Monday, April 21, 2014

​ ಹಾಲುಮತ ಸಮುದಾಯ : ಸಂಸ್ಕೃತಿ ಮಹಿಳೆ



ಹಾಲುಮತ ಸಮುದಾಯ : ಸಂಸ್ಕೃತಿ ಮಹಿಳೆ

ಕುರುಬ ಮಹಿಳೆ-ಸಾಂಸ್ಕ್ರತಿಕ ನೆಲೆಗಳು
ಕುಟುಂಬದಲ್ಲಿ ಕುರುಬ ಮಹಿಳೆ
ಕುರುಬರು ಕುರಿಗಾರಿಕೆ, ಕಂಬಳಿ ನೇಕಾರಿಕ ಹಾಗೂ ಒಕ್ಕಲುತನವನ್ನು ಅವಲಂಬಿಸಿದವರಾಗಿದ್ದಾರೆ. ಒಂದು ಕುಟುಂಬ ಅವಿಭಕ್ತವಾಗಿ ಉಳಿಯುತ್ತದೆಯೋ ವಿಭಕ್ತವಾಗಿ ಉಳಿಯುತ್ತದೆಯೋ ಎಂಬುದನ್ನು ನಿರ್ಧರಿಸುವುದು ಆ ಕುಟುಂಬ ಅವಲಂಬಿಸಿರುವ ವೃತ್ತಿಗಳು. ಕುರುಬರು ಅವಲಂಬಿಸಿರುವ ವೃತ್ತಿಗಳು ಅವರು ಅವಿಭಕ್ತ ಕುಟುಂಬದವರಾಗಿರುವಂತೆ ಮಾಡಿವೆ. ಕುಟುಂಬದಲ್ಲಿ ಕುರುಬ
​​
 ಮಹಿಳೆಗೆ ದೊರೆಯುವ ಸ್ಥಾನಮಾನವ ಹಿಂದು ಅವಿಭಕ್ತ ಕುಟುಂಬದಲ್ಲಿ ಮಹಿಳೆಗೆ ದೊರೆಯುವ ಸ್ಥಾನಮಾನಗಳಿಗಿಂತ ಭಿನ್ನವಾಗೇನಿಲ್ಲ.
ಕೃಷಿ ಕುಟುಂಬದ ಕುರುಬರಲ್ಲಿ ನಿತ್ಯ ಕಸಮುಸುರಿ ಅಡುಗೆ ಕೆಲಸಗಳನ್ನು ಮಹಿಳೆಯ ಕೊರಳಿಗೆ ಕಟ್ಟಲಾಗಿದೆ. ಈ ಕೆಲಸಗಳನ್ನು ಅವಳು ಯಾವುದೇ ರೀತಿಯ ಪ್ರಶ್ನೆ ಹಾಕಿಕೊಳ್ಳದೆ ಒಪ್ಪಿಕೊಂಡಿದ್ದಾಳೆ. ಇಷ್ಟೇ ಅಲ್ಲ ದನಕರುಗಳ ರಕ್ಷಣೆ ಮಾಡುತ್ತ ಕೃಷಿ ಸಂಬಂಧಿ ಎಲ್ಲ ಚಟುವಟಿಕೆಗಳಲ್ಲಿ ತನ್ನ ಸೇವೆಯನ್ನು ನೀಡುತ್ತಾಳೆ. ಅಕ್ಕಡಿ ಹಾಕುವಲ್ಲಿ, ಕಳೆಕಸ ತೆಗೆಯುವಲ್ಲಿ, ಫಸಲು ಕೊಯ್ಯುವಲ್ಲಿ, ರಾಶಿ ಮಾಡುವಲ್ಲಿ, ಬೀಜ ಸಂರಕ್ಷಿಸುವಲ್ಲಿ ಕುರುಬ ಮಹಿಳೆ ತೊಡಗಿಸಿಕೊಳ್ಳುತ್ತಾಳೆ. ಹೀಗೆ ಕುಟುಂಬದ ಉತ್ಪಾದನೆಯ ಎಲ್ಲ ಚಟುವಟಿಕೆಗಳಲ್ಲಿ ತನ್ನನ್ನು ತೊಡಿಗಿಸಿಕೊಳ್ಳುವ ಕುರುಬ ಮಹಿಳೆಗೆ ಕುಟುಂಬದ ಆರ್ಥಿಕ ನಿರ್ವಹಣೆಯ ವಿಷಯದಲ್ಲಿ ಒಂದಿಷ್ಟೂ ಅವಕಾಶವಿಲ್ಲ. ಕುಟುಂಬದ ಗಂಡಸರು ಆರ್ಥಿಕ ನಿರ್ವಹಣೆಯ ವಿಷಯದಲ್ಲಿ ಮಹಿಳೆಯ ಅಭಿಪ್ರಾಯ ಕೇಳುವ ಸೌಜನ್ಯವನ್ನು ತೋರುವುದಿಲ್ಲ. ಹಾಗೆ ಸೌಜನ್ಯ ತೋರುವುದನ್ನು ತಮಗೆ ತಾವೇ ಮಾಡಿಕೊಳ್ಳುವ ಅವಮಾನವೆಂದು ಪುರುಷರು ಭಾವಿಸುತ್ತಾರೆ. ಆಸ್ತಿಯನ್ನು ಖರೀದಿಸುವ ಸಂದರ್ಭದಲ್ಲಾಗಲಿ, ಮಾರುವ ಸಂದರ್ಭದಲ್ಲಾಗಲಿ, ಬೇರೆಯವರಿಂದ ಹಣಪಡೆಯುವಲ್ಲಾಗಲಿ, ಬೇರೆಯವರಿಗೆ ಹಣ ನೀಡುವಲ್ಲಾಗಲಿ ಮನೆಯ ಗಂಡಸರು ಮಹಿಳೆಯನ್ನು ಅಜ್ಞಾನದಲ್ಲಿಟ್ಟುರುತ್ತಾರೆ. ಹಾಗೆ ಅಜ್ಞಾನದಲ್ಲಿರಿಸುವುದು ತಪ್ಪು ಎಂಬ ಭಾವನೆಯೂ ಅವರಿಗೆ ಬರುವುದಿಲ್ಲ.
ಬೇರೆ ಸಮಾಜದ ಹೆಣ್ಣು ಮಕ್ಕಳ ಕುರುಬ ಮಹಿಳೆಯರೂ ತಮ್ಮ ದೈನಂದಿನ ಸಣ್ಣಪುಟ್ಟ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮನೆಯೊಳಗೆ ಹಿಂಡುವ ದನಗಳಿದ್ದರೆ ಹಾಲು ಮೊಸರು ಮಾರುತ್ತಾರೆ. ಆಪತ್ಕಾಲಕ್ಕೆ ಒಂದಿಷ್ಟು ದುಡ್ಡು ಇರಲಿ ಎಂದು ಮನೆಯ ಗಂಡಸರಿಗೆ ಗೊತ್ತಾಗದ ಹಾಗೆ ಮನೆಯೊಳಗಿನ ಕಾಳು ಕಡ್ಡಿಯನ್ನು ಮಾರುವುದಿದೆ. ಹೀಗೆ ಮಾರುವವಳು ಅತ್ತೆಯಾಗಿದ್ದರೆ ಮನೆಯ ಗಂಡಸರ ನಜರಿಗೆ ಬರದಂತೆ ನೋಡಿಕೊಳ್ಳುತ್ತಾರೆ. ಆದರೆ ಸೊಸೆಯಾದವಳ ಎದುರಿಗೆ ಅವಳು ರಾಜಾರೋಷವಾಗಿ ಈ ವ್ಯವಹಾರವನ್ನು ಮಾಡಬಹುದು. ಆದರೆ ಸೊಸೆಯಾದವಳು ಮನೆಯ ಗಂಡಸರಿಗೆ ಹಾಗೂ ಅತ್ತೆ ನಾದಿನಿಯರಿಗೆ ಗೊತ್ತಾಗದ ಹಾಗೆ ಈ ವ್ಯವಹಾರ ಮಾಡಬೇಕಾಗುತ್ತದೆ. ಹಾಗೊಂದು ವೇಳೆ ಗೊತ್ತಾದರೆ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆಯುತ್ತದೆ. ಹೀಗಾಗಿ ಸೊಸೆಯಾದವಳು ತನಗೆ ಬೇಕಾದ ಸಣ್ಣಪುಟ್ಟ ಖರ್ಚಿನ ಹಣವನ್ನು ತವರು ಮನೆಯಿಂದಲೇ ಹೊಂದಿಸಿಕೊಳ್ಳುವುದು ಸುರಕ್ಷಿತವೆಂದು ಭಾವಿಸುತ್ತಾಳೆ.
ಕುರುಬರ ಕೂಡುಕುಟುಂಬದಲ್ಲಿ ಅಲ್ಪ ಸ್ವಾತಂತ್ರ್ಯದ ಮಹಿಳೆಯರು ಹಾಗೂ ಅತಂತ್ರ ಮಹಿಳೆಯರು ಇರುವುದನ್ನು ಗಮನಿಸಬಹುದು. ಮನೆಯ ಅತ್ತೆ ಹಾಗೂ ನಾದಿನಿಯರು ಅಲ್ಪ ಸ್ವಾತಂತ್ರ್ಯವನ್ನು ಅನುಭವಿಸಿದರೆ ಸೊಸೆಯಾದವಳು ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಾಳೆ. ಕೂಡುಕುಟುಂಬದಲ್ಲಿ ಸೊಸೆಯಾಗಿ ಬದುಕಬೇಕಾದವಳಿಗೆ ಅನೇಕ ಆತಂಕಗಳಿರುತ್ತವೆ. ಅತ್ತೆ ನಾದಿನಿ ಸೇರಿಕೊಂಡು ಗಂಡನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಹೆಂಡತಿಯಾದವಳಿಗೆ(ಸೊಸೆಗೆ) ಸದಾ ಚಿಟಿಗ ಮುಳ್ಳ ಆಡಿಸುವುದರಲ್ಲಿ ವಿಘ್ನ ಸಂತೋಷ ಪಡುತ್ತಿರುತ್ತಾರೆ. ಹೀಗಾಗಿ ಹೆಣ್ಣು ಹೆತ್ತವರು ಬೀಗತನ ಮಾಡುವಾಗಲೇ ಒಂಟಿ ಒಗೆತನದ ಮನೆಯನ್ನೇ ಶೋಧಿಸುತ್ತಿರುತ್ತಾರೆ. ಒಂಟಿ ಒಗೆತನದ ಮನೆಯ ವರನಾದವನಿಗೆ ಅಪಾರವಾದ ಬೇಡಿಕೆಯಿರುತ್ತದೆ. ಕನ್ಯಾಪಿತೃಗಳು ಇಂಥ ಮನೆಗೆ ತಮ್ಮ ಮಗಳನ್ನು ಕೊಡಲು ಸ್ಪರ್ಧೆಗಿಳಿಯುತ್ತಾರೆ.
