Thursday, June 12, 2014

ಅಪ್ಪಂದಿರ ದಿನ.....

ನಿನ್ನಂಥ ಅಪ್ಪ ಇಲ್ಲ

1910ರಲ್ಲಿ ವಾಷಿಂಗ್ಟನ್‌ನ ಸೊನಾರಾ ಸ್ಮಾರ್ಟ್ ಡೊಡ್ ಎಂಬಾಕೆ `ವಿಶ್ವ ಅಪ್ಪಂದಿರ ದಿನಾಚರಣೆ'ಯನ್ನು ಜಾರಿಗೆ ತರಲು ಶ್ರಮಿಸಿದಳು. ಸೊನಾರಾಳ ತಾಯಿ ತೀರಿ ಹೋದ ನಂತರ, ಸೇನೆಯಲ್ಲಿದ್ದ ಆಕೆಯ ತಂದೆ ತನ್ನ ಆರೂ ಮಕ್ಕಳನ್ನು ತಾಯಿಯ ಪ್ರೀತಿ- ಮಮತೆಗೆ ಯಾವುದೇ ಕೊರತೆ ಆಗದಂತೆ ಬೆಳೆಸಿದ.
1909ರಲ್ಲಿ `ವಿಶ್ವ ತಾಯಂದಿರ ದಿನ' ಜಾರಿಗೆ ಬಂದ ನಂತರ, ತಂದೆಗೂ ಅಷ್ಟೇ ಮಹತ್ವ ನೀಡಬೇಕೆಂದು ಸೊನಾರಾ ಆರಂಭಿಸಿದ ಹೋರಾಟದ ಫಲವಾಗಿ ಆಕೆಯ ತಂದೆಯ ಹುಟ್ಟಿದ ತಿಂಗಳಾದ ಜೂನ್ ತಿಂಗಳ ಮೂರನೇ ಭಾನುವಾರವನ್ನು `ಅಪ್ಪಂದಿರ ದಿನ'ವಾಗಿ ಆಚರಿಸಲು ನಿರ್ಧರಿಸಲಾಯಿತು.

ಬಹುತೇಕರಿಗೆ ಅಪ್ಪಂದಿರ ದಿನಾಚರಣೆಯ ಇತಿಹಾಸ ಗೊತ್ತಿರಲಾರದು. ಆದರೂ ವಿಜೃಂಭಣೆಯಿಂದ ಅಲ್ಲದಿದ್ದರೂ ಕನಿಷ್ಠ `ಹ್ಯಾಪಿ ಫಾದರ್ಸ್ ಡೇ' ಎಂಬ ಶುಭಾಶಯವನ್ನು ಪ್ರೀತಿಪಾತ್ರನಾದ ನಮ್ಮ ಅಪ್ಪನಿಗೆ ತಿಳಿಸದೇ ಇರಲಾರೆವು. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು!

ಈ ದಿನಾಚರಣೆ ಭಾರತೀಯ ಸಂಸ್ಕೃತಿಯದಲ್ಲವಾದರೂ ನಾವೂ ಈ ವಿಶೇಷ ದಿನವನ್ನು ಆಚರಿಸಿದರೆ ತಪ್ಪಾಗಲಾರದು. ಏಕೆಂದರೆ  ಭಾರತೀಯ ಕುಟುಂಬಗಳಲ್ಲಿ ತಂದೆಯ ಸ್ಥಾನ ಬಹಳ ದೊಡ್ಡದು. ಅದಕ್ಕಾಗೇ ಪಿತೃ ದೇವೋ ಭವ ಎನ್ನುತ್ತಾ, ಹೆತ್ತ ತಾಯಿಯ ನಂತರದ ಸ್ಥಾನವನ್ನು ತಂದೆಗೆ ನೀಡಿರುವುದು. ಕೆಲವು ದಶಕಗಳ ಹಿಂದೆ ಎಂಟು-ಹತ್ತು ಮಕ್ಕಳ ದೊಡ್ಡ ಕುಟುಂಬಗಳು ಇರುತ್ತಿದ್ದವು. ಆ ಅವಿಭಕ್ತ ಕುಟುಂಬಗಳಲ್ಲಿ ತಂದೆ ಎಂದರೆ ಭಯ, ಭಕ್ತಿ, ಗೌರವದ ಭಾವವಿತ್ತು.
ಅಲ್ಲದೆ ಭಯದ ವಾತಾವರಣದಿಂದ ಮಕ್ಕಳು ತಂದೆಯಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಿದ್ದರು. ಅಮ್ಮನ ಮುಖಾಂತರವೇ ಅಪ್ಪನ ಜೊತೆ ಎಲ್ಲ ರೀತಿಯ ವ್ಯವಹಾರ, ಮಾತುಕತೆ ನಡೆಯುತ್ತಿತ್ತು. ಮನೆಯಲ್ಲಿ ತಂದೆಯ ನಿರ್ಧಾರವೇ ಎಂದೆಂದಿಗೂ ಅಂತಿಮ ಆಗಿರುತ್ತಿತ್ತು. ಅಲ್ಲಿ ಮಕ್ಕಳ ಯಾವ ಹಟವೂ ನಡೆಯುತ್ತಿರಲಿಲ್ಲ.

