Wednesday, December 25, 2013

ಡಾ. ಬಿ.ಕೆ.ರವಿಗೆ ಡಿ.28ರಂದು ಅಭಿನಂದನೆ


 ಡಾ. ಬಿ.ಕೆ.ರವಿಗೆ ಡಿ.28ರಂದು ಅಭಿನಂದನೆ 
 *ಮುಖ್ಯಮಂತ್ರಿಯಿಂದ ಅಭಿನಂದನಾ ಗ್ರಂಥ ಬಿಡುಗಡೆ

 
ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ಬಾನುಲಿ ಬರಹಗಳಿಂದ ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ  ಪ್ರಾಧ್ಯಾಪಕ ಡಾ. ಬಿ.ಕೆ.ರವಿ 50 ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ಬಳಗ ಅಭಿನಂದನಾ ಸಮಾರಂಭ ಆಯೋಜಿಸಿದೆ.
 ಡಾ. ಬಿ.ಕೆ.ರವಿ ಅಭಿನಂದನಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಬಹುಮುಖ ಪ್ರತಿಭೆಯಾಗಿರುವ ಬಿ.ಕೆ.ರವಿ ಅವರನ್ನು ಅಭಿನಂದಿಸಲು ವಿದ್ಯಾರ್ಥಿ ಮಿತ್ರರು ಹಾಗೂ ಆಪ್ತರು ಡಿ.28ರಂದು ಬೆಂಗಳೂರು ವಿವಿಯ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾರೆ ಎಂದರು.
  ಡಾ. ಬಿ.ಕೆ.ರವಿ ಅಭಿನಂದನಾ ಗ್ರಂಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಬಿ.ಕೆ. ರವಿ ರಚಿಸಿರುವ ಟಿಎಸ್ಸಾರ್ ಮತ್ತು ಕನಕ ಕಾವ್ಯಾಂಜಲಿ ಕೃತಿಗಳು ಲೋಕಾರ್ಪಣೆಯಾಗಲಿವೆ. ಸಂಸದ ವಿಶ್ವನಾಥ್, ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
 ಡಾ ಬಿ.ಕೆ.ರವಿ ಬಾನುಲಿ ಕೇಂದ್ರಕ್ಕೆ ಬರೆದಿರುವ ಪ್ರತಿ ಲೇಖನದಲ್ಲೂ ಸಾಮಾಜಿಕ ಕಳಕಳಿ, ಪತ್ರಿಕೋದ್ಯಮದ ಕುರಿತಾದ ಕಾಳಜಿ, ಚಿತ್ರದುರ್ಗದ ಮೇಲಿನ ಅವರ ಪ್ರೇಮ ವ್ಯಕ್ತವಾಗುತ್ತದೆ. ಬಾನುಲಿಗೆ ಬರೆಯುವ ಲೇಖನಗಳು ಹೇಗಿರಬೇಕು ಎಂಬುದಕ್ಕೂ ಈ ಪುಸ್ತಕ ಕೈಪಿಡಿಯಾಗಿದೆ ಎಂದರು.
  ಡಾ. ಬಿ.ಕೆ. ರವಿಯವರು ನಾಟಕ ಬರಹಗಳನ್ನು ಸರಾಗವಾಗಿ ಬರೆದಿದ್ದಾರೆ. ‘ಬಾನುಲಿ ಬರಹಗಳು’ ಪುಸ್ತಕದಲ್ಲಿರುವ ‘ದುರ್ಗದ ದುರ್ಗಿ’, ‘ತಿರುಕನ ಕನಸು’, ‘ಕಿರುಕುಳ ಕೊಡುವ ಕೀಟಗಳು’ ನಾಟಕಗಳು ಮನರಂಜನೆ ಹಾಗೂ ಜನಜಾಗೃತಿ ಮೂಡಿಸುವಂತವು. ಬಾನುಲಿಯ ಕೇಳುಗರಿಗೆ ಬೇಸರವಾಗದಂತೆ ಕಡಿಮೆ ಸಮಯದಲ್ಲಿ ಮನರಂಜನೆ, ಮಾಹಿತಿ, ಸಂದೇಶಗಳನ್ನು ನೀಡುತ್ತವೆ ಎಂದು ರೇವಣ್ಣ ಹೇಳಿದರು.
 ಸಮೂಹ ಮಾಧ್ಯಮ ಕುರಿತಾದ ಲೇಖನಗಳು ಕ್ರೀಡಾರಂಗ, ವಿಜ್ಞಾನ, ಹಬ್ಬಗಳಿಗೆಂದೇ ವಿಶೇಷವಾಗಿ ರಚಿಸಿದ ರೂಪಕಗಳು, ಹಾಸ್ಯ, ವಿಡಂಬನಾತ್ಮಕ ಲೇಖನಗಳು-ನಾಟಕಗಳನ್ನು ಅವರ ಅಭಿನಂದನಾ ಗ್ರಂಥ ಒಳಗೊಂಡಿದೆ.  ಪತ್ರಕರ್ತರು, ಪತ್ರಕರ್ತರ ಮೇಲಿನ ಸಾಮಾಜಿಕ ಜವಾಬ್ದಾರಿಗಳು, ಕ್ರೀಡಾ ಜಗತ್ತಿನಲ್ಲಿ ಸಮೂಹ ಮಾಧ್ಯಮಗಳ ಪಾತ್ರಗಳ ಬಗ್ಗೆಯೂ ಗ್ರಂಥದಲ್ಲಿ ಬೆಳಕು ಚೆಲ್ಲಲಾಗಿದೆ ಎಂದರು.

No comments:

Post a Comment