Wednesday, November 27, 2013

ಅಣಬೆ : ಮಳೆಗಾಲದ ಗೆಳೆಯ, ಚಳಿಗಾಲದ ಸಂಗಾತಿ


*ಹಲವು ರೋಗಗಳಿಗೆ ರಾಮಬಾಣ
*ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿ
*ಕ್ಯಾನ್ಸರ್ ಬರುವ ಸಾಧ್ಯತೆ ಶೇ 70 ರಷ್ಟು ಕಡಿಮೆ
*ಗುರುಕುಲ, ಋಷಿ ಸಂಸ್ಕೃತಿ ಕಾಲದಿಂದಲೂ ಆಯುರ್ವೇದಗಳಿಗೆ ಬಳಕೆ
-ಮಾಲತೇಶ್ ಅರಸ್ ಹರ್ತಿಮಠ
ಅಣಬೆ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಹೌದು ವರ್ಷಕ್ಕೊಮ್ಮೆ ಅಣಬೆ ತಿನ್ನದೇ ಹೋದರೇ ಅದು ರುಚಿಸದು.
ಏಕೆಂದರೇ ಹಳ್ಳಿಯ ಮಂದಿ ವರ್ಷಕ್ಕೊಮ್ಮೆಯಾದರೂ ಅಣಬೆ ತಿನ್ನ ಬೇಕೆಂದು ಕೊಂಡಿರುತ್ತಾರೆ. ಪ್ರಕೃತಿಯ ವಿಶೇಷ ಕೊಡುಗೆಯಾಗಿ ಅಣಬೆ ಮಳೆಗಾಲದಲ್ಲಿ ಆಗಮಿಸಿ ಚಳಿಗಾಲದಲ್ಲಿ ಎಲ್ಲೆಡೆ ಸಿದ್ದವಾಗಿರುತ್ತದೆ. ಕಾಡಿನ ಹಾದಿಯಲ್ಲಿ ಸಾಗುತ್ತಾ ಹೋಗುತ್ತಿದ್ದರೇ ಸಾಕಷ್ಟು ಕಣ್ಣಿಗೆ ಕಾಣುತ್ತವೆ.
ಇದರ ಭೋಜನ ನಿಜಕ್ಕೂ ಮಾಂಸಹಾರದ ರುಚಿಯನ್ನು ಹೊರಹಾಕುತ್ತದೆ ಎನ್ನುತ್ತಾರೆ ಗ್ರಾಮೀಣರು. ಮಳೆಗಾಲ ಬಂತು ಎಂದರೇ ಸಾಕು ಮನೆ ಮನೆಗಳಲ್ಲಿ ಈ ಅಣಬೆ ಸಾಂಬಾರು ವಾಸನೆ ಮೂಗಿಗೆ ಬಡಿಯುತ್ತದೆ.
ಇದು ಕೇವಲ ಈಗಿನದಲ್ಲಿ ಪುರಾತನ ಕಾಲದಿಂದಲೂ ಅಂದರೇ ಗುರುಕುಲ, ಋಷಿ ಸಂಸ್ಕೃತಿ ಕಾಲದಿಂದಲೂ ಆಯುರ್ವೇದಗಳಿಂದ ಬಳಕೆಯಾಗಿದೆ.
ರೋಗಗಳಿಗೆ ರಾಮಬಾಣ:
ಶಿಲೀಂದ್ರ ಜಾತಿಗೆ ಸೇರಿದ ಅಣಬೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪ್ರೋಟಿನ್, ವಿಟಮಿನ್, ಮಿನಿರಲ್, ಅಮೋನೋ ಆಸಿಡ್ ಎಂಬ ಅಂಶವನ್ನು ಹೊಂದಿದೆ. ಅಲ್ಲದೆ ರೋಗ ನಿರೋಧಕ ಶಕ್ತಿ ಹೊಂದಲು ಇದು ಅತ್ಯಂತ ಮುಖ್ಯವಾಗಿದ್ದು ಹಲವು ರೋಗಗಳಿಗೆ ರಾಮಬಾಣ ಎನಿಸಿದೆ.
ಇದನ್ನು ಹಲವೆಡೆ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ. ಅಣಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ, ಮತ್ತು ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಜಾತಿಯ ಅಣಬೆಗಳನ್ನು ಕಾಣಬಹುದಾಗಿದೆ. ಆದರೇ ಮಳೆಗಾಲದಲ್ಲಿ ದೊರೆಯುವ ಪ್ರಕೃತಿ ದತ್ತ ನೈಸರ್ಗಿಕ ಅಣಬೆ ಎಲ್ಲಿಲ್ಲದ ಬೇಡಿಕೆ.
ಸಾಮಾನ್ಯವಾಗಿ ಈ ಅಣಬೆ ಮಳೆಗಾಲದಲ್ಲಿ ಸಿಡಿಲು ಗುಡುಗಿನ ಸದ್ದು ಆರಂಭವಾದ ಕೂಡಲೇ ಇವು ನೆಲದಿಂದ ಹುಟ್ಟುತ್ತವೆ ಎಂಬ ನಂಬಿಕೆ ಇದೆ. ಇವು ಬೆಳೆದಾಗ ಇವುಗಳ ಮೇಲೆ ಮರದ ಎಲೆಗಳು ಬಿದ್ದರೇ ಹಾಳಾಗುತ್ತವೆ. ಹಲವೆಡೆ ಇವು ಒಂದೊಂದಾಗಿ ಕಣ್ಣಿಗೆ ಗೋಚರಿಸಿದರೇ ಇನ್ನೂ ಹಲವೆಡೆ ರಾಶಿರಾಶಿಯಾಗಿ ಕಾಣ ಸಿಗುತ್ತವೆ.
ವಿವಿಧ ಬಗೆಗಳು:
