Tuesday, September 17, 2013

ಸೆ.18 ವಿಶ್ವ ಬಿದಿರು ದಿನ


 ಬಿದಿರು ಮಾರುವವರ ಬದುಕು ಮೂರಾಬಟ್ಟೆ

 *ಪ್ಲಾಸ್ಟಿಕ್ ವಸ್ತುಗಳ ದಾಳಿ
 * ಪರ್ಯಾಯ ವೃತ್ತಿಯತ್ತ  ಮೇದಾರರ ಚಿತ್ತ.
 *ಬಿದಿರು ನಂಬಿದವರ ಬದುಕು ಅತಂತ್ರ
 * ಮೇದರ ಜನಾಂಗಕ್ಕೆ ಸಿಗದ ಸರಕಾರ ಸೌಲಭ್ಯಗಳು
 * ಮಕ್ಕಳಿಗೆ ತೊಟ್ಟಿಲಾಗಿ. ರೈತರಿಗೆ ಪುಟ್ಟಿಯಾಗಿ.
 *ಎತ್ತಿನ ಗಾಡಿಗಳಿಗೆ ತಡಿಗೆಯಾಗಿ.
 *ಮಹಿಳೆಯರಿಗೆ ಕಾಳು ತೂರುವ ಮೊರವಾಗಿ



