Thursday, August 28, 2014
Monday, August 4, 2014
ಮಾರುಕಟ್ಟೆಗೆ ಬಂದ ಗಣೇಶ..ಮಾಲತೇಶ್ ಅರಸ್
* ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳದೇ ದರ್ಬಾರು
* ಪರಿಸರ ಸ್ನೇಹಿ ವಿಗ್ರಹಗಳ ತಯಾರಿ * ಕಳೆದ ಬಾರಿಗಿಂದ ದುಬಾರಿ
*ಮಣ್ಣಿನ ಗಣಪ ಬಳಸೋಣ, ನೀರಿನ ಮೂಲ ಉಳಿಸೋಣ
ಮಾಲತೇಶ್ ಅರಸ್
ಬೆಂಗಳೂರು: ಗಣೇಶ ಚತುರ್ಥಿಗೆ ಇನ್ನೂ 20 ದಿನ ಬಾಕಿ ಇರುವಾಗಲೇ ಸಿಲಿಕಾನ್ ಸಿಟಿಯ ಬಹುತೇಕ ಕಡೆ ಬಣ್ಣ ಬಣ್ಣದ ವಿಗ್ರಹಗಳು ರಾರಾಜಿಸುತ್ತಿವೆ. ಸಾಂಪ್ರದಾಯಿಕ ಮೂರ್ತಿಗಳ ತಯಾರಿಕೆ ಮಾಯವಾಗಿದೆ. ಎಲ್ಲೆಡೆ ಪಿಒಪಿ ಗಣೇಶ ತಯಾರಿಕೆ ಭರ್ಜರಿಯಾಗಿ ನಡೆದಿದ್ದು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಆದರೆ ಗಣೇಶ ದುಬಾರಿಯಾಗಿ ಭಕ್ತರ ಕೈ ಸುಡಲು ಬರುತ್ತಿದ್ದಾನೆ.
ಹಬ್ಬ ಇನ್ನೂ ದೂರವಿದ್ದರೂ ಗಣಪ ಅಲ್ಲಲ್ಲಿ ಶೃಂಗಾರಗೊಂಡು ಭಕ್ತರ ಮನೆಗೆ ಹೋಗಲು ಕಾದು ಕುಳಿತಿದ್ದಾನೆ. ಕೆಂಗೇರಿ, ದಾಸರಹಳ್ಳಿ, ಮೂಡಲಪಾಳ್ಯ, ಕಾಮಾಕ್ಷಿಪಾಳ್ಯ, ಹೇರೋಹಳ್ಳಿ, ಸುಂಕದಕಟ್ಟೆ, ಯಲಹಂಕ, ಪಾರ್ವತಿಪುರ, ಮಲ್ಲೇಶ್ವರ, ಹಲಸೂರು ಮತ್ತಿತರ ಕಡೆ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ವಿಶೇಷವಾಗಿ ಮೈಸೂರು ರಸ್ತೆಯ ವಿಆರ್‌ಎಲ್ ಲಾಜಿಸ್ಟಿಕ್ ಸಮೀಪ ಬೃಹತ್ ಗಾತ್ರದ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ ತಯಾರು ಮಾಡುತ್ತಿದ್ದಾರೆ.
ಗಣೇಶ ಮೂರ್ತಿಗಳನ್ನು ಬೇರೆಡೆಯಿಂದ ತರಿಸಿ ಹಣ ಮಾಡುವವರ ಸಂಖ್ಯೆ ಕಳೆದ ಬಾರಿಗಿಂತ ಹತ್ತರಷ್ಟು ಜಾಸ್ತಿಯಾಗಿರುವುದರಿಂದ, ವಂಶ ಪಾರಂಪರ್ಯವಾಗಿ ಮಣ್ಣಿನಲ್ಲಿ ಮಾಡಿಕೊಂಡು ಬರುತಿದ್ದ ಅನೇಕ ಕುಂಬಾರಿಕೆಯ ಕಲಾವಿದರೂ ಈ ಬಾರಿ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ನಿಷೇಧದ ನಡುವೆ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ ತಯಾರಿಸುತ್ತಿರುವ ಮೂರ್ತಿಗಳ ಆರ್ಭಟ ಎಗ್ಗಿಲ್ಲದೆ ಮಿತಿ ಮೀರಿದೆ.
