Saturday, January 5, 2013


 * ಮಾಲತೇಶ್ ಅರಸ್ ಹರ್ತಿಮಠ

ಚಿತ್ರದುರ್ಗದ ಕೋಟೆ ತುಂಬಾ ರಾಮಾಚಾರಿ ಹೆಜ್ಜೆ ಗುರುತುಗಳು......

 * ನಾಗರಹಾವಿನ ಸರದಾರನ ನೆನಪು
 * ಕೋಟೆ, ಕಾಲೇಜು, ಗರಡಿ ಮನೆಯಲ್ಲಿ ವಿಷ್ಣು ಜಪ
 * ಕೋಟೆನಾಡಿನಿಂದ ಮೇರು ನಟ ಉದಯ



 ಚಿತ್ರದುರ್ಗದ ಕೋಟೆಗೂ ವಿಷ್ಣುವರ್ಧನ್‌ಗೂ ಅವಿನಾಭಾವ ಸಂಬಂಧ. ಏಳು ಸುತ್ತಿನ, ಸಿಡಿಲಿಗೂ ಬೆಚ್ಚದ ಐತಿಹಾಸಿಕ ಕೋಟೆ ಒಳ ಆವರಣದ ಪ್ರತಿ ಜಾಗದಲ್ಲೂ ವಿಷ್ಣುವರ್ಧನ್ ಹೆಜ್ಜೆ ಗುರುತುಗಳಿವೆ.
 1972 ರಲ್ಲಿ ನಿರ್ದೆಶಕ ಪುಟ್ಟಣ್ಣ ಕಣಗಾಲ್, ಸಂಪತ್ ಕುಮಾರ್ ಎಂಬ ಚಿಗುರು ಮೀಸೆ ಯುವಕನನ್ನು  ನಾಗರಹಾವಿನ ಮೂಲಕ ಚಿತ್ರದುರ್ಗದ ಕೋಟೆಗೆ ಕರೆತಂದು ರಾಮಾಚಾರಿಯಾಗಿ ನಿಲ್ಲಿಸಿದಾಗ ಕನ್ನಡ ಕಲಾಲೋಕ ವಿಷ್ಣುವರ್ಧನ್ ಎಂಬ ಮೇರು ನಟನ ಉದಯವಾಯಿತು. ವಿಷ್ಣು ಅಗಲಿ ಇಂದಿಗೆ (30.12.2012) ಮೂರು ವರ್ಷ ಆದರೂ ಚಿತ್ರದುರ್ಗದಲ್ಲಿ ಸದಾ ವಿಷ್ಣು ಜಪ ಇದ್ದೇ ಇದೆ.
 ‘‘ ಕನ್ನಡನಾಡಿನ ವೀರ ರಮಣಿಯ
    ಗಂಡು ಭೂಮಿಯ ವೀರ ನಾರಿಯ
    ಚರಿತೆಯ ನಾನು  ಹಾಡುವೆ..
  ಹೌದು..  ಡಾ. ವಿಷ್ಣುವರ್ಧನ್ ಎಂಬ ಅಪ್ರತಿಮ ನಾಯಕ ಹೊರಹೊಮ್ಮಿಸಿದ ಹಾಡಿದು. ಚಿತ್ರದುರ್ಗದ ಐತಿಹಾಸಿಕತೆಯನ್ನು ಬೆಚ್ಚಿ ಬೀಳಿಸುವಂತ ಹಾಡನ್ನು ಕೇಳುವಾಗ ರೋಮಗಳು ಎದ್ದೇಳುತ್ತವೆ. ಮನಸ್ಸು ಪುಟಿಯುತ್ತದೆ. ನಿಜಕ್ಕು ಇಲ್ಲಿ ನಾವೇ ಹೋರಾಟಕ್ಕೆ  ನಿಂತಿದ್ದೇವೆಂಬ ಭಾವನೆ  ಬೀರುತ್ತದೆ.
