Monday, May 12, 2014

ಅಂಗನವಾಡಿ ಕಾರ್ಯಕರ್ತೆಯ ಮಗಳ ಸಾಧನೆ _ಹಾಲುಮತ ಮಹಿಳಾ ಸೇವಾ ಸಮಾಜ ಹಿರಿಯೂರು



 ಅಂಗನವಾಡಿ ಕಾರ್ಯಕರ್ತೆಯ ಮಗಳ ಸಾಧನೆ
 *ಅನುಷಾ ಪಡೆದ ಅಂಕ 537(89.5%)  
* ನಾನು ಐಎಎಸ್ ಮಾಡ್ತೇನೆ 
* ಅಪ್ಪ ಆಟೋ ಚಾಲಕ/ಸೆಕ್ಯುರಿಟಿ ಗಾರ್ಡ್


 ಹಿರಿಯೂರು: ಬಡತನ ಯಾರನ್ನು ಬಿಟ್ಟಿಲ್ಲ. ಬಡವರಲ್ಲಿಯೇ ಪ್ರತಿಭೆ ಇರೋದು ಎಂಬುದು ಸಾಭೀತಾಗಿದೆ. ಹಿರಿಯೂರಿನ ಅಸಂಷನ್ ಪ್ರೌಢಶಾಲೆಯಲ್ಲಿ ಓದಿ 537 (ಶೇ. 89.5) ಅಂಕಗಳೊಂದಿಗೆ ಡಿಸ್ಟಿಂ ದರ್ಜೆಯಲ್ಲಿ ತೇರ್ಗಡೆಯಾಗಿರುವ ಎಂ. ಅನುಷಾಗೆ ಐಎಎಸ್ ಮಾಡುವ ಆಸೆ.
 ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಅನುಷಾ ಕನ್ನಡ-110, ಇಂಗ್ಲಿಷ್-88, ಹಿಂದಿ-93, ಗಣಿತ-79, ವಿಜ್ಞಾನ-77, ಸಮಾಜ ವಿಜ್ಞಾನದಲ್ಲಿ 90 ಅಂಕ ಪಡೆದಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಅನುಷಾ, ‘ಇನ್ನೂ ಹೆಚ್ಚಿನ ಅಂಕಗಳನ್ನು ನಿರೀಕ್ಷಿಸಿದ್ದೆ. ಇದು ನನ್ನೊಬ್ಬಳ ಅಭಿಪ್ರಾಯವಲ್ಲ, ನನ್ನ ಅಮ್ಮ, ಅಪ್ಪ, ಅಕ್ಕ, ನಮ್ಮ ಶಾಲೆಯ ಎಲ್ಲ ಶಿಕ್ಷಕರದು ಸಹ. ಆದ್ರೂ ಒಳ್ಳೆಯ ಮಾರ್ಕ್ಸ್ ಬಂದಿದ್ದಕ್ಕೆ ಖುಷಿ’ ಎನ್ನುತ್ತಾರೆ ಅವರು.
 ಅಮ್ಮ ಯಶೋಧ, ಅಪ್ಪ ಎ.ಎಸ್. ಮೇಘರಾಜ್, ಅಕ್ಕ ಎಂ. ಪಲ್ಲವಿ ಜತೆಯ ಪುಟ್ಟ ಕುಟುಂಬ ಇವರದು. ಯಶೋಧಮ್ಮ ಹಿರಿಯೂರು ಸಮೀಪ ಮಾಯಸಂದ್ರ ಎಂಬ ಪುಟ್ಟ ಹಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಅಪ್ಪ ಬಾಡಿಗೆ ಆಟೋ ಚಾಲಕನಾಗಿದ್ದು, ಜತೆಗೆ ಮಣಿಪಾಲ್ ಗೋಲ್ಡ್ ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್‌ಆಗಿದ್ದಾರೆ. ಅಕ್ಕ ಪಲ್ಲವಿ ಎಸ್‌ಎಸ್‌ಎಲ್‌ಸಿಯಲ್ಲಿ 82% ಗಳಿಸುವ ಮೂಲಕ ಉತ್ತಮ ಅಂಕ ಗಳಿಸಿದ್ದಳು. ಈಗ ಬಿಎಸ್‌ಸಿ ನರ್ಸಿಂಗ್ ಮಾಡುತ್ತಿದ್ದಾಳೆ.
 ತನ್ನ  ಇಬ್ಬರೂ ಹೆಣ್ಣು ಮಕ್ಕಳಿಳು ಪ್ರತಿಭಾನ್ವಿತರು. ಅವರ ಓದಿನ ಕುರಿತು ನಾನು ಇನ್ನೂ ಕೇರ್ ತಗೋಬೇಕಿತ್ತು. ಟ್ಯೂಷನ್‌ಗೆ ಸಹ ಕಳಿಸದಿದ್ದರೂ ಸ್ವಂತ ಪ್ರಯತ್ನದಿಂದ ಇಷ್ಟೊಂದು ಅಂಕ ಗಳಿಸಿರುವುದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ತಾಯಿ ಯಶೋಧಮ್ಮ.


