Sunday, January 6, 2013



 * ಮಾಲತೇಶ್ ಅರಸ್ ಹರ್ತಿಮಠ



ರಮಣೀಯ ರಾಮಗಿರಿ ಕರಿಸಿದ್ದೇಶ್ವರ ಬೆಟ್ಟ.

 * ಡಿಸೆಂಬರ್ 31 ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ
 * ರಾಜ್ಯದಲ್ಲಿಯೇ ಜರುಗುವ ವಿನೂತನ ಬಾಳೆಹಣ್ಣು ಪರಿಷೆ
 * ಬೆಟ್ಟದ ತುಂಬಾ ದೀಪಗಳ ಕಲರವ
 * 323 ಮೆಟ್ಟಿಲುಗಳ ಮೇಲೆ ಭಕ್ತರ ಸ್ವರ್ಗ
 * ರೋಗಗಳಿಗೆ ಸಂಜೀವಿನಿ ಬೆಟ್ಟದ ಮೇಲಿನ ಬಾವಿ ನೀರು
 * ತುತ್ತ  ತುದಿಯಲಿ ಶಿವಲಿಂಗವಿರುವ ‘ಮೇಲ್ದುರ್ಗ ’
 * ಹಸಿರ ಸೊಬಗಿನ ವೈಭವ, ಗಂಧದ ಬಟ್ಟಲು ಹೂಗಳ ಸ್ವಾಗತ
 * ಬರ ಬಂದರೇ ತುಂಬುವ ಬಾವಿ.

 ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ, ಹೂ ಬಿರಿದು ನಿಂತ ಗಿಡಗಂಟೆಗಳು, ಗಂಧ, ಹೊನ್ನೆ, ಬೀಟೆ ಸೇರಿದಂತೆ ವಿವಿಧ ಬಗೆಯ ಮರಗಳ ಸುಮಧುರ ಘಮಲು, ಸುವಾಸನೆಯಿಂದ ಕೂಡಿದ ವನ ಸುಮಗಳು, ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಕಣ್ಣ ತುಂಬಾ ಕಾಣುವ  ಜೇನು  ಗೂಡುಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು,  ಕಿವಿಗಿಂಪಾದ ಜಾಗಟೆ ನಿನಾದ, ಕರಡಿಗೆ ಸದ್ದು....
 ಸುಂದರ ಬೆಟ್ಟಗಳ ನಡುವೆ ಕಾಣುವ ಪಾವನ ಕ್ಷೇತ್ರ ಅದುವೇ.. ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ ಗುಡ್ಡಗಳ ನಡುವಿನ ರಾಮಗಿರಿ ಒಂದು ಸುಂದರ ತಾಣ. ಹಚ್ಚ ಹಸಿರಿನ ಬೆಟ್ಟದಲ್ಲಿ ನೆಲೆ ನಿಂತಿರುವ ದೇವಗೆ ನಿತ್ಯ ಪರಿಸರ ಅಭಿಷೇಕ. ನಿತ್ಯ ಸಹಸ್ರಾರು ಭಕ್ತರ ಭೇಟಿ ಮತ್ತು  ಬೆಟ್ಟದ ಮುಂಭಾಗದ ಕಾಣುವ ಕೆರೆಯಿಂದಾಗಿ ಇಲ್ಲಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ.
 ಕೋಟೆಗಳ ನಾಡೆಂದೇ ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸುಪ್ರಸಿದ್ದ  ಕ್ಷೇತ್ರವೆಂದೇ ಹೆಸರು ಪಡೆದಿರುವುದೇ ಹೊಳಲ್ಕೆರೆ ತಾಲೂಕಿನ ರಾಮಗಿರಿ ಸುಕ್ಷೇತ್ರ. ಇಲ್ಲಿ ಕನಸುಗಳು ಅರಳುತ್ತವೆ. ಮನಸುಗಳು ಸಂಭ್ರಮಿಸುತ್ತವೆ. ಭಕ್ತಿಯ ಜತೆಗೆ ಇಲ್ಲಿ ಪರಿಸರ ದೇವತೆಯೇ ಎದ್ದು ಬರುತ್ತಾಳೆ ಎಂಬ ಭಾವನೆ ಮೂಡುತ್ತದೆ.
    323 ಮೆಟ್ಟಿಲು:
 ರಾಮಗಿರಿ ಕ್ಷೇತ್ರ 21 ದೇವಾಲಯಗಳನ್ನು ಒಳಗೊಂಡಿರುವ  ಹೋಬಳಿ. ಇಲ್ಲಿ ವಿರಕ್ತಮಠ, ಮರಿದೇವರ ಮಠ, ಚರಂತಮಠಗಳೂ ಇವೆ. ಇಲ್ಲಿರುವ ಈ ಕರಿಸಿದ್ದೇಶ್ವರ ಸ್ವಾಮಿ ಮತ್ತು ವೀರಭದ್ರಸ್ವಾಮಿ ಬೆಟ್ಟ ಹತ್ತಲು 323 ಮೆಟ್ಟಿಲು ಹತ್ತಬೇಕು. ಬೆಟ್ಟವನ್ನು ಪ್ರವೇಶಿಸಿದಾಗ ಎಡಭಾಗದಲ್ಲಿ ಗಜಾನನ ದೇವಾಲಯ ಬಲಭಾಗದಲ್ಲಿ ಬಸವೇಶ್ವರ ದೇವಾಲಯ. ಮುನ್ನೆಡೆದರೇ ಅಲ್ಲಿ  ಪಾದ ಘಟ್ಟ, ನಡುವೆ ಬೈರಸಿದ್ದೇಶ್ವರ ಸ್ವಾಮಿ ಗುಹೆ. ಮೆಲ್ಲನೇ ಏರುತ್ತಲೇ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಾಲಯ ಮತ್ತು ಉದ್ಬವಲಿಂಗ ಗೋಚರವಾಗುತ್ತದೆ. ಬಲಭಾಗದಲ್ಲಿ ವೀರಭದ್ರೇಶ್ವರ ದೇಗುಲವೂ ರಾರಾಜಿಸುತ್ತದೆ.
   ಬೆಟ್ಟದಲ್ಲಿ ಬಾವಿ :
 ಬೆಟ್ಟದ ಮೇಲಿರುವ ದೇವಾಲಯದೊಳಗೆ ಗಂಗಮ್ಮನ ಬಾವಿ ಇದೆ. ಇದು ಮಳೆ ಬಂದಾದ ನೀರು ತಳ ತಲುಪುತ್ತದೆ. ಮಳೆ ಬಾರದೇ ಬರ ಎದುರಾಗುವ ವೇಳೆ ಬಾವಿ ನೀರು ಮೇಲೆ ಬರುವ ಮೂಲಕ  ಮುನ್ಸೂಚನೆ ನೀಡುತ್ತದೆ.  ಈ ಬಾವಿ ಕಾಶಿಯಿಂದ ಸಂಪರ್ಕ ಇದೆ ಎಂಬ ನಂಬಿಕೆ.   ಈ ನೀರು ಹಲವು ರೋಗಗಳಿಗೆ ಸಂಜೀವಿನಿಯಿದ್ದಂತೆ. ಬೆಟ್ಟದ ತುತ್ತ ತುದಿಯನ್ನ ಮೇಲ್ದುರ್ಗವೆಂದು ಕರೆಯುತ್ತಾರೆ ಇಲ್ಲಿಯೂ ಉದ್ಬವ ಲಿಂಗವಿದೆ. ಅದಕ್ಕೆ ಹರಿಹರೇಶ್ವರ ಎಂಬ ಹೆಸರಿದೆ.
   ಪುರಾಣ ಪ್ರಸಿದ್ದ:
 ರಾಮಾಯಣದಲ್ಲಿ ಈ ತಾಣವನ್ನು ಹಾಲುರಾಮೇಶ್ವರ, ರಾಮದೇವರು ಎನ್ನಲಾಗುತ್ತಿತ್ತು ಎಂಬ ನಂಬಿಕೆ ಇದೆ. ದೇವರು ಬೆಟ್ಟದಲ್ಲಿ ನೆಲೆಸಿರುವ ಕಾರಣ ರಾಮ ಮತ್ತು ಗಿರಿ (ಬೆಟ್ಟ) ಸೇರಿ ರಾಮಗಿರಿ ಎಂಬ ಹೆಸರು ಬಳಕೆಗೆ ಬಂದಿದೆ ಎನ್ನಲಾಗಿದೆ. ಜೊತೆಗೆ ಇಲ್ಲಿ ಸಾಧು ಸಂತರು ನೆಲೆಸಿ ಸ್ಥಳದ ಮಹಿಮೆ ಮತ್ತಷ್ಟು ಹೆಚ್ಚಿಸಿದ್ದಾರೆ. ಇಲ್ಲಿ ಪ್ರತಿ ವರ್ಷವೂ ಭಕ್ತರು ಕರಿಸಿದ್ದೇಶ್ವರನಿಗೆ ಮಾಲೆ ಹಾಕುತ್ತಾರೆ.
 ಕಾರ್ತಿಕೋತ್ಸವ ;
 ಬಟ್ಟೆಯನ್ನು ಸಿಂಬೆ ರೀತಿ ಸುತ್ತಿ ತಯಾರಾದ ದೀಪಗಳನ್ನು ಬೆಟ್ಟದ ತುಂಬಾ ಮತ್ತು ಬೆಟ್ಟಕ್ಕೆ ಹತ್ತುವ ಪ್ರತಿ ಮೆಟ್ಟಿಲುಗಳ ಎರಡು ಬದಿ ಹಚ್ಚುವ ಮೂಲಕ ದೀಪೋತ್ಸವ ಕಾರ್ತಿಕೋತ್ಸವ ನಡೆಯುತ್ತದೆ. ಇದು ಲಕ್ಷ ದೀಪೋತ್ಸವ ಎಂದೇ ಖ್ಯಾತಿಗಳಿಸಿದೆ.
   ಬಾಳೆ ಪರಿಷೆ :
  ಈ ಜಾತ್ರೆಯ ವಿಶೇಷ ಬಾಳೆಹಣ್ಣಿನ ಪರಿಷೆ. ಉತ್ಸವದ ಕೇಂದ್ರ ಬಿಂದುವೆಂದರೇ ಬಾಳೆಹಣ್ಣಿನ ರಾಶಿ. ಭಕ್ತರು ಹರಕೆಯ ಬಾಳೆಹಣ್ಣುಗಳನ್ನು ಬೆಟ್ಟದ ಮುಂಭಾಗದ ದ್ವಾರ ಬಾಗಿಲು ಮುಂಭಾಗ ದೊಡ್ಡ ರಾಶಿ ಹಾಕಿ ಪೂಜೆ ಮಾಡುತ್ತಾರೆ.  ಈ ರಾಶಿ ನೋಡಲು ಒಂದು ಸುಂದರ ಹಳದಿ ಬೆಟ್ಟದಂತೆ ಕಾಣುತ್ತದೆ. ನಂತರ ಈ ರಾಶಿ ಬಾಳೆಹಣ್ಣುಗಳನ್ನು ಪ್ರಸಾದವಾಗಿ ಹಂಚಲಾಗುತ್ತದೆ.  ಇದರ ಜೊತೆ ಉತ್ಸವ ಹೂವಿನ ಉತ್ಸವ, ಕದಳಿ ಸೇವೆ, ಪಲ್ಲಕ್ಕಿ ಉತ್ಸವ, ವೀರಗಾಸೆ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.
 ಬಾಳೆ ಮಂಟಪ :
 ಕರಿಸಿದ್ದೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಕರಿಯಮ್ಮ ದೇವಿಯನ್ನು ಚರಂತ ಮಠದ ಮುಂಭಾಗ ಬಾಳೆ ದಿಂಡು, ವೀಳ್ಯದ ಎಲೆ ಮತ್ತು ನಾನಾ ರೀತಿ ಹೂಗಳನ್ನು ಬಳಸಿ ಮಂಟಪ ನಿರ್ಮಿಸಲಾಗುತ್ತದೆ. ಅಲ್ಲಿ ದೇವರನ್ನು ಪವಡಿಸಲಾಗುತ್ತದೆ. ಇದು ವಿಶೇಷವಾಗಿ ಬಾಳೆ ದಿಂಡಿನ ಮಂಟಪವಾಗಿರುತ್ತದೆ. ತಾವೂ ಕೂಡ ರಾಮಗಿರಿ ಕ್ಷೇತ್ರಕ್ಕೊಮ್ಮೆ ಭೇಟಿ ಕೊಡಿ. ಪವಾನರಾಗಿ.
 
