Tuesday, February 19, 2013

Appa Mattu Naanu... Malathesh Urs Hartimath. Chitradurga


'ಅಪ್ಪ ಮತ್ತು ನಾನು'                  
                          - ಮಾಲತೇಶ್ ಅರಸ್ ಹರ್ತಿಮಠ

 ಅಪ್ಪನು ಆಡಿ ಕುಣಿದ
 ಕನಸುಗಳ ಕಂಡ ಹುಟ್ಟೂರಿಗೆ
 ನಾನೂ ಅಪ್ಪನ ಕನಸುಗಳ
 ಬೆನ್ನಹತ್ತಿ ಹೊರಟೆ,
 ನನ್ನಜ್ಜಿ ಕುಳಿತಿದ್ದಳು ಒಂಟಿಯಾಗಿ
 ಭಣಗುಡುತ್ತಿದ್ದ ಅಂಗಳದಲ್ಲಿ
 ಮನೆಯ ಮುಂದೆ  ನೀರಿಲ್ಲದೆ
 ಒಣಗಿ ಸೊರಗಿದ್ದ ತುಳಸಿ ಗಿಡ.

 ಜಗುಲಿ ಮೇಲೆ ಮಲಗಿದ್ದ
 ನಮ್ಮಪ್ಪ ಸಾಕಿದ್ದ ನಾಯಿಯ
 ವಂಶದ್ದೆ ಆಗಿದ್ದ ನಾಯಿ ಕುನ್ನಿ,
 ಸುಂದರ ಅಂದವಾಗಿದ್ದು
 ಈಗ ತೆರೆದರೆ ಕಟಿಕಟಿ
 ಸದ್ದಾಗುವ ಗಾಡ್ರೇಜು, ಟ್ರಂಕು.

 ಮಾಳಿಗೆಯ ಮನೆ ಹಳೆಯದಾಗಿ-
 ಸೂರಿನಿಂದ ಇಳಿದ ಮಳೆಯ ನೀರಿನ ಗುರುತು,
 ದನಕರುಗಳು ಮೇವುಂಡು ಮಲಗಿದ್ದ
 ಜಾಗದಲ್ಲಿ ಉರಿಯುತ್ತಿತ್ತು
 ನನ್ನಜ್ಜಿ ಮುದ್ದೆಗಿಟ್ಟಿದ್ದ ಒಲೆ,
 ಸೀದು ಕರರಲಾಗಿದ್ದ ಸೌದೆಯ ತುಂಡುಗಳು
 ಮಿಣಿ, ಮಿಣಿ ಉರಿಯುತ್ತಿದ್ದ ದೀಪ.

 ಗೋಡೆಯಲಿ ನೇತಾಡುತ್ತಿದ್ದ
 ಕನ್ನಡಿ! ಅದು ಚೂರಾಗಿ
 ನಾನು ಕಂಡದ್ದು ನಾಲ್ಕಾಗಿ...
 ಮುಸುರೆ ಬಾನಿಯಲ್ಲಿ ಸುರಿದಿದ್ದ ನೆಲಗಡಲೆ
 ಪಕ್ಕದಲ್ಲಿದ್ದವು ಹತ್ತಾರು ತುಂಬಿದ್ದ ಚೀಲಗಳು.

  ಸ್ಕೂಲಿಗೆ ಕೊಂಡೊಯ್ಯುತ್ತಿದ್ದ ಸ್ಲೇಟು,
 ಪಾಠಿ ಚೀಲ, ಹಳೆಯ ಬಳಪ, ಚೀಲದಲಿ-
 ನೇತಾಡುತ್ತಿದ್ದವು ಗೋಡೆಯ ಮೊಳೆಯಲಿ,
 ಬಾಲ್ಯದಲ್ಲಿ ಜೋಡಿಸಿಟ್ಟ  ಬುಗುರಿ,
 ಚಿನ್ನಿಕೋಲು, ಈಜು ಬುರುಡೆ,
 ಕಂಡವು ಲಗೋರಿ ಬಚ್ಚಗಳು.