  ತಮಗೆ ಬರುವ ಅಲ್ಪ ಸಂಬಳದಲ್ಲೇ ಮಕ್ಕಳನ್ನು ಓದಿಸುತ್ತಿದ್ದಾರೆ. ಅವರ ಪ್ರತಿಭೆಗೆ ಪೂರಕವಾಗಿ ಏನು ಬೇಕಾದರೂ ಓದಲಿ ಎಂಬ ಆಶಯ ಪಾಲಕದ್ದು. ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಇತರ ಶಿಕ್ಷಕರಿಗೂ ಈ ಇಬ್ಬರು ಸೋದರಿಯರ ಕುರಿತು ಹೆಮ್ಮೆ, ಅಭಿಮಾನ. ಉತ್ತಮ ಅಂಕ ಗಳಿಸಿ ಶಾಲೆಗೆ  ಕೀರ್ತಿ ತಂದಿದ್ದಾಳೆ ಎನ್ನುತ್ತಾರೆ, ಅಲ್ಲದೆ ಬಡತನದಲ್ಲೂ ಉತ್ತಮ ಸಾಧನೆ ಮಾಡಿರುವುದಕ್ಕೆ ಶಾಲೆಯ ಶಿಕ್ಷಕ ವೃದ್ಧ ಹೆಮ್ಮ ವ್ಯಕ್ತ ಪಡಿಸಿದ್ದಾರೆ.
 ಅನುಷಾರ ಮುಂದಿನ ಓದಿಗೆ ನೆರವಂತೂ ಬೇಕೇಬೇಕು. ಅಂದಹಾಗೆ ಈ ಮಕ್ಕಳಿಬ್ಬರೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು. ಶಾಲಾ ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಮೇಲುಗೈ ಎನ್ನುತ್ತಾರೆ ಶಿಕ್ಷಕರು.
ತಾಯಿ ಯಶೋಧ ಹಿರಿಯೂರು ತಾಲೂಕು ಹಾಲುಮತ ಮಹಿಳಾ ಸೇವಾ ಸಮಾಜದ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಶೋಧಮ್ಮ ಮಗಳು ಅನುಷಾ ಸಾಧನೆಗೆ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಲೀಲಾವತಿ ಮೈಲಾರಪ್ಪ, ಕಾರ್ಯದರ್ಶಿ ಶೃತಿ ಹಾಗೂ ಪದಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.




Friday, May 9, 2014

ನಾಟಿ ಕೋಳಿ ಸಾಕಣೆ

ಇತ್ತೀಚಿನ ವರ್ಷಗಳಲ್ಲಿ ನಾಟಿಕೋಳಿ ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ರೈತ ಮಹಿಳೆಯೊಬ್ಬರು 70ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಸಾಕುತ್ತಿದ್ದಾರೆ. ಮನೆಗೆ ಬಳಸಿ ಮಿಕ್ಕಿದ್ದನ್ನು ಮಾರಾಟ ಮಾಡಿ ಕೈಖರ್ಚಿಗೆ ಹಣ ಗಳಿಸುತ್ತಾರೆ.