ತಂದೆಯನ್ನು ಅಪ್ಪಯ್ಯ, ಅಪ್ಪಾಜಿ ಎಂದು ಕರೆಯುತ್ತಿದ್ದರೆ, ಪತ್ರ ವ್ಯವಹಾರಗಳಲ್ಲಿ ತೀರ್ಥರೂಪ ಪಾದಚರಣ/ ಪಾದಪದ್ಮಗಳಲ್ಲಿ ಎಂದು ಗೌರವಪೂರ್ವಕವಾಗಿ ಸಂಬೋಧಿಸಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ದೊಡ್ಡ ಕುಟುಂಬಗಳು ಸಣ್ಣವಾಗಿ, ಅವಿಭಕ್ತ ಕುಟುಂಬಗಳು ವಿರಳವಾಗಿ ತಂದೆಯೊಂದಿಗೆ ತಾಯಿಯಷ್ಟೇ ಸಲುಗೆ ಬೆಳೆಯಿತು. ಅಪ್ಪಯ್ಯ ಈಗ ಅಪ್ಪ, ಪಪ್ಪ, ಡ್ಯಾಡಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಾನೆ. ಅಪ್ಪ ಹೊರಗೆ ದುಡಿಯುವುದರ ಜೊತೆಗೆ ಮನೆಯ ಒಳಗೂ ಅಮ್ಮನ ಸಹಾಯಕ್ಕೆ ನಿಲ್ಲುತ್ತಾನೆ, ಮಕ್ಕಳ ಪಾಲನೆ-ಪೋಷಣೆಯಲ್ಲಿ ಕೈ ಜೋಡಿಸುತ್ತಾನೆ.