ಮುಂಗಡ ಬುಕ್ಕಿಂಗ್: ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಕಷ್ಟಗಳ ನಿವಾರಣೆಗಾಗಿ ವಿಘ್ನ ನಿವಾರಕನ ಮೊರೆ ಹೋಗುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲ ಸುತ್ತ ಮುತ್ತಲಿಂದ ಆಗಮಿಸುತ್ತಿರುವ ನೂರಾರು ಸಂಘ ಸಂಸ್ಥೆಗಳು, ಗಣೇಶೋತ್ಸವ ಸಮಿತಿಗಳು ಬೃಹತ್ ಗಾತ್ರದ ಗಣಪನಿಗೆ ಮುಂಗಡ ನೀಡಿ ಕಾಯ್ದಿರಿಸುತ್ತಿದ್ದಾರೆ. ಎಲ್ಲಿ ನೋಡಿದರು ಯುವಕರ ಪಡೆ ಬುಕ್ಕಿಂಗ್‌ನಲ್ಲಿ ನಿರತವಾಗಿದೆ. ಸಮಿತಿಗಳ ಪದಾಧಿಕಾರಿಗಳು ತಮ್ಮದೆ ಡಿಜೈನ್ ಇರುವ ವಿಶೇಷ ಗಣಪಗಳ ಆರ್ಡರ್ ಮಾಡುತ್ತಿದ್ದಾರೆ.
ಬೆಲೆ ಹೆಚ್ಚಳ: 6 ಇಂಚಿನ ಪುಟ್ಟ ಗಣಪನಿಂದ 25 ಅಡಿ ಎತ್ತರದ ಬೃಹತ್ ಗಣಪನ ಮೂರ್ತಿಗಳು ತಯಾರಾಗುತ್ತಿವೆ. ರಸ್ತೆ ಬದಿಯ ಖಾಲಿ ಜಾಗದಲ್ಲಿ ಕಣ್ಮನ ಸೆಳೆಯುತ್ತಿವೆ. ಹಿಂದಿನ ವರ್ಷ 6 ಇಂಚಿನ ಗಣಪನ ಮೂರ್ತಿಯ ಬೆಲೆ 70 ರೂ. ಇದ್ದದ್ದು ಈ ಬಾರಿ 100 ಮುಟ್ಟಿದೆ. ದೊಡ್ಡ ಗಣಪನ ಮೂರ್ತಿಗಳ ದರ ಅಳತೆ, ವಿನ್ಯಾಸ, ಬಣ್ಣಕ್ಕೆ ಅನುಗುಣವಾಗಿ ಏರಿಕೆ ಆಗಿವೆ. 8 ಸಾವಿರದಿಂದ 50 ಸಾವಿರ ತನಕವೂ ಮುಟ್ಟಿದ್ದು, ಸರಾಸರಿ 20ರಷ್ಟು ಬೆಲೆ ಹೆಚ್ಚಳವಾಗಿದೆ. ಗೌರಮ್ಮನ ಮೂರ್ತಿಗಳ ಬೆಲೆಯೂ ಇದಕ್ಕೆ ಹೊರತಾಗಿಲ್ಲ.
ಭಿನ್ನ - ವಿಭಿನ್ನ: ಬೆಂಗಳೂರು ಮಾರುಕಟ್ಟೆಗೆ ವಿವಿಧ ಆಕಾರದ, ಅಳತೆಯ ಗಣಪನ ಮೂರ್ತಿಗಳು ಬಂದಿವೆ. ಸ್ಪೈಡರ್ ಮ್ಯಾನ್, ಕಮಾಂಡೋ, ಪುಟ್‌ಬಾಲ್, ಕುಸ್ತಿ ಪೈಲ್ವಾನ್, ಬಸವನ ಮೇಲೆ ನಿಂತಿರುವ, ಶಿವಲಿಂಗವನ್ನಿಡಿದು ನಿಂತಿರುವ, ಶಿವನ ಅವತಾರ, ಸರ್ಪ, ನವಿಲು, ಕಮಲ, ಗರುಡ, ಹಂಸ, ಬೈಕ್, ಬಸ್ ಮೇಲಿರುವ ಹಾಗೆಯೇ ವಿಶೇಷವಾಗಿ ಕೃಷ್ಣ ಮೀರಾ, ಶ್ರೀರಾಮನ ಅವತಾರದಲ್ಲಿ, ಕ್ರಿಕೆಟ್ ತಂಡದ ಆಟಗಾರ, ಚೋಟಾಭೀಮ್, ಹನುಮ, ಓಂ ಆಕಾರದಲ್ಲಿ ಹೀಗೆ ನೂರಾರು ಭಿನ್ನ - ವಿಭಿನ್ನ ವೇಷದ ಗಣಪ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾನೆ.