 ಮಾಲತೇಶ್ ಅರಸ್ ಹರ್ತಿಮಠ
 ಬೆಂಗಳೂರು: ‘‘ಅಯ್ಯೋ ಬಿಡಪ್ಪಾ, ಈ ಬದುಕು ಸಾಕು ಸಾಕು ಅನ್ನಿಸಿದೆ. ಯಾರಿಗೆ ಹೇಳನಪ್ಪಾ ನಮ್ಮ ನೋವ್ನ, ಮೂರೊತ್ತು ಊಟಕ್ಕೂ ಬರ ಬಂದೈತಿ. ಪೂರ್ವಿಜರ ಕಾಯಕ ಅಂತ  ಬಿದಿರು ಹಿಡಿದು ಬದುಕು ಮಾಡ್ತಾ ಅವ್ನಿ. ಕೂಲಿ ಮಾಡಿ ಜೀವನ ಮಾಡ್‌ಬೋದು ಈ ಮೊರ, ಬುಟ್ಟಿ, ತೊಟ್ಲು ಮಾರೋದು ಬೇಡವೇ ಬೇಡ. ಬಿದಿರು ಮಾರೋದು ಅಂದ್ರೆ ಬಿಸಿಲು ಕಾಯೋದು ಕೆಲಸ ಆಗೈತಿ. ಆ ಪ್ಲಾಸ್ಟಿಕ್‌ನೋವು ಬಂದ್ ನಮ್ ಬದುಕನ್ನು ತಿಂದಾಕವೆ.’’
  ವ್ಯಾಪಾರವೇ ಇಲ್ಲದೆ ಸುಮ್ಮನೆ ಕುಳಿತಿದ್ದ ಸರ್ವಕ್ಕ ಹೀಗೆ ತನ್ನ ಮನದಾಳದ ನೋವನ್ನು ಹಂಚಿಕೊಳ್ಳುವಾಗ ಕಣ್ಣಂಚಿನಲ್ಲಿ ನೀರು ಚಿನುಗುತ್ತಿತ್ತು. ವ್ಯಾಪಾರವಿಲ್ಲದೆ ರಾಶಿ ರಾಶಿ ಬಿದರು ಬುಟ್ಟಿ, ತೊಟ್ಟಿಲು, ಮೊರಗಳನ್ನು ಹರವಿ ಕುಳಿತ ಸರ್ವಕ್ಕ ಸರ್ವವನ್ನೂ ಬಿಟ್ಟು ತನ್ನ ಕಸುಬನ್ನು ಮಾಡುತ್ತಲೇ ಮಾತಿಗಿಳಿದಾಗ ಹಳೆಯ ವ್ಯಾಪಾರ, ಹಳೆಯ ಜನರ ಬಿದಿರಿನ ಪ್ರೀತಿಯ ನೆನಪಿಸಿಕೊಂಡರು.
 ಬಿದಿರನ್ನೆ ನಂಬಿ ಜೀವನ ಸಾಗಿಸುವ ಮೇದರ ಜನಾಂಗದವರು ಇಂದು ಬೀದಿಗೆ ಬಂದಿದ್ದಾರೆ. ಬಿದಿರು ಮೂಲಕ ತಮ್ಮ ಕಾಯಕವನ್ನು ಮಾಡುವವರು ಪ್ಲಾಸ್ಟಿಕ್ ವಸ್ತುಗಳ ಹಾವಳಿಯಿಂದಾಗಿ. ಹಾಗೂ ಸರಕಾರದ ನಿರ್ಲಕ್ಷ್ಯದಿಂದಾಗಿ ಬದುಕು ಸಾಗಿಸುವುದು ದುಸ್ಥರವಾಗಿದೆ.
  ಎಲ್ಲಕ್ಕೂ ಬೇಕಿತ್ತು ಬಿದಿರು:
 ಮಕ್ಕಳಿಗೆ ತೊಟ್ಟಿಲಾಗಿ. ರೈತರಿಗೆ ಪುಟ್ಟಿಯಾಗಿ. ಎತ್ತಿನ ಗಾಡಿಗಳಿಗೆ ತಡಿಗೆಯಾಗಿ. ಮಹಿಳೆಯರಿಗೆ ಕಾಳು ತೂರುವ ಮೊರವಾಗಿ, ರೇಷ್ಮೇ ಹುಳುಗಳಿಗೆ ಮನೆಯಾಗಿ ಬಿದಿರು ಇಂದು ದೂರಸಾಗಿದೆ. ಪ್ಲಾಸ್ಟಿಕ್ ವಸ್ತುಗಳ ಹಾವಳಿಯಿಂದಾಗಿ ಹಾಗೂ ಬಿದಿರಿನ ಅಭಾವದಿಂದಾಗಿ ಎಲ್ಲವೂ ಮಾಯವಾಗುತ್ತಿದ್ದು ಬಿದಿರು ನಂಬಿದವರ ಬದುಕು ಬೀದಿಗೆ ಬಂದಿದೆ.
 ಮೇದಾರ ಜನಾಂಗದ ಕಸುಬು ಎಂಬ ಒಂದೇ ದೃಷ್ಟಿಯಿಂದ ಇವರು ನಿತ್ಯ ಕಾಯಕ ಮಾಡುತ್ತಿದ್ದಾರೆ. ಆದ್ರೆ ಹಣಕಾಸಿನ ಅಭಾವ. ಬಡತನ ಇನ್ನೂ ಇವರನ್ನು ಕಂಗಾಲಾಗಿಸಿದೆ. ಹಬ್ಬಗಳು ಬಂತೆದರೆ ಸಾಕಷ್ಟು ವ್ಯಾಪಾರ ವಾಗುತ್ತಿದ್ದ ಕಾಲ ಇದೀಗ ಮಾಯವಾಗಿದೆ. ವ್ಯಾಪಾರವೇ ಮರೀಚಿಕೆಯಾಗಿದೆ.  ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ.
   ಆಧುನಿಕ ಜಗತ್ತು ಇಂದು ಎಲ್ಲವೂ ಪ್ಲಾಸ್ಟಿಕ್‌ಮಯವಾಗಿಸಿದ್ದು. ಮಕ್ಕಳಿಗೆ ಕಬ್ಬಿಣದ ತೊಟ್ಟಿಲುಗಳು ಸೇರಿದಂತೆ ಎಲ್ಲವೂ ಪ್ಲಾಸ್ಟಿಕ್ ಆವರಿಸಿದ ಪರಿಣಾಮ ಇವರು ಮತ್ತೆ ಬಡವರಾಗಿದ್ದಾರೆ.ಆದರೂ ಸರಕಾರ ಮಾತ್ರ ಇವರತ್ತ ಗಮನ ಹರಿಸಿಲ್ಲದಿರುವುದು ಶೋಚನೀಯ.
 ಗೌರಿ ಹಬ್ಬವನ್ನು ನೆನೆಸಿಕೊಂಡ ತಿಮ್ಮಕ್ಕ ಗೌರಿಯ ಬಾಗಿನ ಮೊರಗಳ ತಯಾರಿಕೆ ಕಡಿಮೆ ಆಗಿಲ್ಲ, ಆದರೇ ಖರೀದಿ ಮಾತ್ರ ಇಲ್ಲವಾಗಿದೆ. ವ್ಯಾಪಾರಸ್ಥರಲ್ಲಿ ವರ್ಷ ಕಳೆದಂತೆ ಬಾಗಿನ ಖರೀದಿಯಲ್ಲಿ ಆಸಕ್ತಿಯೇ ಇಲ್ಲ. ವ್ಯಾಪಾರವೂ ಆಗಿಲ್ಲ ಎಂದರು.

