Sunday, February 2, 2014

ರಾಮಗಿರಿಯಲ್ಲಿ ಸ್ವರ್ಣಗೌರಿ ವೈಭವ.


 ಗಣೇಶನಿಗಿಂತ ಅವನ ಅಮ್ಮನಿಗೆ ಭವ್ಯ ಪೂಜೆ 


 *ದೇವಿಗೆ ಸುಮಂಗಲೆಯರಿಂದ ಭಕ್ತಿ ಸಮರ್ಪಣೆ.  
 * ಮಹಿಳೆಯರ, ಯುವತಿಯರ ಹಬ್ಬ
 * 9 ದಿನಗಳ ಕಾಲ ವೈಭವದ ಪೂಜೆ

 ಮಾಲತೇಶ್ ಅರಸ್ ಹರ್ತಿಮಠ
  ಬಣ್ಣ ಬಣ್ಣದ  ರಂಗೋಲಿಗಳ ಚಿತ್ತಾರ, ಬಾಗಿಲಿಗೆ ತಳಿರು ತೋರಣಗಳ ಅಲಂಕಾರ, ತವರು ಮನೆಯಲ್ಲಿ ಸಂಭ್ರಮದ ಸಡಗರ, ಎಲ್ಲಿ ನೋಡಿದರೂ ಮಹಿಳಾಮಣಿಗಳ ಶಂಗಾರ, ಪುಟಾಣಿಗಳ  ವೈಯ್ಯರ, ಮನೆ- ಮನಗಳಲ್ಲಿ  ಸ್ವರ್ಣ ಗೌರಿ ಮಂತ್ರಗಳ ಝೇಂಕಾರ.
     ಇದು ಗಣೇಶನ ಹಬ್ಬದ ವೈಭವವಲ್ಲ, ಬದಲಿಗೆ ಸ್ವರ್ಣ ಗೌರಿಯ ವೈಭವ. ಚಿತ್ರದುರ್ಗ ಜಿಲ್ಲೆ  ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಸೆ.18 ರಿಂದ   ನಡೆಯುವ ಊರಹಬ್ಬದ  ವೈಭವವಿದು.  ಅದುವೇ ಸ್ವರ್ಣ ಗೌರಿ ವೈಭವ. ಲಕ್ಷ ಲಕ್ಷ ಮಹಿಳೆಯರ ಯುವತಿಯರು ಇಲ್ಲಿ ಸಂಭ್ರಮಿಸುವುದೇ ಒಂದು ವಿಶೇಷ.
  ಚೌತಿ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಹಿರಿಯರು  ವಿವಿಧ ಸಮಿತಿಗಳಲ್ಲಿ  ಒಗ್ಗೂಡಿ ಗಣೇಶನನ್ನು ಬೀದಿ ಬೀದಿಗಳಲ್ಲಿ ಕೂರಿಸುತ್ತಾರೆ. ಇದು ಎಲ್ಲ ಊರಿನಲ್ಲೂ ಕಾಣಸಿಗುತ್ತದೆ.  ಆದರೆ ರಾಮಗಿರಿ ಗ್ರಾಮದ ಜನರು ಇನ್ನು ಒಂದು ಹೆಜ್ಜೆ ಮುಂದೆ .  ಇಲ್ಲಿ ಗಣೇಶನಿಗಿಂತ ಅವನ ಅಮ್ಮನಿಗೆ ಭವ್ಯ ಪೂಜೆ.
  ಭಾದ್ರಪದ ಶುಕ್ಲದ  ಚೌತಿಗಿಂತಾ ಇಲ್ಲಿ ತದಿಗೆಗೆ ತುಂಬಾ ಪ್ರಾಮುಖ್ಯ. ಗೌರಮ್ಮನನ್ನು ಇಲ್ಲಿ ಹೆಚ್ಚು ಶ್ರದ್ದ -ಭಕ್ತಿಯಿಂದ ಪೂಜಿಸುತ್ತಾರೆ. ಅದಕ್ಕಾಗಿ  ವಿವಿಧ ವಿಧಾನಗಳೆಲ್ಲಾ ನಡೆಯುತ್ತವೆ.

  ಇತಿಹಾಸ : 
 ರಾಮಗಿರಿಯ ಇತಿಹಾಸವನ್ನು ಸಷ್ಠಿಸಿ ಮನೆ, ಮನದಾಳದಲ್ಲಿ ನೆಲೆಸಿರುವುದು ಸ್ವರ್ಣಗೌರಿ(ಗೌರಮ್ಮ). ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾ ಬರಲಾಗಿದೆ. ಸ್ವರ್ಣಗೌರಿಯನ್ನು ಗ್ರಾಮದ ಕುಂಬಾರ ವಂಶಸ್ಥರಾದ ಸಣ್ಣ ಬೈರಪ್ಪರ ಕಾಲದಿಂದ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಇದೆ ಸೆ 18ರ ಮಂಗಳವಾರದಂದು ಬೆಳಗಿನ ಜಾವದಲ್ಲಿ ಗ್ರಾಮದ ಕುಂಬಾರ ನಾಗಮ್ಮ  ಮನೆಯಲ್ಲಿ ಸ್ವರ್ಣಗೌರಿಯನ್ನು ವಿಧಿವತ್ತಾಗಿ ಸುಮಂಗಲೆಯರಿಂದ  ಗಂಗಾಪೂಜೆಯೊಂದಿಗೆ ತಂದು ಪ್ರತಿಷ್ಠಾಪಿಸಲಾಗುತ್ತದೆ. 9 ದಿನಗಳ  ವೈಭವದ ಪೂಜೆ  ಜರುಗುತ್ತದೆ, ನಿತ್ಯ ಸುಮಂಗಲೆಯರ ಹಬ್ಬ ನಡೆಯುತ್ತದೆ.
  ಸ್ವರ್ಣಗೌರಿಗೆ ವಿಶೇಷವಾಗಿ ಮಹಿಳೆಯರಿಂದಲೆ ಪೂಜೆಗಳು ನಡೆಯುತ್ತವೆ. ಸ್ವರ್ಣಗೌರಿಗೆ ಶ್ರದ್ದ, ಭಕ್ತಿ ಮುಖ್ಯ, ಪೂಜೆ ಪುನಸ್ಕಾರಗಳು ಆಕೆಯ ಇಷ್ಟದಂತೆಯೇ ನಡೆಯಬೇಕು. ಸದಾ ಭಕ್ತರ ಕೋರಿಕೆಯನ್ನು ಈಡೇಸುವ ಸ್ವರ್ಣಗೌರಿ, ಆಕೆಯನ್ನು ನಿಂದಿಸಿದವರಿಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆಯೊಂದಿಗೆ ಇಲ್ಲಿಗೆ ಬರುವ ದೇವಿಯ ಭಕ್ತ  ಸಮೂಹ ಅಪಾರವಾದುದು.

 ಭಕ್ತರು ಎಲ್ಲೆಡೆಯಿಂದ ಬರ‌್ತಾರೆ: 
 ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತ ಸಮೂಹ ಪಾಪ ಪುಣ್ಯಗಳ ಲೆಕ್ಕ ಮಾಡಿ ಅದನ್ನು ಇಲ್ಲಿ ಶರಣಾಗತಿ ಮಾಡಿಹೋಗುತ್ತಾರೆ,