ಕೋಳಿ ಸಾಕಣೆ ಕೃಷಿಗೆ ಪೂರಕ ಚಟುವಟಿಕೆ. ಹಳ್ಳಿಗಳಲ್ಲಿ ರೈತರು ಮನೆ ಬಳಕೆಗಾಗಿ ನಾಟಿ ಕೋಳಿಗಳನ್ನು ಸಾಕುತ್ತಾರೆ. ಇವುಗಳ ಮಾಂಸ ಮತ್ತು ಮೊಟ್ಟೆ ಹೆಚ್ಚಿನ ರುಚಿ ಹೊಂದಿರುತ್ತದೆ. ಭೂತಾರಾಧನೆ, ಹರಕೆ ಇತ್ಯಾದಿ ಧಾರ್ಮಿಕ ಆಚರಣೆಗಳಿಗೆ ನಾಟಿ ಕೋಳಿಗಳೇ ಬೇಕು. ಹೀಗಾಗಿ ಇವುಗಳಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ಇವುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ನಾಲ್ಕೈದು ಕೋಳಿಗಳನ್ನು ಸಾಕಿದರೆ ಅದೇ ಹೆಚ್ಚು.

ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ರೈತ ಮಹಿಳೆ ಜಾನಕಿ 70ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಸಾಕುತ್ತಿದ್ದಾರೆ. ಕೋಳಿ ಮಾರಿ ತಿಂಗಳಿಗೆ ಸರಾಸರಿ ಎರಡು ಸಾವಿರ ರೂ. ಆದಾಯ ಗಳಿಸುತ್ತಾರೆ.

ಜಾನಕಿ ಅವರಿಗಿರುವುದು ಮೂರು ಎಕರೆ ಕೃಷಿಭೂಮಿ. ಅರ್ಧ ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಅಕ್ಕಿ ಮತ್ತು ಭತ್ತಗಳೇ ಕೋಳಿಗಳಿಗೆ ಆಹಾರ. ಮರಿಗಳಿಗೆ ಅಕ್ಕಿ ನುಚ್ಚು. ನಾಟಿ ಕೋಳಿಗಳನ್ನು ಬೆಳೆಸಲು ವಿಶೇಷ ಖರ್ಚಿಇಲ್ಲ. ಇವು ಗಟ್ಟಿಮುಟ್ಟಾಗಿದ್ದು, ಹೆಚ್ಚು ರೋಗ ನಿರೋಧಕ ಶಕ್ತಿಯನ್ನೂ ಹೊಂದಿರುತ್ತವೆ. ಎಲ್ಲ ಹವಾಮಾನಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಬೆಳಿಗ್ಗೆ ಆಹಾರ ತಿಂದು ಹೊರಗೆ ಅಡ್ಡಾಡಲು ಹೋದರೆ ಮತ್ತೆ ಬರುವುದು ಸಾಯಂಕಾಲ ಆದಾಗಲೇ. ಹಗಲೆಲ್ಲ ಬಯಲಿನಲ್ಲಿ ಓಡಾಡಿಕೊಂಡು ಹುಳು-ಹುಪ್ಪಟೆ, ಕಾಳುಕಡ್ಡಿ, ಎಲೆ, ಕ್ರಿಮಿ-ಕೀಟಗಳನ್ನು ತಿನ್ನುತ್ತವೆ. ರಾತ್ರಿ ಹೊತ್ತು ಗೂಡಿನಲ್ಲಿ, ಮನೆಯ ಮಾಡಿನಲ್ಲಿ ಇಲ್ಲವೇ ಮರದಲ್ಲಿ ರಕ್ಷಣೆ ಪಡೆಯುತ್ತವೆ. ಹಾಗಾಗಿ ಇವುಗಳ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುವ ಅಗತ್ಯವೂ ಇರದು.

ಕೋಳಿಯು ಮೊಟ್ಟೆಗಳಿಗೆ ಕಾವು ಕೊಡಲು ಅನುಕೂಲ ಆಗುವಂತೆ ಜಾನಕಿ ಅವರು ಮನೆ ಚಾವಣಿಯಲ್ಲಿ ಭತ್ತದ ಹುಲ್ಲು ಹರಡಿದ ಬುಟ್ಟಿಗಳನ್ನು ನೇತು ಹಾಕಿದ್ದಾರೆ. ಕೋಳಿಗಳು ಇಲ್ಲಿಗೇ ಬಂದು ಮೊಟ್ಟೆ ಇಡುತ್ತವೆ. ನೆಲದಲ್ಲಿ ಮೊಟ್ಟೆ ಇಟ್ಟರೆ ನಾಯಿ, ಹಾವು, ಬೆಕ್ಕುಗಳು ತಿನ್ನುವ ಭಯ ಅವಕ್ಕೂ ಇದೆ. ಮೊಟ್ಟೆಯಿಂದ ಮರಿ ಹೊರ ಬರಲು 22 ದಿನ ಬೇಕು.