ರುಚಿಕಟ್ಟಾದ ಸುವಾಸನೆ ಭರಿತ ಸೃಷ್ಟಿಸುವ ಅಣಬೆಯಲ್ಲಿ ವಿವಿಧ ನಮೂನೆ ಕಾಣಬಹುದು. ಪುಟಾಣಿ ಅಣಬೆ, ದೊಡ್ಡ ಅಣಬೆ, ಬಿಳಿ ಅಣಬೆ, ಬೋಗಿ ಅಣಬೆ, ಎಣ್ ಅಣಬೆ, ಕಲ್ ಅಣಬೆ ಹೀಗೆ ನಾನಾ ಬಗೆಯ ಅಣಬೆ ಕಾಣಬಹುದಾಗಿದೆ. ಹೀಗೆ ನಾನಾ ಬಗೆಯ ಅಣಬೆಗಳಿದ್ದರೂ ಅವುಗಳಲ್ಲೂ ವಿಷಪೂರಿತ ಅಣಬೆಗಳೂ ಇವೆ. ಗ್ರಾಮೀಣರು ನೋಡಿದ ಕೂಡಲೇ ಇದು ವಿಷಪೂರಿತ ಎಂದು ತಟ್ಟನೇ ಕಂಡು ಹಿಡಿಯುತ್ತಾರೆ. ಹೀಗಾಗಿ ಬಳಸುವಾಗ ಎಚ್ಚರ ಅತ್ಯಗತ್ಯ.
ಕೆಲವು ಬಾರಿ ಅಣಬೆಗಳ ಮೇಲೆ ಕ್ರಿಮಿ ಕೀಟಗಳು ವಿಷಾಹಾರಿ ಜಂತುಗಳು ಸಂಚರಿಸಿದ್ದರೂ, ಜೊಲ್ಲನ್ನು ಸ್ಪುರಿಸಿದ್ದರೇ ಅದು ವಿಷಯುಕ್ತವಾಗಿರುತ್ತದೆ , ಹೀಗಾಗಿ ನೈಸರ್ಗಿಕ ಅಣಬೆ ಎಷ್ಟು ಒಳ್ಳೆಯದೋ ಅಷ್ಟೇ ಅಪಾಯಕಾರಿ ಎನ್ನುತ್ತಾರೆ ರೈತ ಸಂಗೇನಹಳ್ಳಿ ರಾಮಪ್ಪ.
ಅಣಬೆ ಸಸ್ಯಹಾರಿ ಆಗಿದ್ದರೂ ಅದನ್ನು ಮಾಂಸಹಾರದ ಗುಂಪಿಗೆ ಸೇರಿಸಲಾಗಿದೆ. ಈಗ ಎಲ್ಲರೂ ಮಾಂಸಹಾರವನ್ನ ಸಸ್ಯಹಾರವಂತೆ ಸೇವಿಸುವುದು ಮಾಮೂಲಾಗಿರುವುದರಿಂದ ಕೆಲವರನ್ನು ಹೊರತು ಪಡಿಸಿ ಇದನ್ನು ಎಲ್ಲರೂ ಬಳಸುತ್ತಾರೆ.
ರೈತರಿಗೆ ಉತ್ತಮ ಲಾಭ:
ಅಣಬೆಯನ್ನು ಇದೀಗ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಆರ್ಥಿಕವಾಗಿ ಸದೃಢರಾಗಲು ರೈತರೂ ಇದೀಗ ಹೆಚ್ಚು ಹೆಚ್ಚು ಅಣಬೆ ಬೇಸಾಯದತ್ತ ಗಮನಹರಿಸುತ್ತಿದ್ದಾರೆ.
ಅಣಬೆಯಿಂದಾಗುವ ಪ್ರಯೋಜನ:
*ಪ್ರತಿ ದಿನವೂ ಒಂದು ಅಣಬೆಯನ್ನು ಸೇವಿಸುತ್ತಿದ್ದರೇ ಕ್ಯಾನ್ಸರ್ ಬರುವ ಸಾಧ್ಯತೆ ಶೇ 70 ರಷ್ಟು ಕಡಿಮೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
* ಸ್ತನ ಕ್ಯಾನ್ಸರ್‌ಗೆ ಇದು ರಾಮಬಾಣ ಎನ್ನಲಾಗಿದೆ. ಶೇ93 ರಷ್ಟು ಸ್ತನ ಕ್ಯಾನ್ಸರ್ ತಗುಲುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ
* ಇದು ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ. ಇದರಲ್ಲಿರುವ ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.
* ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿ ಎಂದರೇ ಅದು ಅಣಬೆ.
* ಎಲುಬಿಗೆ ಶಕ್ತಿಯನ್ನು ನೀಡುವ ಜೊತೆಗೆ ಕ್ಯಾಲ್ಸಿಯಂ, ರಕ್ತ ಹೀನತೆ ನಿವಾರಿಸುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ.
* ವಿಟಮಿನ್ ಬಿ 2 ಶಕ್ತಿಯನ್ನು ನೀಡಲು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ತುಂಬಾ ಅಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ 2 ಮತ್ತು ವಿಟಮಿನ್ ಬಿ3 ಇರುವುದರಿಂದ ದೇಹಕ್ಕೆ ಇದು ತುಂಬಾ ಉತ್ತಮ