 ಬೀದಿಬೀದಿಯಲ್ಲಿ ಮೆರವಣಿಗೆ:
  ಸ್ವರ್ಣಗೌರಿ ದೇವಿಯ ಹೊತ್ತ ಮೆರವಣಿಗೆ ಹೂವಿನ ಪಲ್ಲಕ್ಕಿ ಉತ್ಸವದಿಂದ ಗ್ರಾಮದ ಬೀದಿ ಬೀದಿಗಳಲ್ಲಿ ಸಂಚರಿಸುವುದು. ಮರುದಿನ ಕುಂಬಾರ ವಂಶಸ್ಥರು ರಾಮಗಿರಿ ಶ್ರೀ ಕರಿಸಿದ್ದೇಶ್ವರಸ್ವಾಮಿ  ಬೆಟ್ಟದ ತಪ್ಪಲಲ್ಲಿರುವ ಕುಂಬಾರರ ಆರಾದ್ಯ ದೈವವಾದ ಶ್ರೀ ಬೈರಸಿದ್ದೇಶ್ವರ ಸ್ವಾಮಿಗೆ ವಿಧಿವತ್ತಾಗಿ ವಿಶೇಷ ಪೂಜೆ ಸಲ್ಲಿಸುವರು.

 ನವದಿನಗಳ ಪೂಜೆ ;  
 ಸ್ವರ್ಣಗೌರಿಯನ್ನು ಪ್ರತಿಷ್ಠಾಪನೆ ಮಾಡಿದ ನಂತರ ಒಂಬತ್ತು ದಿನಗಳವರೆಗೆ ಪ್ರತಿದಿನ ಬೆಳಗಿನಿಂದ ರಾತ್ರಿಯವರೆಗೂ ವಿಧಿವತ್ತಾದ ಪೂಜೆಗಳು ನೆರವೇರುತ್ತವೆ. ಭಜನೆ, ಜಾನಪದ ನತ್ಯಗಳು, ಕೋಲಾಟ, ಕರಡೆ, ವೀರಗಾಸೆ, ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಸೇರಿದಂತೆ ಮೊದಲಾದ ಕಾರ್ಯಕ್ರಮ ನಡೆಯುತ್ತವೆ.
  ಒಂಬತ್ತನೆ ದಿನದಂದು ವಿಶೇಷವಾಗಿ ಇಲ್ಲಿ ಗಣಂಗಳ ಸೇವೆ (ಜಂಗಮರ ಸೇವೆ) ನಡೆಯಲಿದ್ದು, ಅಂದು ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುವರು. ಅಲ್ಲದೆ ಆಗಮಿಸುವ ಭಕ್ತ ಸಮೂಹಕ್ಕೆ ಅನ್ನ ದಾಸೋಹ ನಡೆಯುವುದು.

 ವಿಶೇಷ ಊಟ: 
 ಇಲ್ಲಿ ಎಲ್ಲಾ ವಿಶೇಷ  ಹಬ್ಬದ ಊಟ ಅಂದರೆ ಅದು ಸಿಹಿ ಬೋಜನ ಅಂದ್ರೆ ತಪ್ಪಾಗುತ್ತೆ, ಇಲ್ಲಿ ಊರಹಬ್ಬದ ಊಟವೇ ವಿಶೇಷ. ಸ್ವರ್ಣ ಗೌರಿಯ ಆರಾಧನೆಯ ನಂತರ ಮೆರವಣಿಗೆಯ ನಂತರ  ರಾಗಿಮುದ್ದೆ, ಹುಳು ಸೊಪ್ಪು ಪರೇವು ಮಾಡಿ ಜನತೆ ಭರ್ಜರಿ  ಭೋಜನ ಮಾಡ್ತಾರೆ. ಇದು ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಇದನ್ನು  ಇಲ್ಲಿ ಎಲ್ಲರೂ  ಮಾಡುವುದರಿಂದ ಇಲ್ಲಿ ತನ್ನದೇ ಆದ ಸಾಂಸ್ಕೃತಿಕ ಮನೋಭಾವ ಬೆಳೆದಿದೆ.
   ಹೌದು ಇಂತಹ ಭವ್ಯವಾದ ಸ್ವರ್ಣ ಗೌರಿ  ವೈಭವದ ಆಚರಣೆಯಲ್ಲಿ ನೀವೂ ಭಾಗಿಯಾಗಿ. ಸುಮಂಗಲೆಯರ ಹಬ್ಬಕ್ಕೆ ಸಂಭ್ರಮ ತನ್ನಿ.



   



No comments:

Post a Comment