Sunday, April 27, 2014

ಬಿಸಿಲಿನ ತಾಪಮಾನಕ್ಕೆ ತಲ್ಲಣಿಸುತಿವೆ ಕಂದಮ್ಮಗಳು: ಅಂಗನವಾಡಿ ಮಕ್ಕಳ ನಿತ್ಯ ರೋದನ


  

 ಬಿಸಿಲಿನ ತಾಪಮಾನಕ್ಕೆ ತಲ್ಲಣಿಸುತಿವೆ ಕಂದಮ್ಮಗಳು *ಅಮ್ಮಾ ತುಂಬಾ ಸೆಕೆ.. *ಅಂಗನವಾಡಿ ಮಕ್ಕಳ ನಿತ್ಯ ರೋದನ
 *ಮಿತಿ ಮೀರಿದ ಬಿಸಿಲಿಗೆ ಮಕ್ಕಳ ಮೈ ಮೇಲೆ ಸೆಕೆ ಗುಳ್ಳೆ
 * ಉರಿ ಮೂತ್ರದಿಂದ ಬಳಲುತಿಹ ಪುಟಾಣಿಗಳು
 *ಬಾಡಿಗೆ ಕಟ್ಟಡಗಳಲಿ ಕಮರುತ್ತಿರುತ್ತಿವೆ ಹಳ್ಳಿ ಪ್ರತಿಭೆಗಳು
 * ರಾಜ್ಯದಲ್ಲಿವೆ 64,518 ಅಂಗನವಾಡಿ ಕೇಂದ್ರಗಳು

 ಮಾಲತೇಶ್ ಅರಸ್ ಹರ್ತಿಮಠ
 ಬೆಂಗಳೂರು: ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ಈಗಾಗಲೇ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಪಾಲಕರೊಂದಿಗೆ ಪ್ರವಾಸ ಮಾಡುತ್ತ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಾಲ ಭವನಗಳಲ್ಲಿ, ಮಕ್ಕಳ ಕೂಟಗಳಲ್ಲಿ ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದಾರೆ ಆದರೆ ಅಂಗನವಾಡಿಯ ಮಕ್ಕಳು ಮಾತ್ರ ರಜೆಯಿಂದ ವಂಚಿತರಾಗಿ ಬಿರು ಬೇಸಿಗೆಯಲ್ಲಿ ತಲ್ಲಣಿಸುತ್ತಿದ್ದಾರೆ.

  ಹೌದು...  ರಾಜ್ಯ ಸರ್ಕಾರ ಎಲ್ಲ ಮಕ್ಕಳಿಗೂ ರಜೆ ನೀಡಿದ್ದರೂ ಅಂಗನವಾಡಿಗಳಿಗೆ ಮಾತ್ರ ರಜೆ ನೀಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಬೇಸಿಗೆಯಲ್ಲಿ ಬಿಸಿಲಿನ ತಾಪಮಾನಕ್ಕೆ ತತ್ತರಿಸುತ್ತಿರುವ ಮಕ್ಕಳ ಕಲ್ಯಾಣವನ್ನು ಮರೆತಿದೆ.  ಹಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿದೆ.
 ರಾಜ್ಯದಲ್ಲಿ 64,518 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 10,160 ಅಂಗನವಾಡಿಗಳು ನಡೆಯುತ್ತಿರುವುದು ಬಾಡಿಗೆ ಕಟ್ಟಡಗಳಲ್ಲಿಯೇ. ಬಹುತೇಕ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಸಮರ್ಪಕ ಗಾಳಿ, ಬೆಳಕು ದೂರದ ಮಾತು. ಮಿತಿ ಮೀರಿದ ಬಿಸಿಲಿನ ಝಳಕ್ಕೆ ಮಕ್ಕಳ ಮೈ ಮೇಲೆ ಸೆಕೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಶಾಲೆಗಳಿಗೆ ಬೇಸಿಗೆ ರಜೆ ನೀಡುವ ಸರ್ಕಾರ ಅಂಗನವಾಡಿ ಕೇಂದ್ರಗಳಿಗೆ ತಾರತಮ್ಯ ಮಾಡುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರಮುಖವಾಗಿ  ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ, ಬಯಲು ಸೀಮೆ ಜಿಲ್ಲೆಗಳಲ್ಲಿ ಈ ಬಾರಿ ಬಿಸಿಲಿನ ತಾಪ ವಿಪರೀತವಾಗಿದೆ.  ರಾಯಚೂರು, ಕೊಪ್ಪಳ, ಗುಲ್ಬರ್ಗ, ಬೀದರ್, ಬಳ್ಳಾರಿ, ಗದಗ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ ಹೀಗೆ ಅನೇಕ ಭಾಗದಲ್ಲಿ ಉಷ್ಣಾಂಶದ ತಾಪಮಾನ 35 ರಿಂದ 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.





