ಕುಣಿತ ನಿಲ್ಲಿಸಿ ಹಾಸಿಗೆ ಹಿಡಿದ ಮೈಲಾರಪ್ಪ
* ನರದೌರ್ಬಲ್ಯದಿಂದ ಸ್ವಾಧೀನ ಕಳೆದು ಕೊಂಡ ಕೈಕಾಲುಗಳು *ಜೀವನಾಧಾರಕ್ಕೆ ತಲೆ ಮೇಲೆ ಕೈ ಹೊತ್ತ ಕುಟುಂಬ
ಚಿತ್ರದುರ್ಗ: ಆತ ಪವಾಡದ ಗೊರವಪ್ಪ, ಕೈಯಲ್ಲಿ ಡಮರುಗ ಹಿಡಿದು ಹೆಜ್ಜೆ ಹಾಕುತ್ತಿದ್ದರೇ ಅಲ್ಲಿ ಭಕ್ತರ ಮೈಮನಗಳು ತಲ್ಲಣಗೊಳ್ಳುತ್ತಿದ್ದವು. ತಮ್ಮ ಭಕ್ತಿಯಿಂದ ಸಹಸ್ರಾರು ಭಕ್ತರನ್ನು ಒಂದೆಡೆ ಸೇರಿಸುವ ಶಕ್ತಿ ಪಡೆದಿದ್ದವರು. ಚಿತ್ರದುರ್ಗ ಜಿಲ್ಲೆ ಅಷ್ಟೇ ಅಲ್ಲದೆ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ತುಮಕೂರು, ಮೈಸೂರು, ಬೆಂಗಳೂರು, ಹಾವೇರಿ, ಹೀಗೆ ಎಲ್ಲಾ ಕಡೆ ತನ್ನ ಪವಾಡವನ್ನು ಮಾಡಿ ತೊರಿಸಿದ್ದಾರೆ.
ತನ್ನ ಆರಾಧ್ಯ ದೈವ ಮೈಲಾರಲಿಂಗೇಶ್ವರ ಸ್ವಾಮಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ನಾಲಿಗೆಯಲ್ಲಿ ತ್ರಿಶೂಲ, ಕೈಯಲ್ಲಿ ಪಂಚ ತ್ರಿಶೂಲವನ್ನು ಚುಚ್ಚಿಕೊಂಡು ಬೆಂಕಿ ಹಚ್ಚಿಕೊಂಡು ದೇವರಿಗೆ ಅರ್ಪಿಸುವ ಅವರ ಪವಾಡಕ್ಕೆ ಸರಿಸಾಟಿ ಇಲ್ಲ. ಇದೀಗ ದಿಢೀರ್ ಎಂದು ಆ ಗೊರವಪ್ಪನಲ್ಲಿ ಶಕ್ತಿ ಅಡಗಿ ಹೋಗಿದೆ. ದೇಹದ ನರಗಳಲ್ಲಿ ನಿಶಕ್ತಿ ಕಾಣಿಸಿಕೊಂಡು ಹಾಸಿಗೆ ಹಿಡಿದಿದ್ದಾರೆ.
ಹೌದು, ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಪವಾಡದ ಮೈಲಾರಪ್ಪ ಅಂದ್ರೆ ಸಾಕು ಅಲ್ಲಿ ಗೊರವರ ಕುಣಿತ ಭವ್ಯತೆ ಕಂಡು ಬರುತ್ತಿತ್ತು. ಎಲ್ಲರಲ್ಲಿಯೂ ಇವರ ಕುಣಿತ ರೋಮಾಂಚನಗೊಳಿಸುತ್ತಿತ್ತು. ಮೈಸೂರು ದಸರಾದಲ್ಲಿಯೂ ತನ್ನ ಜಾನಪದ ಕುಣಿತವನ್ನು ಮೇಳೈಸಿದ ಕಲಾವಿದ ಇಂದು ನರ ದೌರ್ಬಲ್ಯದ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಏಳುಕೋಟಿ, ಏಳುಕೋಟಿ ಏಳುಕೋಟ್ಯೋ ಚಾಂಗಮಲೋ ಚಾಂಗಮಲೋ ಎಂದು ಕೂಗುತ್ತಿದ್ದ ಮೈಲಾರಪ್ಪನಲ್ಲಿ ಇದೀಗ ಆ ಶಕ್ತಿ ಇಲ್ಲದಾಗಿದೆ. ದೋಣಿ ಸೇವೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಆ ಕಾಲುಗಳು, ಡಮರುಗ ಹಿಡಿದು ಎಲ್ಲರ ಮೈ ನವಿರೇಳುಸುತ್ತಿದ್ದ ಆ ಕೈಗಳೂ ಇದೀಗ ಮೌನವಾಗಿವೆ. ಹಾಲು, ಹಣ್ಣು, ತುಪ್ಪ, ಸಕ್ಕರೆ, ಹೀಗೆ ಪಂಚಾಮೃತವನ್ನು ನೀಡುತ್ತಿದ್ದ ಮೈಲಾರಪ್ಪನ ದೋಣಿ ಬರಿದಾಗಿದೆ.