     ಬಾಕ್ಸ್ :
   ಎರಡು ದಾರಿಗಳು:
 ಇಲ್ಲಿ ಶ್ರಾವಣ ಬಂದರೆ ಸಾಕು ಎಲ್ಲಿಲ್ಲದ ಹಿಗ್ಗು. ಇನ್ನೂ ಕಡೇ ಕಾರ್ತಿಕ ಬಂದ್ರೆ ಊರ ಹಬ್ಬವೇ ನಡೆಯುತ್ತದೆ. ಇನ್ನು ಬೆಟ್ಟವನ್ನು ತಲುಪಲು ಎರಡು ದಾರಿಗಳಿವೆ. ಒಂದು ಮೆಟ್ಟಿಲುಗಳಿಂದ ಹತ್ತುವುದು. ಇನ್ನೊಂದು ಸಾಹಸದ ದಾರಿ. ಸಾಹಸ ಪ್ರವೃತ್ತಿಯ ಚಾರಣಿಗಳಿಗೆ ಕಲ್ಲು ಮುಳ್ಳಿನ ದಾರಿ ಇಷ್ಟವಾಗುತ್ತದೆ. ಬೆಟ್ಟದೊಳಗೊಂದು ರಸ್ತೆ ಇದ್ದು ಕಲ್ಲು ಮುಳ್ಳುಗಳ ಹಾದಿಯನ್ನು ಹಾಸುತ್ತದೆ.
 
