Friday, December 26, 2014

Malathesh Urs Harthikote With Vikhyath Urs Harthikote


ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆ _Teru Malleswaraya Temple Hiriyuru_ Malathesh Urs Harthikote


 ನೀ ಬನ್ನಿ ದಕ್ಷಿಣ ಕಾಶಿ ರಥೋತ್ಸವಕ್ಕೆ....
 ಶಿವ ಧನಸ್ಸು ವೈಭವ.. ಅದ್ದೂರಿ ಬ್ರಹ್ಮ ರಥೋತ್ಸವ.. ವಿಷ್ಣು ಶಕ್ತಿ ಅನಾವರಣ
 *ವರ್ಷಕ್ಕೆ 2 ಇಂಚು ಬೆಳೆಯುತ್ತಿರೋ ಶಿವಧನಸ್ಸು 
 * ಧನಸ್ಸು ನೆಲಕ್ಕೆ ಮುಟ್ಟಿದರೇ ಆಪತ್ತು. ಬರಗಾಲ
 * ಹಿಂದೂ ಮುಸ್ಲಿಂ ಕ್ರೈಸ್ತರೆನ್ನದೆ ಬರುವ ಭಕ್ತರು 
 * ಐತಿಹಾಸಿಕ ಪರಂಪರೆ ಜೊತೆಗೆ ಭಾವೈಕ್ಯತೆ ಎತ್ತಿಹಿಡಿವ ಜನರು 
 * ಜಾತ್ರೆಯೊಂದಿಗೆ ಪವಾಡಗಳು. ವೈಭವದ ಆಚರಣೆಗಳು


    -ಮಾಲತೇಶ್ ಅರಸ್ 
 ಇದು ಭಾವೈಕ್ಯತೆಯ ಸಂಕೇತ. ಭಕ್ತಿ ಭಾವದ ಪರಾಕಾಷ್ಠೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜನಾಂಗದ ದೈವ ಭಕ್ತಿ. ಹಿಂದೂಗಳ ರಥೋತ್ಸವದಲ್ಲಿ ಮುಸ್ಲಿಂ ಭಕ್ತರ ಜವಾಬ್ದಾರಿ. ಕ್ರಿಶ್ಚಿಯನ್ ಭಕ್ತರ ಸಹಕಾರದಿಂದ ನಡೆಯುತ್ತದೆ. ದಕ್ಷಿಣಕಾಶಿ ಎಂದೇ ಪ್ರಸಿದ್ದವಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆ  ವಿಜೃಂಭಣೆಯಿಂದ ಜರುಗುತ್ತದೆ. ಇಲ್ಲಿ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ, ಉಮಾ ಮಹೇಶ್ವರ ಮೂರು ರಥೋತ್ಸವಗಳು ನೆರವೇರುತ್ತವೆ. ಇದೇ ಫೆಬ್ರವರಿ 14 ರಿಂದ 27 ತನಕ 15 ದಿನಗಳ ಕಾಲ ಇಲ್ಲಿ ವೈಭವದ ಸಂಸ್ಕೃತಿ ಅನಾವರಣವಾಗುತ್ತದೆ. 25 ರಂದು ರಥೋತ್ಸವ ನಡೆಯಲಿದೆ.
 ರಾಜ್ಯದಲ್ಲಿ ದಕ್ಷಿಣಕಾಶಿ ಎಂದೇ ಖ್ಯಾತಿಗಳಿಸಿರುವ ತೇರು ಮಲ್ಲೇಶ್ವರ ದೇವಾಲಯವನ್ನು 1446ರಲ್ಲಿ ಪಾಳೇಗಾರರ ವಂಶಸ್ಥ ರಾಜಾ ಕೆಂಚಪ್ಪ ನಾಯಕ ನಿರ್ಮಿಸಿದ್ದಾನೆ. ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ, ಉಮಾ ಮಹೇಶ್ವರ ಮೂರು ರಥೋತ್ಸವಗಳಲ್ಲಿ ಹಿಂದು ಮುಸ್ಲಿಂ ಕ್ರೈಸ್ತರೆನ್ನದೇ ಸರ್ವರೂ ಭಾಗವಹಿಸುವ ಮೂಲಕ ಇದು ಭಾವೈಕ್ಯತೆ ಬಿಂಬಿಸುತ್ತದೆ.