 ಸೆಕೆಯ ಕಾಟ: 

 ಇದೀಗ ಬಿಸಿಲಿನ ಆರ್ಭಟಕ್ಕೆ ದೊಡ್ಡವರೇ ತಲ್ಲಣಿಸಿರುವಾಗ ಮೂರು ವರ್ಷದೊಳಗಿನ ಲಕ್ಷಾಂತರ ಕಂದಮ್ಮಗಳು ಯಾರಿಗೆ ಶಾಪ ಹಾಕಬೇಕು ಹೇಳಿ. ಅಂಗನವಾಡಿ ಕೇಂದ್ರಗಳು ಕೆಲವೆಡೆ ಬೆಳಗ್ಗೆ 9ರಿಂದ 2 ಗಂಟೆಯವರೆಗೆ, ಇನ್ನುಳಿದ ಕಡೆ 10 ರಿಂದ ಸಂಜೆ 4ರ ತನಕ ಕಾರ್ಯಾನಿರ್ವಹಿಸುತ್ತಿವೆ. ಶೀಟು ಅಳವಡಿಸಿದ ಕೇಂದ್ರಗಳಲ್ಲಿರುವ ಮಕ್ಕಳಂತೂ ಸೆಕೆಯಿಂದ ತತ್ತರಿಸಿ ನಲುಗಿ ಹೋಗುತ್ತಿದ್ದಾರೆ. ಮಕ್ಕಳ ಅಂಗೈ, ಪಾದ, ಬೆನ್ನು ಸೇರಿ ಮೈಮೇಲೆ ಸೆಕೆಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಪಾಲಕರು ದಿನಕ್ಕೆ ಮೂರ‌್ನಾಲ್ಕು ಬಾರಿ ಸ್ನಾನ ಮಾಡಿಸುತ್ತಿದ್ದಾರೆ. ಮಕ್ಕಳನ್ನು ಚಿಕಿತ್ಸೆಗೆಂದು ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವುದು ಮಾಮೂಲಾಗಿದೆ.