ಕುರುಬ ಕುಟುಂಬದಲ್ಲಿ ಹಿರಿಯ ಗಂಡಸಿನ ಯಜಮಾನ್ಯದ ಸ್ಥಿತಿ ಪ್ರಶ್ನಾತೀತವಾಗಿ ಒಪ್ಪಿತವಾಗಿರುತ್ತದೆ. ಹಿರಿಯ ವಯಸ್ಸಿನ ಗಂಡಸರು ಇಲ್ಲದ ಮನೆಯಲ್ಲಿ ಹುಡುಗನೊಬ್ಬ ಅತ್ಯಂತ ಸಣ್ಣ ವಯಸ್ಸಿನವನಾಗಿದ್ದರೂ ಮನೆಯಲ್ಲಿರುವ ವಯಸ್ಸಿನಲ್ಲಿ ಅವನಿಗಿಂತ ಹಿರಿಯರಾದ ಮಹಿಳೆಯರಿಗಿಂತಲೂ ಹೆಚ್ಚಿನ ಸ್ಥಾನವನ್ನು ಪಡೆದಿರುತ್ತಾನೆ. ಒಂದು ಗಂಡುಮಗುವನ್ನು ಪಡೆದ ಗಂಡನೊಬ್ಬ ಸತ್ತರೆ ಆ ಮನೆಯ ಎಲ್ಲ ಹೊಣೆಗಾರಿಕೆ ತಾಯಿಯಾದವಳ ಮೇಲೆ ಇರುತ್ತದಾದರೂ ಸಾಮಾಜಿಕ ವ್ಯವಹಾರಗಳ ಸಂದರ್ಭದಲ್ಲಿ ಅವಳ ಮಗನೇ ಪ್ರಮುಖವಾಗುತ್ತಾನೆ. ಉದಾಹರಣೆಗೆ ಗುಡಿಗುಂಡಾರ ಕಟ್ಟಿಸಲು, ಜಾತ್ರಾ ಉತ್ಸಗಳನ್ನು ನಡೆಯಿಸಲು ಪಟ್ಟಿ ಅಥವಾ ಕಾಣಿಕೆ ಕೊಡಬೇಕಾದ ಸಂದರ್ಭದಲ್ಲಿ ತಾಯಿಯಾದವಳು ತಮ್ಮ ಮಗನ ಹೆಸರಿನಿಂದಲೇ, ಮಗನ ಕೈಯಿಂದಲೇ ಕೊಡಿಸುತ್ತಾಳೆ.
ಭಟ್ಕಳದ ಗೊಂಡರ ಮಹಿಳೆಯರ ಸ್ಥಿತಿ ಕುರಬ ಮಹಿಳೆಯರ ಸ್ಥಿತಿಗಿಂತಲೂ ಕಷ್ಟಕರವಾಗಿದೆ. ಗೊಂಡರು ತಮ್ಮನ್ನು ಆರಂಭಕಾರರು, ಭೂಮಿಪುತ್ರರು ಎಂದು ಕರೆದುಕೊಳ್ಳುತ್ತಾರೆ. ವಿಪರ‌್ಯಾಸದ ಸಂಗತಿಯೆಂದರೆ ಗೊಂಡರಿಗಿರುವ ಭೂಮಿ ಅತ್ಯಲ್ಪ, ಆದೂ ಕೆಲವೇ ಗೊಂಡರಿಗೆ. ಹೀಗಾಗಿ ಭೂರಹಿತ ಗೊಂಡರು ಕೃಷಿಕೂಲಿಯನ್ನು ಅವಲಂಬಿಸಿಯೇ ಬದುಕು ಸಾಗಿಸುತ್ತಾರೆ. ಕೃಷಿಯೋಗ್ಯ ಜಮೀನನ್ನು ಹೊಂದಿರುವ ಗೊಂಡರಲ್ಲಿಯೇ ಜಮೀನ್ದಾರ ಹವ್ಯಕ ಬ್ರಾಹ್ಮಣರಲ್ಲಿಯೋ ಕೃಷಿಕೂಲಿಗೆ ಹೋಗುತ್ತಾರೆ. ಗೊಂಡ ಕೃಷಿ ಕೂಲಿಕಾರನಿಗೆ ಒಂದು ದಿವಸದ ದುಡಿತಕ್ಕೆ ಐವತ್ತು ರೂಪಾಯಿ ಕೊಟ್ಟು, ಹಗಲು ಹೊತ್ತಿನ ಊಟ ಕೊಡುತ್ತಾರೆ. ಆದರೆ ಗೊಂಡ ಕೃಷಿಕೂಲಿಕಾರಳಿಗೆ ದೊರೆಯುವ ಕೂಲಿ ಕೇವಲ ಹತ್ತು ರೂಪಾಯಿ. ಹಗಲು ಹೊತ್ತಿನ ಊಟವನ್ನು ಅವಳಿಗೆ ಕೊಡುವುದಿಲ್ಲ. ಎರಡು ರೀತಿಯಿಂದ ಅವಳನ್ನು ಇಲ್ಲಿ ಅವಮಾನಿಸಲಾಗುತ್ತದೆ. ಒಂದು ಅವಳ ಶ್ರಮದ ಫಲವನ್ನು ಪುರುಷನ ಶ್ರಮದ ಫಲಕ್ಕಿಂತ ಪಟ್ಟು ಕಡಿಮೆಯಿಂದ ಭಾವಿಸಲಾಗುತ್ತದೆ. ಎರಡನೆಯದಾಗಿ ಅವಳು ಹಗಲು ಹೊತ್ತಿನ ಊಟಕ್ಕೆ ಅರ್ಹಳು ಎಂದು ಭಾವಿಸುವುದಿಲ್ಲ. ಇತ್ತೀಚೆಗೆ ಗೊಂಡ ಪುರುಷರು ಕೂಲಿ ಮಾಡಲು ಸಮೀಪದ ಭಟ್ಕಳಕ್ಕೆ ಹೋಗುತ್ತಿದ್ದಾರೆ. ಕಟ್ಟಡ ಸಂಬಂಧಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಕಡಿಮೆ ಅಗಲದ ಬಾವಿಗಳನ್ನು ತೋಡುವಲ್ಲಿ ಗೊಂಡರು ನಿಪುಣರು. ಭಟ್ಕಳ ನಗರದ ಮನೆಗಳ ಹಿತ್ತಲಿನ ಡಾಗೆಯಲ್ಲಿ ಪುಟ್ಟ ಬಾವಿಗಳನ್ನು ತೋಡಿಸಲು ವಿಶೇಷವಾಗಿ ಗೊಂಡರನ್ನೆ ಕರೆಯಿಸುತ್ತಾರೆ. ನಗರದಲ್ಲಿ ಅವರಿಗೆ ದೊರೆಯುವ ಆದಾಯ ಕೃಷಿ ಕೂಲಿ ಮಾಡುವುದಕ್ಕಿಂತಲೂ ಹೆಚ್ಚಿನದಾಗಿರುತ್ತದೆ. ಆದರೆ ಅವರು ತಮ್ಮ ಮಹಿಳೆಯನ್ನು ನಗರಗಳಿಗೆ ಕೂಲಿ ಕೆಲಸ ಹತ್ತು ರೂಪಾಯಿಯ ಕೂಲಿ ಕಳುಹಿಸುವುದು ಹೆಚ್ಚಿನ ಅವಮಾನವೆಂದು ಭಾವಿಸಿದ್ದಾರೆ. ಹೀಗಾಗಿ ಗೊಂಡ ಕೃಷಿಕೂಲಿ ಮಹಿಳೆಗೆ ಇನ್ನೂ ನಗರದ ಕಡೆಗೆ ಮುಖಮಾಡಲು ಆಗಿಲ್ಲ.
ಕುರಿಗಾರ ಕುಟುಂಬಗಳಲ್ಲಿ ಮಹಿಳೆಯ ಸ್ಥಾನಮಾನ ಇನ್ನೂ ಹೆಚ್ಚಿನ ಸಂಕಷ್ಟಗಳಿಂದ ಕೂಡಿದೆ. ನಾಡನಾಳದ ದೊರೆ ಆರು ತಿಂಗಳುವರೆಗೆ ಮನೆ ನೋಡದಿದ್ದರೆ ಕುರಿಕಾಯುವ ಕುರುಬ ವರ್ಷವಿಡೀ ಮನೆನೋಡಲಿಲ್ಲ. ವೆಂಬ ನಾಣ್ನುಡಿ ಇದೆ. ಕುರಿಗಳು ಒಂದು ಕಡೆ ನೆಲೆ ನಿಂತು ಮೇಯ್ದು ಹೊಟ್ಟೆ ತುಂಬಿಸಿಕೊಳ್ಳುವ ಸ್ವಭಾವದ ಪ್ರಾಣಿಗಳಲ್ಲ, ಅಷ್ಟಷ್ಟೇ ಅಲ್ಲಲ್ಲೇ ಬಾಯಿಹಾಕುತ್ತ, ಮೆಲುಕಾಡಿಸುತ್ತ ಮುಂದೆ ಮುಂದೆ ಹೋಗುತ್ತವೆ. ಕುರಿಗಾರಿನೂ ಅನಿವಾರ್ಯವಾಗಿ ತನ್ನ ಬದುಕಿನ ಬೆನ್ನು ಹತ್ತುತ್ತಾನೆ. ಕುರುಬರು ಕಟ್ಟಿಕೊಂಡ ಪುರಾಣಕತೆಗಳಲ್ಲಿ ಕುರಿ ಕಾಯುವುದು ಕಷ್ಟದ ಕೆಲಸವೆಂದು ದೇವಾನುದೇವತೆಗಳೂ ಒಪ್ಪಿಕೊಂಡಿರುವುದನ್ನು ಚಿತ್ರಿಸಿದ್ದಾರೆ. ಸ್ವತಃ ಪಾರ್ವತಿದೇವಿಯೇ ಕುರಿಕಾಯ್ದು ದಣಿದು ಬೇಸತ್ತು ಇನ್ನು ತನ್ನಿಂದ ಸಾಧ್ಯವೇ ಇಲ್ಲವೆಂದು ನಿರ್ಣಯಿಸಿ ಕುರಿಗಳನ್ನೆಲ್ಲ ಕೂಡಿಸಿ ಗವಿಯೊಂದರಲ್ಲಿ ಹೊಗಿಸಿ ಅದರ ಬಾಯಿಮುಚ್ಚಿ ಅದರ ಮೇಲೆ ತನ್ನ ಮುತ್ತಿನ ಮೂಗುತಿಯಿಂದ ಕೀಲಿಹಾಕಿದಳು. ಅದರ ಮೇಲೆ ಹುಟ್ಟಿದ ಗಿಡವೇ ಮುತ್ತುಗದ ಗಿಡ ಎಂದು ಕತೆ ಕಟ್ಟಿಕೊಂಡಿದ್ದಾರೆ.
ಕುರಿಗಳ ಬೆನ್ನು ಹತ್ತಿ ಅಡವಿ ಅಡವಿ ತಿರುಗಾಡುತ್ತ ಕುರಿಗಾರರು ಹೋದರೆಂದರೆ ಮನೆಯಲ್ಲಿ ಅವನ ಹೆಂಡತಿಯಾದವಳು ಗಂಡನ ಮುಖ ನೋಡದೆ ಕಾಲಕಳೆಯ ಬೇಕಾಗುತ್ತಿತ್ತು. ಗಂಡ ತಿರುಗು ಬರುವವರೆಗೆ ಅವಳು ಆತಂಕದಲ್ಲಿಯೇ ದಿನಗಳನ್ನು ದೂಡಬೇಕಾಗುತ್ತಿತು.  ಕುರಿಗಾರನ ಹೆಂಡತಿಯನ್ನು ಸಮಾಜದ ಪುರುಷ ವರ್ಗ ಕಾಮದ ಕಣ್ಣಿನಿಂದ ನೋಡುತ್ತಿದ್ದರು. ಗಂಡಸನಿಲ್ಲದೆ ಅತಂತ್ರವಾಗಿ ಬದುಕಬೇಕಾದ ಸ್ಥಿತಿ ಒಂದು ಕಡೆಯಾದರೆ ಅಡವಿಯಲ್ಲಿ ಕುರಿಗಳ ಬೆನ್ನ ಹಿಂದೆ ತಿರುಗುವ ಗಂಡನಿಗೆ ಪ್ರಕೃತಿವಿಕೋಪದಿಂದ ಒದಗಬಹುದಾದ ಆಪತ್ತಿನ ಆತಂಕ ಇನ್ನೊಂದು ಕಡೆಗೆ. ಹೀಗೆ ಅವಳ ಬದುಕು ನಿಜವಾಗಿಯೂ ದುರ್ಬರವಾಗಿತ್ತು.
