂದರು.
  ಡಾ. ಬಿ.ಕೆ.ರವಿ ಅಭಿನಂದನಾ ಗ್ರಂಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಬಿ.ಕೆ. ರವಿ ರಚಿಸಿರುವ ಟಿಎಸ್ಸಾರ್ ಮತ್ತು ಕನಕ ಕಾವ್ಯಾಂಜಲಿ ಕೃತಿಗಳು ಲೋಕಾರ್ಪಣೆಯಾಗಲಿವೆ. ಸಂಸದ ವಿಶ್ವನಾಥ್, ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
 ಡಾ ಬಿ.ಕೆ.ರವಿ ಬಾನುಲಿ ಕೇಂದ್ರಕ್ಕೆ ಬರೆದಿರುವ ಪ್ರತಿ ಲೇಖನದಲ್ಲೂ ಸಾಮಾಜಿಕ ಕಳಕಳಿ, ಪತ್ರಿಕೋದ್ಯಮದ ಕುರಿತಾದ ಕಾಳಜಿ, ಚಿತ್ರದುರ್ಗದ ಮೇಲಿನ ಅವರ ಪ್ರೇಮ ವ್ಯಕ್ತವಾಗುತ್ತದೆ. ಬಾನುಲಿಗೆ ಬರೆಯುವ ಲೇಖನಗಳು ಹೇಗಿರಬೇಕು ಎಂಬುದಕ್ಕೂ ಈ ಪುಸ್ತಕ ಕೈಪಿಡಿಯಾಗಿದೆ ಎಂದರು.
  ಡಾ. ಬಿ.ಕೆ. ರವಿಯವರು ನಾಟಕ ಬರಹಗಳನ್ನು ಸರಾಗವಾಗಿ ಬರೆದಿದ್ದಾರೆ. ‘ಬಾನುಲಿ ಬರಹಗಳು’ ಪುಸ್ತಕದಲ್ಲಿರುವ ‘ದುರ್ಗದ ದುರ್ಗಿ’, ‘ತಿರುಕನ ಕನಸು’, ‘ಕಿರುಕುಳ ಕೊಡುವ ಕೀಟಗಳು’ ನಾಟಕಗಳು ಮನರಂಜನೆ ಹಾಗೂ ಜನಜಾಗೃತಿ ಮೂಡಿಸುವಂತವು. ಬಾನುಲಿಯ ಕೇಳುಗರಿಗೆ ಬೇಸರವಾಗದಂತೆ ಕಡಿಮೆ ಸಮಯದಲ್ಲಿ ಮನರಂಜನೆ, ಮಾಹಿತಿ, ಸಂದೇಶಗಳನ್ನು ನೀಡುತ್ತವೆ ಎಂದು ರೇವಣ್ಣ ಹೇಳಿದರು.
 ಸಮೂಹ ಮಾಧ್ಯಮ ಕುರಿತಾದ ಲೇಖನಗಳು ಕ್ರೀಡಾರಂಗ, ವಿಜ್ಞಾನ, ಹಬ್ಬಗಳಿಗೆಂದೇ ವಿಶೇಷವಾಗಿ ರಚಿಸಿದ ರೂಪಕಗಳು, ಹಾಸ್ಯ, ವಿಡಂಬನಾತ್ಮಕ ಲೇಖನಗಳು-ನಾಟಕಗಳನ್ನು ಅವರ ಅಭಿನಂದನಾ ಗ್ರಂಥ ಒಳಗೊಂಡಿದೆ.  ಪತ್ರಕರ್ತರು, ಪತ್ರಕರ್ತರ ಮೇಲಿನ ಸಾಮಾಜಿಕ ಜವಾಬ್ದಾರಿಗಳು, ಕ್ರೀಡಾ ಜಗತ್ತಿನಲ್ಲಿ ಸಮೂಹ ಮಾಧ್ಯಮಗಳ ಪಾತ್ರಗಳ ಬಗ್ಗೆಯೂ ಗ್ರಂಥದಲ್ಲಿ ಬೆಳಕು ಚೆಲ್ಲಲಾಗಿದೆ ಎಂದರು.

ರಾಮಗಿರಿಯಲ್ಲಿ ಜಿಎಸ್‌ಎಸ್ ಬಾಲ್ಯದ ನೆನಪುಗಳು...