ಕರಿಯ ಕಂಬಳಿಯಿಂದ ಮಾಡಿದ ಅಂಗಿ. ಕೈಯಲ್ಲಿ ಕೊಳಲು. ಡಮರುಗ. ತ್ರಿಶೂಲ, ಭಂಡಾರದ ಬಟ್ಟಲು. ದೋಣಿ ಹಿಡಿದು ಸದಾ ಕಾಲವೂ ಗೊರವರ ಕುಣಿತವನ್ನೇ ನಂಬಿದ್ದ ಮೈಲಾರಪ್ಪ ಅವರಿಗೆ ಇದೀಗ ಆರ್ಥಿಕ ನೆರವಿನ ಅಗತ್ಯವಿದೆ.
ಪತ್ನಿ ಅಂಭಾದೇವಿ ಮತ್ತು ಪಿಯುಸಿ ಮುಗಿಸಿ ಮುಂದಿನ ಶಿಕ್ಷಣಕ್ಕೆ ಕಾದು ಕುಳಿತಿರುವ ಮಗಳು ನೀತಾ ಅವರಿಗೆ ಮೈಲಾರಪ್ಪನವರ ದುಡಿಮೆಯೇ ಜೀವನಾಧಾರವಾಗಿದೆ. ಆದರೆ ಇದೀಗ ಹಾಸಿಗೆ ಹಿಡಿದಿರುವ ಮೈಲಾರಪ್ಪ ಅವರ ಚಿಕಿತ್ಸೆಗೆ ಸುಮಾರು 4 ಲಕ್ಷ ರೂಗಳಷ್ಟು ಖರ್ಚಾಗಲಿದೆ. ದಯಮಾಡಿ ಸಂಘ ಸಂಸ್ಥೆಗಳು, ದಾನಿಗಳು, ಮುಖಂಡರು ನೆರವು ನೀಡಬೇಕೆಂದು ಕುಟುಂಬವರ್ಗ ಮನವಿ ಮಾಡಿಕೊಂಡಿದೆ.
ಬೆಂಗಳೂರು ಎಂ.ಎಸ್ ರಾಮಯ್ಯ ಆಸ್ಪತ್ರೆಯ ನರತಜ್ಞರಾದ ಡಾ. ಶರ್ಮಾ ಅವರು ಚಿಕಿತ್ಸೆ ನೀಡಿದ್ದು, ದುಬಾರಿ ವೆಚ್ಚವಾದ ಹಿನ್ನೆಲೆಯಲ್ಲಿ ಹಣವಿಲ್ಲದೆ ಮನೆಗೆ ಮರಳಿದ್ದಾರೆ. ಆರ್ಥಿಕ ಸಹಾಯ ನೀಡುವ ಮೂಲಕ ಕಲಾವಿದ ಮೈಲಾರಪ್ಪನಿಗೆ ಧನ ಸಹಾಯ ನೀಡುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಕಳುಹಿಸಬಹುದು. ಇಲ್ಲವೆ ಅವರನ್ನು ನೇರ ಸಂಪರ್ಕಿಸಬಹುದು.
ವಿಳಾಸ: ಗೊರವರ ಮೈಲಾರಪ್ಪ ತಂದೆ ನಿಂಗಪ್ಪ. ಮಿರ್ಜಾಬಡಾವಣೆ, ಮಟನ್ ಮಾರ್ಕೆಟ್ ಹಿಂಭಾಗ ಹಿರಿಯೂರು ಪಟ್ಟಣ. ಚಿತ್ರದುರ್ಗ ಜಿಲ್ಲೆ .
ಬ್ಯಾಂಕ್ ಖಾತೆ ಸಂಖ್ಯೆ: ಎಂ. ನೀತಾ 32945664303,(ಎಸ್‌ಬಿಐ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯೂರು ಶಾಖೆ. ಐಎಫ್‌ಎಸ್‌ಇ ನಂ: 0011262. ಚಿತ್ರದುರ್ಗ ಜಿಲ್ಲೆ. ಮೊಬೈಲ್ ಸಂಖ್ಯೆ.9663271335, 9901284507..
No comments:
Post a Comment