 ಮೂಲ ವಿಗ್ರಹ ಕಾಶಿಯಲ್ಲಿರುವಂತೆಯೇ ದಕ್ಷಿಣ ದಿಕ್ಕಿಗೆ ಮುಖಮಾಡಿರುವ ಹಿನ್ನೆಲೆಯಲ್ಲಿ ಇದನ್ನು ದಕ್ಷಿಣ ಕಾಶಿ ಎನ್ನುತ್ತಾರೆ.  ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯಾಧ್ಯಂತ  ಇರುವ ಭಕ್ತರು ಇಲ್ಲಿಗೆ ಆಗಮಿಸ್ತಾರೆ. ಭಕ್ತರು ಹಲವು ಹರಕೆಗಾಗಿ ಬಾಳೆಹಣ್ಣನ್ನು ಹಾಗೂ ಪವಿತ್ರ ದವನ ಪತ್ರೆ ಎಸೆಯುವುದು ಇಲ್ಲಿಯ ವಿಶೇಷವಾಗಿದೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಾರೆ. ಪ್ರತಿ ದಿನವೂ ಒಂದೊಂದು ವಾಹನದ ಮೇಲೆ ದೇವರುಗಳನ್ನು ಮೆರವಣಿಗೆ ಮಾಡಲಾಗುತ್ತದೆ. ಸಡಗರ ಸಂಭ್ರದಿಂದ ಈ ಜಾತ್ರೆಯನ್ನು ಆಚರಿಸಲಾಗುತ್ತದೆ.
 ಮಘಾ ನಕ್ಷತ್ರದಲ್ಲಿ ತೇರು ಮಲ್ಲೇಶ್ವರ, ಚಂದ್ರಮೌಳೇಶ್ವರ, ಉಮಾ ಮಹೇಶ್ವರ ರಥೋತ್ಸವಗಳೂ ಒಂದೇ ದಿನ ನಡೆಯುವುದು ವಿಶೇಷ. ಹಿಂದೂ ಮುಸ್ಲಿಂ ಕ್ರೈಸ್ತರೆನ್ನದೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
 ಶಿವಧನಸ್ಸು :
 ಧನಸ್ಸುಗಳು ಅಂದರೆ ಯುದ್ದದ ವೇಳೆ ಬಳಸಲಾದ ಮಹಾ ಅಸ್ತ್ರ. ಐತಿಹಾಸಿಕತೆಯನ್ನು ತೆರೆದಾಗ ರಾಮಾಯಣದಲ್ಲಿ ಶ್ರೀರಾಮಚಂದ್ರ, ಲಕ್ಷ್ಮಣ, ರಾವಣ, ಮಹಾಭಾರತದಲ್ಲಿ  ಅರ್ಜುನ ಹೀಗೆ ಪೌರಾಣಿಕ ಸಂದರ್ಭದಲ್ಲಿ ಕೇಳಿ ಬರುವ ಹೆಸರುಗಳಲ್ಲಿ ಧನಸ್ಸುನ್ನು ಬಳಸಲಾಗಿದೆ. ಆದರೆ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಕೂಡ ಶಿವಧನಸ್ಸು ಇದೆ. ಇದಕ್ಕೆ ಜೀವವಿದೆ ಎಂಬ ಪ್ರತೀತಿ. ವಿಶೇಷವೆಂದರೆ ಪ್ರತೀ ವರ್ಷವೂ 2 ಇಂಚು ಉದ್ದ ಬೆಳೆಯುತ್ತಿದೆ.