 ಮಾಲತೇಶ್ ಅರಸ್ ಹರ್ತಿಮಠ
 ಅದು ಅವರ ಬಾಲ್ಯದ ದಿನಗಳ ಸಂಭ್ರಮದ ಕ್ಷಣ, ಸುಮಾರು 76 ವರ್ಷಗಳ ಹಿಂದಿನ ನೆನಪು. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಆಡಿದ್ದು, ಕುಣಿದದ್ದು, ನಲಿದ ಜಾಗ.
  ಹೌದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಪುಣ್ಯ ಕ್ಷೇತ್ರವೇ ಜಿಎಸ್‌ಎಸ್ ಅವರ ಬಾಲ್ಯದ ದಿನಗಳ ಕಳೆದ ಊರು. ಗ್ರಾಮದಲ್ಲಿರುವ ತೇರಿನ ಮನೆಯ ಪಕ್ಕದಲ್ಲೇ ಇದ್ದ ಮನೆಯಲ್ಲಿ ಅವರ ವಾಸ. ತಂದೆ ಜಿ. ಶಾಂತವೀರಪ್ಪ ಅವರು ಇಲ್ಲಿನ ಸರ್ಕಾರಿ ( ಪ್ರಾಥಮಿಕ(ಮಿಡ್ಲಿ ಸ್ಕೂಲ್) ಶಾಲೆಯಲ್ಲಿ ಮೇಷ್ಟ್ರಾಗಿದ್ದವರು. ಆಗ ಜಿಎಸ್‌ಎಸ್ ಅವರು 5ರಿಂದ 7 ನೇ ತರಗತಿವರೆಗೆ ರಾಮಗಿರಿಯಲ್ಲಿ ಅಧ್ಯಯನ ಮಾಡಿದ್ದರು. ಇನ್ನೂ ವಿಶೇಷ ಎಂದರೇ ಜಿಎಸ್‌ಎಸ್ ಅವರ ತಾಯಿ ಶಾಂತಮ್ಮರ ತವರೂರಾದ ಹೊಳಲ್ಕೆರೆಯಲ್ಲಿಯೇ ಜಿಎಸ್‌ಎಸ್ ಜನಿಸಿದ್ದು.
 ಬಾಲ್ಯ ಕಳೆದ ರಾಮಗಿರಿಯನ್ನು ಅವರು ಎಂದೂ ಮರೆಯಲಿಲ್ಲ. ಸಾಕಷ್ಟು ಪ್ರಶಸ್ತಿಗಳು ಬಂದರೂ ಇಲ್ಲಿಗೆ ಬಂದು  ಹೋಗುತ್ತಿದ್ದರು ಅಲ್ಲದೆ ಬೆಟ್ಟದ ಮೇಲೆ  ತೆರಳಿ ಕವಿತೆ ರಚಿಸುತ್ತಿದ್ದರು.
 ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ, ಹೂ ಬಿರಿದು ನಿಂತ ಗಿಡಗಂಟೆಗಳು, ಗಂಧ, ಹೊನ್ನೆ, ಬೀಟೆ ಸೇರಿದಂತೆ ವಿವಿಧ ಬಗೆಯ ಮರಗಳ ಸುಮಧುರ ಘಮಲು, ಸುವಾಸನೆಯಿಂದ ಕೂಡಿದ ವನ ಸುಮಗಳು, ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು,  ಕಿವಿಗಿಂಪಾದ ಜಾಗಟೆ ನಿನಾದ, ಕರಡಿಗೆ ಸದ್ದು ಇವೆಲ್ಲವೂ ಜಿಎಸ್‌ಎಸ್ ಅವರಿಗೆ ಸ್ಪೂರ್ತಿಯಾಗಿದ್ದವು.
 ಸುಂದರ ಬೆಟ್ಟಗಳ ನಡುವೆ ಕಾಣುವ ಪಾವನ ಕ್ಷೇತ್ರದೊಳಗೆ ಅವರ ಸಾಕಷ್ಟು ನೆನಪಿನ ಕವಿತೆಗಳಿವೆ. ಕೆರೆಯ ದಂಡೆ ಮೇಲೆ ಕುಳಿತು  ಪ್ರಕೃತಿ ಮಡಿಲಲ್ಲಿ ನಲಿದಾಡಿದ್ದಾರೆ. ಶಂಕರನ ಬಂಡೆಯ ಮೇಲೆ ಜಾರುಬಂಡಿ ಆಡಿದ್ದಾರೆ. ಸಾಕಷ್ಟು ಕನಸುಗಳನ್ನು ಅರಳಿಸಿದ್ದಾರೆ.