ಪರಿಸರ ಸ್ನೇಹಿ: ಕೆಲವೆಡೆ ನೀರಿನಲ್ಲಿ ಕರಗುವ ಜೇಡಿ ಮಣ್ಣಿನ ಮತ್ತು ಬಣ್ಣ ಇಲ್ಲದ ಮಣ್ಣಿನ ಗಣೇಶನನ್ನು ತಯಾರಿಸುತ್ತಿದ್ದರೇ ಹಲವೆಡೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳೇ ಗೋಚರಿಸುತ್ತಿವೆ. ಪರಿಸರ ಪ್ರೇಮಿ ಮಾರಾಟಗಾರರು ಕೂಡ ವಿಶೇಷ ಕಾಳಜಿವಹಿಸಿದ್ದಾರೆ. ಹಲವರು ಪರಿಸರ ಸ್ನೇಹಿ ಗಣೇಶವನ್ನು ಕೇಳುವುದರಿಂದ ಅವುಗಳನ್ನೂ ಸಿದ್ದಪಡಿಸಿದ್ದಾರೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪರಿಸರ ಸ್ನೇಹಿ ಗಣಪನ ಪೂಜಿಸಿ, ಪರಿಸರ ಉಳಿಸಲು ಶ್ರಮಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಮಾತು.
ಕಳೆದ ಬಾರಿಗಿಂತ ಗಣೇಶ ಮೂರ್ತಿಗಳ ದರ ಶೇ 20ರಷ್ಟು ದುಬಾರಿಯಾಗಿದೆ. ಆದರೂ ಕೂರಿಸುವುದನ್ನು ಬಿಡುವಂತಿಲ್ಲ. ಮೊದಲೆಲ್ಲ ಎರೆಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಕುಂಬಾರರಿಂದಲೇ ತಯಾರಾಗುತ್ತಿದ್ದವು. ಸರ್ಕಾರ ನಿಷೇಧಿಸಿದರೂ ಈಗ ಪಿಒಪಿಯಲ್ಲಿಯೇ ಮಾಡುತ್ತಾರೆ. ನೋಡಲು ಸುಂದರವಾಗಿದ್ದು ಭಕ್ತರನ್ನು ಆಕರ್ಷಿಸುವುದರಿಂದ ಖರೀದಿ ಅನಿವಾರ್ಯ, ದುಬಾರಿ ಅಂತ ಗಣೇಶ ಚತುರ್ಥಿ ಬಿಡುವಂತಿಲ್ಲವಲ್ಲ.
ದಿಲೀಪ್ ಭಂಡಾರಿ, ರಾಜರಾಜೇಶ್ವರಿ ನಗರ.
ಕೆಲವರು ವಿಶೇಷವಾಗಿ ಮೂರ್ತಿ ಮಾಡಿಕೊಡುವಂತೆ ಆರ್ಡರ್ ಕೊಡುತ್ತಾರೆ. ಸಾರ್ವಜನಿಕ ಗಣೇಶೋತ್ಸವ ಮಾಡುವವರು ಅಡ್ವಾನ್ಸ್ ಕೊಟ್ಟು ಬುಕ್ ಮಾಡಿ ಹೋಗುತ್ತಾರೆ, ಹೀಗಾಗಿ ಅವರ ಗಮನ ಸೆಳೆಯಲು ತಿಂಗಳ ಮೊದಲೇ ಗಣೇಶ ತರುತ್ತೇವೆ. ನಮ್ಮಲ್ಲಿರುವ ಉತ್ತರ ಪ್ರದೇಶ, ಅಸ್ಸಾಂನ ಕಲಾವಿದರೂ ವಿಶೇಷವಾಗಿ ರಚಿಸುತ್ತಾರೆ.