ಅಣಬೆಯಲ್ಲಿ ಬೊಜ್ಜಿನ ಅಂಶವಿಲ್ಲ. ಕಡಿಮೆ ಕಾರ್ಬೋ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವುದಿಂದ ಬೊಜ್ಜು ಕರಗಿಸುವುದು ಸುಲಭ. ಇದು ದೇಹದಲ್ಲಿರುವ ಅಧಿಕ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮಧುಮೇಹ ಇರುವ ಜನರಿಗೆ ಇದು ಅತ್ಯುತ್ತಮ ಎನ್ನುತ್ತಾರೆ. ಡಾ. ವೆಂಕಟೇಶ್ ಅವರು.

ಅನುದಾನವಿಲ್ಲದೆ ಬಳಲುತ್ತಿದೆ ಕನಕದಾಸ ಅಧ್ಯಯನ ಕೇಂದ್ರ



]
 *ಸಾಕಷ್ಟು ಸಂಶೋಧನೆಗಳ ಮಾಡಿದ್ರೂ ಪ್ರೋತ್ಸಾಹವಿಲ್ಲ *ಹುಸಿಯಾಗುತ್ತಿದೆ ಸರ್ಕಾರಿ ಸಹಾಯದ ನಿರೀಕ್ಷೆ
- ಮಾಲತೇಶ್ ಅರಸ್ ಹರ್ತಿಮಠ
 ಬೆಂಗಳೂರು: ರಾಜ್ಯ ಸರ್ಕಾರ ಕನಕ ಜಯಂತಿಗೆ ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಲೇ ಬಂದಿದ್ದರೂ ಕರ್ನಾಟಕ ಸರ್ಕಾರವೇ ಸ್ಥಾಪಿಸಿರುವ ರಾಷ್ಟ್ರೀಯ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಅನುದಾನ ನೀಡಿಲ್ಲ!
 ಸಂತಕವಿ ಕನಕದಾಸರ ಸಾಮಾಜಿಕ, ಸಾಂಸ್ಕೃತಿಕ, ಪಾರಮಾರ್ಥಿಕ ಚಿಂತನೆಗಳ ಜತೆಗೆ ಅವರ ಕಾವ್ಯಗಳು, ಕೀರ್ತನೆಗಳು,ದರ್ಶಿಸಲಪೇಕ್ಷಿಸುತ್ತಿರುವ ದಿಕ್ಕು ಮತ್ತು ಮಾನವೀಯ ಸಂದೇಶಗಳ ಕುರಿತು ಹೊಸ ಹೊಸ ಅಧ್ಯಯನಗಳು, ಸಂಶೋಧನೆಗಳು, ಪ್ರಕಟಣೆಗಳು ಹಾಗೂ ಇವುಗಳ ಪ್ರೋತ್ಸಾಹ ಮತ್ತು ಪ್ರಸಾರದ ಉದ್ದೇಶದಿಂದ ಸ್ಥಾಪಿಸಿರುವ ಈ ಸಂಶೋಧನಾ ಕೇಂದ್ರ ಇದೀಗ ಸರ್ಕಾರ ಮುಂದೆ ಅನುದಾನಕ್ಕಾಗಿ ಕೈ ಕಟ್ಟಿ ನಿಲ್ಲಬೇಕಿದೆ.
 ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ಅಧ್ಯಯನ ಕೇಂದ್ರವು ರಾಜ್ಯಾದ್ಯಂತ ಈಗಾಗಲೆ ಸಾಕಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದರೂ ಆರ್ಥಿಕ ಪ್ರೋತ್ಸಾಹವಿಲ್ಲದೆ ಬಸವಳಿದು ಹೋಗಿದೆ. ಕನಕದಾಸರ ಜೀವನ, ಸಂದೇಶ ಮತ್ತು ಸಾಹಿತ್ಯ ಕುರಿತಂತೆ ಅಧ್ಯಯನ, ಸಂಶೋಧನೆ, ಚಿಂತನೆ ನಡೆಸುವ ಈ ಕೇಂದ್ರಕ್ಕೆ ಈಗ ಬಲ ಸಿಗಬೇಕಿದೆ.
 ಕೇಂದ್ರದ ಕಾರ್ಯವೇನು?:
 ಕನಕದಾಸರ ದರ್ಶನವನ್ನು ಸಂಗೀತ- ದೃಶ್ಯ ಮಾಧ್ಯಮದಲ್ಲಿ ಪ್ರಚುರಪಡಿಸುವುದು, ಅವರ ಬದುಕು ಮತ್ತು ಕೃತಿ ದೇಶದ ಹಾಗೂ ವಿಶ್ವದ ಇತರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು, ಅಂಥ ಪ್ರಕಟಣೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಕೇಂದ್ರ ಮಾಡುತ್ತಿದೆ. ಗ್ರಂಥಗಳು, ಪತ್ರಿಕೆಗಳು, ಛಾಯಾಚಿತ್ರಗಳು, ಮೈಕ್ರೋ ಫಿಲಂಗಳು ಸಲಕರಣೆಗಳನ್ನುಳ್ಳ ಆಕರಗಳ ಗ್ರಂಥಾಲಯಗಳನ್ನು ಸ್ಥಾಪಿಸುವುದು. ಸಂಶೋಧನಾರ್ಥಿ ಹಾಗೂ ಸಾಹಿತ್ಯಾಭಿಮಾನಿಗಳಿಗೆ ಪರಾಮರ್ಶನ ಕಾರ್ಯಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡುವುದು. ಕನಕದಾಸರ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ಅಕಾಡೆಮಿಕ್ ಹಾಗೂ ಸಾರ್ವಜನಿಕ ವಲಯಗಳಲ್ಲಿ ಪ್ರಸ್ತುತಿಪಡಿಸುವುದು. ಹೊರ ರಾಜ್ಯ, ವಿದೇಶಗಳಿಗೆ ವಿದ್ವಾಂಸರನ್ನು ಕರೆದೊಯ್ದು ವಿಚಾರ ತಿಳಿಸುವ ಕೆಲಸ ಮಾಡುತ್ತಿದೆ.
 ಕನಕದಾಸರು ಹಾಗೂ ದಾಸ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯರಿಗೆ 75,000ರೂ. ನಗದು ಸೇರಿ ಕನಕ ಗೌರವ ಪುರಸ್ಕಾರ ಹಾಗೂ ಯುವ ಸಂಶೋಧಕರಿಗೆ 50,000 ರೂ. ನಗದು ಸೇರಿ ಕನಕ ಯುವ ಪುರಸ್ಕಾರ ನೀಡುತ್ತಿದೆ. ಇದಲ್ಲದೆ 3 ಸಂಶೋಧನಾರ್ಥಿಗಳಿಗೆ ತಲಾ 1 ಲಕ್ಷ ರೂ. ಫೆಲೋಶಿಪ್ ನೀಡಿ ವಿವಿಧ ವಿಷಯಗಳ ಮೇಲೆ ಸಂಶೋಧನೆ ನಡೆಸುವುದು ಸೇರಿ ಮತ್ತಿತರ ಕೆಲಸಗಳನ್ನು ಕೇಂದ್ರ ಮಾಡುತ್ತಿದೆ.
 ಈವರೆಗೆ ಏನೇನು ಮಾಡಿದೆ?
 ಕನಕದಾಸರ ಮರುದರ್ಶನ ಆಯಾಮಗಳು, ಸಾಹಿತ್ಯದಲ್ಲಿ ಜಾನಪದೀಯ- ಪುನಾಗ್ರಹಿಕೆಯ ನೆಲೆಗಳು, ಕೃತಿಗಳಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ, ಸಾಮಾಜಿಕ ಸಂವೇದನೆಯ ನೆಲೆಗಳು, ವರ್ತಮಾನದ ಯುವ ನೋಟ, ಹೀಗೆ ಅನೇಕ ಗೋಷ್ಠಿ, ಸಂವಾದ ಕಾರ್ಯಕ್ರಮಗಳನ್ನು ನಡೆಸಿದೆ. ಅಲ್ಲದೆ ಮಂಡಿತವಾದ ಪ್ರಬಂಧಗಳನ್ನು ಮತ್ತು ಸಂವಾದಗಳ ಪುಸ್ತಕ ಪ್ರಕಟಿಸಿದೆ. ಕನಕದಾಸರ ಆಶಯಗಳನ್ನು ಕುರಿತಂತೆ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿದೆ. ಕಾಲುದಾರಿ ಸಂತ ಪರಂಪರೆ ಮತ್ತು ಕನಕದಾಸರು ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿದ್ದು, ರಾಷ್ಟ್ರಮಟ್ಟದಿಂದ 34 ವಿದ್ವಾಂಸರನ್ನು ಕರೆತಂದು 700ಜನ ವಿದ್ಯಾರ್ಥಿಗಳಿಗೆ ವಿಚಾರವನ್ನು ತಿಳಿಸಿದೆ.
 ಹೀಗೆ ಅಪಾರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದರೂ ಸಂಬಂಧ ಪಟ್ಟವರು ಇತ್ತ ಗಮನ ಹರಿಸಿಲ್ಲ ಕಾರ್ಯಾನುಷ್ಠಾನ ಮಂಡಳಿ ಅಧ್ಯಕ್ಷರಾಗಿ ಕನ್ನಡ ಸಂಸ್ಕೃತಿ ಇಲಾಖೆ ಆಯುಕ್ತರು, ಹಾಗೂ ಸರ್ಕಾರ ಕೂಡಲೇ ಗಮನ ಹರಿಸಬೇಕೆಂಬುದು ಎಲ್ಲರ ಆಗ್ರಹ.