 ರಾಮಗಿರಿ ದರ್ಶನ:
 ಹೌದು, ನಿಜಕ್ಕೂ  ರಾಮಗಿರಿ ಕರಿಸಿದ್ದೇಶ್ವರ ಇರುವ ಪಾವನ ಕ್ಷೇತ್ರ. ಅಂತೆಯೇ ಸಾಹಿತ್ಯ ಲೋಕದಲ್ಲಿ ನೋಡಿದರೂ ಪಾವನ ಸ್ಥಳವಾಗಿದೆ. ಇವರ ಬಾಲ್ಯದ ದಿನಗಳನ್ನು ಸಂಗ್ರಹಿಸುವಲ್ಲಿ ಶಿಕ್ಷಕ ರಾಮಗಿರಿ ಕರಿಸಿದ್ದಪ್ಪ ಕುಂಬಾರ ಅವರು ಸಾಕಷ್ಟು ರೀತಿಯ ಶ್ರಮ ವಹಿಸಿ ತಯಾರಿಸಿದ ‘ರಾಮಗಿರಿ ದರ್ಶನ’ ಎಂಬ ಸಮಗ್ರ ಧಾರ್ಮಿಕ ಪುಸ್ತಕ  ಹಾಗೂ ಕಳೆದ ವರ್ಷ 2012 ರಂದು ‘ರಾಮಗಿರಿ ದಿನ ದರ್ಶಿಕೆ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದರು. ಅದರಲ್ಲಿ ಅವರ ಹಸ್ತಕ್ಷರಗಳೂ, ಬಾಲ್ಯದ ಬರಹಗಳೂ ಇವೆ.
 ಬಂಡೆ ಹೂವು: 
 ರಾಮಗಿರಿ ಪ್ರಕೃತಿ ಸೌಂದರ್ಯದ ಬೆಟ್ಟದ ಮೇಲಿನ ಬಂಡೆಯೊಂದರ ಜತೆ ದೇವ ಕಣಗಿಲ ಹೂವಿನ ಮರಗಳು ಸಾಕಷ್ಟಿವೆ. ಇವುಗಳನ್ನು ಕಂಡು ಜಿಎಸ್‌ಎಸ್ ಅವರು ಹೂವುಗಳು ಬೆಳೆದಿದ್ದರಿಂದ ಪ್ರೇರೇಪಿತರಾಗಿ ‘ಬಂಡೆ ಹೂ’ ಎಂಬ ಕವಿತೆ ರಚಿಸಿದ್ದಾರೆ. ಅದನ್ನು ಅನುಸರಿಸಿ ಬಂಡೆ ಹೂವು ಸಾಕ್ಷೃ ಚಿತ್ರವಾಗಿದೆ.
 ಇದೇ ಡಿಸೆಂಬರ್ 16 ರಂದು ಜರುಗಿದ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಡೇ ಕಾರ್ತಿಕ ಮತ್ತು ಲಕ್ಷ ದೀಪೋತ್ಸವದಲ್ಲಿ ರಾಮಗಿರಿ ಕರಿಸಿದ್ದಪ್ಪ ಕುಂಬಾರ ನಿರ್ದೇಶನದ ಜಿಎಸ್‌ಎಸ್ ಅವರ ಸವಿ ನೆನಪುಗಳೊಂದಿಗೆ  ಸಂಗ್ರಹಿಸಿರುವ ‘‘ಬಂಡೆ ಹೂವು’’ ಎಂಬ ಸಾಕ್ಷೃಚಿತ್ರವನ್ನು ಸಾಹಿತಿ ಚಂದ್ರಶೇಖರ ತಾಳ್ಯ ಅವರು ಬಿಡುಗಡೆ ಮಾಡಿದ್ದರು. ಅದರಲ್ಲಿ  ಜಿಎಸ್‌ಎಸ್ ಅವರ ಬಾಲ್ಯದ ನೆನಪಿನ ಅಪಾರ ಬುತ್ತಿ ಇದೆ. ಕವಿಗಳ ಮಾತಿದೆ. ಬಾಲ್ಯದ ನೆನಪಿದೆ.  ಕವಿ ಎಚ್‌ಎಸ್ ವೆಂಕಟೇಶ್ ಮೂರ್ತಿ ಜತೆ ಗ್ರಾಮಸ್ಥರು ಸನ್ಮಾನಿಸಿದ ಚಿತ್ರಣಗಳಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ ಕುಮಾರ್, ಮುಖಂಡ ಯಾಲಕ್ಕಿ ಬಸವರಾಜಪ್ಪ ಅವರ ಮಾತುಗಳಿವೆ.