 ಅಪ್ಪನ  ಹಳೆಯ ಸೀಸುಕಡ್ಡಿ
 ಖಾಲಿಯಾಗಿದ್ದರು  ಬಿಸಾಕದೇ
 ಜೋಡಿಸಿಟ್ಟಿದ್ದ ಪೆನ್ನುಗಳು, ಪುಸ್ತಕಗಳು,
 ಸುಂದರವಾಗಿ ಬರೆದ  ನೋಟು ಪುಸ್ತಕಗಳು.
 ಅರ್ಧ ಬರೆದ ಡೈರಿಗಳು, ಕಂಡವು
 ಅಡ್ಡ ಗೋಡೆಯ ಮೇಲೆ ಕೈ ಚೀಲದಲಿ.

 ನಡುಮನೆಯ ಕೊನೆಯಲಿ
 ಗೋಣಿ ತಾಟು ಕಟ್ಟಿದ್ದ ಗಂಟು.
 ಪಕ್ಕದಲ್ಲಿದ್ದ ಲಾಟೀನು,
 ಅಪ್ಪನು ಓದುವಾಗ ತೆಗೆಸಿದ್ದ
 ಕಪ್ಪು ಬಿಳುಪು ಚಿತ್ರ
 ಜೊತೆಗೆ ನನ್ನಜ್ಜ ಪಕ್ಕದಲಿ,
 ನಾನೂ ಕಂಡೆ ಫ್ಯಾಮಿಲಿ ಪೋಟೊದಲಿ
 ನಮ್ಮಪ್ಪನ ಪಕ್ಕದಲಿ.

 ದೇವರ ಗುಡಿಯಲಿ ಸವೆದಿದ್ದ ವಿಭೂತಿ,
 ಮೈಲಾರದಿಂದ ತಂದ  ಹಳೆಯ ಭಂಡಾರ
 ಅದರಲ್ಲಿ ಓಡಾಡುತ್ತಿದ್ದ ದುಂಡು ಹುಳುಗಳು
 ದೇವರಿಗೆ ನಮಿಸುವೆನೆಂದರೆ ದೇವರ ಪೋಟೋ ಇಲ್ಲ.

 ಪಕ್ಕದಲ್ಲಿದ್ದ ಹಳೆಯ ಕುರ್ಚಿ ಏರಿದೆ,
 ಅಟ್ಟದ ಮೂಲೆಯಲಿ ಹಳೆಯದಾದ
 ಅಪ್ಪ ಬಳಸಿದ ಹಿತ್ತಾಳೆಯ ಬಿಂದಿಗೆಗಳು
 ಸೌದೆ ತರುತ್ತಿದ್ದ ಗಟ್ಟಿ ಹಗ್ಗಗಳು, ಕಸಮರಿಗೆಗಳು
 ಕೂಲಿಗೋಗುತ್ತಿದ್ದ ಪಿಕಾಸಿ, ಚಲಿಕೆ, ಕುಡುಗೋಲು,
 ಪಕ್ಕದಲ್ಲಿ ನೇತಾಡತ್ತಿತ್ತು ನನ್ನಜ್ಜಿ ಗಟ್ಟಿ
 ಮೊಸರು ಕಡೆಯುತ್ತಿದ್ದ ಹಳೆಯ ಕಡಗೋಲು.

 ಅಡುಗೆ ಮನೆಯಲ್ಲಿ ಬೆಂಕಿ ಕಾಣದೆ
 ಹಲವು ವರುಷಗಳಿಮದ ಖಾಲಿಯಾಗಿದ್ದ ಒಲೆ,
 ಪಕ್ಕದಲಿ ತಣ್ಣನೆ ನೀರಿನ ಗಡಿಗೆ,
 ಮಾಳಿಗೆರೆ ಕಟ್ಟಿದ್ದ ನೇತಾಡುತ್ತಿದ್ದ ನೆಲ್ಲಿಕಾಯಿ,
 ಅದರಲಿ ಮೊಸರು, ರೊಟ್ಟಿ ಚಟ್ನಿ.
 ಒಣಗಿದ್ದ ಉಪ್ಪಿನಕಾಯಿ.
 ' ಹೇ ಏನೋ ಅದು.. ಕತ್ಲಲ್ಲಿ ಅಜ್ಜಿಯ ಪ್ರಶ್ನೆ'
 ಮಾಂತೇಶಿ ಧೂಳು ಕಣೋ ಮಗ
 ಹೋಗಬೇಡ ಬಾರೋ' ಮತ್ತೆ ಧ್ವನಿ !!.