ಈ ಸಮಸ್ಯೆಗೆ ಪರಿಹಾರವೋ ಎಂಬಂತೆ ಇಂದು ಕುರಿಗಾರರು ತಮ್ಮ ಹೆಂಡಂದಿರನ್ನು ಕರೆದುಕೊಂಡೆ ಅಡವಿ ಅಡವಿ ತಿರುಗಲು ಪ್ರಾರಂಭಿಸಿದ್ದಾರೆ. ಆದರೆ ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿ ಕುರಿಗಾರನ ಹೆಂಡತಿಯದಾಗಿದೆ. ಗಂಡು ನುಚ್ಚು ಮಾಡಿಕೊಂಡು ತಿನ್ನುವ ಕಷ್ಟದಿಂದ ಕುರಿಗಾರ ಪಾರಾದನೇನೋ ನಿಜ. ಆದರೆ ಸಂಕಷ್ಟಗಳು ಹೆಚ್ಚಿದ್ದು ಕುರಿಗಾರನ ಹೆಂಡತಿಗೆ. ಮಕ್ಕಳು ಮರಿಗಳನ್ನು ಬೆನ್ನಿಗೆ ಕಟ್ಟಿಕೊಂಡ ನಿಶ್ಚಿತ ನೆಲೆಯಿಲ್ಲದೆ ನಿತ್ಯ ಜಂಗಮವಾಗಿ ಮಳೆಗಾಳಿ ಬಿಸಿಲೆನ್ನದೆ ಅಲೆಯುವ ಸ್ಥಿತಿ ಅವಳದ್ದಾಗಿದೆ. ಅಡವಿಯಲ್ಲಿ ಸ್ಥಾಪಿಸಿಕೊಂಡ ತಾತ್ಕಾಲಿಕ ಟೆಂಟುಗಳಲ್ಲಿಯೇ ಇವರ ಸಂಸಾರ. ಇಂಥ ಬದುಕನ್ನು ನಡೆಯಿಸುವ ಕುರಿಗಾರರಲ್ಲಿ ನಿಪ್ಪಾಣಿ ಕುರಿಗಾರರೇ ಪ್ರಮುಖರು.
ನಿತ್ಯ ನಸುಕಿನ ನಾಲ್ಕು ಗಂಟೆಗೆ ಇವಳ ದೈನಂದಿನ ಚಟುವಟಿಕೆ ಪ್ರಾರಂಭ. ಗಂಡನಿಗೆ, ಕೈಗೆ ಬಂದ ಮಕ್ಕಳಿಗೆ ಅಡುಗೆ ಮಾಡುವುದು, ಬಲಾಢ್ಯ ನಾಯಿಗಳಿಗೆ ನುಚ್ಚು ಕುದಿಸುವುದು ಅವಳ ನಿತ್ಯದ ಕೆಲಸದ ಪ್ರಮುಖ ಭಾಗ. ಕುರಿ ಹೊಡೆದುಕೊಂಡು ಬೆಳಿಗ್ಗೆ ಹೊರಟರೆಂದರೆ ಕುರಿಗಾರರು ತಿರುಗಿ ಬರುವುದು ಸಾಯಂಕಾಲಕ್ಕೆ. ಅಲ್ಲಿಯವರೆಗೆ ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಟೆಂಟಿನಲ್ಲಿ ತನ್ನ ಬಗಲಕೂಸು ಗಳನ್ನು ಜೋಪಾನ ಮಾಡುತ್ತ. ಸಣ್ಣ ಕುರಿಮರಿಗಳನ್ನು ರಕ್ಷಿಸುತ್ತ, ರೋಗಿಪ್ಪ ಕುರಿಗಳ ಆರೈಕೆ ಮಾಡುತ್ತ ಇರಬೇಕು. ಸಂಜೆಯಾಯಿತೆಂದರೆ ಮತ್ತೆ ಗಂಡಸರಿಗೆ ಮಕ್ಕಳಿಗೆ ನಾಯಿಗಳಿಗೆ ಅಡುಗೆ ವ್ಯವಸ್ಥೆಯಾಗಬೇಕು. ಈ ಎಲ್ಲ ಜಂಜಾಟದ ಮಧ್ಯದಲ್ಲಿ ಕುಟುಂಬದ ಹಣಕಾಸಿನ ವ್ಯವಹಾರದಲ್ಲಿ ತನ್ನ ಅಭಿಪ್ರಾಯವೇನೆಂದು ಯೋಚಿಸಲು ವ್ಯವಧಾನವಿರುವುದಿಲ್ಲ. ಕುರಿಗಳು ಬಹುಬೇಗನೆ ರೋಗರುಜಿನಗಳಿಗೆ ಬಲಿಬೀಳುತ್ತವೆ. ಒಂದು ಕುರಿಗೆ ರೋಗವೇನಾದರೂ ಬಂದರೆ ಆ ರೋಗ ಅತ್ಯಂತ ವೇಗವಾಗಿ ಸುತ್ತಲಿನ ಕುರಿಗಳಿಗೆ ಅಂಟಿಕೊಳ್ಳುತ್ತದೆ. ಕಣ್ಣೆದುರಿಗೆ ಓಡಾಡಿಕೊಂಡಿದ್ದ ಕುರಿಗಳ ಹಿಂಡು ಒಮ್ಮಿಂದೊಮ್ಮೆ ರೋಗಕ್ಕೆ ಬಲಿಯಾಗಿ ಕರಗಿಹೋಗುವ ಸಂದರ್ಭಗಳೇ ಹೆಚ್ಚು. ಪ್ರಕೃತಿ ವೈಪರೀತ್ಯದ ವಿರುದ್ಧ ಕುರುಬರದ್ದು ಸದಾ ಅಸಹಾಯಕ ಮುಖಾಮುಖಿ. ಈ ಕಾರಣವಾಗಿ ಕುರಿಗಾರರದ್ದು ಅಭದ್ರವಾದ ಆರ್ಥಿಕ ಸ್ಥಿತಿ. ಇಂಥ ಸಂದರ್ಭದಲ್ಲಿ ಆರ್ಥಿಕ ವ್ಯವಹಾರದಲ್ಲಿ ತನ್ನ ಪಾಲುದಾರಿಕೆಯ ಬಗೆಗೆ ಯೋಚಿಸುವುದು ಕುರಿಗಾರ ಮಹಿಳೆಗೆ ಅಸಾಧ್ಯವೂ. ಅಸಹನೀಯವೂ ಆಗಿರುತ್ತದೆ.
ಆಧುನಿಕ ತಂತ್ರಜ್ಞಾನದ ಅವಿಷ್ಕಾರದ ಕಾರಣದಿಂದ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಕಡಿಮೆಯಾಗಿ ಅಲ್ಲೊಬ್ಬ ಇಲ್ಲೊಬ್ಬ ಕುರಿಗಾರನ ಕೈಯಲ್ಲಿ ಮೊಬೈಲ್ ಬಂದಿರಬಹುದು. ನೆಟ್‌ವರ್ಕಗಳೇ ಇಲ್ಲದ ಅಡವಿಯಲ್ಲಿ ತಿರುಗಾಡುವ ಅವರಿಗೆ ಮೊಬೈಲ್ ಕೊರಳ ತಾಯತದ ಹಾಗೆ ಅಲಂಕಾರದ ವಸ್ತುವಾಗಿಯೇ ಉಳಿದಿದೆ. ಅಲೆಮಾರಿಗಳಾಗಿ ಊರೂರು ದಾಟಿ ಹೋಗುವಾಗ ಕುರಿಗಾರನ ಹೆಂಡತಿಯಾದವಳು ಸಮವಸ್ತ್ರ ಧರಿಸಿ ಶಾಲೆಗೆ ಹೊರಟ ಗ್ರಾಮ ಹಾಗೂ ನಗರದ ಮಕ್ಕಳನ್ನು ನೋಡಿ ತನ್ನ ಮಕ್ಕಳ ದೈವದ ಬಗೆಗೆ ಹಳಹಳಿಮಾಡಿಕೊಳ್ಳುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿಯಲ್ಲಿರುತ್ತಾಳೆ.
ಶಿಕ್ಷಣದ ಪ್ರಭಾವ ಹೊಸ ಹಾದಿ
ಚಿನ್ನಪ್ಪರೆಡ್ಡಿ ಆಯೋಗದ ವರದಿಯ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಸಾವಿರ ಮಹಿಳೆಯರಲ್ಲಿ ಕೇವಲ ಹದಿನೆಂಟು ಮಹಿಳೆಯರು ಶಿಕ್ಷಣ ಪಡೆದಿದ್ದಾರೆ. ಕುರುಬ ಮಹಿಳೆಯರಲ್ಲಿ ಶಿಕ್ಷಣ ಪಡೆದವರು ಪ್ರತಿಶತ ಒಂದರಷ್ಟು ಮಾತ್ರ ಎಂದು ಅಂದಾಜಿಸಲಾಗಿದೆ. 1921ರ ಸುಮಾರಿಗೆ ಮೈಸೂರು ಅರಸರು ಶಿಕ್ಷಣದಲ್ಲಿ ಮೀಸಲಾತಿಯನ್ನು ಜಾರಿಗೆ ತಂದ ಕಾರಣದಿಂದ ಆ ಭಾಗದ ಒಂದಷ್ಟು ಕುರುಬ ಮಹಿಳೆಯರಿಗೆ ಅನುಕೂಲವಾಯಿತು. ಆದರೆ ಹೈದರಾಬಾದ ಕರ್ನಾಟಕ ಹಾಗೂ ಬಾಂಬೆ ಕರ್ನಾಟಕದ ಮಹಿಳೆಯರಿಗೆ ಅಂಥ ಯಾವುದೇ ಸೌಲಭ್ಯ ದೊರೆಯದ್ದರಿಂದ ಅವರು ಹಲವಾರು ದಶಕಗಳವರೆಗೆ ಶಿಕ್ಷಣದಿಂದ ವಂಚಿತರಾಗಿದ್ದರು. ಇತ್ತೀಚಿನ ಮೂರು ದಶಕಗಳಲ್ಲಿ ಶಿಕ್ಷಣ ಗ್ರಾಮೀಣ ಪ್ರದೇಶವನ್ನು ಪ್ರವೇಶಿಸಿದೆ. ಗ್ರಾಮೀಣ ಪ್ರದೇಶದ ಕುರುಬ ಬಾಲಕಿಯರು ಶಿಕ್ಷಣಕ್ಕೆ ತೆರೆದುಕೊಳ್ಳುವಂತಾಗಿದೆ. ಕೃಷಿ ಕುಟುಂಬದ ಕುರುಬರಲ್ಲಿ ಈಗಾಗಲೇ ಶಾಲೆಗೆ ಹೋಗುವ ಬಾಲಕಿಯರ ಸಂಖ್ಯೆ ಏರುಮುಖವಾಗಿದೆ. ಇದು ಪಾಲಕರಲ್ಲಿ ಮೂಡಿರುವ ಜಾಗೃತಿಯ ಸಂಕೇತವಾಗಿದೆ. ಆದರೆ ಬೀದರ ಹಾಗೂ ಭಟ್ಕಳದ ಗೊಂಡರಲ್ಲಿ ಹುಡುಗಿಯರಿಗೆ ಶಿಕ್ಷಣ ನೀಡುವ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಗೊಂಡರಲ್ಲಿ ಅತೀ ಹೆಚ್ಚೆಂದರೆ ಪಿ.ಯು.ಸಿ. ವರೆಗೆ ಕಲಿತ ಬೆರಳೆಣಿಕೆಯಷ್ಟು ಹುಡುಗಿಯರು ದೊರೆಯಬಹುದು. ಕುರುಬರಲ್ಲಿ ಒಂದು ತಲೆಮಾರಿನಷ್ಟು ಹಿಂದೆಯೇ ನೌಕರಿಗೆ ಸೇರಿದ ಪಾಲಕರಿದ್ದಲ್ಲಿ ಅವರ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ವೈದೈಕೀಯ ಇಂಜಿನಿಯರಿಂಗ್‌ದಂಥ ವೃತ್ತಿಪರ ಕೋರ್ಸಗಳನ್ನು ಮುಗಿಸಿ ಒಳ್ಳೆಯ ಆದಾಯ ತರುವ ಕುರುಬ ಹುಡುಗಿಯರು ಈ ವರ್ಗದವರಲ್ಲಿ ದೊರೆಯುತ್ತಾರೆ. ಸಾಮಾನ್ಯ ಶಿಕ್ಷಣ ಕ್ಷೇತ್ರದಲ್ಲಿ ಪದವಿಮಟ್ಟ ಹಾಗೂ ಸ್ನಾತಕೋತ್ತರ ಮಟ್ಟದವರೆಗೆ ಕುರುಬ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ವೃತ್ತಿಪರ ಕೋರ್ಸುಗಳನ್ನು ಮುಗಿಸಿದವರ ಸಂಖ್ಯೆ ಬಿ.ಎ, ಬಿ.ಎಸ್.ಸಿ, ಎಂ.ಎ. ಎಂ.ಎಸ್.ಸಿ ಪದವಿ ಪಡೆದವರಿಗಿಂತ ಕಡಿಮೆಯಿದೆ. ಉದ್ಯೋಗದಲ್ಲಿ ಮಹಿಳಾ ಮೀಸಲಾತಿ ಸೌಲಭ್ಯದಿಂದಾಗಿ ಹಲವಾರು ಕುರುಬ ಮಹಿಳೆಯರು ಸರಕಾರಿ ನೌಕರಿ ಪಡೆಯುವಂತಾಗಿದೆ.
ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಲಭ್ಯವಾಗುವ ಆರ್ಥಿಕ ಸ್ವಾಯತ್ತತೆ ಕುರುಬ ಮಹಿಳೆಯರಲ್ಲಿ ಒಂದು ರೀತಿ ಆತ್ಮಸ್ಥೈರ್ಯವನ್ನು ತುಂಬಿದೆ. ಶಿಕ್ಷಣ ಈಗ ಅವರಿಗೆ ಬಿಡುಗಡೆಯ ಹೊಸಹಾದಿಯನ್ನು ತೋರಿಸುತ್ತಿದೆ. ಉದ್ಯೋಗಸ್ಥ ಮಹಿಳೆ ನಲಿವಿನೊಂದಿಗೆ ನೋವುಗಳನ್ನೂ ಅನುಭವಿಸುತ್ತಿರುವುದು ಮತ್ತೊಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ.
ಆದರೆ ಬೀದರದ ಗೊಂಡ ಮಹಿಳೆಯರಾಗಲೀ ಭಟ್ಕಳದ ಗೊಂಡಮಹಿಳೆಯರಾಗಲೀ ಈ ನಿಟ್ಟಿನಲ್ಲಿ ಇನ್ನೂ ಬಹುದೂರ ಕ್ರಮಿಸಬೇಕಾಗಿದೆ. ಅವರು ಪರಿಶಿಷ್ಟ ಪಂಗಡದಲ್ಲಿ ಪರಿಗಣಿಸಲ್ಪಡುವುದರಿಂದ ಅಲ್ಲಿನ ಮಹಿಳೆಯರು ಆ ಮೀಸಲಾತಿಯನ್ನು ಬಳಸಿಕೊಂಡು ಬೆಳೆಯಬೇಕಾದ ಅವಶ್ಯಕತೆಯಿದೆ. ಕುರಿಗಳ ಬೆನ್ನು ಹತ್ತಿ ಅಲೆಮಾರಿಯಾಗಿ ಸಂಚರಿಸುತ್ತಿರುವ ನಿಪ್ಪಾಣಿ ಕುರುಬ ಮಹಿಳೆಗೆ ಶಿಕ್ಷಣ ಇನ್ನೂ ಗಗನ ಕುಸುಮಾವಾಗಿಯೇ ಉಳಿದಿದೆ.
ಧರ್ಮ ಮತ್ತು ಕುರುಬ ಮಹಿಳೆ
 ಬಹುಪಾಲು ಶಿವೋಪಾಸಕರು. ಅವರ ಪ್ರಮುಖ ದೇವರುಗಳೆಲ್ಲ ಶಿವನ ಬೇರೆ ಬೇರೆ ಅವತಾರಗಳೇ ಆಗಿವೆ. ವೈಷ್ಣವ ಸಂಪ್ರದಾಯ ಪಾಲಿಸುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ಭಟ್ಕಳದ ಗೊಂಡರು ಬೀರಪ್ಪನನ್ನು ಪೂಜಿಸುತ್ತಾರಾದರೂ ಅವರು ಪ್ರಮುಖವಾಗಿ ತಿರುಪತಿ ತಿಮ್ಮಪ್ಪನ ಭಕ್ತರು. ಪ್ರತಿಯೊಬ್ಬ ಭಟ್ಕಳಗೊಂಡನ ಮನೆಯ ಅಂಗಳದಲ್ಲಿ ತುಳಸಿ ಕಟ್ಟೆ ಇದ್ದೇ ಇರುತ್ತದೆ.
ಕುರುಬರೇ ಆಗಲಿ ಗೊಂಡರೇ ಆಗಲಿ ಅವರಿಗೆ ದೇವರಲ್ಲಿ ಅಪಾರವಾದ ಶ್ರದ್ಧೆಯಿರುತ್ತದೆ. ಅದರಲ್ಲೂ ವಿಶೇಷವಾಗಿ ಕುರುಬ ಗೊಂಡ ಮಹಿಳೆಯರ ದೈವಭಕ್ತಿ ಅಪಾರವಾದುದು. ದೇವರಿಗೆ ಹರಕೆ ಹೊತ್ತುಕೊಳ್ಳುವಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇವರು ಪುರುಷ ದೇವರುಗಳನ್ನು ಪೂಜಿಸುವಂತೆ ಸ್ತ್ರೀ ದೇವತೆಗಳನ್ನು ಪೂಜಿಸುತ್ತಾರೆ. ಹುಲಿಗೆಮ್ಮ (ಮುನಿರಾಬಾದ್) ಎಲ್ಲಮ್ಮ(ಸವದತ್ತಿ) ಕುರುಬತೆವ್ವ, ಗಂಗಿಮಾಳವ್ವ(ದೇವರ ಗುಡ್ಡ, ರಾಣಿಬೆನ್ನೂರ), ಮಾಯಮ್ಮ(ಚಿಂಚಲಿ) ಕೊಂತವ್ವ, (ಬಬಲಾದ, ಜತ್ತ ತಾಲೂಕ), ಮಾಸ್ತಿ, ತುಳಸಮ್ಮ(ಭಟ್ಕಳ ಸುತ್ತಮುತ್ತ) ಮುಂತಾದ ಸ್ತ್ರೀ ದೇವತೆಗಳನ್ನು ಇವರು ಪೂಜಿಸುತ್ತಾರೆ.
ತಮ್ಮ ದೇವತೆಗಳ ಜಾತ್ರೆ ಉತ್ಸವ ಹಬ್ಬಹರಿದಿನಗಳಲ್ಲಿ ಅವರು ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಹರಕೆ ಬೇಡಿಕೊಳ್ಳುವವರಲ್ಲಿ ಮಹಿಳೆಯರದ್ದೇ ದೊಡ್ಡಪಾಲು, ದೇವರು ತಮ್ಮ ಬೇಡಿಕೆಯನ್ನು ಈಡೇರಿಸಿದರೆ ಪ್ರತಿಯಾಗಿ ಅವರು ಕಾಣಿಕೆ ಅರ್ಪಿಸುವುದಕ್ಕೆ ಹರಕೆ ತೀರಿಸುವುದು ಎನ್ನುತ್ತಾರೆ. ಕುರುಬ ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಬೇಡಿಕೆ ಈಡೇರಿಕೆಯ ಮನವಿ ಸಲ್ಲಿಸಲು ಸಾಧ್ಯವಿಲ್ಲವಾದ್ದರಿಂದ ಅವರು ಅನಿವಾರ್ಯವಾಗಿ ದೇವರ ಮೊರೆ ಹೊಕ್ಕಿರುತ್ತಾರೆ.
ಬೀರಪ್ಪ, ಮಾಳಪ್ಪ, ಜಟ್ಟಿಂಗರಾಯ, ಅಮೋಘಸಿದ್ಧ ಮುಂತಾದ ದೇವರುಗಳಿಗೆ ಕುರುಬ ಮಹಿಳೆಯರು ಹಲವಾರು ರೀತಿಯ ಹರಕೆ ಹೊರುತ್ತಾರೆ. ತಮ್ಮ ಮನಸ್ಸಿನೊಳಗಿನ ಬಯಕೆಗಳ ಈಡೇರಿಕೆಗೆ ಪ್ರತಿಯಾಗಿ ಕೆಲವು ಮಹಿಳೆಯರು ಸೌಮ್ಯ ರೀತಿಯ ಹರಕೆ ಹೊತ್ತರೆ ಇನ್ನೂ ಕೆಲ ಮಹಿಳೆಯರು ಉಗ್ರಸ್ವರೂಪದ ಹರಕೆ ಹೊರುವುದೂ ಇದೆ.
ಸೌಮ್ಯ ಹರಕೆಗಳು
ಕೆಲವು ಮಹಿಳೆಯರು ದೇವರಿಗೆ ಕಣ್ಬಟ್ಟು ಕ್ವಾರಿಮೀಸೆ ಮಾಡಿಸಿಕೊಟ್ಟರೆ ಇನ್ನೂ ಕೆಲವು ಮಹಿಳೆಯರು ಬೆಳ್ಳಿಯ ಮುಖವನ್ನೇ ಮಾಡಿಸಿಕೊಡುತ್ತಾರೆ. ಕೆಲವು ಶ್ರೀಮಂತ ಮಹಿಳೆಯರು ಬಂಗಾರದ ಕಣ್ಬಟ್ಟು ಕ್ವಾರಿಮೀಸೆ ನೀಡುವುದಾಗಿ ಬೇಡಿಕೊಳ್ಳುತ್ತಾರೆ. ಒಂದೊಂದು ಸಲ ಗುಡಿಯ ಪೂಜಾರಿಗೆ ಬೆಳ್ಳಿಯ ಕೈ ಕಡಗ ಹಾಗೂ ಅವನ ಬೆತ್ತಕ್ಕೆ ಬೆಳ್ಳಿಯ ಹಿಡಕಿಯನ್ನು ಕಾಣಿಕೆ ನೀಡುತ್ತಾರೆ. ದೇವರ ಗುಡಿಯ ಸುತ್ತಲೋ, ಹೊಳೆಯಿಂದ ಗುಡಿಯವರೆಗೂ ದೀಡ ನಮಸ್ಕಾರ ಹಾಕುವವರೂ ಇದ್ದಾರೆ. ಕೆಲವೊಂದು ಸಂದರ್ಭದಲ್ಲಿ ಗುಗಳ ಎಬ್ಬಿಸಿ ಈರಕಾರರನ್ನು ಕರೆಯಿಸಿ ಪುರವಂತಿಕೆ ಆಡಿಸುವುದೂ ಉಂಟು. ಕೆಲವು ಮಹಿಳೆಯರು ನನಗೆ ಗಂಡು ಸಂತಾನ ಕೊಟ್ಟರೆ ನಿನ್ನ ಗುಡಿಗೆ ಬಂದು ಜವಳ ಇಳಿಸುವುದಾಗಿ ಬೇಡಿಕೊಳ್ಳುತ್ತಾರೆ. ಇನ್ನು ಕೆಲವು ಜನ ಮಹಿಳೆಯರು ನನಗೆ ಗಂಡು ಮಗುವಾದರೆ ನಿನ್ನ ಪಾಲಕಿಯ ಮುಂದೆ ಅಡ್ಡ ಹಾಕಿಸುವುದೆಂದರೆ ಗುಡಿಯ ಎದುರಿಗೆ ಗಂಡು ಮಗುವನ್ನು ಮಲಗಿಸಲಾಗುತ್ತದೆ. ದೇವರ ಪಲ್ಲಕ್ಕಿಯನ್ನು ಹೊತ್ತವರು ಹಾಗೆ ಮಲಗಿದ ಕೂಸನ್ನು ದಾಟಿ ಹೋಗುತ್ತಾರೆ. ಇದುವರೆಗೆ ನನಗೆ ಹೆಣ್ಣು ಮಗುವಾದರೆ ಇಂತಿಂಥ ಹರಕೆ ಹೊರುತ್ತೇನೆ ಎಂದ ಉದಾಯರಣೆಗಳಿಲ್ಲ. ಸ್ವತಃ ಹರಕೆ ಹೊರುವ ಮಹಿಳೆಯೇ ಹೆಣ್ಣಿನ ಪರ ಇಲ್ಲ ಎನ್ನುವುದು ವಿಷಾದದ ಸಂಗತಿ.