 ಕೋಟ್.
 ಕವಿಯಾಗಿ, ವಿಮರ್ಶಕರಾಗಿ, ಪ್ರಾಧ್ಯಾಪಕರಾಗಿ ಅವರ ಕೊಡುಗೆ ಅನನ್ಯ. ಘನತೆವೆತ್ತ ಪ್ರಾಧ್ಯಾಪಕ, ಸರ್ವಶ್ರೇಷ್ಠ ಸಂಘಟಕ, ಕವಿ, ವಿಮರ್ಶಕ. ಪದ್ಯ- ಗದ್ಯ ಎರಡರಲ್ಲೂ ಅವರು ನಿಸ್ಸೀಮರಾಗಿದ್ದರು. ಅವರೊಂದಿಗಿದ್ದ ದಿನಗಳು ಇನ್ನೂ ನೆನಪು ಮಾತ್ರ.
 ಚಂದ್ರಶೇಖರ ತಾಳ್ಯ.  ಹಿರಿಯ ಕವಿ.

 ಕೋಟ್.
 ಕನ್ನಡದ ಮೇರುಕವಿಯ ಅಗಲಿಕೆಯಿಂದ ರಾಮಗಿರಿ ಗ್ರಾಮದ ಮೇಲೆ ಮೋಡ ಮುಸುಕಿದೆ. ರಾಷ್ಟ್ರಕವಿಯ ಕಣ್ಮರೆಯಿಂದ ಕರ್ನಾಟಕಕ್ಕೆ ತುಂಬಲಾರದ ಹಾನಿಯಾಗಿದೆ. ರಾಮಗಿರಿ ಇದೀಗ ಅನಾಥವಾಗಿದ್ದು ನಮಗಿನ್ನು ನೆನಪು ಮಾತ್ರ. ಪ್ರತಿ ವರ್ಷ ರಾಮಗಿರಿಯಲ್ಲಿ  ಜಿಎಸ್ ಶಿವರುದ್ರಪ್ಪ ಸಾಹಿತ್ಯ ವೇದಿಕೆ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಆಚರಿಸುತ್ತೇವೆ. ಜನವರಿ 18ರಂದು ಬಂಡೆ ಹೂವು ಕವಿತೆಯ ಶಿಲಾಶಾಸನ ಅನಾವರಣ ನಡೆಯಲಿದೆ.
 ರಾಮಗಿರಿ ಕರಿಸಿದ್ದಪ್ಪ ಕುಂಬಾರ, ಸಾಹಿತಿ



Monday, December 9, 2013

Thursday, December 5, 2013

ಕುಣಿತ ನಿಲ್ಲಿಸಿ ಹಾಸಿಗೆ ಹಿಡಿದ ಮೈಲಾರಪ್ಪ


 ಕುಣಿತ ನಿಲ್ಲಿಸಿ ಹಾಸಿಗೆ ಹಿಡಿದ ಮೈಲಾರಪ್ಪ

 * ನರದೌರ್ಬಲ್ಯದಿಂದ ಸ್ವಾಧೀನ ಕಳೆದು ಕೊಂಡ ಕೈಕಾಲುಗಳು *ಜೀವನಾಧಾರಕ್ಕೆ ತಲೆ ಮೇಲೆ ಕೈ ಹೊತ್ತ ಕುಟುಂಬ
 ಚಿತ್ರದುರ್ಗ: ಆತ ಪವಾಡದ ಗೊರವಪ್ಪ, ಕೈಯಲ್ಲಿ ಡಮರುಗ ಹಿಡಿದು ಹೆಜ್ಜೆ ಹಾಕುತ್ತಿದ್ದರೇ ಅಲ್ಲಿ ಭಕ್ತರ ಮೈಮನಗಳು ತಲ್ಲಣಗೊಳ್ಳುತ್ತಿದ್ದವು. ತಮ್ಮ ಭಕ್ತಿಯಿಂದ ಸಹಸ್ರಾರು ಭಕ್ತರನ್ನು ಒಂದೆಡೆ ಸೇರಿಸುವ ಶಕ್ತಿ ಪಡೆದಿದ್ದವರು. ಚಿತ್ರದುರ್ಗ ಜಿಲ್ಲೆ ಅಷ್ಟೇ ಅಲ್ಲದೆ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ತುಮಕೂರು, ಮೈಸೂರು, ಬೆಂಗಳೂರು, ಹಾವೇರಿ, ಹೀಗೆ ಎಲ್ಲಾ ಕಡೆ ತನ್ನ ಪವಾಡವನ್ನು ಮಾಡಿ ತೊರಿಸಿದ್ದಾರೆ.