 ರಾಷ್ಟ್ರಕ್ಕೆ ಮತ್ತೊಮ್ಮೆ ಲೋಕಾರ್ಪಣೆ:
 ಇಂದಿಗೂ ಚಿತ್ರದುರ್ಗ ಅಂದ್ರೆ ಸಿನಿಮಾ ರಂಗದಲ್ಲಿ ವಿಷ್ಣುವರ್ಧನ್ ನೆನಪು ಚಿರಸ್ಥಾಯಿಯಾಗಿದೆ. ವಿಷ್ಣುವರ್ಧನ್‌ಗೆ  ಚಿತ್ರದುರ್ಗ ಅಂದ್ರೆ ಬಲು ಪ್ರೀತಿ. ಅದು ಇದೇ ಕೋಟೆಯಲ್ಲಿ ನಾಗರಹಾವು ಚಿತ್ರೀಕರಣ ನಡೆಯುವಾಗ ಪುಟ್ಟಣ್ಣ ಕಣಗಾಲ್ ಸಿನಿಮಾ ಶೂಟಿಂಗ್ ನಡೆಯುತ್ತೆ ಅಂತ ಜನ ವೀಕ್ಷಣೆಗೆ ಸಾಲು ಸಾಲು ಬಂದಿದ್ರು. ಪುಟ್ಟಣ್ಣ ಕಣಗಾಲ್ ಕನ್ನಡ ನಾಡು ಕಂಡ ಧೀಮಂತ  ನಿರ್ದೇಶಕ, ಅಂತಹ ಕಣಗಾಲ್ ಯುವಕ ವಿಷ್ಣುವರ್ಧನ್ ಅವರಿಗೆ  ನಟನೆ ಕಲಿಸುತ್ತಿದ್ದ ಬಗೆ ನೋಡಿ ಈ ಯುವಕ ಮುಂದೊಂದು ದಿನ  ಮಹಾನ್ ನಟನಾಗುತ್ತಾನೆ ಎಂಬ ಅನಿಸಿಕೆ  ಕೋಟೆಯಲ್ಲಿ ಪ್ರತಿಧ್ವನಿಸಿದ್ದವು. ಅದು ಹುಸಿಯಾಗಲಿಲ್ಲ.  ದುರ್ಗದ ನೆಲ ವಿಷ್ಣುವರ್ಧನ್ ಉದಯಕ್ಕೆ   ಕಾರಣವಾಗಿತ್ತು. ಅಂದಿನಿಂದಲೂ ಇಂದಿನವರೆಗೂ ನಾಗರಹಾವಿನ ಮೂಲಕ ದುರ್ಗದ ಕೋಟೆಯೇ ರಾಷ್ಟ್ರಕ್ಕೆ ಮತ್ತೊಮ್ಮೆ ಲೋಕಾರ್ಪಣೆಯಾಯಿತು.
  ಕ್ಯಾಜೇ  ಬುಲ್ ಬುಲ್ ಮಾತಾಡಕಿಲ್ವಾ :
 ಕೋಟೆಯ ಮುಂದೆ ಮದಕರಿನಾಯಕ ನಿರ್ಮಿಸಿದ  ನಾಗರಹಾವು ಕಲ್ಲಿನ ಕೆತ್ತನೆ ನಿಜಕ್ಕೂ ನಾಗರಹಾವು ಸಿನಿಮಾಕ್ಕೆ ಮತ್ತಷ್ಟು ಶಕ್ತಿ ತುಂಬಿಕೊಟ್ಟಿತು. ನಾಗರಹಾವು ಚಿತ್ರದ ಸಂಪೂರ್ಣ ಚಿತ್ರೀಕರಣ ದುರ್ಗದಲ್ಲಿಯೇ ನಡೆದಿತ್ತು. ರಂಗಯ್ಯನ ಬಾಗಿಲು ಬಳಿ ಜಲೀಲ್ ಪಾತ್ರದ  ಅಂಬರೀಶ್, ಆರತಿಗೆ ‘ ಕ್ಯಾಜೇ  ಬುಲ್ ಬುಲ್ ಮಾತಾಡಕಿಲ್ವಾ ’ ಎಂದು ಅಣಕಿಸಿದ್ದನ್ನು ಮುರುಘಾ ರಾಜೇಂದ್ರ ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಕುಳಿತು ಜಲೀಲ್ ( ಅಂಬರೀಶ್) ಕಿರುಕುಳ ತಪ್ಪಿಸಿದರೇ ನಿನ್ನ ತಂಗಿ ಅಲುವೇಲು(ಆರತಿ) ಕೊಟ್ಟು ಮದುವೆ ಮಾಡ್ತೀಯಾ ಎಂದು ವರದ (ಶಿವರಾಂ)ಗೆ ವಿಷ್ಣುವರ್ಧನ್ ತಾಕೀತು ಮಾಡುವುದು. ರಂಗಯ್ಯನ ಬಾಗಿಲು ಬಳಿ ಜಲೀಲ್‌ನೊಂದಿಗೆ ಫೈಟ್ ಮಾಡುವ ದೃಶ್ಯಗಳು, ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪರೀಕ್ಷೆ ಬರೆಯುವಾಗ ರಾಮಾಚಾರಿ ತೊಡೆ ತುಂಬಾ ಕಾಪಿ ಚೀಟಿ ಅಂಟಿಸಿಕೊಂಡು ಕುಳಿತ ದೃಶ್ಯಗಳು. ಮಾರ್ಗರೇಟ್‌ಗೂ ಮುತ್ತಿಕ್ಕಿ ಪ್ರಾಚಾರ್ಯರಿಂದ ಬೈಸಿಕೊಂಡ ದೃಶ್ಯಗಳು ವಿಷ್ಣುವರ್ಧನ್ ರೂಪದಲ್ಲಿ ಇಂದಿಗೂ ದುರ್ಗದ ಜನರ ಮನದಲ್ಲಿ ಅಚ್ಚೊತ್ತಿವೆ.
 ಅಲ್ಲದೆ ಇಲ್ಲಿ ನಾಗರಹಾವಿನ ನಂತರ ಸಖತ್ ಸಿನಿಮಾಗಳು ಶೂಟಿಂಗ್ ನಡೆಸಿವೆ. ಕಲ್ಲರಳಿ ಹೂವಾಗಿ, ಮೈಲಾರಿ, ಹುಡುಗರು, ಪರೋಡಿ, ಹೀಗೆ ಸಿನಿಮಾಕ್ಕೆ ಚಿತ್ರದುರ್ಗವನ್ನು ನಾಗರಹಾವು ತಳಪಾಯ ಹಾಕಿಕೊಟ್ಟಿದೆ.
 ಲವ್ ಅಂಡ್ ಡೆತ್ ಸ್ಪಾಟ್:
  ಹಾಗೆ ನೋಡಿದರೇ ಐತಿಹಾಸಿಕ  ಕೋಟೆ  ಆವರಣದ  ತುತ್ತ ತುದಿ ತುಪ್ಪದ ಕೊಳ ಒಂದರ್ಥದಲ್ಲಿ ರಾಮಾಚಾರಿ ವಿಷ್ಣುವರ್ಧನ್ ಅವರ ಲವ್ ಅಂಡ್ ಡೆತ್ ಸ್ಪಾಟ್ ಕೂಡಾ ಹೌದು. ಮಾರ್ಗರೇಟ್‌ಳೊಂದಿಗೆ ಗಾಢವಾದ ಪ್ರೀತಿಯಲ್ಲಿ ಮುಳುಗಲು ಪುಟ್ಟಣ್ಣ ಆ ಸ್ಪಾಟ್ ಮಾಡಿಕೊಂಡಿದ್ದರು. ಅಂತಿಮವಾಗಿ ರಾಮಾಚಾರಿ ಮಾರ್ಗರೇಟ್‌ಳೊಂದಿಗೆ ಅಲ್ಲಿಂದ ಕೆಳಗೆ  ಹಾಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಚಲನಚಿತ್ರ ದೃಷ್ಟಿಯಿಂದ ಚಿತ್ರದುರ್ಗದ ಕೋಟೆ ಅಂತರ ಧರ್ಮಿಯ ಪ್ರೇಮಿಗಳಿಗೆ ದುರಂತದ ಸಂದರ್ಭ ಸೃಷ್ಠಿಸಿದೆ. ನಾಗರಹಾವಿನಲ್ಲಿ ರಾಮಾಚಾರಿ ಮಾರ್ಗರೇಟ್‌ಗಳೊಂದಿಗೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ. ಅದೇ ರೀತಿ ಕಲ್ಲರಳಿ ಹೂವಾಗಿ ಚಿತ್ರದಲ್ಲಿಯು  ಕೂಡಾ ಜಯದೇವ(ವಿಜಯ್ ರಾಘವೇಂದ್ರ )ನೂರ್ ಜಹಾನ್ ರ ಕೊಲೆಯಾಗುತ್ತದೆ.