 ಬಾಕ್ಸ್...
 ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತು:
 ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಗ್ರಹಣ ಶಿಬಿರ. ವಿದ್ವಾಂಸರು ಹಾಗೂ ಸಂಗೀತ ಕಲಾವಿದರಿಂದ ಕನಕದಾಸರ ಕುರಿತು ಉಪನ್ಯಾಸ, ವಾಚನ, ಗಾಯನದ ಮೂಲಕ ತತ್ವಾದರ್ಶ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ.  60 ಕಾರ್ಯಕ್ರಮಗಳನ್ನು ಜಿಲ್ಲೆಗೆ ಎರಡರಂತೆ ರೂಪಿಸಿದ್ದು  ಈ ವರ್ಷದ ನವೆಂಬರ್ ಹತ್ತರೊಳಗೆ 46 ಕಾಲೇಜುಗಳಲ್ಲಿ 46 ಶಿಬಿರಗಳನ್ನು ಮಾಡಿದೆ.ಅಲ್ಲದೆ ಇದರ ಪ್ರಯೋಜನವನ್ನು 14,620 ವಿದ್ಯಾರ್ಥಿಗಳು ಪಡೆದಿದ್ದಾರೆ. ಕನಕ ಸಂಸ್ಕೃತಿ ಕಮ್ಮಟವನ್ನು ನಡೆಸಿ ಪರಸ್ಪರ ಸಂವಾದದ ಮೂಲಕ ಕಾವ್ಯಗಳನ್ನು ಗಮಕದ ಮೂಲಕ ಗ್ರಹಿಸಿಕೊಳ್ಳುವ ರೀತಿಯಲ್ಲಿ ಈ ಕಮ್ಮಟಗಳನ್ನು ಆಯೋಜಿಸಲಾಗಿದ್ದು 1,940 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.


 ಕೋಟ್..
   ರಾಜ್ಯಾದ್ಯಾಂತ ವಿವಿಧ ಸಮಾರಂಭಗಳನ್ನು ಮಾಡುತ್ತಿದ್ದು  ಅನೇಕ ಕಡೆಗಳಿಂದ, ಕಾಲೇಜುಗಳಿಂದ ಕಾರ್ಯಕ್ರಮ ಮಾಡುವಂತೆ ಒತ್ತಡಗಳು ಬರುತ್ತಿವೆ. ಈಗ ನೀಡುವ 25ಲಕ್ಷ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ.  ಸರ್ಕಾರ ಹೆಚ್ಚಿನ ಅನುದಾನ  ಬಿಡುಗಡೆ ಮಾಡಬೇಕು. ಆಗ ಮಾತ್ರ ಕೇಂದ್ರ ಸ್ಥಾಪನೆಯ ಸದ್ಬಳಕೆಯಾಗುತ್ತದೆ.
 ಕಾ.ತ ಚಿಕ್ಕಣ್ಣ.  ಸಮನ್ವಯಾಧಿಕಾರಿ. 
 ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ

Saturday, November 23, 2013

P.R.Thippeswamy Harthikote


ಹರಿದ ಕಂಬಳಿ ಹೊದ್ದು... -ಮಾಲತೇಶ್ ಅರಸ್ ಹರ್ತಿಮಠ, ಬೆಂಗಳೂರು

ಹರಿದ ಕಂಬಳಿ ಹೊದ್ದು..
  