  ತನ್ನ ಆರಾಧ್ಯ ದೈವ ಮೈಲಾರಲಿಂಗೇಶ್ವರ ಸ್ವಾಮಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ನಾಲಿಗೆಯಲ್ಲಿ ತ್ರಿಶೂಲ, ಕೈಯಲ್ಲಿ ಪಂಚ ತ್ರಿಶೂಲವನ್ನು ಚುಚ್ಚಿಕೊಂಡು ಬೆಂಕಿ ಹಚ್ಚಿಕೊಂಡು ದೇವರಿಗೆ ಅರ್ಪಿಸುವ ಅವರ ಪವಾಡಕ್ಕೆ ಸರಿಸಾಟಿ ಇಲ್ಲ. ಇದೀಗ ದಿಢೀರ್ ಎಂದು ಆ ಗೊರವಪ್ಪನಲ್ಲಿ ಶಕ್ತಿ ಅಡಗಿ ಹೋಗಿದೆ. ದೇಹದ ನರಗಳಲ್ಲಿ ನಿಶಕ್ತಿ ಕಾಣಿಸಿಕೊಂಡು ಹಾಸಿಗೆ ಹಿಡಿದಿದ್ದಾರೆ.
  ಹೌದು, ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಪವಾಡದ ಮೈಲಾರಪ್ಪ ಅಂದ್ರೆ ಸಾಕು ಅಲ್ಲಿ ಗೊರವರ ಕುಣಿತ ಭವ್ಯತೆ ಕಂಡು ಬರುತ್ತಿತ್ತು. ಎಲ್ಲರಲ್ಲಿಯೂ ಇವರ ಕುಣಿತ ರೋಮಾಂಚನಗೊಳಿಸುತ್ತಿತ್ತು. ಮೈಸೂರು ದಸರಾದಲ್ಲಿಯೂ ತನ್ನ ಜಾನಪದ ಕುಣಿತವನ್ನು ಮೇಳೈಸಿದ ಕಲಾವಿದ ಇಂದು ನರ ದೌರ್ಬಲ್ಯದ ಕಾಯಿಲೆಯಿಂದ ಬಳಲುತ್ತಿದ್ದಾರೆ.
 ಏಳುಕೋಟಿ, ಏಳುಕೋಟಿ ಏಳುಕೋಟ್ಯೋ ಚಾಂಗಮಲೋ ಚಾಂಗಮಲೋ ಎಂದು ಕೂಗುತ್ತಿದ್ದ ಮೈಲಾರಪ್ಪನಲ್ಲಿ ಇದೀಗ ಆ ಶಕ್ತಿ ಇಲ್ಲದಾಗಿದೆ. ದೋಣಿ ಸೇವೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಆ ಕಾಲುಗಳು, ಡಮರುಗ ಹಿಡಿದು ಎಲ್ಲರ ಮೈ ನವಿರೇಳುಸುತ್ತಿದ್ದ ಆ ಕೈಗಳೂ ಇದೀಗ ಮೌನವಾಗಿವೆ. ಹಾಲು, ಹಣ್ಣು, ತುಪ್ಪ, ಸಕ್ಕರೆ, ಹೀಗೆ  ಪಂಚಾಮೃತವನ್ನು ನೀಡುತ್ತಿದ್ದ ಮೈಲಾರಪ್ಪನ ದೋಣಿ ಬರಿದಾಗಿದೆ.
