Monday, April 21, 2014

ಹರ್ತಿಕೋಟೆ : ಐತಿಹಾಸಿಕ ದನಗಳ ಜಾತ್ರೆಗೆ 100ರ ಸಂಭ್ರಮ


ಬಂಗಾರ ಬಿಟ್ಟರೂ ನಾವು ಬೇಸಾಯ ಬಿಡಲ್ಲ

 - ಮಾಲತೇಶ್ ಅರಸ್ ಹರ್ತಿಮಠ
  ಇದೀಗ ಎಲ್ಲೆಡೆ ಜಾತ್ರೆಗಳ ಸಮಯ. ಆದ್ರೆ ರೈತರ ಪಾಲಿಗೆ ಇದು ಜಾನುವಾರು ಜಾತ್ರೆಯ ಕಾಲ. ಎಲ್ಲ ರೀತಿಯ ಕೃಷಿ ಕಾರ್ಯಗಳನ್ನು ಮುಗಿಸಿರುವ ನೇಗಿಲಯೋಗಿಗೆ ಜಾನುವಾರುಗಳ ಬಗ್ಗೆ ಕಾಳಜಿ. ರಾಜ್ಯದಲ್ಲಿಯೇ ಪ್ರತಿಷ್ಠಿತ ಐತಿಹಾಸಿಕ ಜಾನುವಾರು ಜಾತ್ರೆ ಎಂದರೆ ಅದು ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆ ದನಗಳ ಜಾತ್ರೆ.  ಈ ಹರ್ತಿಕೋಟೆ ಜಾತ್ರೆಗೆ ಈ ವರ್ಷ ನೂರರ ಸಂಭ್ರಮ. ಇದೇ ಏಪ್ರೀಲ್ 21 ರಿಂದ ಒಂದು ತಿಂಗಳ ಕಾಲ ದನಗಳ ಜಾತ್ರೆ ನಡೆಯಲಿದೆ.
  ಈ ದನಗಳ ಜಾತ್ರೆ ನಡೆಯೋದೆಲ್ಲಾ ನಂಬಿಕೆ ಮತ್ತು ಅಭಿಮಾನದ ಮೇಲೆ, ನಾಡಿನ ಸಂಸ್ಕೃತಿಯ ಮೇಲೆ. ನಿಜಕ್ಕೂ ಜಾತ್ರೆ ಎಂದರೆ ಅದು ವೈಭವದ ಹಬ್ಬವಾಗಿರುತ್ತದೆ.
  ನಾಡಿನ ಸಂಸ್ಕೃತಿಯಲ್ಲಿ ಕೃಷಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ನಾವು ವೈಜ್ಞಾನಿಕ ಎಷ್ಟೇ ಬೆಳವಣಿಗೆಯಲ್ಲಿದ್ದರೂ ಹೋರಿಗಳ ಮುಖಾಂತರ ನಡೆಸುವ ಕೃಷಿಯೇ ಅತ್ಯಮೂಲ್ಯ ಎಂಬುದನ್ನು ರೈತರು ಇಂದಿಗೂ ನಂಬಿದ್ದಾರೆ. ಜಾತ್ರೆಯಲ್ಲಿ ಹಸುಗಳು, ಕರುಗಳು, ಭರ್ಜರಿ ಹೋರಿಗಳು ಸಿಂಗಾರಗೊಂಡಿರುತ್ತವೆ. ರೈತ ಸಮೂಹವೂ ರಾಸುಗಳಿಗೆ ತಕ್ಕ ಪರಿಕರಗಳನ್ನು ಖರೀದಿ ಮಾಡುವಲ್ಲಿ ನಿರತರಾಗಿರುತ್ತಾರೆ. ಆಧುನಿಕತೆ ಭರಾಟೆಯಲ್ಲಿಯೂ ಸಹ ಜಾನುವಾರುಗಳ ಖರೀದಿ ಭರ್ಜರಿಯಾಗಿಯೇ ನಡೆಯುತ್ತದೆ.
 ಹೋರಿಗಳ ದರ ಇಲ್ಲಿ 45 ಸಾವಿರದಿಂದ 5 ಲಕ್ಷದವರೆಗೆ ನಡೆಯುತ್ತದೆ. ಕೈ ಮೇಲೆ ಟವೆಲ್ ಹಾಕಿ ವ್ಯಾಪಾರ ನಡೆಯುವುದರಿಂದ ಇದನ್ನು ನಂಬಿಕೆ ಮತ್ತು ಅಭಿಮಾನ ವ್ಯಾಪಾರ ಎನ್ನುತ್ತಾರೆ.
 ಅಕ್ಷರಶಃ ಇದೀಗ ಎಂತದ್ದೆ ಕೆಲಸವಿದ್ದರೂ ಕೂಡ ರೈತರು ಜಾತ್ರೆಯಲ್ಲಿ ಬೀಡು ಬಿಡುತ್ತಾರೆ. ಎತ್ತ ನೋಡಿದರೂ ಸಾಲು ಸಾಲು ಕಾಣುವ ತಾತ್ಕಾಲಿಕ ಟೆಂಟುಗಳಲ್ಲಿ, ರೈತರು ತಮ್ಮ ಹೋರಿಗಳ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಇದನ್ನು ನೋಡಲು ಎರಡೂ
 ಕಣ್ಣುಗಳು ಸಾಲದು. ಇಲ್ಲಿ ರೈತರು ತಮಗೆ ಅನುಕೂಲಕರವಾದ ಜಾನುವಾರುಗಳನ್ನು ಖರೀದಿಸುತ್ತಾರೆ.

