ಬಯಲು ಸೀಮೆಯನ್ನು ಮಲೆನಾಡಾಗಿಸಿ..
*ದೇಗುಲದಲ್ಲಿ ಅರಳಿದ ಹಸಿರ ವೈಭವ..
* ಹೆಸರಿನ ಜೊತೆಗೆ ಹಸಿರಿನ ಸಂಭ್ರಮ
*ಮಕ್ಕಳನ್ನು ಹಸಿರು ರಾಯಭಾರಿಯಾಗಿಸಿ
*ಎಲ್ಲರ ಕೈಯಲ್ಲೂ ಪುಟ್ಟ ಸಸಿಗಳ ಮೆರವಣಿಗೆ
*ಶ್ರಾವಣೋತ್ಸವ, ನಾಮಕರಣ ಮಹೋತ್ಸವ
*ಪ್ರತಿಯೊಬ್ಬರು ಮನೆ ಮುಂದೊಂದು ಸಸಿ ನೆಡಿ
ಚಿತ್ರದುರ್ಗ: ಪ್ರತಿ ಮನೆ ಮನೆಯಲ್ಲೂ ಹಬ್ಬಗಳ ಸವಿ ನೆನಪಿಗಾಗಿ ನಾವೂ ಸಸಿ ನೆಡುವ ಮೂಲಕ ಪರಿಸರವನ್ನು ನಾವು ಕಾಪಾಡಬೇಕಿದೆ. ಬಯಲು ಸೀಮೆಯನ್ನು ಮಲೆನಾಡಾಗಿ ಪರಿವರ್ತಿಸಿದರೇ ಸಮೃದ್ಧ ಮಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮುಂದೊಂದು ಸಸಿ ನೆಡಬೇಕು ಹರ್ತಿಕೋಟೆ ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಡಿಸಿಸಿ ನಿರ್ದೇಶಕ ಗುರುಲಿಂಗಪ್ಪ ಕರೆ ನೀಡಿದರು.
ಹರ್ತಿಕೋಟೆ ಗ್ರಾಮದ ಶ್ರೀ ಕೆಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಪತ್ರಕರ್ತ ಮಾಲತೇಶ್ ಅರಸ್ ಹಾಗೂ ಶೃತಿ ಎಂ.ಅರಸ್ ಅವರ ಪುತ್ರ ವಿಖ್ಯಾತ್ ಅರಸ್ ನಾಮಕರಣದ ನೆನಪಿಗೆ ಏರ್ಪಡಿಸಿದ್ದ ಹಸಿರೋತ್ಸವ, ಹೆಸರು ಹಸಿರ ಸಂಭ್ರಮ ಸಮಾರಂಭದಲ್ಲಿ ಮಾತನಾಡಿ. ನಾವು ಪರಿಸರ ಕಾಳಜಿ ಬೆಳಸಿಕೊಳ್ಳಬೇಕು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.