 ಬಾಕ್ಸ್;
 ಜಾನಪದ ಸಂಪತ್ತು :
 ಬಿದಿರಿನ ವಸ್ತುಗಳು ಅಂದ್ರೆ ಜಾನಪದ ಪ್ರತೀಕ. ಹಳ್ಳಿಯಲ್ಲಿ ಯಾವುದೇ ಪದ ಕಟ್ಟುವಾಗ ಅಲ್ಲಿ ಮೊರ ಇಟ್ಟು, ಅರಿಶಿಣ ಕುಂಕುಮ  ಹಾಕಿ ದೇವಿ ಎಂದು ನಮಿಸಿ  ಹಾಡಲಾಗುತ್ತಿತ್ತು. ಈಗ ಪ್ಲಾಸ್ಟಿಕ್ ಮೊರ ಇಟ್ಟುಕೊಂಡು ಯಾವ ಹಾಡು ಹೇಳಲಾಗದು. ಮದುವೆಯಲ್ಲಿ ಬಿದಿರಿನ ಬುಟ್ಟಿಯೇ ಬೇಕು. ಆದರೇ ಇದೀಗಿ ಪ್ಲಾಸ್ಟಿಕ್ ವಸ್ತುಗಳು ಬಂದು ಬಿದಿರಿನಿಂದ ತಯಾರಿಸಿದ ಎಲ್ಲವನ್ನೂ ತಿಂದು ಹಾಕಿವೆ.

 ಕೋಟ್ಸ್..
  ಇತ್ತೀಚೆಗೆ ಬಿದಿರು ಕೂಡಾ ಸಿಗುತ್ತಿಲ್ಲ.  ಹಾಗಾಗಿ ನಮ್ಮವರು ಬದುಕು ಸಾಗಿಸುವುದೂ ಕಷ್ಟಕರವಾಗಿದೆ. ಅರಣ್ಯಪ್ರದೇಶದಲ್ಲಿ ಬಿದಿರನ್ನು ಬೆಳೆಸಬೇಕಿದೆ. ಸರ್ಕಾರ ಮೇದಾರ ಜನಾಂಗಕ್ಕೆ ಬೇಕಾದ ಅಗತ್ಯ ಪೂರಕ ಸೌಲಭ್ಯ ಕಲ್ಪಿಸಬೇಕಿದೆ.
  ಶ್ರೀ ಕೇತೇಶ್ವರ ಮಹಾಸ್ವಾಮೀಜಿ . ಮೇದಾರ ಗುರುಪೀಠ , ಚಿತ್ರದುರ್ಗ.









No comments:

Post a Comment