 ರಾಜ್ಯಗಳ್ ಉದಿಸಲಿ 
 ರಾಜ್ಯಗಳ್ ಅಳಿಯಲಿ, 
 ಸೈನಿಕರೆಲ್ಲಾ ಮುತ್ತಿಗೆ ಹಾಕಲಿ, 
 ಬಿತ್ತಿ ಉಳುವುದಾನಾವು ಬಿಡುವುದಿಲ್ಲ...
 ಎಂಬ ನಾಣ್ನುಡಿಯಂತೆ ಮುಂಗಾರು ಮಳೆ ಬಂದೀತೆಂದರೆ ಹೊನ್ನ ಬಿತ್ತೇವು ಹೊಲಕ್ಕೆ ಎಂದು ಅನ್ನದಾತ ಹೋಗುತ್ತಾನೆ ಇಂತಹ ಅನ್ನದಾತನಿಗೆ ಸೇವೆ ಸಲ್ಲಿಸುವ ಈ ಜಾನುವಾರುಗಳ ಜಾತ್ರೆ ನಿಜಕ್ಕೂ  ಬಹುದೊಡ್ಡ ಮಟ್ಟಕ್ಕೆ ನಡೆಯುತ್ತವೆ. ಅದಕ್ಕಾಗಿ ಇಲ್ಲಿ ನೆರಳಿಗೆ ಮರಗಳಿವೆ. ದಾಹ ನೀಗಿಸಲು ಸಮೃದ್ಧ ನೀರಿದೆ.
   30 ದಿನಗಳ ಕಾಲ: ಭುವಿಯ ಮೇಲಿಹ ನಾಲಕ್ಕು ಕೋಟಿ ಜೀವರಾಶಿಗೆ ಅನ್ನದಾತ ನಮ್ಮ ರೈತ. ದನ, ಎಮ್ಮೆ, ಆಡು, ಕುರಿ ರೈತನ ಜೀವನಾಡಿ. ಕೃಷಿಯ ಆರಾಧನೆಯಲ್ಲಿ ನಾವು ನಿರಂತರವಾಗಿ ಇದ್ದೇವೆ. ವೈಜ್ಞಾನಿಕ ಬೆಳವಣಿಗೆಯಲ್ಲಿದ್ದರೂ ಹೋರಿಗಳ ಮುಖಾಂತರ ನಡೆಸುವ ಕೃಷಿಯೇ ಅತ್ಯಮೂಲ್ಯ.

  30 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಸುಮಾರು 8 ಲಕ್ಷ ಜಾನುವಾರುಗಳ ವಹಿವಾಟು ನಡೆಯುತ್ತದೆ. ಇಲ್ಲಿಗೆ ಬರುವ ಜಾನುವಾರುಗಳಿಗೆ ನೆರಳಿಗಾಗಿ ಸಾಕಷ್ಟು ಮರಗಳನ್ನು ನೆಡಲಾಗಿದೆ. ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಉತ್ತಮ ಮೇವು ಸಿಗುತ್ತದೆ.  ರೈತರು ವರ್ಷಕ್ಕೊಮ್ಮೆ ಬಿಡುವು ಮಾಡಿಕೊಂಡು ಬಂದು ಹೋರಿಗಳೊಂದಿಗೆ ಭಾಗವಹಿಸುತ್ತಾರೆ.
  ಅಲ್ಲದೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ರೈತರು ತಮ್ಮ ಹೋರಿಗಳನ್ನು ಅದಲು ಬದಲು ಮಾಡಿಕೊಳ್ಳುತ್ತಾರೆ. ಕೃಷಿಯ ಅರಿವನ್ನು ಹೆಚ್ಚಿನದಾಗಿ ತಿಳಿಯುತ್ತಾರೆ.  ಬೀಜದ ಹೋರಿಗಳ ಜತೆಗೆ ದುಡಿಯುವ ಎತ್ತುಗಳು ಹಾಗು ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲುಗಳ ಹೋರಿಗಳು ಇಲ್ಲಿ ಭರ್ಜರಿ ಮಾರಾಟವಾಗುತ್ತವೆ.

   ಹೀಗೆ ಜಾತ್ರೆಯಲ್ಲಿ ಕೊಂಡ ಹೋರಿಯನ್ನು ಎತ್ತಿನ ಗಾಡಿ ಹೂಡಿ, ಪೇಟ ಸುತ್ತಿಕೊಂಡು ಹೆಂಡತಿ ಮಕ್ಕಳ ಜತೆಗೂಡಿ ದೇಗುಲಗಳಿಗೆ ಸಾಲು ಸಾಲಾಗಿ ಹೊರಟರೇ ಅದರ ಸೊಬಗು ಬೇರೆ.