ನಾಟಿ ಕೋಳಿಗಳು ಆರು ತಿಂಗಳ ವಯಸ್ಸಿನ ನಂತರ ಮೊಟ್ಟೆ ಇಡಲು ಆರಂಭಿಸುತ್ತವೆ. ಕೋಳಿಯೊಂದು ವರ್ಷಕ್ಕೆ ಸುಮಾರು 60-80 ಮೊಟ್ಟೆಗಳನ್ನು ಇಡುತ್ತದೆ. ಹಾಗೆಯೇ, ಒಂದು ಕೋಳಿ ಎರಡರಿಂದ ಮೂರು ಕೆ.ಜಿ. ತೂಗುತ್ತದೆ. ಕೆ.ಜಿ. ಮಾಂಸಕ್ಕೆ ಸರಾಸರಿ 250 ರೂ. ಬೆಲೆ ಇದೆ. ಇದು ಫಾರಂ ಕೋಳಿ ಬೆಲೆಗಿಂತ ಮೂರು ಪಟ್ಟು ಹೆಚ್ಚು. ಜಾನಕಿ ಅವರು ಮನೆಗೆ ಬಳಸಿ ಹೆಚ್ಚಾದ ಕೋಳಿಗಳನ್ನು ಸ್ಥಳೀಯವಾಗಿ ಮಾರುತ್ತಾರೆ. ಕೋಳಿ ಗೂಡಿನಲ್ಲಿ ಸಂಗ್ರಹವಾಗುವ ಗೊಬ್ಬರವನ್ನು ಅವರದೇ ಹೊಲಕ್ಕೆ ಬಳಸಿಕೊಳ್ಳುತ್ತಾರೆ.

ಬಿಸಿಲಿನಾರ್ಭಟ : ಎಳನೀರಿಗೆ ಡಿಮಾಂಡಪ್ಪೋ ಡಿಮಾಂಡ್ - ಮಾಲತೇಶ್ ಅರಸ್ ಹರ್ತಿಮಠ

ಬಿಸಿಲಿನಾರ್ಭಟ : ಎಳನೀರಿಗೆ ಭರ್ಜರಿ ಬೇಡಿಕೆ

 *ನೆತ್ತಿಯ ಮೇಲೆ ಕೆಂಡ ಇಟ್ಟ ಅನುಭವ
 *ಎಲ್ಲಿ ನೋಡಿದ್ರು ಸಖತ್ ವ್ಯಾಪಾರ
 * ಎಲ್ಲಾ ಕಾಯಿಲೆಗಳಿಗೆ ಎಳನೀರೇ ಮದ್ದು
 * ಈಗ 25 ರೂ.ನಿಂದ 30 ರೂ.
 * ದುಬಾರಿಯಾದ್ರು ಸೈಜಿನ ಮೇಲೆ ದರ
 *ಅಧಿಕ ಜೀವಸತ್ವ ಮತ್ತು ಖನಿಜಾಂಶ
 * ನೀವೂ ಎಳನೀರು ಕುಡಿಬೇಕು: ವೈದ್ಯರ ಸಲಹೆ