ಉಗ್ರ ಹರಕೆಗಳು
ಕುರುಬರಲ್ಲಿ ಕೆಲವು ಉಗ್ರರೂಪದ ಹರಕೆಗಳಿವೆ. ಜೋಡಬ್ಯಾಟಿ ಅವುಗಳಲ್ಲಿ ಒಂದು. ಜೋಡಾಬ್ಯಾಟಿ  ಅಂದರೆ ಎರಡು ಕುರಿಗಳನ್ನಾಗಲಿ ಎರಡು ಆಡುಗಳನ್ನಾಗಲಿ ದೇವರಿಗೆ ಬಲಿ ಅರ್ಪಿಸಿ ದೈವದವರಿಗೆ ಊಟ ಹಾಕಿಸುವುದು. ಕುರುಬರು ಕಳಸವುಳ್ಳ ದೇವರ ಗುಡಿಯ ಎದುರಿಗೆ ಬಲಿಕೊಡುವುದಿಲ್ಲವೆನ್ನುವುದು ಕುತೂಹಲಕರ ಅಂಶವಾಗಿದೆ. ಬಲಿ ಕೊಡುವುದಿದ್ದರೆ ದೇವರ ದೂತೆ/ಭೂತೆಗಳ ಎದುರಿಗೆ ಬಲಿ ಕೊಡುತ್ತಾರೆ. ಇದು ಕುರುಬರ ಮನಸ್ಸಿನಲ್ಲಿನ ಶುದ್ಧ ಶಾಕಾಹಾರ ಹಾಗೂ ಮಾಂಸಾಹಾರದ ನಡುವಿನ ತಾಕಲಾಟವನ್ನು ಬಿಂಬಿಸುತ್ತವೆ.
ಕುರುಬರು ತಮ್ಮ ಕೆಲವೊಂದು ದೇವರುಗಳಿಗೆ ಹರಿಮರಿ ಮಾಡುವ ಪದ್ಧತಿಯಿದೆ. ದೀಪಾವಳಿ ಹಾಗೂ ಯುಗಾದಿಯಂದು ದೇವರು ಗಂಗಸ್ಥಳಕ್ಕೆ ಹೋಗಿ ಮರಳಿ ಬಂದು ಗುಡಿ ಪ್ರವೇಶ ಮಾಡುವಾಗ ಈ ಆಚರಣೆ ನಡೆಯುತ್ತದೆ. ಯಾಕೆ ಈ ಆಚರಣೆ ಎಂದು ಕೇಳಿದರೆ ಗಂಗಸ್ಥಳಕ್ಕೆ ಹೋಗಿ ಧೂಳಗಾಲಿನಿಂದ ಬಂದ ತಮ್ಮ ದೇವರಿಗೆ ದೃಷ್ಟಿಯಾಗಬಾರದೆಂದು ಹರಿಮರಿ ಮಾಡುವುದಾಗಿ ಹೇಳುತ್ತಾರೆ. ಹರಿಮರಿ ಮಾಡುವುದೆಂದರೆ ದೇವರು ಗುಡಿ ಪ್ರವೇಶಿಸುವ ಮುನ್ನ ಒಂದು ಕುರಿಮರಿಯ ಮುಂಗಾಲು ಹಿಂಗಾಲು ಜಗ್ಗಿ ಹಿಡಿದು ನಿಂತಿರುತ್ತಾರೆ. ಊರ ತಳವಾರನು ಆ ಮರಿಯನ್ನು ಹತಾರದಿಂದ ಎರಡು ತುಂಡು ಮಾಡುತ್ತಾನೆ. ಒಂದು ತುಂಡನ್ನು ಎಡಕ್ಕೆ ಇಳೆದೆಗದು ಬಲಕ್ಕೆ ಚೆಲ್ಲುತ್ತಾರೆ. ಇನ್ನೊಂದು ತುಂಡನ್ನು ಬಲಕ್ಕೆ ಇಳೆದೆಗೆದು ಎಡಕ್ಕೆ ಚೆಲ್ಲುತ್ತಾರೆ ಇದಕ್ಕೆ ಮುಡದಾರ ಬೇಟೆ ಎಂದೂ ಕರೆಯುತ್ತಾರೆ. ಈ ಬೇಟೆಯ ಮಾಂಸವನ್ನು ಕುರುಬರು ತಿನ್ನುವುದಿಲ್ಲವೆನ್ನುವುದೇ ಇಲ್ಲಿನ ವಿಶೇಷ. ತಮ್ಮ ದೇವರಿಗೆ ತಮ್ಮೆದುರಿಗೇ ಕೊಡಲಾದ ಬಲಿಯ ಅಡುಗೆಯನ್ನು ತಾವೇ ತಿನ್ನುವುದಿಲ್ಲ. ದೇವರಿಗೆ ನೇರವಾಗಿ ಕೊಟ್ಟ ಬಲಿ ಇದು ಎನ್ನುವ ಕಾರಣವಿರಬಹುದು.
ಕೆಲವು ಕುರುಬರು ಮನೆಯಲ್ಲಿ ಒಳಕಲ್ಲು ಪೂಜೆಯೆಂದು ರಾತ್ರಿ ಎಲ್ಲಮ್ಮ ದೇವತೆಗೆ ಎಂಟುಕಾಲಿನ ಬೇಟೆ ಅರ್ಪಿಸುತ್ತಾರೆ. ಎಂಟು ಕಾಲಿನ ಬೇಟೆ ಅಂದರೆ ಗಬ್ಬಾದ ಕುರಿ ಅಥವಾ ಆಡು. ಈ ಬೇಟೆಯನ್ನು ಅರ್ಪಿಸುವಾಗ ಮನೆಯ ಮಹಿಳೆಯರು ಗಬ್ಬಾದ ಹರಕೆಯ ಕುರಿಯ/ಆಡಿನ ಕಾಲುಗಳನ್ನು ತೊಳೆಯುತ್ತಾರೆ. ಹಣೆ ತೊಳೆಯುತ್ತಾರೆ. ಕಾಲು ಹಣೆಗೆ ಭಂಡಾರ ಹಚ್ಚುತ್ತಾರೆ. ನಂತರ ಅದಕ್ಕೆ ಸೊಡ್ಡಾರತಿ ಬೆಳಗುತ್ತಾರೆ. ನಂತರ ಅದನ್ನು ಬಲಿಕೊಡಲಾಗುತ್ತದೆ. ಗಬ್ಬಾದ ಬಲಿಯ ಹೊಟ್ಟೆಯೊಳಗಿನ ಹುದಗ(ಮರಿ)ವನ್ನು ಅವರು ಅಂದು ಮಾಡುವ ಅಡುಗೆಯಲ್ಲಿ ಹಾಕುವುದಿಲ್ಲ. ಅಂತೆಯೇ ಕಾಲು, ತಲೆ ಭಾಗವನ್ನೂ ಬಳಸುವುದಿಲ್ಲ. ಬೇಟೆಯ ಕಾಳಜಗ (ಹೃದಯ) ಹಾಗೂ ಬೆನ್ನಪಟ್ಟಿ (ಹೃದಯ ಹಿಂದಿನ ಭಾಗ) ಇವರೆಡನ್ನೂ ಕುದಿಯುವ ಮಾಂಸದ ಅಡುಗೆಯಲ್ಲಿ ಸೇರಿಸುವುದಿಲ್ಲ. ಆದರೆ ಆ ಅಡುಗೆಯ ಉಗಿಯಲ್ಲಿ ಇವನ್ನು ಬೇಯಿಸುತ್ತಾರೆ. ಹಾಗೆ ಬೇಯಿಸಿದ ಇವೆರಡರಿಂದಲೇ ಎಲ್ಲಮ್ಮ ದೇವಿಗೆ ನೈವೇದ್ಯ ತಯಾರಿಸುತ್ತಾರೆ. ಈ ನೈವೇದ್ಯದ ಎಡೆಯನ್ನು ಕೊರಳಲ್ಲಿ ಎಲ್ಲಮ್ಮ ಪಾದ ಕಟ್ಟಿಕೊಂಡ ಐದು ಜನ ಕುರುಬ ಮಹಿಳೆಯರಿಗೆ ಉಣಬಡಿಸುತ್ತಾರೆ. ಈ ಇಡೀ ಕಾರ್ಯಕ್ರಮ ಮನೆಯ ಬಳಿ ಆವರಣದಲ್ಲಿ ಗೌಪ್ಯವಾಗಿ ನಡೆಯುತ್ತದೆ. ಉಳಿದ ಸಮಾಜದ ಜನರನ್ನು ಈ ಕಾರ್ಯಕ್ರಮಕ್ಕೆ ಆಮಂತ್ರಿಸುವುದಿಲ್ಲ. ಕೇವಲ ಕುಟುಂಬದ ಸದಸ್ಯರು ಹಾಗೂ ಅವರ ಅಣ್ಣತಮ್ಮಂದಿರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ರಾತ್ರಿಯೇ ಈ ಕಾರ್ಯಕ್ರಮ ಮುಗಿಸಿ ಬಲಿಯ ಉಳಿದ ಭಾಗ, ಉಳಿದ ಅಡಿಗೆಯ ಭಾಗ, ಹುದುಗ, ಕಾಲುಗಳು, ಹಣೆ ಎಲ್ಲವನ್ನೂ ಸೂರ್ಯೋದಯಕ್ಕೆ ಮುಂಚೆಯೇ ಮಲಗಿಸುತ್ತಾರೆ. ಮಲಗಿಸುವುದು ಎಂದರೆ ಎಲ್ಲಮ್ಮನ ದೇವರ ಕೋಣೆಯಲ್ಲಿ ತಗ್ಗನ್ನು ತೋಡಿ ಮುಚ್ಚುತ್ತಾರೆ.
ಈ ಸಂಪ್ರದಾಯವೂ ಸಹ ಕುರುಬರ ಶಾಖಾಹಾರ ಹಾಗೂ ಮಾಂಸಾಹಾರದ ತಾಕಲಾಟವನ್ನು ಬಿಂಬಿಸುವಂಥದ್ದಾಗಿದೆ. ಸಮಾಜದ ಉಚ್ಚ ವರ್ಗದವರ ಆಹಾರ ಪದ್ಧತಿಯ ಆಕರ್ಷಣೆ ಹಾಗೂ ಮೂಲದ ತಮ್ಮ ಆಹಾರ ಪದ್ಧತಿಯ ಸೆಳೆತ ಇವೆರಡರ ಮಧ್ಯದಲ್ಲಿ ಉಂಟಾದ ಟೆನ್‌ಶನ್‌ದಲ್ಲಿ ಇಂಥ ಗೌಪ್ಯ ಆಚರಣೆಗಳು ರೂಪುಗೊಂಡಿರಬಹುದು. ಬಲಿಕೊಡುವಾಗ ಕುರಿ ಬ್ಯಾ ಎಂದು ಒದರಿದರೆ ಅಶುಭವೆಂದು ಭಾವಿಸುತ್ತಾರೆ. ಉಧೋ ಉಧೋ ಎಂದು ಜೋಗಹಾಕಿದರೆ ಕುರಿ ಬ್ಯಾ ಎಂದು  ಒದರುವುದಿಲ್ಲವೆಂದು ಕುರುಬರ ಅಚಲವಾದ ನಂಬಿಕೆ. ಹೀಗಾಗಿ ಬಲಿಕೊಡುವ ಮುನ್ನ ಎಲ್ಲಮ್ಮ ನಿನ್ನಾಟಿಕ ಉಧೋ, ಉಧೋ ಎಂದು ಜೋರಾಗಿ ಜೋಗ ಹಾಕುತ್ತಾರೆ. ಇಲ್ಲಿಯೂ ಕೂಡಾ, ತಾವು ಬಲಿಕೊಡುತ್ತಿರುವ ವಿಷಯ ಅನ್ಯಸಮಾಜದವರಿಗೆ ತಿಳಿಯಬಾರದೆಂಬ ಮುನ್ನೆಚ್ಚರಿಕೆ ಇರುವುದನ್ನು ಗಮನಿಸಬಹುದು.