   ಬಾಕ್ಸ್:
 ಡಿಸೆಂಬರ್ 31 ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ
 ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯ ರಾಮಗಿರಿ ಐತಿಹಾಸಿಕತೆಯನ್ನು ಹೊಂದಿರುವ ಮಹಾಕ್ಷೇತ್ರ. ಹೊಳಲ್ಕೆರೆ ತಾಲೂಕು ರಾಮಗಿರಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ ಹಾಗೂ ವಿನೂತನ ಬಾಳೇಹಣ್ಣು ಪರಿಷೆ  ಡಿಸೆಂಬರ್ 31ರಂದು ನಡೆಯಲಿದೆ.  ನಡು ರಾತ್ರಿಯಲ್ಲಿ ಹಬ್ಬದ ಸಂಭ್ರಮದ ಜೊತೆಗೆ ಹೊಸವರ್ಷದ ಸಂಭ್ರವನ್ನು ಆಚರಿಸಬಹುದು. ರಾಜ್ಯದ ನಾನಾ ಭಾಗಗಳಿಂದ ಮೂರರಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ.  ಇದೀಗ ಇಲ್ಲಿ ಕಾಣುತ್ತಿರುವ ಪ್ರಕೃತಿ ವರ್ಣಕ್ಷೇತ್ರದ ಬೆಟ್ಟ ವಿದ್ಯುತ್ ಹಾಗೂ ಅಗ್ನಿ ದೀಪಾಲಂಕಾರ ಸಜ್ಜಾಗಿದೆ.

   ಬಾಕ್ಸ್ :
   ಹಸಿರ ಸೊಬಗು ಕಾಣಾ.
   ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ ಇದು. ಬೆಟ್ಟದ ತಪ್ಪಲು, ಹೂ ಬಿರಿದು ನಿಂತ ಗಿಡ ಗಂಟೆಗಳು, ವಿವಿಧ ಬಗೆಯ ಮರಗಳ ಘಮಲು, ಸುವಾಸನೆಯಿಂದ ಕೂಡಿದ ವನಸುಮಗಳ ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು, ಇವೆಲ್ಲವೂ ಬೆಟ್ಟಹೊಕ್ಕರೇ ಸಾಕು ನಿಮಗೆ ಸಿಗುತ್ತವೆ.

 ಪೋಟೋ ; ಸುಂದರ ಬೆಟ್ಟದ ಮತ್ತು ದೇಗುಲ ಪೋಟೋಗಳಿವೆ

No comments:

Post a Comment