  ಕೆಂಚಪ್ಪ ನಾಯಕ ನಿರ್ಮಿಸಿರುವ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಒಂದು ಧನಸ್ಸು ಇದೆ. ಇದಕೆ ಶಿವಧನಸ್ಸು ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರಾಚೀನ ಇತಿಹಾಸವಿದೆ. ಇದು ವೇದಾವತಿ ನದಿ ತೀರದಲ್ಲಿ ದೊರೆತಿದ್ದು ಕೆಂಚಪ್ಪ ನಾಯಕನಿಗೆ ದೊರೆತದ್ದು ಎಂಬ ಇತಿಹಾಸವಿದೆ. ಇದು ತಂದಾಗ ಸುಮಾರು 5 ಅಡಿಗಳಷ್ಟು ಉದ್ದವಿತ್ತು ಇದೀಗ ಬೆಳೆದು 30 ಅಡಿಗೂ ಹೆಚ್ಚು ಉದ್ದವಾಗಿ ಬೆಳೆದಿದೆ ಎಂದು ಹೇಳುತ್ತಾರೆ  ತೇರು ಮಲ್ಲೇಶ್ವರ ದೇವಸ್ಥಾನ  ಅರ್ಚಕರಾದ ವಿಶ್ವನಾಥಾಚಾರ್‌ರವರು. ಇದನ್ನು ತೇರು ಮಲ್ಲೇಶ್ವರಸ್ವಾಮಿಯ ಜಾತ್ರೆ ಮತ್ತು ಬ್ರಹ್ಮ ರಥೋತ್ಸವದ ಸಮಯದಲ್ಲಿ ಮಾತ್ರ ಹೊರಕ್ಕೆ ತೆಗೆಯಲಾಗುತ್ತದೆ.
  ಸುಮಾರು 80ಕ್ಕೂ ಹೆಚ್ಚು  ಭಕ್ತರು  ಈ ಶಿವಧನಸ್ಸನ್ನು  ರಥೋತ್ಸವಕ್ಕೂ ಮುನ್ನ  ವೇದಾವತಿ ನದಿಗೆ ಒಯ್ದು ಅಭಿಷೇಕ ಮಾಡಲಾಗುತ್ತದೆ. ಅಲ್ಲಿಯೇ ಪೂಜೆಯನ್ನು ನೆರವೇರಿಸಲಾಗುತ್ತದೆ. ಶಿವಧನಸ್ಸು ನದಿಯಲ್ಲಿ ಪೂಜೆಯನ್ನು ಮುಗಿಸಿಕೊಂಡು ವಾಪಾಸ್ಸು ಬರುವಾಗ ಎಲ್ಲಿಯಾದ್ರೂ ಭಾರವಾಗಿ ಅಲ್ಲಿಯೇ ನಿಂತರೆ ಆಪತ್ತು, ಬರಗಾಲ ಎಂದೂ, ಹಾಗೂ  ಹಗುರವಾಗಿದ್ದರೇ ಒಳ್ಳೆಯ  ಮಳೆ-ಬೆಳೆ ಎಂದು ನಂಬಿಕೆ ಇದೆ. ಅಲ್ಲದೆ ಇದು  ಪ್ರತಿವರ್ಷವೂ  ಬೆಳೆಯುತ್ತಿದೆ ಎನ್ನುತ್ತಾರೆ ಜಾತ್ರಾ ಸಮಿತಿ ಕಾರ್ಯದಶಿ ಸೊಪ್ಪನಾರ್ ಜಗದೀಶ್‌ರವರು.