 ಬಚ್ಚಲಗೂಡಿನ ಬಟ್ಟಲಲಿ ತುಂಬಿದ್ದ ಸೌಳು,
 ನೀರಿಲ್ಲದ ತೊಟ್ಟಿ, ಧೂಳಿನಲ್ಲಿದ್ದ ಬಿಂದಿಗೆ,
 ತುಕ್ಕು ಹಿಡಿದ ಬಕೇಟು, ಕಂಚಿನ ಕಡಾಯಿ,
 ಕೊನೆಗೆ ಭಯ ತರಿಸಿದ ನೆನಪು.

 ''ಅಪ್ಪ ಕಷ್ಟ ಜೀವಿ'' ಕಷ್ಟಗಳನೇ ಉಂಡವನು
 ನಾನೂ ಸುಖೀ ಜೀವಿ. ಅಪ್ಪನ ಸುಖಗಳನು ಉಂಡವನು
 ನೆನಪಾಯಿತು ಅಪ್ಪನ ರೇಗಾಟ, ಬೈಗುಳ, ಕೋಪ,
 ಎಲ್ಲದೂ ಒಳ್ಳೆದಕ್ಕೆ ಅನ್ನಿಸಿತು.

 ನಾನೋ ಹುಚ್ಚು ಖೋಡಿ,
 ಅಪ್ಪನ ಅರ್ಥಮಾಡಿಕೊಂಡಿರಲಿಲ್ಲ,
 ಪುಸ್ತಕ, ಪೆನ್ನು, ಓದು, ಪೋನು,
 ಕಂಪ್ಯೂಟರು, ಮೊಬೈಲು ದೊಡ್ಡದೆಂದು ಕೊಂಡಿದ್ದೆ
 ಅಪ್ಪನ ಮನೆಯಲ್ಲಿ
 ಅಪ್ಪ ಬರೆದ ಪತ್ರಗಳೇ ಇರಲಿಲ್ಲ,
 ಕೆಲವೊಮ್ಮೆ ಅಪ್ಪನ ಒತ್ತಡಕ್ಕೆ
 ಮಣಿದು, 'ಹಬ್ಬಕ್ಕೆ ಬಾ'  ಎಂದು
 ಅಜ್ಜಿಗೆ ನಾ ಬರೆದ ಕಾಗದಗಳು ಸಿಕ್ಕವು.
 ಸಂತಸ ಪಟ್ಟೆ, ಹಾಗೇ ಅಲ್ಲೆ ಬಿಟ್ಟೆ.

 ಅಪ್ಪ ಕಷ್ಟದಿಂದ ರೆವಿನ್ಯೂ ಅಧಿಕಾರಿಗಯಾದ,
 ನಾನು ಕಷ್ಟಗಳ ಜೊತೆ ಸುಖಗಲ ಉಂಡು
 ಶ್ರಮದಿಂದ ಪತ್ರಕರ್ತನಾದೆ.
 ಕಷ್ಟಗಳೇ ಹೀಗೆ ಅಪ್ಪನ ಹಾಗೆ
 ಸುಖಗಳೇ ಹೀಗೆ ಅಜ್ಜಿ ಪ್ರೀತಿಯ ಹಾಗೆ.

 ಅರಮನೆಯಂತಹ ಮನೆ
 ಹಳೆಮನೆಯಾದದ್ದು
 ನನ್ನ ಕವಿತೆಗೆ  ವಸ್ತುವಾದದ್ದು.
 ಅಪ್ಪ ಆಡಿದ ಮನೆಯಲ್ಲಿ
 ಈಗ  ನಾನೂ ಆಡುತ್ತಿರುವೆ...
 ಅಪ್ಪನ ಕನಸು, ನೆನಪುಗಳೊಂದಿಗೆ.
 ಅಜ್ಜಿಯ  ಕೈ ತುತ್ತಿನೊಂದಿಗೆ.

                              - ಮಾಲತೇಶ್ ಅರಸ್ ಹರ್ತಿಮಠ.







No comments:

Post a Comment