ಬಯಲು ಸೀಮೆಯನ್ನು ಮಲೆನಾಡಾಗಿಸಿ:ಇದೇ ವೇಳೆ ಸಸಿ ವಿತರಿಸಿ ಮಾತನಾಡಿದ ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಲಿಂಗಪ್ಪ. ಪರಿಸರವನ್ನು ನಾವೆಲ್ಲಾ ಕಾಪಾಡಬೇಕಿದೆ. ಹಬ್ಬ ಹರಿದಿನಗಳಲ್ಲಿ ನಾವು ಏನೆಲ್ಲಾ ಕೆಲಸ ಮಾಡುತ್ತಿದ್ದರೂ ಸಸಿ ನೆಡುವುದನ್ನೇ ಮರೆಯುತ್ತಿದ್ದೇವೆ. ಬಯಲು ಸೀಮೆಯನ್ನು ಮಲೆನಾಡಾಗಿ ಪರಿವರ್ತಿಸಿದರೇ ಸಮೃದ್ಧ ಮಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮುಂದೊಂದು ಸಸಿ ನೆಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ. ಮಹಂತೇಶ್ ಮಾತನಾಡಿ, ಕೇವಲ ಸುದ್ದಿ ಬರೆದು ನಮ್ಮ ಕಾಯಕ ಮುಗಿತೆಂದು ಸುಮ್ಮನಾಗುವ ಬದಲಿಗೆ ಮಾಲತೇಶ್ ಅರಸ್ ತಮ್ಮ ಮಗನ ನಾಮಕರಣದ ನೆನಪಿಗೆ ಜೀವಾಮೃತವಾಗಿರುವ ಸಸಿಗಳನ್ನು ನೀಡಿರುವುದು ಅರ್ಥಪೂರ್ಣ ಹಾಗೂ ಶ್ಲಾಘನೀಯ. ರಾಜಕಾರಣಿಗಳು ಹುಟ್ಟು ಹಬ್ಬಗಳಿಗೆ ಆಸ್ಪತ್ರೆಗಳಿಗೆ ತೆರಳಿ ಹಣ್ಣುಗಳನ್ನು ವಿತರಿಸಿದರೇ, ಇವರು ಹಣ್ಣನ್ನೇ ನೀಡುವ ಸಸಿಗಳನ್ನು ನೀಡುವ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ಲೋಕಾಯುಕ್ತ ಸಬ್‌ಇನ್ಸ್‌ಪೆಕ್ಟರ್ ಆನಂದ್ ಮಾತನಾಡಿ, ಮಗನನ್ನು ಹಸಿರು ರಾಯಭಾರಿಯಾಗಿಸುವ ನಿಟ್ಟಿನಲ್ಲಿ ಹೊಸ ಮುನ್ನುಡಿಯನ್ನು ಬರೆದಿರುವುದು ಎಲ್ಲರಿಗೂ ಆದರ್ಶಪ್ರಾಯವಾಗಿರಲಿ, ಮುಂದಿನ ಪೀಳಿಗೆಯು ಸ್ವಚ್ಚಂದವಾದ ಹಸಿರಿನ ಪರಿಸರದಲ್ಲಿ ಒಳ್ಳೆಯ ಗಾಳಿ, ಬೆಳಕು ಹಾಗೂ ನೈಸರ್ಗಿಕವಾದ ಸಂಪತ್ತನ್ನು ತಮ್ಮದಾಗಿಸಿಕೊಳ್ಳಲಿ. ಏನಾದರೂ ಮಾಡು ಎಲ್ಲರಿಗೂ ಉಪಯೋಗ ವಾಗುವಂತಿರಲಿ ಎನ್ನುವಂತಹ ಮಾತನ್ನು ಈ ರೀತಿ ಸತ್ಯಗೊಳಿಸಿರುವ ಇವರ ಅವಿರತ ಶ್ರಮ ಶ್ಲಾಘನೀಯ ಎಂದು ನುಡಿದರು.
ಮನೆ ಮುಂದೊಂದು ಗಿಡ ನೆಡಿ ಎಂಬ ವಿನಂತಿಯೊಂದಿಗೆ ಸವಿನೆನಪಿಗಾಗಿ ಸಂಪಿಗೆ, ಮಾವು, ನೇರಳೆ, ಕರಿಬೇವು, ಶ್ರೀಗಂಧ, ತೇಗ, ಹೊನ್ನೆ, ಸೀತಾಫಲ ಸೇರಿದಂತೆ ವಿವಿಧ ಬಗೆಯ 160 ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ದೇಗುಲದ ಮುಂಭಾಗದಲ್ಲಿ ಸಸಿ ನೆಡಲಾಯಿತು. ಹರ್ತಿಕೋಟೆ ಅಲ್ಲದೆ ಹಿರಿಯೂರು, ಸಂಗೇನಹಳ್ಳಿ, ಗೊರ‌್ಲತ್ತು, ಚನ್ನಮ್ಮನಹಳ್ಳಿ, ಕಳವಿಭಾಗಿ, ಮುದಿಯಪ್ಪನ ಕೊಟ್ಟಿಗೆ, ಶಿರಾ, ಚಳ್ಳಕೆರೆ, ಚಿತ್ರದುರ್ಗ, ರಾಮಗಿರಿ, ವಡೇರಹಳ್ಳಿ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಿದ್ದವರೆಲ್ಲರ ಕೈಯಲ್ಲಿ ಪುಟ್ಟ ಪುಟ್ಟ ಸಸಿಗಳೇ ಇದ್ದವು.