  ಈ ಶಿವಧನಸ್ಸು ಹೊರಗೆ ಹೋರಟರೇ ಸಾಕು ಹೆಜ್ಜೆ ಹೆಜ್ಜೆಗೂ ತೆಂಗಿನಕಾಯಿಯನ್ನು ಹೊಡೆಯಲಾಗುತ್ತದೆ. ನಂತರ ಅದನ್ನು ತಂದು ಅದರ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗುತ್ತದೆ. ಈ ಶಿವಧನಸ್ಸಿಗೆ ಮಾಘ ಮಾಸದ ಮಖ ನಕ್ಷತ್ರದಲ್ಲಿ ಪೂಜೆಯನ್ನು ಸಲ್ಲಿಸಿದ ನಂತರವೇ ಮೂರು ದೇವರುಗಳ ಬ್ರಹ್ಮ ರಥೋತ್ಸವವು ನಡೆಯುತ್ತದೆ, ಮೊದಲಿಗೆ ತೇರುಮಲ್ಲೇಶ್ವರಸ್ವಾಮಿ ರಥೋತ್ಸವವು ನಡೆಯುತ್ತದೆ.  ಇದು ಪವಿತ್ರವಾದ ಕಾರ್ಯ ಹಾಗೂ ಇದನ್ನು ನೋಡಲು ಸ್ಪರ್ಶಿಸಲೇ ಭಕ್ತರು ಆಗಮಿಸುತ್ತಾರೆ. ಇದು ಶಿವನ ಧನಸ್ಸು ಎಂಬ ನಂಬಿಕೆ.
 ವಿಷ್ಣು ಶಕ್ತಿ ಅನಾವರಣ
 ಇಲ್ಲಿ ಕೇವಲ ಜಾತ್ರೆಯಲ್ಲಾ, ರಥೋತ್ಸವವಲ್ಲಾ, ಪವಾಡಗಳಲ್ಲ.  ಇಲ್ಲಿ ಅನೇಕ ಹರಕೆಗಳು ಈಡೇರುತ್ತವೆ. ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಮುಂದಿರುವ ಉಯ್ಯಲೆ ಕಂಬಕ್ಕೆ ಪೂಜೆಯನ್ನು ಮಾಡಿ ಕರ್ಪೂರ ಬೆಳಗಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ. ಅಲ್ಲದೆ ಇಂತಹ ಉಯ್ಯಲೆಯಲ್ಲಿ ವಿಷ್ಣುವು ತನ್ನ  ಮಡದಿಯನ್ನು ಕೂರಿಸಿಕೊಂಡು ಉಯ್ಯಲೆಯಾಡಿದ್ದ ಎಂಬ ನಂಬಿಕೆ ಇದೆ.
    ಹಿರಿಯೂರಿನ ತೇರು ಮಲ್ಲೇಶ್ವರಸ್ವಾಮಿ ದೇವಸ್ಥಾನದ ಮುಂದೆ ಒಂದು ಉಯ್ಯಲೆ ಕಂಬವಿದೆ. ಇದರಲ್ಲಿ ಸರಪಳಿಯನ್ನು ಕಟ್ಟಲಾಗಿದೆ. ಪ್ರಾಚೀನ ಕಾಲದಲ್ಲಿ ನಿರ್ಮಾಣವಾಗಿರುವ ಕಂಬವಾಗಿದ್ದು, ಜಾತ್ರೆಯ ಸಮಯದಲ್ಲಿ ಅದರಲ್ಲೂ ಕೊನೆಯ ದಿನದಲ್ಲಿ ಮಕ್ಕಳಿಲ್ಲದ ಮಹಿಳೆಯರು ಬಂದು ಮಕ್ಕಳಭಾಗ್ಯವನ್ನು ನೀಡುವಂತೆ ಸ್ವಾಮಿಯಲ್ಲಿ ಬೇಡಿಕೊಂಡು ಕರ್ಪೂರವನ್ನು ಹಚ್ಚಿ ಹೋಗುತ್ತಾರೆ. ಬೇಡಿಕೆಯಂತೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತಾನೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.
