Wednesday, October 16, 2013

ಗೋ ಕ್ಷೀರ, ಕುರಿ ಹಾಲು ಮತ್ತು ಮೃತ ಪೀಠಗಳು

ಗೋ ಕ್ಷೀರ, ಕುರಿ ಹಾಲು ಮತ್ತು ಮೃತ ಪೀಠಗಳು


ಅರುಣ್ ಕೂಡ್ಲಿಗಿಯವರಬ್ಲಾಗ್ನಲ್ಲಿದ್ದ ಬರಹ

ಇತ್ತೀಚೆಗೆ ಮಠಾಧೀಶರೊಬ್ಬರು `ಕುರಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಬೇಕು’ ಎಂಬ ಒತ್ತಾಯಿಸಿದ್ದನ್ನು ಹಲವು ದೃಶ್ಯ ಮಾಧ್ಯಮಗಳು ವ್ಯಂಗ್ಯವಾಗಿ ಬಿತ್ತರಿಸಿವೆ. ಪ್ರಸ್ತುತ ವಿಚಾರ ಕುರಿತಂತೆ ಒಂದು ಪ್ರತಿಕ್ರಿಯೆ. ಗೋಕ್ಷೀರವೇ ಶ್ರೇಷ್ಠ ಮತ್ತು ಕುರಿಹಾಲು ಕನಿಷ್ಠ ಎಂಬ ಅಭಿಪ್ರಾಯವನ್ನು ಜನಮಾನಸದಲ್ಲಿ ತೂರಿಸಿದ ಪುರೋಹಿತಶಾಹಿಗಳ ಹುನ್ನಾರಕ್ಕೆ ಶತಶತಮಾನಗಳ ಇತಿಹಾಸವಿದೆ. ಆದರೆ ಗೋವಿನಷ್ಟೇ ಕುರಿಯೂ ಪವಿತ್ರವೆಂದು ನಂಬಿ ಅವೆರಡೂ ನಮ್ಮ ಬದುಕಿನ ಎರಡು ಕಣ್ಣು(ಗೋವು ಕಾಮಧೇನು ಮತ್ತು ಕುರಿ ಪವಿತ್ರ ಲಕ್ಷ್ಮಿ)ಗಳೆಂದು ಭಾವಿಸಿ, ಪಾಲಿಸಿ, ಪೋಷಿಸುತ್ತ ಬಂದ ಪಶುಪಾಲಕರಿಗೆ ಐವತ್ಮೂರು ಸಾವಿರ ವರ್ಷಗಳ ದೀರ್ಘ ಚರಿತ್ರೆಯಿದೆ ಎಂಬುದನ್ನು ಇಂತಹವರು ಅರಿಯುವ ಅವಶ್ಯಕತೆಯಿದೆ. ಇಂದಿಗೂ ಪಶುಪಾಲಕರು (ಹಾಲುಮತ) ಕುರಿಹಿಂಡನ್ನು `ನನ್ನ ಬದುಕು’ ಎಂದೇ ಸಂಬೋಧಿಸುತ್ತಾರೆ.