ಮಕ್ಕಳ ನೆನಪಿನಂಗಳದಲ್ಲಿ ಸದಾ ಹಚ್ಚಹಸಿರಾಗಿ ಇರುವವನು ಅಪ್ಪ. ತನ್ನ ನಿದ್ದೆಯನ್ನು ಕಡೆಗಣಿಸಿ ಸುಂದರವಾದ ಕಥಾಲೋಕಕ್ಕೆ ಕರೆದೊಯ್ಯುತ್ತಾ ತನ್ನ ಬಾಹುಗಳಲ್ಲೇ ಮಲಗಿಸುವವ, ಅಮ್ಮನ ವಿರುದ್ಧ ದೂರು ತಂದಾಗ ಸಹನೆಯಿಂದ ಆಲಿಸಿ `ನಾನಿದ್ದೇನೆ ನಿನ್ನ ಜೊತೆ' ಎಂದು ಭರವಸೆ ತುಂಬುವವ, ಇಷ್ಟವಾದುದನ್ನು ಕೇಳುವ ಮೊದಲೇ ಅದನ್ನರಿತು ಕೈಗಿರಿಸುವವ, ಕೆಲವೇ ಮಾರು ದೂರದಲ್ಲಿರುವ ಶಾಲೆಗೆ ದಿನವೂ ತಪ್ಪದೇ ತನ್ನ ಸ್ಕೂಟರ್‌ನಲ್ಲೇ ಕರೆದೊಯ್ಯುವವ.
ಆಟ, ಪಾಠ, ಸಂಗೀತ, ಚಿತ್ರಕಲೆ, ನೃತ್ಯ ಎಲ್ಲ ಕ್ಷೇತ್ರಗಳಲ್ಲೂ ಪ್ರೋತ್ಸಾಹಿಸುವವ, ಸದಾ ಮಕ್ಕಳ ಪರ ವಹಿಸುವವ, ಮಕ್ಕಳ ಚಿಕ್ಕ-ಪುಟ್ಟ ಯಶಸ್ಸುಗಳನ್ನೂ ಹೆಮ್ಮೆಯಿಂದ ಹೇಳಿಕೊಳ್ಳುವವ, ತನ್ನ ಕಚೇರಿಯ ಸಮಸ್ಯೆ ಅಥವಾ ಅನಾರೋಗ್ಯ ಯಾವುದನ್ನೂ ಲೆಕ್ಕಿಸದೆ ಮಕ್ಕಳ ಸುಖ-ಸಂತೋಷಕ್ಕಾಗಿ ಅವಿರತ ಶ್ರಮಿಸುವವ, ದೂರದ ಊರಿಂದ ಬರುವಾಗ ಮರೆಯದೇ ಪ್ರೀತಿಯ ಉಡುಗೊರೆ ಹಿಡಿದೇ ಬರುವವ, ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುವವ, ತನ್ನ ಸಮಸ್ಯೆಗಳಾವುದೂ ನಮಗೆ ತಾಕದೇ ಇರುವಂತೆ ಎಚ್ಚರ ವಹಿಸುವವ, ಎಂಥ ದುಃಖದ ಸಮಯದಲ್ಲೂ ತನ್ನನ್ನು ತಾನೇ ಸಂತೈಸಿಕೊಂಡು ಅಮ್ಮನನ್ನು ಸಂತೈಸುವವ, ಪರೀಕ್ಷೆ ಸಮೀಪಿಸಿದಾಗ ತಡರಾತ್ರಿ ಕುಳಿತು ಓದುವಾಗ `ಸಾಕು ಮಲಗು' ಎಂದು ಆರೋಗ್ಯದ ಕಡೆಗೆ ನಿಗಾ ವಹಿಸುವವ, ನಮ್ಮ ಒಂಟಿತನವನ್ನು ನೀಗಿಸುವ ಉತ್ತಮ ಗೆಳೆಯನಾಗುವವ.
ಉನ್ನತ ವಿದ್ಯಾಭ್ಯಾಸಕ್ಕೆ ದೂರ ಕಳಿಸಲು ಕಷ್ಟವಾದರೂ ಮಕ್ಕಳ ಭವಿಷ್ಯವನ್ನು ಸುಭದ್ರವಾಗಿರಿಸಲು ನಗುತ್ತಲೇ ಕಳಿಸುವವ, ನೌಕರಿ ದೊರೆತಾಗ ಹೆಮ್ಮೆಯಿಂದ ಬೀಗಿ ಸಿಹಿ ಹಂಚುವವ, ರಜೆಯ ದಿನಗಳನ್ನು ಇನ್ನೆರಡು ದಿನಕ್ಕೆ ಮುಂದೂಡು ಎನ್ನುವವ, ಇವೆಲ್ಲದರ ನಡುವೆಯೂ ಜೀವನದ ಮೌಲ್ಯ, ಶಿಸ್ತುಗಳನ್ನು ಕಲಿಸಲು ಮರೆಯದವ, ಮಕ್ಕಳಿಗೆ ಸೂಕ್ತ ಸಂಗಾತಿಯನ್ನು ಹುಡುಕಿ ಬಾಳನ್ನು ಹಸನಾಗಿಸುವವ, ಮಗಳಾಗಿದ್ದರೆ ತಕ್ಕ ಗಂಡನನ್ನು ಅರಸಿ ಭಾರವಾದ ಮನಸ್ಸಿನಿಂದ ಧಾರೆಯೆರೆದು, ತನ್ನ ಜವಾಬ್ದಾರಿ ಮುಗಿಯಿತು ಎಂದುಕೊಳ್ಳದೇ ತನ್ನ ಪ್ರೀತಿ-ಮಮಕಾರದ ಮಳೆ ಹರಿಸುತ್ತಲೇ ಇರುವವ- ಹೀಗೆ  ಅಪ್ಪ  ಎಂದರೆ ಒಂದು ಭಾವುಕ ಸಂಬಂಧ ಮತ್ತು ಬಿಡಿಸಲಾಗದ ಕೊಂಡಿ. ಇಂತಹ ಅಪ್ಪನನ್ನು ಪಡೆದ ಜನ್ಮ ಸಾರ್ಥಕವೇ ಸರಿ. ಆದರೆ ಅದೆಷ್ಟು ಜನರಿಗುಂಟು ಈ ಭಾಗ್ಯ?