ಬಂದಿದ್ದ ಪ್ರತಿಯೊಬ್ಬರಿಗೂ ಸಸಿ ವಿತರಿಸುವ ಮೂಲಕ ಹಸಿರು ಜಾಗೃತಿ ಮೂಡಿಸುವ ಕಾರ್ಯವೂ ನಡೆಯಿತು. ಇದೇ ವೇಳೆ ಶ್ರಾವಣದ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳೂ ಜರುಗಿದವು.
ಹರ್ತಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಗಣಾಚಾರ್ ರಾಮಲಿಂಗಯ್ಯ, ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್ ಎಲ್.ವೀರಭದ್ರಯ್ಯ, ವೆಟ್ರನರಿ ಇನ್ಸ್‌ಪೆಕ್ಟರ್ ರುದ್ರಮುನಿ, ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಯಶೋಧರ್ ಪೂಜಾರ್, ಹಿರಿಯೂರು ಜಯರಾಂ, ಪೋಲೀಸ್ ಲಕ್ಷ್ಮಿ ನಾರಾಯಣ, ವಿಶ್ವ ಹಾಲುಮತ ಯುವ ವೇದಿಕೆ ಕಾರ್ಯದರ್ಶಿ ಸಂಗೇನಹಳ್ಳಿ ಮಂಜುನಾಥ್, ತಾಲೂಕು ಕನಕ ಯುವ ಸೇನೆ ಅಧ್ಯಕ್ಷ ಜಗದೀಶ್ ಭಂಡಾರಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಂತರಾಜ್ ಹುಲಿ, ಕನಕ ಯುವಕ ಸಂಘದ ಖಜಾಂಚಿ ಶ್ರೀನಿವಾಸ್, ಗಣಾಚಾರ್ ಕುಮಾರಸ್ವಾಮಿ, ನಂಜುಂಡಯ್ಯ ಒಡೆಯರ್, ನಾಗಯ್ಯ ಒಡೆಯರ್, ಇತರರು ಇದ್ದರು.
((ಬಾಕ್ಸ್))
ಅಲ್ಲಿ ಸಂಪಿಗೆ ಸುವಾಸನೆ, ಮಾವಿನ ಆಹ್ಲಾದಕರ, ನೇರಳೆಯ ಕಂಪು, ಶ್ರೀಗಂಧದ ವೈಭವ, ಕರಿಬೇವಿನ ಗಮ್ಮತ್ತು, ಸೀತಾಫಲದ ರುಚಿ, ನಿಂಬೆಯ ಸವಿ, ಗಂಟೆಯ ನಿನಾದ, ಅರ್ಚನೆಯ ಸುಮಧುರತೆ, ಕಿವಿಗಿಂಪಾದ ಗಾಯನ, ಮಕ್ಕಳ ಆಟವೂ ಇತ್ತು. ಅಕ್ಷರಶಃ ದೇಗುಲದಲ್ಲಿ ಹಸಿರಿನ ಹಬ್ಬವೇ ಮೂಡಿತ್ತು. ಹೆಸರಿನ ಜೊತೆಗೆ ಹಸಿರೋತ್ಸವ. ಹಳ್ಳಿಗಾಡಿನ ಸೊಗಡು, ಊರ ಮಂದಿ ಕೈಯಲ್ಲಿ ಪುಟ್ಟ ಸಸಿಗಳ ಮೆರವಣಿಗೆ ನಡೆಯಿತು.
No comments:
Post a Comment