ಭಂಡಾರದೊಡೆಯ
- ಮಾಲತೇಶ್ ಅರಸ್ ಹರ್ತಿಮಠ
ತುಂಗಭದ್ರ ದಡೆಯಲಿ, ಪವಿತ್ರ ಸುಕ್ಷೇತ್ರದಲಿ
ಕೋಟಿ ಕೋಟಿ ಭಕ್ತರ ಹರುಷದ ಹೊಳೆಯಲಿ
ಉಕ್ಕಿ ಹರಿಯುವ ಗೊರವಯ್ಯರ ದೋಣಿಯಾತ್ರೆ
ಲಕ್ಷೋಪಲಕ್ಷ ಭಕ್ತರ ಮೈಲಾರದ ಜಾತ್ರೆ
ಢಮರುಗ, ಕೊಳಲು, ಗೆಜ್ಜೆಯ ಸದ್ದು
ಬರುತ್ತಿದ್ದಾನೆ ಏಳುಕೋಟಿ ಭಂಡಾರದಿಂದೆದ್ದು
ಚಾಂಗಮಲೋ ಚಾಂಗಮಲೋ
ಮೈಲಾರದಲಿ ದೈವ-ಭಕ್ತರ ಸಮಾಗಮ
ಮುಗಿಲು ಮುಟ್ಟಿದೆ ಮೈಲಾರದ ಅಂಗಳದಲಿ
ಕೋಟಿ ಭಕ್ತರ ವೇಷ - ಘೋಷ.
ಢಮರುಗ ರಿಂಗಣ. ಗಂಟೆಯ ಸದ್ದಣ
ದೀವಟಿಗೆ ಬೆಳಕಿನ ಸಿಂಚನ, ಚಾಟಿಏಟಿನ ಕಂಪನ.
ದೋಣಿಯಲಿ ಹಾಲು ತುಪ್ಪ ಪಂಚಾಮೃತ
ಭಕುತರ ಮನದಲಿ ಏಳುಕೋಟಿಯ ಸೆಳೆತ
ಭಂಡಾರದೊಡೆಯ ನೀ... ಮೈಲಾರಲಿಂಗ
ನೋವನ್ನು ಕಳೆದು ನಲಿವು ನೀಡೋ ದೈವ
ಸ್ವಯಂ ಭೂಲಿಂಗಕೆ ತುಂಗೆಯ ಅಭಿಷೇಕ
ಗೊರವಯ್ಯನ ಜೋಳಿಗೆಯಲಿ ಶಕ್ತಿಯ ಜಾಗ
ಹೊಳೆಯುತಿವೆ ನಿನ್ನಯ ದಿವ್ಯ ಪಾದುಕಿಗಳೆರಡು
ವಿಶ್ವದ ತುಂಬಾ ನಡೆದಾಡಿದ ದೇವ ಕಣ್ತುಂಬಿ ನೋಡು
ಪರಶೆಯಲಿ ಜೋಡೆತ್ತುಗಳ ಸಾಲು ಸಾಲು ಬಂಡಿ
ಭಕ್ತರ ಹರಕೆಯಲ್ಲಿ ತುಂಬಿದೆ ದೈವದ ಹುಂಡಿ
ಗಂಗಿಮಾಳವ್ವ, ಚಿಕ್ಕಯ್ಯ ದೊಡ್ಡಯ್ಯರಿಗೂ ನಮಿಪೆ
ಭಂಡಾರದೊಡೆಯ ಇರಲಿ ದೇವ ನಿನ್ನಯ ಕೃಪೆ
ಕರಿಯ ಕಂಬಳಿಯ ತೊಟ್ಟ ಸಹಸ್ರಾರು ಗೊರವರು.
ಗದ್ದುಗೆಯಲಿ ಗುರು ವೆಂಕಪ್ಪಯ್ಯ ಒಡೆಯರು
ಶ್ವೇತ ತೇಜನ ಮೇಲೆ ಗುರು ಒಡೆಯರ ಸವಾರಿ
ಡೆಂಗಪ್ಪನ ಮರಡಿಯಲಿ ಕುಳಿತಿಹನು ಮೈಲಾರಿ.
ಬುಡಕಟ್ಟು - ಜಾನಪದ ಸಂಸ್ಕೃತಿಯ ಅನಾವರಣ
ಸಮುದ್ರದಲೆಯಷ್ಟು ಭಕ್ತರೇ ತುಂಬಿದ ತಾಣ
ಕೋಟಿ ಮನಗಳ ಮುಂದೆ ಬೃಹತ್ ಬಯಲಿನಲಿ
ಬಿಲ್ಲನೇರಿದ ಗೊರವಯ್ಯ ನುಡಿವ ಕಾರಣಿಕ
ಜಗದ ಒಡೆಯ ನೀನು ನನ್ನ ಒಡಲಿಗೆ
ಮೌನವಾಗುವುದು ಜಗವು ನಿನ್ನ ಸದ್ದಲೇ ಸದ್ದಿಗೆ
ಚಾಂಗಮಲೋ ಚಾಂಗಮಲೋ ಉದ್ಘೋಷ ನಿನಗೆ
ಅವತರಿಸಿ ಬಾ ಪವಾಡ ಪುರುಷ ನೀ ಮತ್ತೊಮ್ಮೆ ಭುವಿಗೆ..
No comments:
Post a Comment