Friday, May 9, 2014

ಬಿಸಿಲಿನಾರ್ಭಟ : ಎಳನೀರಿಗೆ ಡಿಮಾಂಡಪ್ಪೋ ಡಿಮಾಂಡ್ - ಮಾಲತೇಶ್ ಅರಸ್ ಹರ್ತಿಮಠ

ಬಿಸಿಲಿನಾರ್ಭಟ : ಎಳನೀರಿಗೆ ಭರ್ಜರಿ ಬೇಡಿಕೆ

 *ನೆತ್ತಿಯ ಮೇಲೆ ಕೆಂಡ ಇಟ್ಟ ಅನುಭವ
 *ಎಲ್ಲಿ ನೋಡಿದ್ರು ಸಖತ್ ವ್ಯಾಪಾರ
 * ಎಲ್ಲಾ ಕಾಯಿಲೆಗಳಿಗೆ ಎಳನೀರೇ ಮದ್ದು
 * ಈಗ 25 ರೂ.ನಿಂದ 30 ರೂ.
 * ದುಬಾರಿಯಾದ್ರು ಸೈಜಿನ ಮೇಲೆ ದರ
 *ಅಧಿಕ ಜೀವಸತ್ವ ಮತ್ತು ಖನಿಜಾಂಶ
 * ನೀವೂ ಎಳನೀರು ಕುಡಿಬೇಕು: ವೈದ್ಯರ ಸಲಹೆ

 ಮಾಲತೇಶ್ ಅರಸ್ ಹರ್ತಿಮಠ
 ಬೆಂಗಳೂರು: ಬಿಸಿಲಿನ ಪ್ರಖರತೆಗೆ ಬೆಂಗಳೂರು ಜನರು ತತ್ತರಿಸುತ್ತಿದ್ದಾರೆ. ಝಳದಿಂದ ಬಸವಳಿದು ಬಾಯಾರಿಕೆ ನೀಗಿಸಿಕೊಳ್ಳಲು ತಂಪು ಪಾನೀಯ ಅಂಗಡಿಗಳಿಗೆ ಮೊರೆ ಹೋಗುತ್ತಿದ್ದ  ಜನ ಈಗ ಎಳನೀರು ಕುಡಿಯುವತ್ತ ವಾಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಎಳನೀರಿಗೆ ಭರ್ಜರಿ ಬೇಡಿಕೆ ಬಂದಿದೆ.
 ಬಿಸಿಲಿನ ಹೊಡೆತಕ್ಕೆ  ದಿನವೂ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳು ತುಂಬಿರುತ್ತವೆ. ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮೊದಲು ಹೇಳುವುದೇ ನೀರನ್ನು ಕಾಯಿಸಿ ಕುಡಿಯಿರಿ ಜತೆಗೆ ಅಧಿಕ ಜೀವಸತ್ವ ಮತ್ತು ಖನಿಜಾಂಶ ಇರುವುದರಿಂದ ಕಡ್ಡಾಯವಾಗಿ ಎಳನೀರು ಸೇವಿಸಿ ಎಂದು,  ಹೀಗಾಗಿ ಎಲ್ಲೆಡೆಯೂ ಎಳನೀರು ವ್ಯಾಪಾರಿಗಳಿಗೆ ಜನ ಮುತ್ತಿಗೆ ಹಾಕುತ್ತಿದ್ದಾರೆ.
 ತಾಪಮಾನ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆತ್ತಿಯ ಮೇಲೆ ಕೆಂಡ ಇಟ್ಟ ಅನುಭವ ಆಗುತ್ತಿದ್ದು, ಜನರು ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯ ಪ್ರತಾಪ ಏರುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಜನರಷ್ಟೇ ಜಾನುವಾರುಗಳೂ ತತ್ತರಿಸುತ್ತಿವೆ.
 ವಿವಿಧ ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಲೋಡ್‌ಗಟ್ಟಲೇ ಎಳನೀರು ಬರುತ್ತಿವೆ. ರಸ್ತೆಗಳಲ್ಲಿ, ಮಾಲ್‌ಗಳ ಮುಂದೆ, ಬೀದಿ ಬೀದಿಗಳಲ್ಲಿ ವ್ಯಾಪಾರ ಜೋರಾಗಿಯೇ ಸಾಗಿದೆ.

 ಸ್ಟಾಕ್ ಮಾಲ್...
 ಈಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಬಿಸಿಲಿನ ತಾಪ ತೀವ್ರವಾಗಿದೆ. ದಾಹ ತೀರಿಸಿಕೊಳ್ಳಲು ತಂಪು ಪಾನೀಯಗಳಿಗೆ ಮುಗಿಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ತಂಪು ಪಾನಿಯಗಳು ಹೆಚ್ಚು ಸ್ಟಾಕ್ ಮಾಲ್ ಆಗಿರುವ ಹಿನ್ನೆಲೆಯಲ್ಲಿ ಪ್ರಾಕೃತಿಕವಾಗಿ ಸಿಗುವ ಎಳನೀರೇ ಶ್ರೇಷ್ಠ ಎಂಬುದನ್ನು ಮನಗಂಡು ಎಲ್ಲರೂ ಇದೀಗ ಎಳನೀರು ಬೇಕೆಂದು ನಿರೀಕ್ಷಿಸುತ್ತಾರೆ.
 ಕ್ಲಿನಿಕ್, ಆಸ್ಪತ್ರೆಗಳ ಮುಂದೆ..
 ಎಳನೀರು ವ್ಯಾಪಾರಿಗಳೂ ಕೂಡ ಈಗ ಜನರ ನಾಡಿ ಮಿಡಿತವನ್ನು ಗಮನಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳು ಇರುತ್ತವೆಯೋ ಅಲ್ಲಿ ಎಳನೀರು ಗಾಡಿಗಳನ್ನು ನಿಲ್ಲಿಸಿಕೊಂಡಿರುತ್ತಾರೆ. ಹಲವುಕಡೆ  ಮರದಡಿಯಲ್ಲಿ ನೇತು ಹಾಕಿಕೊಂಡಿದ್ದು ವಾಹನ ಸವಾರರೂ ಎಳನೀರು ಕಂಡ ಕೂಡಲೇ ಗಾಡಿ ನಿಲ್ಲಿಸಿ ಸೇವಿಸಿಯೇ ಮುಂದೆ ಸಾಗುವುದು ಸಾಮಾನ್ಯವಾಗಿದೆ.