  ಕರಿಯ ಕಂಬಳಿಯಿಂದ ಮಾಡಿದ ಅಂಗಿ. ಕೈಯಲ್ಲಿ ಕೊಳಲು. ಡಮರುಗ. ತ್ರಿಶೂಲ, ಭಂಡಾರದ ಬಟ್ಟಲು. ದೋಣಿ ಹಿಡಿದು ಸದಾ ಕಾಲವೂ ಗೊರವರ ಕುಣಿತವನ್ನೇ ನಂಬಿದ್ದ ಮೈಲಾರಪ್ಪ ಅವರಿಗೆ ಇದೀಗ  ಆರ್ಥಿಕ ನೆರವಿನ ಅಗತ್ಯವಿದೆ.
 ಪತ್ನಿ ಅಂಭಾದೇವಿ ಮತ್ತು ಪಿಯುಸಿ ಮುಗಿಸಿ ಮುಂದಿನ ಶಿಕ್ಷಣಕ್ಕೆ ಕಾದು ಕುಳಿತಿರುವ ಮಗಳು ನೀತಾ ಅವರಿಗೆ ಮೈಲಾರಪ್ಪನವರ ದುಡಿಮೆಯೇ ಜೀವನಾಧಾರವಾಗಿದೆ. ಆದರೆ ಇದೀಗ ಹಾಸಿಗೆ ಹಿಡಿದಿರುವ ಮೈಲಾರಪ್ಪ ಅವರ ಚಿಕಿತ್ಸೆಗೆ ಸುಮಾರು 4 ಲಕ್ಷ ರೂಗಳಷ್ಟು ಖರ್ಚಾಗಲಿದೆ. ದಯಮಾಡಿ ಸಂಘ ಸಂಸ್ಥೆಗಳು, ದಾನಿಗಳು, ಮುಖಂಡರು ನೆರವು ನೀಡಬೇಕೆಂದು ಕುಟುಂಬವರ್ಗ ಮನವಿ ಮಾಡಿಕೊಂಡಿದೆ.
  ಬೆಂಗಳೂರು ಎಂ.ಎಸ್ ರಾಮಯ್ಯ ಆಸ್ಪತ್ರೆಯ ನರತಜ್ಞರಾದ  ಡಾ. ಶರ್ಮಾ ಅವರು ಚಿಕಿತ್ಸೆ ನೀಡಿದ್ದು, ದುಬಾರಿ ವೆಚ್ಚವಾದ ಹಿನ್ನೆಲೆಯಲ್ಲಿ ಹಣವಿಲ್ಲದೆ ಮನೆಗೆ ಮರಳಿದ್ದಾರೆ. ಆರ್ಥಿಕ ಸಹಾಯ ನೀಡುವ ಮೂಲಕ ಕಲಾವಿದ ಮೈಲಾರಪ್ಪನಿಗೆ ಧನ ಸಹಾಯ ನೀಡುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಕಳುಹಿಸಬಹುದು. ಇಲ್ಲವೆ ಅವರನ್ನು ನೇರ ಸಂಪರ್ಕಿಸಬಹುದು.
 ವಿಳಾಸ: ಗೊರವರ ಮೈಲಾರಪ್ಪ ತಂದೆ ನಿಂಗಪ್ಪ. ಮಿರ್ಜಾಬಡಾವಣೆ, ಮಟನ್ ಮಾರ್ಕೆಟ್ ಹಿಂಭಾಗ ಹಿರಿಯೂರು ಪಟ್ಟಣ. ಚಿತ್ರದುರ್ಗ ಜಿಲ್ಲೆ .
 ಬ್ಯಾಂಕ್ ಖಾತೆ ಸಂಖ್ಯೆ: ಎಂ. ನೀತಾ  32945664303,(ಎಸ್‌ಬಿಐ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯೂರು ಶಾಖೆ. ಐಎಫ್‌ಎಸ್‌ಇ ನಂ: 0011262. ಚಿತ್ರದುರ್ಗ ಜಿಲ್ಲೆ. ಮೊಬೈಲ್  ಸಂಖ್ಯೆ.9663271335, 9901284507..