ಕುರುಬ ಮಹಿಳೆಯರು ತಮ್ಮ ಭವಿಷ್ಯದ ಕುರಿತ ಸೂಚನೆಗಳನ್ನು ದೇವರ ಗುಡಿಯ ಆವರಣದಲ್ಲಿಯ ಆಗು ಹೋಗುಗಳೊಂದಿಗೆ ತಳಕು ಹಾಕಿ ಗ್ರಹಿಸುತ್ತಾರೆ. ದೇವರ ಗುಡಿಯಲ್ಲಿಟ್ಟ ಡೊಳ್ಳು ತನ್ನಷ್ಟಕ್ಕೆ ತಾನೇ ಸಣ್ಣಗೆ ಕಂಪಿಸಿ ಸಣ್ಣಗೆ ನಾದ ಹೊರಡಿಸಿದರೆ ತಮ್ಮ ಮಕ್ಕಳಿಗೆ ಏನೋ ಅಪಾಯ ಕಾದಿದೆ ಎಂದು ನಂಬುತ್ತಾರೆ. ತಮ್ಮ ಭವಿಷ್ಯದಲ್ಲಿ ಒಳ್ಳೆಯದಾಗುವುದಿದೆಯೇ ಎಂದು ತಿಳಿದುಕೊಳ್ಳಲು ಪೂಜೆ ಕಟ್ಟುವ ಪದ್ಧತಿಯಿದೆ. ಮುಸಿ, ಚಿಲುಮಿ ಆಕಾರದ ಬೆಳ್ಳಿಯ  ವಸ್ತುವೊಂದನ್ನು ಪೂಜೆಕಟ್ಟುವಲ್ಲಿ ಬಳಸಲಾಗುತ್ತದೆ. ಆ ವಸ್ತುವನ್ನು ಸ್ವಲ್ಪವೇ ಮೇಲೆತ್ತಿ ದೇವರ ಗದ್ದುಗೆಯ ಮೇಲೆ ಪೂಜಾರಿ ಕೈ ಬಿಡುತ್ತಾನೆ. ಹಾಗೆ ಕೈ ಬಿಟ್ಟಾಗ ಆ ವಸ್ತು ಬಲಕ್ಕೆ ಬಿದ್ದರೆ ಶುಭವೆಂದೂ, ಎಡಕ್ಕೆ ಬಿದ್ದರೆ ಅಶುಭ ವೆಂದೂ, ಮಧ್ಯಬಿದ್ದರೆ ಕೆಲಸ ನಿಧಾನವಾಗಿ ಆಗುತ್ತದೆಯೆಂದೂ ನಂಬುತ್ತಾರೆ. ಈ ಎಲ್ಲ ಆಚರಣೆಗಳಲ್ಲಿ ಮಹಿಳೆಯರು ಹೆಚ್ಚಿಗೆ ಆಸಕ್ತಿ ವಹಿಸುತ್ತಾರೆ. ಯಾಕೆಂದರೆ ಅವರ ಭವಿಷ್ಯ ಅಂಧಃಕಾರದಲ್ಲಿ ಮುಳುಗಿದಂತೆ ಇರುತ್ತದೆ. ತಮ್ಮ ಭವಿಷ್ಯದಲ್ಲಿ ಏನಾದರೂ ಶುಭಸೂಚನೆಗಳು ಇವೆಯೇ ಎನ್ನುವ ಕುತೂಹಲ ಕುರುಬ ಮಹಿಳೆ ಇಂಥ ನಂಬಿಕೆಗಳನ್ನು ಪೋಷಿಸಿಕೊಂಡು ಬರುವಂತೆ ಮಾಡಿವೆ.
ರಾಜಕೀಯ ಮತ್ತು ಮಹಿಳೆ
ಈ ಪ್ರಬಂಧದ ಪ್ರಾರಂಭದಲ್ಲಿ ಕುರುಬ ಮಹಿಳೆ ಚರಿತ್ರೆಯ ಕತ್ತಲೆಯಲ್ಲಿ ಕರಗಿ ಹೋದುದರ ಕುರಿತು ಒಂದಿಷ್ಟು ಈಗಾಗಲೇ ಹೇಳಲಾಗಿದೆ. ಅಹಲ್ಯಾಬಾಯಿ ಹೋಳ್ಕರ್ ಒಬ್ಬಳನ್ನು ಬಿಟ್ಟರೆ ಭಾರತದ ಚರಿತ್ರೆಯಲ್ಲೇ ಇನ್ನೊಬ್ಬ ಕುರುಬ ಮಹಿಳೆ ತನ್ನ ಹೆಜ್ಜೆ ಗುರುತು ಮೂಡಿಸಿದ ಘಟನೆಗಳಿಲ್ಲ. ಈ ಮಾತು ಸ್ವಾತಂತ್ರ್ಯಾ ನಂತರದ ಭಾರತಕ್ಕೂ ಅನ್ವಯಿಸುತ್ತದೆ. ಸ್ವಾತಂತ್ರ್ಯಾ ನಂತರದ ಕರ್ನಾಟಕದ ರಾಜಕೀಯ ಇತಿಹಾಸವನ್ನು ಗಮನಿಸಿದಾಗಲೂ ಈ ಮಾತು ಅಷ್ಟೇ ಸತ್ಯವಾದುದಾಗಿದೆ. ನಮಗೆ ಸ್ವಾತಂತ್ರ್ಯ ಬಂದು ಆರು ಸಾಧಕಗಳೇ ಸಂದಿವೆ. ಈ ದೀರ್ಘ ಅವಧಿಯಲ್ಲಿ ಒಬ್ಬಳೇ ಒಬ್ಬ ಕುರುಬ ಮಹಿಳೆಯನ್ನು ಎಂ.ಎಲ್.ಎ. ಆಗಿಸಲು ಸಾಧ್ಯವಾಗಿದೆ. ಲಕ್ಷ್ಮೀದೇವಿಯ ರಾಮಣ್ಣ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದ ಕರ್ನಾಟಕದ ಪ್ರಥಮ ಕುರುಬ ಮಹಿಳೆ. ಚಾಮರಾಜ ಪೇಟೆಯನ್ನು ಪ್ರತಿನಿಧಿಸಿ ಒಂದು ಸಲ, ಮಾಲೂರನ್ನು ಪ್ರತಿನಿಧಿಸಿ ಇನ್ನೊಂದು ಸಲ ಹೀಗೆ ಅವರು ಎರಡು ಸಲ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರ ನಂತರದ ಬಹುದೊಡ್ಡ ನಿರ್ವಾತ ಅಲ್ಲಿ ಕಾಣಿಸಿಕೊಂಡಿದೆ. ಅದೂ ಅಲ್ಲದೆ ಕರ್ನಾಟಕದಿಂದ ಒಬ್ಬಳೇ ಒಬ್ಬ ಮಹಿಳೆ ಇನ್ನೂವರೆಗೆ ಎಂ.ಪಿ ಆಗಿ ಹೋಗಿಲ್ಲ. ಬಹುದೊದ್ಡ ರಾಜಕೀಯ ಚರಿತ್ರೆ ತಮಗೆ ಇದೆ ಎಂದು ಅಭಿಮಾನದಿಂದ ಹೇಳಿಕೊಳ್ಳುವ ಕುರುಬರಿಗೆ ಇಂದಿನವರೆಗೂ ಸ್ಪಷ್ಟವಾಗಿ ರಾಜಕೀಯ ಮಹಿಳೆ ಪ್ರತಿನಿಧಿಗಳನ್ನು ರೂಪಿಸಿಕೊಳ್ಳಲಾಗಿಲ್ಲ ಎಂಬುದು ವಿಷಾದದ ಸಂಗತಿ.
ಜಿಲ್ಲಾ ಪಂಚಾಯತಿ ಹಾಗೂ ತಾಲೂಕಾ ಪಂಚಾಯತಿಗಳಲ್ಲಿ ಕುರುಬ ಮಹಿಳೆಯರು ಪ್ರತಿನಿಧಿಸುತ್ತಿರುವುದು ಆಶಾದಾಯಕವಾಗಿದೆ. ಆದರೆ ಇವೆಲ್ಲಾ ಮೀಸಲಾತಿಯಿಂದ ಒದಗಿಬಂದ ಸೌಲಭ್ಯಗಳು. ಸ್ವಂತ ಸಾಮರ್ಥ್ಯದ ಮೇಲೆ ಸ್ವಯಂ ಪ್ರೇರಣೆಯಿಂದ ಕುರುಬ ಮಹಿಳೆಯರು ರಾಜಕೀಯ ಪ್ರವೇಶಿಸಲು ಇಂಥ ಸೌಲಭ್ಯಗಳು ಪ್ರಚೋದಿಸುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಉಳಿದಂತೆ ಕುರುಬ ಮಹಿಳೆಗೆ ರಾಜಕೀಯವೆಂದರೆ ಮನೆಯ ಯಜಮಾನ ಹೇಳಿದ ಯಾವುದೋ ಒಂದು ಪಕ್ಷಕ್ಕೆ ಮತಚಲಾಯಿಸಿ ಬಂದರಾಯಿತು ಎನ್ನುವಂತಾಗಿದೆ. ಶಿಕ್ಷಣ ಸೌಲಭ್ಯ ಹಾಗೂ ಮಾಧ್ಯಮಗಳ ಕಾರಣದಿಂದ ರಾಜಕೀಯದಲ್ಲಿ ಅಲ್ಪಸ್ವಲ್ಪವಾದ ಕುತೂಹಲ ಇತ್ತೀಚೆಗೆ ಕುರುಬ ಮಹಿಳೆಯರಲ್ಲಿ ಮೂಡುತ್ತಿರುವುದು ಸಮಾಧಾನದ ಸಂಗತಿ. ಈಗ ರಾಜಕೀಯ ಅವಕಾಶಗಳು ಮೀಸಲಾತಿ ಕಾರಣದಿಂದ ಮಹಿಳೆಯರನ್ನು ಆರಸಿ ಬಂದಂಥವುಗಳಾಗಿವೆಯೇ ಹೊರತು ಮಹಿಳೆಯರೇ ಬಯಸಿ ಗಳಿಸಿಕೊಂಡಂಥವುಗಳಲ್ಲ. ಹಾಗೆ ಬಯಸಿ ಪಡೆಯಬೇಕಾದರೆ ಇನ್ನೂ ಹಲವಾರು ದಶಕಗಳೇ ಬೇಕು. ಈ ಅವಧಿಯಲ್ಲಿ ರಾಜಕೀಯ ಪ್ರವೇಶಿಸುವ ಮಹಿಳೆಯ ಕುರಿತು ಸಮಾಜದ ನಿಲುವು ಬದಲಾಗಬೇಕು. ಹಾಗೂ ಸ್ವತಂತ್ರವಾಗಿ ರಾಜಕೀಯ ಪ್ರವೇಶಿಸಬಲ್ಲ ಆತ್ಮಸ್ಥೈರ್ಯ ಮಹಿಳೆಯರು ತುಂಬಿಕೊಳ್ಳುವಂತಾಗಬೇಕು.
ಕುರುಬ ಮಹಿಳೆ-ಸಾಹಿತ್ಯಕಲೆಸಂಸ್ಕೃತಿಇತ್ಯಾದಿ
ಈ ಅಧ್ಯಾಯದಲ್ಲಿ ಕುರುಬರು ರಚಿಸಿಕೊಂಡ ಸಾಹಿತ್ಯದಲ್ಲಿ ಅದರಲ್ಲೂ ವಿಶೇಷವಾಗಿ ಅವರ ಪುರಾಣ ಕತೆಗಳಲ್ಲಿ, ಜಾನಪದ ಗೀತೆ ಸಾಹಿತ್ಯದಲ್ಲಿ ಮಹಿಳೆಯ ಕುರಿತ ಅವರ ದೃಷ್ಟಿಕೋನ, ಕುರುಬ ಮಹಿಳೆಯರೇ ಸೃಷ್ಟಿಸಿದ ಸಾಹಿತ್ಯ, ಅವರ ಕಲಾ ಅಭಿರುಚಿ, ಅವರ  ಸಂಸ್ಕೃತಿ ಇತ್ಯಾದಿ ಅಂಶಗಳ ಕುರಿತು ವಿವೇಚಿಸಲಾಗಿದೆ.