  ಹನಿ ಮಳೆಗೂ ಸೋರುವ ಹಳೆ ಮನೆ
  ಸರಸರ ಬೀಳುವುದು ಮಾಳಿಗೆಯ ಮಣ್ಣು
  ಅಜ್ಜನ ಕಾಲದ ಅರಮನೆಗೆ ವಯಸ್ಸಾಯ್ತು
  ಅಜ್ಜಿಯ ಬದುಕಿಗೆ ಎಂಬತ್ತರ ಹರೆಯವಾಯ್ತು
 
  ಸುತ್ತಲೂ ಹಳೆ ಗೋಡೆ ಬಿದ್ದ ಜಾಗ
  ನನ್ನಜ್ಜಿಯೊಂದಿಗೆ ಆಡುವ ನನ್ನ ಮಗ
  ಕತ್ತಲೆಯ ಕೋಣೆಯಲಿ ಜತೆಯಲಿ
  ಮಲಗಿದ್ದರು ಹರಿದ ಕಂಬಳಿ ಹೊದ್ದು
 
  ಎಣ್ಣೆ ಇಲ್ಲದೆ ಉರಿಯದೇ ನಿಂತ ದೀಪ
  ಮುರಿದ ತೇಪೆ ಹಾಕಿದ ಹಳೆ ಬಿಂದಿಗೆ
  ಹಜಾರದ ಕಲ್ಲು ಕಟ್ಟೆಯೇ ಹಾಸಿಗೆ
  ಕಿತ್ತೋಗುತಿದೆ ಮಣ್ಣ ಕಟ್ಟೆ ಬಚ್ಚಲು
 
  ಅಳುವ ಮಗನ ದನಿಗೆ ಅಜ್ಜಿಯ ದನಿ
  ಒಲೆಯ ಮುಂದೆ ನನ್ನಾಕೆಯ ಕಾಯಕ
  ಭಂಡಾರದೊಡೆಯನ ನೆನಹುತ್ತ
  ನಿದ್ದೆ ಮಾಡಿದರು ಹರಿದ ಕಂಬಳಿ ಹೊದ್ದು
 
  ಕಟಿ ಕಟಿ ಸದ್ದಾಗುವ ಮನೆ ಬಾಗಿಲು
  ದನದ ಕೊಟ್ಟಿಗೆಯಲ್ಲೀಗ ಊಟ
  ಸಗಣಿ ಸಾರಿಸಿದ ನೆಲದಲ್ಲೇ ಆಟ
  ನಿತ್ಯ ಬದುಕಿಗೆ ಹೊಂದಿಕೊಂಡ ಹಳೆ ಜೀವ
 
  ಮುಂಜಾನೆ ಎದ್ದು ಮತ್ತೆ ಕೂಲಿಯ ಹರಸಿ
  ಬದುಕು ಸಾಗುತ್ತಿದೆ ಕಷ್ಟಗಳ ದೂರ ಸರಿಸಿ
  ನಾನೂ, ಅಜ್ಜಿ, ನನ್ನಾಕೆ, ನನ್ನಮಗ
  ಮಲಗಿದೆವು ಹರಿದ ಕಂಬಳಿ ಹೊದ್ದು.
                                                                 -ಮಾಲತೇಶ್ ಅರಸ್ ಹರ್ತಿಮಠ, ಬೆಂಗಳೂರು
 
 
  

Malathesh Urs Chitradurga


Malathesh Urs Harthikote. Kannada Sahity sammelana vijayanagara bangalore


Malathesh Urs Harthikote. Kannada Sahitya sammelana vijayanagara Bangalur


Thursday, November 14, 2013

ಮಕ್ಕಳ ದಿನಾಚರಣೆಯ ಶುಭಾಶಯಗಳು..

ಇದೇ ನವೆಂಬರ್ 25 ರಂದು ನನ್ನ ಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ. 


- ವಿಖ್ಯಾತ್ ಅರಸ್ ಹರ್ತಿಮಠ. ಬೆಂಗಳೂರು.