ಉರಿ ಮೂತ್ರ ಸಮಸ್ಯೆ : 
 ಬೇಸಿಗೆಯ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸೆಕೆಗೆ ಗುಳ್ಳೆ, ಉರಿಮೂತ್ರ ಸಮಸ್ಯೆ ಕಾಣಸಿಕೊಳ್ಳುತ್ತಿದೆ. ರಾಯಚೂರಿನಲ್ಲಿ ಇಂತಹ ಉರಿ ಮೂತ್ರ ಪ್ರಕರಣಗಳು ದಿನೇದಿನೆ ಹೆಚ್ಚಾಗಿದ್ದು, ಉಷ್ಣ ವಿದ್ಯುತ್ ಸ್ಥಾವರದ ಪ್ರಭಾವವೂ ಇರಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿ ರಮೇಶ್‌ಕುಮಾರ್.
  ತಲ್ಲಣಿಸಿದ ಮಹಿಳೆಯರು: 
ಬಿಸಿಲಿನ ಝಳ ಮಕ್ಕಳಂತೆಯೇ ಮಹಿಳೆಯರನ್ನು ಹೆಚ್ಚಾಗಿ ಬಾಧಿಸುತ್ತಿದೆ. ಮಹಿಳೆಯರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತಿದ್ದಾರೆ. ಮನೆಯಿಂದ ಹೊರ ಹೋಗುವ ಅಗತ್ಯವಿದ್ದವರು ಮುಖ, ತಲೆಗೆ ಬಟ್ಟೆ ಸುತ್ತಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಕೆಲವರು ಕೂಲಿಗೆ ಹೋಗುವುದನ್ನೇ ನಿಲ್ಲಿಸಿರುವ ಪ್ರಕರಣಗಳು ಇವೆ.
 ಬೇಸಿಗೆ ಬರುತ್ತಿದ್ದಂತೆ ರಾಜ್ಯದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಬಿಸಿಲು ಏರುವ ಮುನ್ನವೇ ನೀರು ತರಬೇಕಾಗುತ್ತಿದೆ. ಬೇಸಿಗೆ ದೊಡ್ಡವರಿಗೆ ನೀರಿನ ಸಮಸ್ಯೆಯನ್ನು ಸೃಷ್ಟಿಸಿದ್ದರೆ, ಅಂಗನವಾಡಿ ಮಕ್ಕಳಿಗೆ ದಿನವೂ ಸೆಕೆಯಲ್ಲಿ ಬಳಲುವ ಶಿಕ್ಷೆ ನೀಡುತ್ತಿದೆ. ಸರ್ಕಾರ ಈ ಬಗ್ಗೆ ಸೂಕ್ತ ರೀತಿಯ ಚಿಂತನೆ ನಡೆಸಬೇಕಿದೆ.


 ಹಳೆಯ ಮನೆಗಳಲ್ಲಿ ಬಾಡಿಗೆ..
  ಮೂಲ ಸೌಕರ್ಯವಿರದ ಕಟ್ಟಡಗಳೇ ಸಾಕಷ್ಟು ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಾಗಿರುವುದು ಶೋಚನೀಯ. ಹಳೆಯ ಮನೆಗಳಲ್ಲಿ ಹಾಗೂ ಬಾಡಿಗೆಯ ಕಟ್ಟಡಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿರುವುದು, ಕಟ್ಟಡದ ಮೇಲ್ಚಾವಣಿಗೆ ಹಾಕಿರುವ ತಗಡುಗಳು ಬೀಳುವ ಸ್ಥಿತಿ ತಲುಪಿರುವುದು,  ಶೀಟುಗಳು ಮುರಿದು ಮಳೆ ಬಂತೆಂದರೆ ಸೋರುವುದು, ಬಾಗಿಲು, ಕಿಟಕಿಗಳ ತಗಡುಗಳು ತುಕ್ಕು ಹಿಡಿದು ಬೀಳುವಂತಿರುವುದು, ಕಟ್ಟಡದ ಮೇಲ್ಚಾವಣಿಗೆ ಹಾಕಿರುವ ಮರದ ಟೀರುಗಳಲ್ಲಿ ಹುಳುಗಳಾಗಿರುವುದು, ಕಟ್ಟಡ ಯಾವಾಗ ಮಕ್ಕಳ ಮೇಲೆ ಕುಸಿದು ಬೀಳುವುದೋ ಎಂಬ ಭಯ ಅಂಗನವಾಡಿ ಕಾರ್ಯಕರ್ತೆಯರಲ್ಲಿ  ಮಾಮೂಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಇಂತಹ ಸ್ಥಿತಿಗಳ ಕಂಡು ಪಾಲಕರೂ ಒಲ್ಲದ ಮನಸ್ಸಿನಿಂದ ಅಂಗನವಾಡಿಗೆ ಕಳುಹಿಸುತ್ತಿದ್ದಾರೆ.