 ಮಾಲತೇಶ್ ಅರಸ್ ಹರ್ತಿಮಠ
 ಬೆಂಗಳೂರು: ಬಿಸಿಲಿನ ಪ್ರಖರತೆಗೆ ಬೆಂಗಳೂರು ಜನರು ತತ್ತರಿಸುತ್ತಿದ್ದಾರೆ. ಝಳದಿಂದ ಬಸವಳಿದು ಬಾಯಾರಿಕೆ ನೀಗಿಸಿಕೊಳ್ಳಲು ತಂಪು ಪಾನೀಯ ಅಂಗಡಿಗಳಿಗೆ ಮೊರೆ ಹೋಗುತ್ತಿದ್ದ  ಜನ ಈಗ ಎಳನೀರು ಕುಡಿಯುವತ್ತ ವಾಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಎಳನೀರಿಗೆ ಭರ್ಜರಿ ಬೇಡಿಕೆ ಬಂದಿದೆ.
 ಬಿಸಿಲಿನ ಹೊಡೆತಕ್ಕೆ  ದಿನವೂ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳು ತುಂಬಿರುತ್ತವೆ. ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮೊದಲು ಹೇಳುವುದೇ ನೀರನ್ನು ಕಾಯಿಸಿ ಕುಡಿಯಿರಿ ಜತೆಗೆ ಅಧಿಕ ಜೀವಸತ್ವ ಮತ್ತು ಖನಿಜಾಂಶ ಇರುವುದರಿಂದ ಕಡ್ಡಾಯವಾಗಿ ಎಳನೀರು ಸೇವಿಸಿ ಎಂದು,  ಹೀಗಾಗಿ ಎಲ್ಲೆಡೆಯೂ ಎಳನೀರು ವ್ಯಾಪಾರಿಗಳಿಗೆ ಜನ ಮುತ್ತಿಗೆ ಹಾಕುತ್ತಿದ್ದಾರೆ.
 ತಾಪಮಾನ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆತ್ತಿಯ ಮೇಲೆ ಕೆಂಡ ಇಟ್ಟ ಅನುಭವ ಆಗುತ್ತಿದ್ದು, ಜನರು ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯ ಪ್ರತಾಪ ಏರುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಜನರಷ್ಟೇ ಜಾನುವಾರುಗಳೂ ತತ್ತರಿಸುತ್ತಿವೆ.
 ವಿವಿಧ ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಲೋಡ್‌ಗಟ್ಟಲೇ ಎಳನೀರು ಬರುತ್ತಿವೆ. ರಸ್ತೆಗಳಲ್ಲಿ, ಮಾಲ್‌ಗಳ ಮುಂದೆ, ಬೀದಿ ಬೀದಿಗಳಲ್ಲಿ ವ್ಯಾಪಾರ ಜೋರಾಗಿಯೇ ಸಾಗಿದೆ.

 ಸ್ಟಾಕ್ ಮಾಲ್...
 ಈಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಬಿಸಿಲಿನ ತಾಪ ತೀವ್ರವಾಗಿದೆ. ದಾಹ ತೀರಿಸಿಕೊಳ್ಳಲು ತಂಪು ಪಾನೀಯಗಳಿಗೆ ಮುಗಿಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ತಂಪು ಪಾನಿಯಗಳು ಹೆಚ್ಚು ಸ್ಟಾಕ್ ಮಾಲ್ ಆಗಿರುವ ಹಿನ್ನೆಲೆಯಲ್ಲಿ ಪ್ರಾಕೃತಿಕವಾಗಿ ಸಿಗುವ ಎಳನೀರೇ ಶ್ರೇಷ್ಠ ಎಂಬುದನ್ನು ಮನಗಂಡು ಎಲ್ಲರೂ ಇದೀಗ ಎಳನೀರು ಬೇಕೆಂದು ನಿರೀಕ್ಷಿಸುತ್ತಾರೆ.
 ಕ್ಲಿನಿಕ್, ಆಸ್ಪತ್ರೆಗಳ ಮುಂದೆ..
 ಎಳನೀರು ವ್ಯಾಪಾರಿಗಳೂ ಕೂಡ ಈಗ ಜನರ ನಾಡಿ ಮಿಡಿತವನ್ನು ಗಮನಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳು ಇರುತ್ತವೆಯೋ ಅಲ್ಲಿ ಎಳನೀರು ಗಾಡಿಗಳನ್ನು ನಿಲ್ಲಿಸಿಕೊಂಡಿರುತ್ತಾರೆ. ಹಲವುಕಡೆ  ಮರದಡಿಯಲ್ಲಿ ನೇತು ಹಾಕಿಕೊಂಡಿದ್ದು ವಾಹನ ಸವಾರರೂ ಎಳನೀರು ಕಂಡ ಕೂಡಲೇ ಗಾಡಿ ನಿಲ್ಲಿಸಿ ಸೇವಿಸಿಯೇ ಮುಂದೆ ಸಾಗುವುದು ಸಾಮಾನ್ಯವಾಗಿದೆ.