ಜಗತ್ತಿನಲ್ಲಿ ಕೆಟ್ಟ ತಾಯಿ ಇರಲಾರಳು, ಆದರೆ ಕೆಟ್ಟ ತಂದೆ ಇರಬಹುದಂತೆ! ಕುಡುಕ ತಂದೆ, ತಾಯಿಯನ್ನು ಹೊಡೆಯುವ ತಂದೆ, ಮಕ್ಕಳನ್ನು ಕೂಲಿ ಕೆಲಸಕ್ಕೆ ದಬ್ಬುವ ತಂದೆ, ಜೂಜು, ಕಳ್ಳತನ, ದರೋಡೆಗಳಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವ, ಹುಟ್ಟುವ ಮಗು ಹೆಣ್ಣು ಎನ್ನುವುದು ತಿಳಿಯುತ್ತಲೇ ಭ್ರೂಣ ಹತ್ಯೆ ಮಾಡುವವ, ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗಳನ್ನು ತಾತ್ಸಾರದಿಂದ ನೋಡುವವ... ಇಂಥವರ ಮಕ್ಕಳಿಗೆ ತಂದೆ ಎಂದರೆ ಗೌರವ- ಪ್ರೀತಿಯ ಭಾವ ಹೇಗೆ ತಾನೇ ಹುಟ್ಟಲು ಸಾಧ್ಯ? ಅವರಿಗೆ ಅಪ್ಪಂದಿರ ದಿನಾಚರಣೆ ಅರ್ಥಹೀನ ಎನಿಸದೇ ಇರದು.
ಇವರಷ್ಟೇ ಅಲ್ಲದೆ ಹೆಂಡತಿಯೊಂದಿಗೆ ದಿನನಿತ್ಯವೂ ಜಗಳವಾಡುವವರು, 24 ಗಂಟೆ ತಮ್ಮ ಉದ್ಯೋಗ, ವ್ಯವಹಾರಗಳಲ್ಲಿ ತಲ್ಲೀನರಾದವರು, ಹಣವೊಂದಿದ್ದರೆ ಮಕ್ಕಳನ್ನು ಖುಷಿ ಪಡಿಸಬಹುದೆಂಬ ಭ್ರಮೆಯಲ್ಲಿ ಇರುವವರು, ಮಕ್ಕಳು ಏಳುವ ಮೊದಲೇ ಮನೆಯಿಂದ ಹೊರಬಿದ್ದು, ಅವರು ಮಲಗಿದ ನಂತರ ಮನೆ ಸೇರುವವರು, ದಿನದ ಕೆಲ ಸಮಯವನ್ನಾದರೂ ಮಕ್ಕಳಿಗಾಗಿ  ಮೀಸಲಿಡದವರು, ಹೆತ್ತ ಮಕ್ಕಳ ಮೇಲೇ ಲೈಂಗಿಕ ದೌರ್ಜನ್ಯ ಎಸಗುವ ಕಡು ಪಾಪಿಗಳೂ ಇದ್ದಾರೆ. ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಡದೇ ಇದ್ದಾಗ ತಂದೆಯು `ಅಪ್ಪ'ನಾಗದೆ ಕೇವಲ `ಜನಕ' ಎನಿಸುತ್ತಾನೆ.

ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಒಳ್ಳೆಯ ಸಂಸ್ಕಾರ ಬೆಳೆಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಅಪ್ಪನ ಪಾತ್ರ ಬಹಳ ದೊಡ್ಡದು. ಅಪ್ಪನ ಒಂದು ಬಿಂದು ಪ್ರೀತಿಗಾಗಿ ಹಾತೊರೆಯುವ ಎಷ್ಟೋ ಮಕ್ಕಳಿಗೆ ಅವನ ಪ್ರೀತಿ, ಸ್ನೇಹ, ಭರವಸೆ, ಪ್ರೋತ್ಸಾಹ, ಮಮಕಾರಗಳು ಸಿಗುವಂತಾಗಿ `ನಿನ್ನಂಥ ಅಪ್ಪ ಇಲ್ಲ' ಎಂದು ಎಲ್ಲರೂ ಹೇಳುವಂತಾದರೆ, ಅಪ್ಪಂದಿರ ದಿನಾಚರಣೆ ಸಾರ್ಥಕವಾಗುತ್ತದೆ.    
 

No comments:

Post a Comment