  ನಾಗರಹಾವು ಚಿತ್ರಿಕರಣವಾಗುವಾಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ. ಮೋಡ ಮುಸುಕಿದರೇ ತಾಸುಗಟ್ಟಲೇ ಶೂಟಿಂಗ್ ನಿಲ್ಲಿಸಲಾಗುತ್ತಿತ್ತಂತೆ, ಸೂರ್ಯ ಕಂಡಾಕ್ಷಣ ಆರಂಭಿಸಲಾಗುತ್ತಿತ್ತು. ತರಾಸು ಅವರ ನಾಗರಹಾವು, ಸರ್ಪಮತ್ಸರ, ಎರಡು ಹೆಣ್ಣು ಒಂದು ಗಂಡು ಕಥೆಗಳನ್ನಾಧರಿಸಿ ನಾಗರಹಾವು ಚಿತ್ರ ನಿರ್ಮಿಸಲಾಗಿತ್ತು, ತರಾಸು ಅವರ  ಹೈಸ್ಕೂಲ್‌ನಲ್ಲಿ ನಡೆಯುವ ಪ್ರೇಮದ ಘಟನೆಗಳನ್ನಾಧರಿಸಿ ಕಥೆ ಬರೆದಿದ್ದರು ಇವೆಲ್ಲವುಗಳನ್ನು ಸೇರಿಸಿ ಪುಟ್ಟಣ್ಣ  ಹೊಸ ಸ್ಕ್ರಿಪ್ಟ್ ಬರೆದು ಕಾಲೇಜು ಸನ್ನಿವೇಶಗಳಿಗೆ ಅಳವಡಿಸಿಕೊಂಡಿದ್ದರು. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಪುಟ್ಟಣ್ಣ ಹೀರೋ ಇಮೇಜ್  ನೀಡಿದ್ದರು. ಚಾಮಯ್ಯ ಮೇಷ್ಟ್ರು, ರಾಮಾಚಾರಿ, ಅಲುವೇಲು, ಮಾರ್ಗರೇಟ್, ಅಷ್ಟೇ ಏಕೆ ಪದೇ ಪದೇ ದೇವ್ರೆ ದೇವ್ರೆ ಎನ್ನುತ್ತಿದ್ದ ಚಾಮಯ್ಯ ಮೇಷ್ಟ್ರು ಪತ್ನಿ ಎಲ್ಲವೂ ಗಮನ ಸೆಳೆದಿದ್ದವು.
 ಕೇರೆಹಾವು:
  ಆದ್ರೆ ನಾಗರಹಾವು ಸಿನಿಮಾ ಬಿಡುಗೆಯಾದಾಗ ಸ್ವತಃ ತರಾಸು ಇದೊಂದು ಕೇರೆ ಹಾವು ಎಂದು ಬಣ್ಣಿಸಿ ವಿವಾದ ಸೃಷ್ಟಿಸಿದ್ದರು.  ಈ ವೇಳೆ ವಿಷ್ಣುವರ್ಧನ್ ಸ್ವತಃ ಆತಂಕಕ್ಕೆ ಒಳಗಾಗಿದ್ದರು. ಮೊದಲ ಚಿತ್ರ ಸೋತರೇ  ಮುಂದೇನು?  ಎಂಬ ಚಿಂತೆ ಅವರಲ್ಲಿ ಮೂಡಿತ್ತು. ಆದರೇ ಪರಿಸ್ಥಿತಿ ಬೇರೆಯೇ ಆಗಿತ್ತು. ನಾಗರಹಾವು ಯಶಸ್ವಿಯಾಯ್ತು. ವಿಷ್ಣು ಅಲ್ಲಿಂದ ಹಿಂತಿರುಗಿ ನೋಡಲೇ  ಇಲ್ಲ.