 ಮನೆಮುಂದೆ ಬಂದು ಕೂಗುತ್ತಾರೆ..
 ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವ್ಯಾಪಾರಿಗಳು ಕೈ ಗಾಡಿಗಳಲ್ಲಿ, ಸೈಕಲ್‌ಗಳಲ್ಲಿ ಎಳನೀರನ್ನು ಮನೆಗಳ ಮಂದೆಯೇ ತಂದು ಕೂಗಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮನೆಯಿಂದ ಹೊರಗೆ ಬಾರದ ವೃದ್ಧರು, ಮಹಿಳೆಯರು, ಮಕ್ಕಳಿಗೆ ಅನುಕೂಲವಾಗಲೆಂದು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ.
 ಒಟ್ಟಾರೆ  ಬಿಸಿಲು ಬೆಳಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ ವೇಳೆ ರಣರಣವಾಗಿ ಕಾಣುತ್ತದೆ. ಸಂಜೆ 5 ತನಕವೂ ಇದೇ ಬಿಸಿ ಇರುವುದರಿಂದ ಎಲ್ಲರಿಗೂ ಈಗ ಕಲ್ಪವೃಕ್ಷದ ನೀರೇ ಬೇಕಾಗಿದೆ.


 ದುಬಾರಿಯಾದ್ರೂ ಬಿಡೋಲ್ಲ..
 ಎಳನೀರನ್ನು ರೈತರು ಬೆಳೆದರೂ ಅವರಿಗೆ ಸಿಗುವುದು ಕೇವಲ 5 ರಿಂದ 6 ರೂ. ಮಾತ್ರ. ಇಲ್ಲಿ ಉತ್ತಮವಾಗಿ ಲಾಭಗಳಿಸುವವರು ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳು. 6 ರೂಗೆ ತಂದ ಎಳನೀರನ್ನು ಇಲ್ಲಿ 22 ರೂ ನಿಂದ ಆರಂಭಿಸಿ 30ನ ರೂ. ತನಕ ಮಾರಾಟ ಮಾಡಲಾಗುತ್ತಿದೆ. ಕೆಲವುಬಾರಿ 35 ರೂ ಎಂದರೂ  ಖರೀದಿಸುವ ಜನರಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.


 ಎಲ್ಲಡೆಯೂ ಇದೇ ಕತೆ..
 ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕವಂತೂ ಬೇಸಿಗೆಗೆ ನಲುಗಿ ಹೋಗಿದ್ದು ಎಳನೀರಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು, ಮಂಜಿನ ನಗರ ಮಡಿಕೇರಿ, ಮಲೆನಾಡು ಶಿವಮೊಗ್ಗ ಚಿಕ್ಕಮಗಳೂರು, ಬಯಲು ಸೀಮೆ ಚಿತ್ರದುರ್ಗ, ದಾವಣಗೆರೆ, ಕರಾವಳಿನಾಡಾದ ಉಡುಪಿ, ಮಂಗಳೂರು ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲಡೆಯೂ ಎಳನೀರಿಗೆ ಡಿಮಾಂಡ್ ಬಂದಿದೆ. ಅಲ್ಲದೆ ಮಜ್ಜಿಗೆಯೂ ಮಾರಾಟವಾಗುತ್ತಿದೆ.



ದೀಗ ಬಿಸಿಲಿನ ವಾತಾವರಣ ದಿಂದ ತಂಪು ಪಾನಿಯ ಸೇವಿಸಿದರೇ ಅದು ಬಾಯಿಗಷ್ಟೇ ರುಚಿ. ಆದರೆ ಎಳನೀರು ಆರೋಗ್ಯಕ್ಕೆ ಉತ್ತಮವಾದುದು. ನಾನು ದಿನವೂ ಬಸ್ಸಿನಲ್ಲೇ ಇರುವುದರಿಂದ ತುಂಬಾ ದಿನಕ್ಕೇರಡು ತಪ್ಪದೇ ಕುಡಿತ್ತೇನೆ. ಅಲ್ಲದೆ  ಮನೆಯಲ್ಲಿರುವ ವೃದ್ಧರಿಗೂ ಮಕ್ಕಳಿಗೂ ಕೊಂಡೊಯ್ಯುತ್ತೇನೆ.

- ಯೋಗೀಶ್ ಕುಮಾರ್, 
ಬಿಎಂಟಿಸಿ ಬಸ್ ಕಂಡಕ್ಟರ್. ಬೆಂಗಳೂರು.





No comments:

Post a Comment