ನವೀನ್ ಕುಮಾರ್, ಗಣೇಶ ಮಾರಾಟಗಾರ
ಎಲ್ಲೆಡೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿಯಾದ ಮಣ್ಣಿನ ಹಾಗೂ ಬಣ್ಣ ರಹಿತ ಗಜಮುಖನನ್ನು ತಯಾರಿಸಬೇಕು. ಗಣೇಶ ಹಬ್ಬವನ್ನು ಪರಿಸರ ಹಬ್ಬವಾಗಿ ಆಚರಿಸಿ. ಬಳಸುವ ಮೂರ್ತಿ ಚಿಕ್ಕದಿರಲಿ ಮತ್ತು ಮಣ್ಣಿನ ಮೂರ್ತಿಯಾಗಿರಲಿ. ವಿಷಕಾರಿ ಬಣ್ಣ ಬಳಸಿದ ಮೂರ್ತಿಗಳನ್ನು ಖರೀದಿಸುವುದು ಬೇಡ. ಒಟ್ಟಿನಲ್ಲಿ ಪರಿಸರ ಮಾಲಿನ್ಯವಾಗದಂತೆ ಗಣೇಶನ ಆಯ್ಕೆಮಾಡಿ.
ಡಾ. ವಾಮನಾಚಾರ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಬಣ್ಣ ರಹಿತ ಗಣಪನ ತನ್ನಿ...
ರಾಸಾಯನಿಕಯುಕ್ತ ಗಣೇಶನ ವಿಗ್ರಹ ಬಳಕೆಯ ಬದಲು ಬಣ್ಣ ರಹಿತ ಮಣ್ಣಿನ ವಿಗ್ರಹಗಳನ್ನು ಪೂಜಿಸಬೇಕಾಗಿದೆ. ಪ್ಲಾಸ್ಟಿಕ್ ಮತ್ತು ರಾಸಾಯನಿಕ ಬಣ್ಣಗಳ ಬಳಕೆಯಿಂದಾಗಿ ಪ್ರಕೃತಿ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿದೆ. ನೀರು ಕಲುಷಿತವಾಗುತ್ತದೆ. ಭೂಮಿಯ ರಕ್ಷಾ ಕವಚದಂತಿರುವ ಓಜೋನ್ ಪದರ ಸವೆಯುತ್ತಿದೆ. ಹವಾಮಾನದಲ್ಲಿಯೂ ವ್ಯತ್ಯಾಸವಾಗಿದ್ದು, ಪಕ್ಷಿಗಳ ಸಂತತಿ ಕ್ಷೀಣಿಸಿದೆ. ಈ ಬಾರಿಯಾದರೂ ಗಣೇಶ ಹಬ್ಬಕ್ಕೆ ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಮುಕ್ತ ವಿಗ್ರಹಗಳನ್ನು ಬಳಸಬೇಕಾಗಿದೆ. ಮಣ್ಣಿನ ಗಣಪ ಬಳಸೋಣ, ನೀರಿನ ಮೂಲ ಉಳಿಸೋಣ.
ಪಾಯಿಂಟ್ಸ್...
* ರಾಸಾಯನಿಕ ಮಿಶ್ರಿತ ಬಣ್ಣ ಲೇಪಿಸುವುದರಿಂದ ಪರಿಸರಕ್ಕೆ ಧಕ್ಕೆ
*ಕೆರೆ, ಬಾವಿ, ಕುಂಟೆಗಳಲ್ಲಿ ವಿಸರ್ಜಿಸುವುದರಿಂದ ನೀರು ಮಲಿನ.
*ಕರಗರ ಗಣೇಶಗಳಿಂದ ಜಲಚರಗಳ ಪ್ರಾಣಕ್ಕೂ ಸಂಚಕಾರ
*ಚಿಕ್ಕ ಗಾತ್ರದ ಮೂರ್ತಿಗಳ ಪ್ರತಿಷ್ಠಾಪಿಸಿ ಪೂಜಿಸಿ, ವಿಸರ್ಜಿಸಿ.
Subscribe to:
Posts (Atom)