ಬೌದ್ಧ ಮತಾನುಯಾಯಿ, ಕ್ರಿಸ್ತ ಪೂರ್ವದಲ್ಲಿ ಭಾರತ ಸೇರಿದಂತೆ ಇಂದಿನ ಪಾಕಿಸ್ತಾನ, ಆಫ್ಘಾನಿಸ್ತಾನಗಳನ್ನು ಆಳಿದ ಕುರುಬ ಸಮುದಾಯ ((Romavanshi-baghela shephard king)ದ ಸಾಮ್ರೋಟ ಕನಿಷ್ಕನು ತನ್ನ ನಾಣ್ಯದಲ್ಲಿ ಕುರಿ (ಮೇಕೆ)ಯ ಚಿತ್ರವನ್ನು ಕೊರೆಸಿ ಚಲಾವಣೆಗೆ ಬಿಟ್ಟಿದ್ದುದು ಶಾಸನಗಳಿಂದ ತಿಳಿದುಬರುತ್ತದೆ. ‘kaniska’s coin have 4 armed shiva, standing facing the head holding in upper right hand vajra (thunderbolt) and goat (sheep) on its bind legs in right field’ (catalogue of coins by V.A. Smith, 1906, vol.1, P.70).ಇದೇ ರೀತಿ ಹುವಿಷ್ಕ ((Huvishaka)ಎಂಬ ದೊರೆಯು ಸಹ ಕುರಿ/ಮೇಕೆಗಳಿಗೆ ರಾಷ್ಟ್ರೀಯ ಮನ್ನಣೆಯನ್ನು ಕೊಟ್ಟಿದ್ದುದು ತಿಳಿದುಬರುತ್ತದೆ. ‘Huvishaka’ s coins have shiva four armed with one face turned wearing indian waiste coat, holding in upper right hand vajra, in lower right hand goat (sheep), in left upper hand trident and lower left hand resting on the horns/ heads of the goat/ sheep. ಇದಲ್ಲದೇ `ಭಾರತದ ರಾಜಪುರಾಣದ ವಲ್ಲಭಪುರ, ಕೋಟಾಬರೂದಿ, ಚಿತ್ತೂರು, ಉದಯಪುರ, ಬಿಕಾನೇರ್, ಮೇವಾಡಗಳನ್ನು ಕುರುಬ ರಾಜರು ಆಳಿದ್ದು, ಕರೋಲಿ ಸಂಸ್ಥಾನದ ದೊರೆಗಳು ತಮ್ಮ ರಾಜಮುದ್ರೆ (ಲಾಂಛನ)ಯಲ್ಲಿ ಎದುರುಬದುರಾಗಿ ನಿಂತ ಕುರಿ ಮತ್ತು ಹುಲಿಗಳು, ಮಧ್ಯದಲ್ಲಿ ಹಸು (ನಂದಿ) ಮತ್ತು ಮೇಲ್ಗಡೆ ಮೇಕೆಯ ತಲೆಯನ್ನು ಹೊಂದಿದ ಚಿತ್ರವಿದೆ ((Tod’s Rajasthan, Pandit Lalit Mohan Audhiya, vol.1, 1894.) ಎಂದು ಇತಿಹಾಸಕಾರರು ದಾಖಲಿಸಿರುವುದನ್ನು ಗಮನಿಸಿದರೆ ಕುರಿ (ಮೇಕೆ)ಗಳಿಗೆ ರಾಜಮನ್ನಣೆ ಪ್ರಾಚೀನ ಕಾಲದಿಂದಲೂ ಇತ್ತು ಎಂಬುದು ಅರ್ಥವಾಗುತ್ತದೆ. ಆದರೆ ಇಂದೇಕೆ ಈ ಅವಗಣನೆ, ಹೀಯಾಳಿಕೆ?