 ಮನೆಮುಂದೆ ಬಂದು ಕೂಗುತ್ತಾರೆ..
 ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವ್ಯಾಪಾರಿಗಳು ಕೈ ಗಾಡಿಗಳಲ್ಲಿ, ಸೈಕಲ್‌ಗಳಲ್ಲಿ ಎಳನೀರನ್ನು ಮನೆಗಳ ಮಂದೆಯೇ ತಂದು ಕೂಗಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮನೆಯಿಂದ ಹೊರಗೆ ಬಾರದ ವೃದ್ಧರು, ಮಹಿಳೆಯರು, ಮಕ್ಕಳಿಗೆ ಅನುಕೂಲವಾಗಲೆಂದು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ.
 ಒಟ್ಟಾರೆ  ಬಿಸಿಲು ಬೆಳಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ ವೇಳೆ ರಣರಣವಾಗಿ ಕಾಣುತ್ತದೆ. ಸಂಜೆ 5 ತನಕವೂ ಇದೇ ಬಿಸಿ ಇರುವುದರಿಂದ ಎಲ್ಲರಿಗೂ ಈಗ ಕಲ್ಪವೃಕ್ಷದ ನೀರೇ ಬೇಕಾಗಿದೆ.


 ದುಬಾರಿಯಾದ್ರೂ ಬಿಡೋಲ್ಲ..
 ಎಳನೀರನ್ನು ರೈತರು ಬೆಳೆದರೂ ಅವರಿಗೆ ಸಿಗುವುದು ಕೇವಲ 5 ರಿಂದ 6 ರೂ. ಮಾತ್ರ. ಇಲ್ಲಿ ಉತ್ತಮವಾಗಿ ಲಾಭಗಳಿಸುವವರು ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳು. 6 ರೂಗೆ ತಂದ ಎಳನೀರನ್ನು ಇಲ್ಲಿ 22 ರೂ ನಿಂದ ಆರಂಭಿಸಿ 30ನ ರೂ. ತನಕ ಮಾರಾಟ ಮಾಡಲಾಗುತ್ತಿದೆ. ಕೆಲವುಬಾರಿ 35 ರೂ ಎಂದರೂ  ಖರೀದಿಸುವ ಜನರಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.


 ಎಲ್ಲಡೆಯೂ ಇದೇ ಕತೆ..
 ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕವಂತೂ ಬೇಸಿಗೆಗೆ ನಲುಗಿ ಹೋಗಿದ್ದು ಎಳನೀರಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು, ಮಂಜಿನ ನಗರ ಮಡಿಕೇರಿ, ಮಲೆನಾಡು ಶಿವಮೊಗ್ಗ ಚಿಕ್ಕಮಗಳೂರು, ಬಯಲು ಸೀಮೆ ಚಿತ್ರದುರ್ಗ, ದಾವಣಗೆರೆ, ಕರಾವಳಿನಾಡಾದ ಉಡುಪಿ, ಮಂಗಳೂರು ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲಡೆಯೂ ಎಳನೀರಿಗೆ ಡಿಮಾಂಡ್ ಬಂದಿದೆ. ಅಲ್ಲದೆ ಮಜ್ಜಿಗೆಯೂ ಮಾರಾಟವಾಗುತ್ತಿದೆ.



ದೀಗ ಬಿಸಿಲಿನ ವಾತಾವರಣ ದಿಂದ ತಂಪು ಪಾನಿಯ ಸೇವಿಸಿದರೇ ಅದು ಬಾಯಿಗಷ್ಟೇ ರುಚಿ. ಆದರೆ ಎಳನೀರು ಆರೋಗ್ಯಕ್ಕೆ ಉತ್ತಮವಾದುದು. ನಾನು ದಿನವೂ ಬಸ್ಸಿನಲ್ಲೇ ಇರುವುದರಿಂದ ತುಂಬಾ ದಿನಕ್ಕೇರಡು ತಪ್ಪದೇ ಕುಡಿತ್ತೇನೆ. ಅಲ್ಲದೆ  ಮನೆಯಲ್ಲಿರುವ ವೃದ್ಧರಿಗೂ ಮಕ್ಕಳಿಗೂ ಕೊಂಡೊಯ್ಯುತ್ತೇನೆ.

- ಯೋಗೀಶ್ ಕುಮಾರ್, 
ಬಿಎಂಟಿಸಿ ಬಸ್ ಕಂಡಕ್ಟರ್. ಬೆಂಗಳೂರು.