 ಗಂಡ ಹೆಂಡಿರ ನಡುವೆ ಕೂಸು ಬಡವಾಯ್ತು ಎನ್ನುವಂತೆ ಅನೇಕ ಭಾಗಗಳಲ್ಲಿ ಶಾಲಾ ಕಟ್ಟಡದಲ್ಲಿ ನಡೆಯುವ ಅಂಗನವಾಡಿ ಕೇಂದ್ರಗಳು ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಕಿತ್ತಾಟಗಳಿಂದ ಮರದ ಕೆಳಗೆ ಅಥವಾ ಬಾಡಿಗೆ ಮನೆಗಳಿಗೆ ಸ್ಥಳಾಂತರವಾಗಿದೆ. ಕೆಲವೆಡೆ ದೇವಸ್ಥಾನಗಳಲ್ಲೂ ನಡೆಯುತ್ತಿವೆ. ದೇವಸ್ಥಾನಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳು ಹಳ್ಳಿಗಳಲ್ಲಿದ್ದು  ಅಲ್ಲಿನ ಮಕ್ಕಳಿಗೆ ಬಿಸಿಲಿನ ತಾಪಮಾನದ ತೊಂದರೆ ಇಲ್ಲ. ಶಾಲೆಯಂತೆ ಅಂಗನವಾಡಿ ಕೇಂದ್ರಗಳಿಗೂ ರಜೆ ಘೋಷಿಸಬೇಕು ಎನ್ನುವುದು ನಮ್ಮ ಆಗ್ರಹ.
 - ಯಶೋಧಮ್ಮ, ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟ(ಸಿಐಟಿಯು)

  ಶಿಥಿಲಾವಸ್ಥೆ ತಲುಪಿದ ಕಟ್ಟಡ..
  ಚಿತ್ರದುರ್ಗ ಜಿಲ್ಲೆ ರಾಮಗಿರಿ ಹೋಬಳಿಯ ಅರಬಗಟ್ಟದ ಅಂಗನವಾಡಿ ಕೇಂದ್ರವನ್ನು 1982ರಲ್ಲಿ ಖಾಸಗಿ ಮನೆಯೊಂದರಲ್ಲಿ ತೆರೆಯಲಾಗಿತ್ತು. 2000ನೇ ಇಸವಿಯಲ್ಲಿ ಅಂಗನವಾಡಿಗೆಂದು ಕಟ್ಟಡವನ್ನು ನಿರ್ಮಿಸಿದ್ದು, 10ವರ್ಷಗಳಲ್ಲಿ ಅಂಗನವಾಡಿ ಕಟ್ಟಡ ಪೂರ್ತಿ ಶಿಥಿಲಾವಸ್ಥೆ ತಲುಪಿದೆ. ಇದೀಗ 13 ಮಕ್ಕಳು ಬರುತಿದ್ದು, ಬೇಸಿಗೆಯಲ್ಲಂತೂ ಬಿರು ಬಿಸಿಲಿಗೆ ಮಕ್ಕಳು ಚಡಪಡಿಸುತ್ತವೆ.
                 ರತ್ನಮ್ಮ, ಕಾರ್ಯಕರ್ತೆ 

  ರಾಜ್ಯದಲ್ಲಿ ಒಟ್ಟು 64,518 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 10,160 ಬಾಡಿಗೆ ಕಟ್ಟಡದಲ್ಲಿವೆ.  ಹಲವು ಕಡೆ ನಿವೇಶನ ಇಲ್ಲದ ಕಾರಣ ಮತ್ತು ಶಾಲೆಯಲ್ಲಿ ಕೊಠಡಿಗಳ ಕೊರತೆ ಕಾರಣ ಬಾಡಿಗೆ ಮನೆಗಳಲ್ಲಿ ಕೇಂದ್ರಗಳಿವೆ. ಮೂಲ ಸೌಕರ್ಯಗಳ ಕೊರತೆಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಅಂಗನವಾಡಿ ಮಕ್ಕಳಿಗೂ ಮೇ ತಿಂಗಳಲ್ಲಿ 15 ದಿನ ರಜೆ ನೀಡಲಾಗುವುದು.
 ಮುನಿಕೃಷ್ಣ, ಜಂಟಿ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಬೆಂಗಳೂರು.



No comments:

Post a Comment