ಕುರಿಯನ್ನು ಮಬ್ಬು, ದಡ್ಡಪ್ರಾಣಿ ಎನ್ನುವುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಮುಗ್ದ, ಮೃದು ಸ್ವಭಾವದ ಇದು ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಜೀವಿಯೂ ಹೌದು. ಮಾಂಸಕ್ಕಾಗಿ ಸಾಕುವ ಮತ್ತು ಹಾಲುಕೊಡುವ ಇತರ ಪ್ರಾಣಿಗಳಾದ ಹಸು, ಎಮ್ಮೆ, ಹಂದಿ ಇತ್ಯಾದಿಗಳು ತಮ್ಮ ಇತರ ಆಹಾರಗಳ ಜೊತೆಗೆ ಮನುಷ್ಯನ ಮಲವನ್ನೂ ತಿಂದು ಬದುಕಿದರೆ, ಕುರಿಯು ಆ ವಾಸನೆ ಇರುವ ಜಾಗದಲ್ಲಿ ನಿಲ್ಲುವುದೇ ಇಲ್ಲ. ತನ್ನ ಒಡೆಯ ಒಂದು ಸಲ ಸೂಚಿಸಿದ ಸಂಜ್ಞೆಗಳನ್ನು ಅದು ಬದುಕಿರುವವರೆಗೂ ಪಾಲಿಸುತ್ತದೆ. ತನ್ನ ದೇಹದ ಮಾಂಸ, ಹಾಲು, ಉಣ್ಣೆ, ಹಿಕ್ಕೆಯನ್ನು ಮಾನವನಿಗೆ ದಾನ ಮಾಡುವ ಕುರಿಯ ಪವಿತ್ರತೆ ಈ ಜೀವ ಜಗತ್ತಿನಲ್ಲಿ ಇನ್ನೊಂದು ಪ್ರಾಣಿಗಿಲ್ಲ. ಸಸ್ಯಶಾಸ್ತ್ರ ಸೂಚಿಸುವಂತೆ ಅತ್ಯಂತ ವಿಷಕಾರಿಯಾದ ಎಕ್ಕೆ, ಹುಸಲಂಗಿ ಗಿಡಗಳನ್ನು ತಿಂದು, ಅರಗಿಸಿ ಅಮೃತದಂತಹ ಹಾಲು ನೀಡುವ ನಿಷ್ಪಾಪಿ ಬದುಕನ್ನು ಅರಿಯದ ಮಾನವನೇ ಮೂರ್ಖನಲ್ಲವೆ? ದೇಶದ ಬಹುಸಂಖ್ಯಾತರಿಗೆ ಇದರ ಮಾಂಸದ ಅವಶ್ಯಕತೆಯಿರುವ ಕಾರಣಕ್ಕಾಗಿ ಅದರ ಮೌಲ್ಯವನ್ನು ಕುಂಠಿತಗೊಳಿಸುವುದು ಯಾವ ನ್ಯಾಯ?
ಇನ್ನು ಕುರಿ ಉದ್ಯಮ ದೇಶದ ಆರ್ಥಿಕತೆಯ ಮೇಲೆ ಬಹು ಮುಖ್ಯ ಪರಿಣಾಮ ಬೀರಿದೆ. ಕಾಬೂಲ್, ನೇಪಾಳ, ಟಿಬೆಟ್‌ಗಳು ಸೇರಿದಂತೆ ಕಾಶ್ಮೀರದಿಂದ ಭಾರತದಾದ್ಯಂತ ಕನ್ಯಾಕುಮಾರಿಯವರೆಗೆ ಕುರಿ ಸಾಕಾಣಿಕೆಯಲ್ಲಿ ದೇಶದ ಶ್ರಮ-ಜೀವನಾಡಿಯಾದ ದಲಿತ ಹಿಂದುಳಿದ ಸಮುದಾಯಗಳು ತೊಡಗಿಸಿಕೊಂಡಿವೆ. ಕುರಿ ಸಾಕಾಣಿಕೆ, ಕಂಬಳಿನೇಕಾರಿಕೆ, ಮಾಂಸ, ಚರ್ಮಗಳ ಆಮದು-ರಪ್ತು ವ್ಯಾಪಾರ ಇತ್ಯಾದಿ., ಇಂದು ರಾಷ್ಟ್ರದ ಮೊದಲ ಸಾಲಿನ ಉದ್ಯಮವಾಗಿದ್ದು, ನೂರಾರು ಕೋಟಿ ರೂಪಾಯಿಗಳ ವಹಿವಾಟು ಹೊಂದಿದೆ. ಕುರಿಯ ಮೂತ್ರಕ್ಕೆ ಔಷಧಿಯ ಗುಣಗಳಿವೆ ಹಾಗೂ ಕುರಿ ಹಿಂಡಿನಲ್ಲಿ ಮಲಗಿದರೆ ಕ್ಷಯರೋಗವಾಸಿಯಾಗುತ್ತದೆಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಕುರಿ ಎಂಬ ಸಾಧು ಪ್ರಾಣಿ ದೇಶಕ್ಕೆ ಆದಾಯ ತಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಸಾಕಾಣಿಕಾ ಕಾರಣಗಳಿಂದ ಹಲವು ಕೋಟಿ ರೂಪಾಯಿಗಳ ನಷ್ಟವಿದೆ. ಇದರರ್ಥ ಇದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಎಂದಲ್ಲ (ಈ ಕುರಿತು ತೀರ್ಮಾನಿಸುವುದು ಭಾರತದ ಒಕ್ಕೂಟ ಸರ್ಕಾರ), ಆದರೆ ಹಾಗೆ ಅಭಿಪ್ರಾಯಪಡುವುದು ಕೀಳರಿಮೆಯಾಗುವುದಿಲ್ಲ.