 ಹೇಮರೆಡ್ಡಿ ಮಲ್ಲಮ್ಮ ಎಂಬುವವಳು ಶ್ರೀ ಶೈಲಾಕ್ಕೆ ಹೋಗಬೇಕು ಎಂದು ಹೊರಟಾಗ ಅವಳಿಂದ ನಡೆದು ಹೋಗಲಾಗಲಿಲ್ಲ. ಆದ್ದರಿಂದ ಆ ಸಮಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಇಲ್ಲಿಯೇ ಉಳಿಯುತ್ತಾಳೆ. ಅವಳಿಗೆ ದರ್ಶನ ನೀಡಲು ಇಲ್ಲಿಯೇ ತೇರುಮಲ್ಲೇಶ್ವರ ಉದ್ಭವವಾಗುತ್ತಾನೆ, ನಂತರ ದರ್ಶನವನ್ನು ಕೊಡುತ್ತಾನೆ. ಎಂಬ ಪ್ರತೀತಿ ಇದೆ. ದಕ್ಷಿಣಾಭಿಮುಖವಾಗಿ ಇರುವುದರಿಂದ ದಕ್ಷಿಣಾಕಾಶಿ ಎಂದು ಕರೆಯಲಾಗುತ್ತಿದೆ. ಅಲ್ಲದೆ ಈ ದೇಗುಲವನ್ನು ಹಾಲಿನಿಂದಲೇ ನಿರ್ಮಿಸಲಾಗಿದೆ ಎನ್ನುವ ಪ್ರತೀತಿ ಇದೆ.
  ವಿಶೇಷವಾಗಿ  ಮಹಿಳೆಯರು ದೇವರಿಗೆ ತಂಬಿಟ್ಟಿನ ಆರತಿಯನ್ನು ಬೆಳಗುತ್ತಾರೆ. ಜಾತ್ರೆಯಲ್ಲಾಗಲಿ, ಬೇರೆ ದಿನಗಳಲ್ಲಾಗಲಿ ಎಲ್ಲಾ ಧರ್ಮವರು, ಜಾತಿಯವರು ಬಂದು ಭಾವೈಕ್ಯತೆಯಿಂದ ದೇವರ ದರ್ಶನ ಪಡೆದು  ಹೋಗುತ್ತಾರೆ.
 
 ಬಾಕ್ಸ್..
  ಕೆಂಚಪ್ಪ ನಾಯಕ ನಿರ್ಮಿಸಿರುವ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಒಂದು ಧನಸ್ಸು ಇದೆ. ಇದಕೆ ಶಿವಧನಸ್ಸು ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರಾಚೀನ ಇತಿಹಾಸವಿದೆ. ಇದು ವೇದಾವತಿ ನದಿ ತೀರದಲ್ಲಿ ದೊರೆತಿದ್ದು ಕೆಂಚಪ್ಪ ನಾಯಕನಿಗೆ ದೊರೆತದ್ದು ಎಂಬ ಇತಿಹಾಸವಿದೆ. ಇದು ತಂದಾಗ ಸುಮಾರು 5 ಅಡಿಗಳಷ್ಟು ಉದ್ದವಿತ್ತು ಇದೀಗ ಬೆಳೆದು 30 ಅಡಿಗೂ ಹೆಚ್ಚು ಉದ್ದವಾಗಿ ಬೆಳೆದಿದೆ ಎಂದು ಹೇಳುತ್ತಾರೆ. ಇದನ್ನು ತೇರು ಮಲ್ಲೇಶ್ವರಸ್ವಾಮಿಯ ಜಾತ್ರೆ ಮತ್ತು ಬ್ರಹ್ಮ ರಥೋತ್ಸವದ ಸಮಯದಲ್ಲಿ ಮಾತ್ರ ಹೊರಕ್ಕೆ ತೆಗೆಯಲಾಗುತ್ತದೆ.
  ವಿಶ್ವನಾಥಾಚಾರ್, ಅರ್ಚಕರು ತೇರು ಮಲ್ಲೇಶ್ವರ ದೇವಸ್ಥಾನ ಹಿರಿಯೂರು