ಪುರಾಣ ಕಥನ ಹಾಗೂ ಕುರುಬ ಮಹಿಳೆ
ಕುರುಬರು ತಮ್ಮ ಆರಾಧ್ಯ ದೈವಗಳ ಕುರಿತು, ತಮ್ಮ ಕುಲಗುರುಗಳ ಕುರಿತು ಅನೇಕ ಪುರಾಣ ಕಥನಗಳನ್ನು ಸೃಷ್ಟಿಸಿಕೊಂಡಿದ್ದಾರೆ. ದೇವರುಗಳ ಪತ್ನಿ-ಉಪಪತ್ನಿಯರ ಕುರಿತು, ಸಹೋದರಿಯರ ಕುರಿತು ಅನೇಕ ಘಟನಾವಳಿಗಳನ್ನು ಹೆಣೆದುಕೊಂಡಿದ್ದಾರೆ. ಮಹಿಳೆಯ ಕುರಿತು ಕುರುಬರ ನಿಲುವು ಎಂಥದು ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಈ ಪ್ರಬಂಧದ ಪ್ರಾರಂಭದಲ್ಲಿ ಉಲ್ಲೇಖಿಸಿದಂತೆ ಕುರುಬರು ಮಹಿಳೆಯನ್ನು ಗೌರವಯುತವಾಗಿ ಕಂಡಿಲ್ಲ ಎಂಬುದನ್ನು ನಮೂದಿಸಲಾಗಿದೆ. ಯಾಕೆಂದರೆ ಯಾರನ್ನು ತಮ್ಮ ಜನಾಂಗದ ಮೂಲ ಮಹಿಳೆ(ಮುದ್ದಾಯಿ/ಮುದ್ದವ್ವ) ಯೆಂದು ಭಾವಿಸುತ್ತಾರೋ ಅವಳನ್ನು ಎಡ ಅಥವಾ ಹೀನ ಎಂದು ಭಾವಿಸಲಾಗಿದೆ. ಸ್ವತಃ ಪಾರ್ವತಿಯೇ ಈ ಹೆಣ್ಣನ್ನು ರೂಪಿಸುತ್ತಾಳಾದರೂ ಅವಳು ಮಹಿಳೆಗೆ ಪುರುಷನಿಗಿಂತ ಕನಿಷ್ಟ ಸ್ಥಾನವನ್ನು ನೀಡಿದ್ದಾಳೆ.
ಕುರುಬರ ಕುಲಗುರು ಎಂದು ಸ್ವೀಕೃತವಾಗಿರುವ ರೇವಣ್ಣಸಿದ್ಧ 101 ಪತ್ನಿಯರನ್ನು ಹೊಂದಿದ್ದ ಎಂದು ನಂಬಲಾಗಿದೆ. ಸುಲಕ್ಷಣೆ, ಸೌಂದರಿದೇವಿ, ಪುಣ್ಯವತಿ, ವೇದಕಂಚುಕಿ, ಇತ್ಯಾದಿ ಹೆಸರುಗಳು ಅವರಿಗಿವೆ. ಸುಲಕ್ಷಣೆ ಎರಡನೆಯ ಬಿಜ್ಜಳನೆಂದು ಖ್ಯಾತನಾದ ಸೋಯಿದೇವನ ರೇವಣಸಿದ್ಧ ನಡೆಯಿಸಿಕೊಂಡ ರೀತಿ ಪುರುಷ ಪ್ರಧಾನ ವ್ಯವಸ್ಥೆ ನಂಬಿಕೊಂಡ ಕುರುಬರ ನಿಲುವಿಗೆ ಹೊಂದಿಕೊಳ್ಳುವಂಥದ್ದಾಗಿದೆ. ಬಸವ ಕಲ್ಯಾಣದಲ್ಲಿ ತ್ರಿಪುರಾಂತಕ ಕರೆಯನ್ನು ಕಟ್ಟಿಸಲು ನಿರ್ಧರಿಸುವ ರೇವಣಸಿದ್ಧ ತನ್ನ ಮಡದಿಯರೊಂದಿಗೆ ಅಲ್ಲಿ ಕಾಯಕ ಸೇವೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಸೌಂದರಿದೇವಿ ತನ್ನಿಂದ ಕೆರೆಯ ಮಣ್ಣು ಹೊತ್ತು ಹಾಕಲಾಗುವುದಿಲ್ಲವೆಂದು ಹೇಳುತ್ತಾಳೆ. ಆಗ ಅವಳ ಗರ್ಭವನ್ನು ಬಗೆದು ಅದರೊಳಗಿನ ಕೂಸಿಗೆ ವನಸ್ಪತಿ ಆರೈಕೆ ಮಾಡಿ ಅದನ್ನು ಕೆರೆಯ ದಂಡೆಯಲ್ಲಿ ಹೂಳುತ್ತಾನೆ. ನೀನೀಗ ಗರ್ಭಿಣಿ ಅಲ್ಲ. ಆದ್ದರಿಂದ ಕೆರೆಯ ಮಣ್ಣನ್ನು ಹೊತ್ತು ಹಾಕು ಎಂದು ಸೌಂದರಿದೇವಿಗೆ ಆಜ್ಞಾಪಿಸುತ್ತಾನೆ. ಆರು ತಿಂಗಳಾದ ನಂತರ ಕೆರೆಯ ದಂಡೆಯಲ್ಲಿ ಹೂಳಿದ್ದ ಪಿಂಡವನ್ನು ಕೂಸನ್ನು ಹೊರತೆಗೆದು ಬೆಳೆಯಿಸುತ್ತಾನೆ. ಅವನೇ ಪ್ರಸಿದ್ಧನಾದ ರುದ್ರಮುನಿಯಾದ ಎಂಬ ಕತೆಯಿದೆ. ರೇವಣಸಿದ್ಧನಲ್ಲಿ ಪಿಂಡಶಾಸ್ತ್ರ, ಔಷಧಿ ಸಸ್ಯಗಳ ಕುರಿತ ಜ್ಞಾನ ಹಾಗೂ ಶಸ್ತ್ರಕ್ರಿಯೆಯಲ್ಲಿ ಪರಿಣತಿ ಇತ್ತು ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಒದಗಿಸುತ್ತದೆಯೇನೋ ನಿಜ. ಆದರೆ ಮೂರು ತಿಂಗಳ ಗರ್ಭಿಣಿ ಸೌಂದರಿದೇವಿಯನ್ನು ನಡೆಯಿಸಿಕೊಂಡ ರೀತಿ ಪುರುಷ ನಿರ್ಧಯತೆಯ ಸಂಕೇತವಾಗಿಯೂ ನಿಲ್ಲುತ್ತದೆ. ಅದೂ ಅಲ್ಲದೆ 101 ಜನ ಮಹಿಳೆಯರನ್ನು ಆತ ಮದುವೆಯಾದ ಎನ್ನುವ ವಿಷಯದ ಪರ ಪಕ್ಷವಹಿಸಿ ಮಾತನಾಡುವುದಾದರೂ ಹೇಗೆ!
ಅರಕೇರಿ ಅಮೋಘಸಿದ್ಧ ಕುರುಬರಿಗೆ ಇನ್ನೊಬ್ಬ ಶ್ರೇಷ್ಠ ಕುಲಗುರು. ಅವನು ಪದ್ಮಾವತಿಯನ್ನು ಮದುವೆ ಮಾಡಿಕೊಂಡ ರೀತಿಯೂ ವಿಚಿತ್ರವಾಗಿದೆ. ಮದುವೆ ಮಾಡಿಕೊಳ್ಳಲು ತಾನು ಹೋಗದೆ ತನ್ನಲ್ಲಿರುವ ನೇಮದ ಬೆತ್ತವನ್ನು ಕಳುಹಿಸಿಕೊಡುತ್ತಾನೆ. ನೇಮದ ಬೆತ್ತದ ಎಡಬದಿಗೆ ಪದ್ಮಾವತಿಯನ್ನು ಕೂಡ್ರಿಸಿ ಅಕ್ಷತೆ ಹಾಕಲಾಗುತ್ತದೆ. ಜೀವದಯಾಪರನಾದ ಅಮೋಘಸಿದ್ಧ ತನ್ನ ಮದುವೆಯ ವಿಷಯದಲ್ಲಿ ಹೀಗೇಕೆ ನಡೆದುಕೊಂಡ ಎನ್ನುವುದನ್ನು ವಿಶ್ಲೇಷಿಸುವುದು ಕಷ್ಟ.
ಹುಲಿಜಂತಿ ಮಾಳಿಂಗರಾಯ ಕುರುಬರ ಆರಾಧ್ಯದೈವ. ಆತ ಬೀರ ದೇವರ ಪರಮಭಕ್ತ. ಅನ್ಯಾಯದ ವಿರುದ್ಧ ಹೋರಾಡಿದಂಥ ವ್ಯಕ್ತಿ. ಆದರೆ ಅಂಥ ಮಾಳಿಂಗರಾಯನೂ, ತನ್ನ ಹೆಂಡತಿ ಮಾಡಿದ ಒಂದು ದೋಷವನ್ನು ಕ್ಷಮಿಸದೇ ಹೋಗುತ್ತಾನೆ. ಗುರು ಬೀರದೇವರಿಗೆ ಮೀಸಲು ಎಡೆ ಮಾಡಲು ಬೇಕಾದ ನೀರು ತರಲು ಮಾಳಿಂಗರಾಯನ ಹೆಂಡತಿ ಲಕ್ಷ್ಮಿ ಹೊಳೆಗೆ ಹೋಗುತ್ತಾಳೆ. ಕೊಡತುಂಬಿಕೊಂಡ ನಂತರ ಬಾಯಾರಿಕೆಯಾದಂತೆನ್ನಿಸಿ ಅದರೊಳಗಿನ ಮೂರು ಬೊಗಸೆ ನೀರು ಕುಡಿಯುತ್ತಾಳೆ. ಮನೆಗೆ ಬಂದು ಅಡುಗೆ ಮಾಡಿ ಎಡೆ ಹಿಡಿಯುತ್ತಾಳೆ. ಇದನ್ನು ತನ್ನಲ್ಲಿರುವ ಅಪೂರ್ವ ಶಕ್ತಿಯ ಸಹಾಯದಿಂದ ಪತಿ ಮಾಳಿಂಗರಾಯ ತಿಳಿದುಕೊಳ್ಳುತ್ತಾನೆ. ಮೀಸಲು ಮುರಿದ ಅಪರಾಧಕ್ಕಾಗಿ ಅವಳನ್ನು ತವರುಮನೆಗೆ ಕಳುಹಿಸುತ್ತಾನೆ. ಅವನ ಶಾಪದ ಕಾರಣವಾಗಿ ಅವಳು ತವರು ಮನೆ ತಲುಪಿದ ನಂತರ ಅವಳ ಬೆನ್ನು ಹುರಿ ಉಚ್ಚುತ್ತವೆ. ಹೊಟ್ಟೆಯಿಂದ ಮೂರು ಬೊಗಸೆ ನೀರನ್ನು ಕಾರಿಕೊಂಡು ಅವಳು ಅಸುನೀಗುತ್ತಾಳೆ.