Sunday, November 10, 2013

ವೀರಗಾಸೆ ಕುರುಬರ ಆರಾಧನಾ ಕಲೆ

Prajavani paper - ಜಾತಿ ಸಂವಾದ 

ಯೋಗೀಶ್,ಬೆಂಗಳೂರು
ವೀರಗಾಸೆ ಕುಣಿತ ಲಿಂಗಾಯಿತರ ಜಾನಪದ ಕಲಾ ಪ್ರಕಾರವಲ್ಲ ಅದು ಕುರುಬರ  ಜಾನಪದ ಸಂಪ್ರದಾಯ ಹಾಗೂ ಕಲಾ ಪ್ರಕಾರಹಿಂದೆ ಈ ವೀರಗಾಸೆ ಕುಣಿತ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿತ್ತು ಇಂದಿಗೂ ಹಳೇ ಮೈಸೂರು ಪ್ರಾಂತದ ಮದ್ದೂರು  ಮಳವಳ್ಳಿ ಮೈಸೂರು ಕೆಲವು ತಾಲ್ಲೂಕು  ಕೆಲವು ಹಳ್ಳಿಗಳಲ್ಲಿ ಈ ವೀರಗಾಸೆಯ  ಪ್ರಕಾರ ಕಾಣಬಹುದು.
ಕುರುಬರ ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರು ಲಿಂಗ ಕಟ್ಟಿಕೊಂಡು ಹಬ್ಬ ಹರಿದಿನಗಳಲ್ಲಿ, ಹರಿ ಸೇವೆಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳುತ್ತಾರೆ. ಈ ದಿನಗಳಲ್ಲಿ  ಈ ಅರ್ಚಕರು ಎದೆಗೆ ವೀರಭದ್ರನ ಉಬ್ಬು ಕೆತ್ತನೆಯ ಚಿನ್ನ ಹಾಗೂ ಬೆಳ್ಳಿಯ ವಿಗ್ರಹದ ಹಲಗೆಗಳನ್ನು ಕಟ್ಟಿಕೊಂಡು ತಮಟೆ/ ಹಲಗೆಯ ಹಾಗೂ ನಗಾರಿಯ ನಾದಕ್ಕೆ ಹೆಜ್ಜೆ ಹಾಕುತ್ತಾರೆಅವರ ಸುತ್ತಲು ವೀರಗಾಸೆಯನ್ನು ಕಟ್ಟಿಕೊಂಡ ಕುರುಬ ಜನಾಂಗದವರು ತಮಟೆ, ಹಲಗೆ ಅಥವಾ ನಗಾರಿಯ ಲಯಕ್ಕೆ ಹೆಜ್ಜೆ ಹಾಕುತ್ತಾರೆ.ಎದೆಯ ಮೇಲೆ ಕಟ್ಟಿಕೊಂಡಿರುವ ವೀರಭದ್ರನ ಹಲಗೆ ಹಾಗೂ ತಮಟೆಯ ಸದ್ದಿಗೆ ಆವೇಶಿತನಾಗುವ ಅರ್ಚಕನನ್ನು  ಶಾಂತವಾಗಿಸಲು  ವೀರಭದ್ರನನ್ನು ಹೊಗಳುವ ದಕ್ಷಯಜ್ಞದ ಕೆಲವು ಪ್ರಸಂಗಗಳ ಒಡಪುಗಳನ್ನು/ಕಟಿಗೆಗಳನ್ನು ಹೇಳಿ ಶಿವಸ್ವರೂಪಿಯಾದ ಶಿವನ ಅಂಶವಾದ ವೀರಭದ್ರನನ್ನು ಸೌಮ್ಯವಾಗಿಸುತ್ತಾರೆ. ನಂತರ 88 ಕುಲದ ಒಡಪುಗಳ ಕೆಲವು ಸನ್ನಿವೇಶಗಳನ್ನು ವೀರಗಾಸೆ ಕಟ್ಟಿದ ವೀರಮಕ್ಕಳು ಹೇಳುತ್ತಾರೆ. ಇದು ವೀರಗಾಸೆ ಕುಣಿತ ಅಥವಾ ವೀರಮಕ್ಕಳ ಕುಣಿತ  ಇದು ಈ  ಕಲೆಯ ಪದ್ಧತಿ.  