  ತರಹೇವಾರಿ ತಳಿಗಳು....
  ಹೋರಿಗಳಲ್ಲಿರುವ ತರಹೇವಾರಿ ತಳಿಗಳಾದ ಹಳ್ಳಿಕಾರ, ಮಂಡೇಸುತ್ತು, ಜರ‌್ಸಿ, ಅಮೃತ್‌ಮಹಲ್, ಸೃಷ್ಟಿ, ಕಿಲಾರಿ, ದೇವನಿ, ಕಾಂಕ್ರೇಜ್, ಮಲೆನಾಡು ಗಿಡ್ಡ, ಕೃಷ್ಣವೇಲಿ, ಕಿರ್, ಮುರ‌್ರಾ, ಉತ್ತರೆ, ನಾಡತಳಿ, ರಾಜಸ್ಥಾನ್ ಹೀಗೆ ಸಾಕಷ್ಟು ತಳಿಗಳು ಇಲ್ಲಿ ರಾರಾಜಿಸುತ್ತವೆ. ರೈತರು ತಮಗೆ ಬೇಕಾದ ತಳಿಗಳನ್ನು ಆರಿಸಿಕೊಳ್ಳುತ್ತಾರೆ. ವಿವಿಧ ರಾಜ್ಯಗಳಿಂದ ಇಲ್ಲಿಗೆ ನೂರಾರು ನಮೂನೆ ತಳಿ ಬರುತ್ತವೆ. ಅಲ್ಲದೆ ಅವುಗಳ ಶೃಂಗಾರ, ಅಲಂಕಾರಗಳಿಗಾಗಿ ರೈತರು ಸಖತ್ ಖರ್ಚು ಮಾಡುತ್ತಾರೆ.

ಪರಿಕರಗಳ ಮಾರಾಟ...
  ಜಾನುವಾರುಗಳಿಗೆ ಶೃಂಗಾರ ಮಾಡಲು ಸಾಕಷ್ಟು ಪರಿಕರಗಳು ಮಾರಾಟಕ್ಕಿರುತ್ತವೆ. ಎತ್ತುಗಳಿಗೆ ಬಾಯಿಕುಕ್ಕೆ, ಮೂಗುದಾರ, ಹಗ್ಗ, ಗೋಡೇವು, ಗಗ್ಗರ, ಕೋಡಣಸು, ಹಣೆಗೆಜ್ಜೆ, ಮೈಜೂಲು, ಕಾಲಿಗೆ ಕೊರಲಿಗೆ ಕಟ್ಟುವ ಕರಿದಂಡೆ, ಬಾರಿಕೋಲು ಹೀಗೆ ನಾನಾ ನಮೂನೆಯ  ಶೃಂಗಾರ ವಸ್ತುಗಳು ಸಿಗುತ್ತವೆ.


 ಬಂಗಾರ ಬಿಟ್ಟರೂ ನಾವು ಬೇಸಾಯ ಬಿಡಲ್ಲ. ಎಲ್ಲರಿಗೂ ಸರಕಾರಿ ನೌಕರಿನೇ ಸಿಗಲ್ಲ.
ರೈತರಾದ ನಾವು ಎಂತದ್ದೇ ಸಮಸ್ಯೆ ಬಂದರೂ, ಸಾಲ ಮಾಡಿಯಾದರೂ ಜಾನುವಾರು
ಖರೀದಿ ಮಾಡುತ್ತೇವೆ. ಅಲ್ಲದೆ ಸರ್ಕಾರ ಜಾತ್ರೆಗೆ ಇನ್ನಷ್ಟು  ಸೌಲಭ್ಯ ಒದಗಿಸಬೇಕಾಗಿದೆ.

 - ಡಿ. ವೀರಣ್ಣ, ಹರ್ತಿಕೋಟೆ. 


ರಾಜ್ಯದ ವಿವಿಧ ಜಿಲ್ಲೆಗಳಿಂದ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡು ಕಡೆಯಿಂದ ಬರುವ ರೈತರು ಇಲ್ಲಿ ಹೋರಿ ಖರೀದಿಸುತ್ತಾರೆ. ಮೂವತ್ತು ದಿನಗಳಲ್ಲಿ ಸರಾಸರಿ ಎಂಟು ಲಕ್ಷ ಜಾನುವಾರುಗಳ ವಹಿವಾಟು ನಡೆಯುತ್ತದೆ. ಎಂಟರಿಂದ ಹತ್ತು ಕೋಟಿವರೆಗೂ ವ್ಯಾಪಾರವಾಗುತ್ತದೆ.
 ಗಣಾಚಾರ್ ರಾಮಲಿಂಗಪ್ಪ. ಸ್ಥಳೀಯ ರೈತರು


No comments:

Post a Comment