ಸ್ತ್ರೀಯನ್ನು ತುಚ್ಛೀಕರಿಸಿ ಚಿತ್ರಿಸಿರುವ ಕತೆಗಳು ಇರುವಂತೆ ಸ್ತ್ರೀಯನ್ನು ಗೌರವಿಸಿದ ಚಿತ್ರಣಗಳೂ ಕುರುಬರ ಪುರಾಣ ಕಥನಗಳಲ್ಲಿವೆ. ಬೀರಪ್ಪನ ಅಕ್ಕ ಮಾಯವ್ವನ ಪಾತ್ರದಲ್ಲಿ ಅಂಥದೊಂದು ಅಂಶವನ್ನು ನೋಡುತ್ತೇವೆ. ಬೀರಪ್ಪ ಇನ್ನೂ ಕೂಸಿರುವಾಗಲೇ ಸೋದರಮಾವ ಕಾಳಿನಾರಾಯಣನ ಕುತಂತ್ರದ ಕಾರಣದಿಂದ ತಾಯಿ ಸೂರಾದೇವಿಯನ್ನು ಅಗಲಿ ಕಾಡಿನ ಪಾಲಾಗುತ್ತಾನೆ. ಕುರಿಕಾಯುತ್ತ ಅಲ್ಲಿಗೆ ಬಂದ ಅಕ್ಕಮ್ಮ ಮಾಯಮ್ಮರಿಗೆ ಈ ಕೂಸು ದೊರೆಯುತ್ತದೆ. ಅನಾಥ ಕೂಸನ್ನು ಕಂಡ ಮಾಯಮ್ಮನಲ್ಲಿ ಮಾತೃತ್ವ ಉಕ್ಕಿ ಹರಿಯುತ್ತದೆ. ಅಕ್ಕನಾಗಿ ತಾಯಿಯಾಗಿ ಬೀರಪ್ಪನನ್ನು ಮಾಯವ್ವ ಮಹಾನ್ ವ್ಯಕ್ತಿಯನ್ನಾಗಿ ರೂಪಿಸುತ್ತಾಳೆ. ಅಕ್ಕ ತಮ್ಮರ ಅಪರೂಪ ಸಂಬಂಧದ ಅನೇಕ ಹೃದಯ ಸ್ಪರ್ಶಿ ಸನ್ನಿವೇಶಗಳು ಬೀರಪ್ಪ ಮಾಯಮ್ಮರ ಕುರಿತ ಕಥನದಲ್ಲಿ ದೊರೆಯುತ್ತದೆ. ಕುರುಬ ಸಮಾಜದಲ್ಲಿ ಅಕ್ಕಳಾದವಳು ತನ್ನ ತಮ್ಮನನ್ನು ಏನೆಲ್ಲ ರೀತಿಯಿಂದ ಬೆಳೆಯಿಸುತ್ತಾಳೆ ಎಂಬುದರ ಕುರಿತು ಸೋದರ ಸೋದರಿಯರ (ಕುಟುಂಬ ಸಂಬಂಧಿ) ಒಳನೋಟಗಳು ಇಲ್ಲಿ ದೊರೆಯುತ್ತವೆ.
ಕುಟುಂಬವೊಂದರಲ್ಲಿ ಅತ್ತಿಗೆ ನಾದಿನಿಯರ ಸಂಬಂಧದಲ್ಲಿ ಒಳಮುಸುಕಿನ ಗುದ್ದಾಟಗಳು ಎಂಥವಿರುತ್ತವೆ ಎಂಬುದನ್ನು ಬೀರಪ್ಪನ ಹೆಂಡತಿ ಕನ್ನಿಕಾಮಾಲೆ ಹಾಗೂ ಅವನ ಅಕ್ಕ ಮಾಯವ್ವರ ಕುರಿತ ಕಥನಗಳಲ್ಲಿ ನೋಡಬಹುದು. ನಾದಿನಿಯಾದವಳನ್ನೂ ತವರು ಮನೆಗೆ ಬರದ ಹಾಗೆ ಅತ್ತಿಗೆಯಾದವಳು ಹೇಗೆ ನಡೆದುಕೊಳ್ಳುತ್ತಾಳೆ ಎಂಬ ವಿವರ ಇಲ್ಲಿನ ಘಟನೆಯೊಂದರಿಂದ ತಿಳಿದು ಬರುತ್ತದೆ. ಒಂದು ಸಲ ಬೀರಪ್ಪ ತನ್ನ ಮನೆಯಲ್ಲಿ ಗುರುವಿನ ಹಬ್ಬ ಮಾಡಲು ನಿರ್ಧರಿಸುತ್ತಾನೆ. ಹಬ್ಬಕ್ಕೆ ಅಕ್ಕ ಮಾಯವ್ವನನ್ನು ಕರೆತರಲು ಶಿಷ್ಯನಾದ ಬಪ್ಪಣ್ಣನನ್ನು ಕೊಟ್ಟು ಕಳುಹಿಸುತ್ತಾನೆ. ಹೀಗೆ ಹೊರಟ ಬಪ್ಪಣ್ಣನ ಕೈಯಲ್ಲಿ ಕನ್ನಿಕಾಮಾಲೆ ಮಾಯವ್ವನಿಗೆ ಬುತ್ತಿ ಕಟ್ಟಿ ಕಳುಹಿಸಿಕೊಡುತ್ತಾಳೆ. ಆದರೆ ಅದರಲ್ಲಿ ಬರಿ ತಂಗಳಡಿಗೆಯೇ ಇರುತ್ತದೆ. ಇದರಿಂದ ಅವಮಾನಿತಳಾದ ಮಾಯವ್ವ ತಾನು ತವರು ಮನೆಗೆ ಬರಲು ಒಲ್ಲೆ ಎಂದು ಬಪ್ಪಣ್ಣನೊಂದಿಗೆ ಹೇಳಿಕಳುಹಿಸುತ್ತಾಳೆ. ಆಗ ಕನ್ನಿಕಾಮಾಲೆಯು ಅಕ್ಕತಂಗಿಯರು ಬರದಿದ್ದರೆ ಅಕ್ಷತ್ತದಿಗೆ ಅಮವಾಸೆ ನಿಲ್ಲಬಾರದು. ಮಾಯವ್ವ ಬರದಿದ್ದರೆ ಗುರುವಿನ ಹಬ್ಬ ನಿಲ್ಲಿಸಲಾಗದು ಎಂದು ವಾದಿಸುತ್ತಾಳೆ. ಆಗ ಬೀರಪ್ಪ ಹೆಂಡತಿಗೆ ನಿನ್ನ ವಾದ ತಪ್ಪು ಎಂದು ತಿಳಿ ಹೇಳುತ್ತಾನೆ. ಅಕ್ಕತಂಗಿಯೆಂದರೆ ತವರು ಮನೆಯ ನಡುಗಂಬವಿದ್ದ ಹಾಗೆ ಅವರು ಸಮಾಧಾನದಿಂದ ಇದ್ದರೆ ತವರು ಮನೆಯಲ್ಲಿ ಎಲ್ಲವೂ ಸಮಾಧಾನದಿಂದ ಇರುತ್ತದೆ. ಇಲ್ಲದಿದ್ದರೆ ಅಶಾಂತಿ ನೆಲೆಸುತ್ತದೆ ಎಂದು ಹೇಳಿ ತಾನೆ ಸ್ವತಃ ಹೋಗಿ ಗುರುವಿನ ಹಬ್ಬಕ್ಕೆ ಅಕ್ಕ ಮಾಯಮ್ಮನನ್ನು ಕರೆತರುತ್ತಾನೆ.
ಕುರುಬರ ಇನ್ನೊಬ್ಬ ಆರಾಧ್ಯದೈವ ಮೈಲಾರಲಿಂಗ. ಈತನನ್ನು ಶಿವನ ಮಾರ್ತಾಂಡ ಭೈರವ ರೂಪವೆಂದು ಭಾವಿಸಲಾಗಿದೆ. ಇವನಿಗೆ ಮೂವರು ಹೆಂಡತಿಯರು ಗಂಗಿಮಾಳವ್ವ, ಕುರುಬತೆವ್ವ ಹಾಗೂ ಅಡವಿ ಕೋಮಾಲಿ ಎಂಬುದಾಗಿ ಇವನ ಕುರಿತಾಗಿರುವ ಪುರಾಣ ಕಥನಗಳು ಹೇಳುತ್ತವೆ. ಇವನೂ ಬಹುಪತ್ನಿವೃತಸ್ಥನೆ. ಆದರೆ ಆ ಮೂವರನ್ನು ಆತ ಹಾಗೂ ಆತನ ಭಕ್ತರು ತರತಮದಿಂದ  ನಡೆಯಿಸಿಕೊಂಡು ಬಂದಿರುವುದನ್ನು ಅವನ ಸುತ್ತಲೂ ಹಬ್ಬಿರುವ ಐತಿಹ್ಯ ಸ್ಥಳಪುರಾಣಗಳು ಸಾರುತ್ತವೆ. ಮೈಲಾರಲಿಂಗನು ಇರುವ ಗುಡಿಯ ಆವರಣದಲ್ಲಿ ಅವನ ಮೊದಲ ಪತ್ನಿಯಾದ ಗಂಗಿ ಮಾಳವ್ವನ ಗುಡಿಯೂ ಇರುತ್ತದೆ. ಈ ಗುಡಿಗಳ ಗರ್ಭಗೃಹಕ್ಕೆ ಹೊಂದಿಕೊಂಡು ಒಂದು ಶಯ್ಯಮಂಚವಿರುತ್ತದೆ. ಕುರುಬತೆವ್ವ ಎಂಬ ಮೈಲಾರಲಿಂಗನ ಎರಡನೆಯ ಹೆಂಡತಿಯನ್ನು ಮಕ್ಕಳು ಕೊಡುವ ಶಕ್ತಿ ಯುಳ್ಳವನಾಗಿ ಆರಾಧಿಸುತ್ತಾರಾದರೂ ಇವಳಿಗೆ ಮೈಲಾರಲಿಂಗನ ಗುಡಿಯ ಆವರಣದಲ್ಲಿ ಇರುವ ಸೌಭಾಗ್ಯವಿಲ್ಲ. ಇವಳು ಮೈಲಾರಲಿಂಗನ ಉಪಪತ್ನಿಯಾದ ಕಾರಣದಿಂದಲೋ ಏನೋ ಅವಳ ಗುಡಿಯು ಮೈಲಾರಲಿಂಗನ ಗುಡಿಯಿಂದ ದೂರದಲ್ಲಿ ಗಂಗಿಮಾಳವ್ವನಿಗೆ ಕಾಣದಂತೆ ಇರುತ್ತದೆ. ಮೈಲಾರಲಿಂಗನ ಮೂರನೆಯ ಹೆಂಡತಿಯಾದ ಅಡವಿ ಕೋಮಾಲೆಗೆ ಆವರಣದಲ್ಲಿಯೂ ಜಾಗವಿಲ್ಲ ಹಾಗೂ ಹೊರಗೆ ಅವಳದೇ ಆದ ಸ್ವಂತ ಗುಡಿಯೂ ಇಲ್ಲ. ಇವಳನ್ನು ಉಪಪತ್ನಿಗಿಂತಲೂ ಕೀಳಾಗಿ ಕಂಡುಕೊಂಡಂತೆ ಇಲ್ಲಿನ ಐತಿಹ್ಯಗಳು ಹೇಳುತ್ತವೆ. ಆದ್ದರಿಂದಲೇ ಇವಳು ಅಡವಿ ಕೋಮಾಲಿ.
ಭಟ್ಕಳದ ಗೊಂಡರಲ್ಲಿ ವಿಫುಲವಾದ ಜಾನಪದ ಸಾಹಿತ್ಯ ದೊರೆಯುತ್ತದೆ. ಅವರ ಗೀತ, ಕಥನ, ಒಗಟುಗಳು ಮಹಿಳೆಯ ಕುರಿತಾದ ವಿಶಿಷ್ಟ ಒಳನೋಟಗಳನ್ನು ದೊರಕಿಸುತ್ತವೆ.


    3 comments:

    1. ಗಂಗಿಮಾಳವ್ವ(ಪಾರ್ವತಿ)ಕುರುಬರ ಹೆಣ್ಣು ಮಗಳು.ಕಾಲಭೈರವನ ಹೆಂಡತಿ ಸಹಾ ಗಂಗಿಮಾಳಮ್ಮ.

      ReplyDelete