ವೀರಶೈವರ ವೀರಗಾಸೆ ಕುಣಿತ ಇದೇ ಪ್ರಕಾರದ ನೂತನ ಅವಿಷ್ಕಾರ. ಇಲ್ಲಿ ವೀರಭದ್ರನ ಪಾತ್ರಧಾರಿಯೇ ಒಡಪುಗಳನ್ನು ಹೇಳಿ ತನ್ನನ್ನು ತಾನು ಸ್ತುತಿಸಿಕೊಳ್ಳುವಂತೆ ಇರುತ್ತದೆ. ಇಂದಿಗೂ ಕುರುಬರು ಇದನ್ನು ಜಾನಪದ ಕಲೆ ಎಂಬುದಾಗಿ ಒಪ್ಪಿಕೊಳ್ಳುವುದಿಲ್ಲಇದು ದೈವಾಚರಣೆ. ಇದನ್ನು ಹಬ್ಬ ಹರಿ ದಿನಗಳಲ್ಲಿ  ಹರಕೆ ದಿನಗಳಲ್ಲಿ, ಗೃಹ ಪ್ರವೇಶ ಮುಂತಾದ ಸಂದರ್ಭಗಳಲ್ಲಿ ಮಾತ್ರ ಕೈಗೊಳ್ಳಲಾಗುತ್ತದೆ.ಕುರುಬರ  ದೇವಾಲಯಗಳ ಪೂಜಾರಿಗಳನ್ನು ಇಂದಿಗೂ ದೈವಸ್ವರೂಪಿಗಳೆಂದು  ಕುರುಬರು ಆರಾಧಿಸುತ್ತಾರೆ  ಅವರಿಗೆ ಮಾತ್ರವೇ ಲಿಂಗಧಾರಣೆಯಾಗಿದ್ದು ಅವರು ಮಾತ್ರ ಆ ವೀರಭದ್ರನ ಹಲಗೆಯನ್ನು ಮುಟ್ಟುವ ಕಟ್ಟಿಕೊಳ್ಳುವ  ಹಕ್ಕು ಇರುತ್ತದೆ.ಅವರು ಕೆಲವು ಕಟ್ಟಳೆಗಳನ್ನು ಪಾಲಿಸುತ್ತಾರೆ. ಚಪ್ಪಲಿ ಧರಿಸುವಂತಿಲ್ಲ  ಮಾಂಸ ಸೇವನೆ, ದುರ್ವ್ಯಸನಗಳಿಂದ ಮುಕ್ತರಾಗಿದ್ದು ದಿನಕ್ಕೆ ಮೂರು ಬಾರಿ  ಇಷ್ಟ ಲಿಂಗ ಪೂಜೆ ಕೈಗೊಳ್ಳುತ್ತಾರೆ. ಆದರೆ ಇಂತಹ ಆಚರಣೆ ವೀರಶೈವ ಧರ್ಮದಲ್ಲಿ ಕಾಣಬರುವುದಿಲ್ಲ.ಇಂದು ಈ ಕಲಾ ಪ್ರಕಾರ ಬೀದಿಗಳಲ್ಲಿರಸ್ತೆಗಳಲ್ಲಿ, ವೇದಿಕೆಗಳಲ್ಲಿ ಹೊಟ್ಟೆ ಪಾಡಿಗಾಗಿ ಪ್ರದರ್ಶಿಸುವ ಕಲೆಯಾಗಿ ಮಾರ್ಪಾಟಾಗಿರುವುದು  ದುರ್ದೈವದ ಸಂಗತಿ. ಅದು ಅಲ್ಲದೆ ಇದನ್ನು ಹೆಣ್ಣು ಮಕ್ಕಳು ಪ್ರದರ್ಶಿಸುವ ಹಂತಕ್ಕೆ ಹೋಗಿರುವುದು ಹಾಸ್ಯಾಸ್ಪದ.ಗಂಡು ಕಲೆಯಂದೇ ಬಿಂಬಿತವಾಗಿರುವ  ಕುರುಬರ  ಗುರುತೆಂಬಂತಿರುವ ಡೊಳ್ಳು ಕುಣಿತವನ್ನು ಹೆಣ್ಣು ಮಕ್ಕಳು ಕಲಿತು ಪ್ರದರ್ಶಿಸುವುದು  ದುರಂತ. ಶ್ರದ್ಧೆಯುಳ್ಳವರು ಇಂದಿಗೂ ಡೊಳ್ಳನ್ನು ಪೂಜಿಸಿಯೇ ಕೈಗೆತ್ತಿಕೊಳ್ಳುತ್ತಾರೆಈಗ ಹೊಟ್ಟೆ ಪಾಡಿಗಾಗಿ ಕಲೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಇಂದು  ರಾಜಕೀಯ  ಸಭೆಗಳಲ್ಲಿ ಡೊಳ್ಳು ಕಲಾವಿದರು ಮದ್ಯ ಮಾಂಸ ಸೇವಿಸಿ ಈ ಕಲೆ ಪ್ರದರ್ಶಿಸಿ  ಕುರುಬರ ದೇವರ ಆರಾಧನೆಗೆ ಮೈಲಿಗೆಯುಂಟು ಮಾಡಿದ್ದಾರೆ. ಈ ಕಲೆಗಳನ್ನು ಬೀದಿಗೆ ತರುವುದು ಬೇಡ.

  • See more at: http://jathisamvada.prajavani.net/field-collection/field-responses/76#sthash.cZwh8gv6.dpuf