ಕೊನೆಯ ಮಾತು : `ಮೇಷ ಎಂಬ ಪದವು ವೈದಿಕ ಸಾಹಿತ್ಯ, ಖಗೋಳಶಾಸ್ತ್ರ, ಪುರಾಣಗಳಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಹನ್ನೆರಡು ರಾಶಿಗಳಲ್ಲಿ ಮೇಷ ಮೊದಲನೆಯದಾಗಿದೆ. `ಓ ದೇವರೆ! ಕುರಿ ಮತ್ತು ದನಗಳಲ್ಲಿ ನಾವು ಸಮೃದ್ಧಿ ಹೊಂದೋಣ. ನಾವು ಯಾರನ್ನೂ ಕೊಲ್ಲುವುದಿಲ್ಲ ಹಾಗೂ ಕಾಡುಗಳಲ್ಲಿ ವಿರಾಮ ಜೀವನ ನಡೆಸುತ್ತಾ, ಮಂತ್ರಗಳನ್ನು ಜಪಿಸುತ್ತಾ ಪಶುಗಳನ್ನು ಮೇಯಿಸುತ್ತೇವೆ (ಯಜುರ್ವೇದ, 19- 80) ಎಂದು ವೇದಗಳು ಘೋಷಿಸುತ್ತ, ಋಷಿ-ಮುನಿಗಳು ಕುರಿ, ಹಸುಗಳನ್ನು ಸಾಕಿ, ತಾವೇ ನೇಯ್ದ ಉಣ್ಣೆ ಬಟ್ಟೆ ಧರಿಸುತ್ತಿದ್ದುದನ್ನು ದಾಖಲಿಸಿವೆ. ವಿಷಯ ಅದಲ್ಲ, ಇಂತಹ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳದೇ ತಾವೇ ಭಾರತೀಯ ಸಂಸ್ಕೃತಿಯ ರಕ್ಷಕ-ವಕ್ತಾರರಂತೆ ಬಿಂಬಿಸಿಕೊಳ್ಳುವ ಇಂದಿನ ಮೇಲ್ವರ್ಗದ ಮಠಾಧೀಶರು ಸತ್ತ ಪೀಠ (ಹುಲಿ, ಜಿಂಕೆಗಳು ಸತ್ತ (ಸಾಯಿಸಿ) ನಂತರ ಚರ್ಮ ತೆಗೆದು) ಏರಿ ಕುಳಿತು ಮೃತ ಪೀಠಾಧಿಪತಿಗಳಾಗಿದ್ದಾರೆ? ಇವರು ಕುರಿ, ಮೇಕೆ, ಹಸುಗಳನ್ನು ಪ್ರೀತಿಸಿ ಸಾಕಿ ಅವುಗಳ ಉಣ್ಣೆಯಿಂದ ಮಾಡಿದ ಜೀವಂತ ಪೀಠದಲ್ಲಿ ಕುಳಿತು ವಾಸ್ತವವನ್ನು ಅರಿಯಲಿ.
Malathesh Urs Harthimath

No comments:

Post a Comment