 ನಾಗರಹಾವು ಚಿತ್ರ ನೂರನೇ ದಿನ ಸಂಭ್ರಮದ ಹಬ್ಬ ಯಶಸ್ವಿಯಾಗಿ ನಡೆದಿತ್ತು. ಚಿತ್ರದುರ್ಗಕ್ಕೆ ಚಿತ್ರದುರ್ಗವೇ ಸಕ್ಕರೆಯ ಸಿಹಿಯಲ್ಲಿ ಮಿಂದು ಹೋಗಿತ್ತು. ಮನೆ ಮನೆಯಲ್ಲಿ ಹಬ್ಬ. ಮನೆ ಮಗ ಗೆದ್ದ ಸಂಭ್ರಮ. ಎಲ್ಲರ ಮನೆಯಲ್ಲು ಕನ್ನಡ  ನಾಡಿನ ವೀರ ರಮಣಿಯ ಹಾಡು ಗುನುಗುತ್ತಿತ್ತು. ಒಂದೊಂದು ಹಾಡುಗಳು ಇಲ್ಲಿ ಸಾಕಷ್ಟು ಖುಷಿಯನ್ನು  ಕೊಡುತ್ತವೆ, ಸಾಕಷ್ಟು ಮುದವನ್ನು  ಕೊಡುತ್ತವೆ.
  ಇದೇ  ವಿಷ್ಣುವರ್ಧನ್ ಮತ್ತು  ಚಿತ್ರದುರ್ಗದ ಕೋಟೆಗೂ ಇರುವ ಪ್ರೀತಿ, ಒಲವು, ಅಕ್ಕರೆ, ಜೀವ ಎಂದು ಜನ ನೆನಪಿಸಿಕೊಳ್ಳುತ್ತಿದ್ದಾರೆ. ರಾಮಾಚಾರಿ, ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಅಗಲಿಕೆಯನ್ನು ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ  ಬಹುಶಃ ಡಾ. ರಾಜ್‌ಕುಮಾರ್ ಅವರ ನಂತರ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಹೃದಯವಂತ, ಪ್ರೀತಿ ಪಾತ್ರ ನಟ ಕನ್ನಡ ಚಿತ್ರರಂಗದಲ್ಲಿ ಸಿಗಲಿಕ್ಕಿಲ್ಲ. ಸಿಗುವುದೂ ಇಲ್ಲ ಎಂದು ಇಂದಿಗೂ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಅದು  ಅಕ್ಷರಶಃ ಸತ್ಯ.
 ಬಾಕ್ಸ್ :
  ಅಕ್ಷರಶಃ ಇಂದು  ನಮ್ಮೊಟ್ಟಿಗೆ  ಅಂದಿನ ವಿಷ್ಣು  ಕೂಡಾ ಇಲ್ಲ.  ವಿಷ್ಣು ಮೇಷ್ಟ್ರಾಗಿದ್ದ ಚಾಮಯ್ಯ ಮೇಷ್ಟ್ರು ಅಶ್ವಥ್ ಕೂಡಾ ಇಲ್ಲ. ಇದೇ ಗುರು  ಶಿಷ್ಯ ಸಂಬಂಧ  ಅಲ್ಲವೇ, ಆದ್ರೆ ಅವರ  ಹೆಜ್ಜೆ ಗುರುತುಗಳಿವೆ. ಕೋಟೆಯಲ್ಲಿ ಚಾಮಯ್ಯ ಮೇಷ್ಟ್ರು ಸದ್ದು ಇಂದೂ ಇದೆ. ಮೇಷ್ಟ್ರೇ ಮೇಷ್ಟ್ರೇ ನಾನು ತಪ್ಪು ಮಾಡಿಲ್ಲ ಮೇಷ್ಟ್ರೇ ಎಂದು ರಾಮಾಚಾರಿ ಅಬ್ಬರಿಸುವ ಧ್ವನಿಗಳಿವೆ.
  ಇಂದು ವಿಷ್ಣು ಅಗಲಿಕೆಯಿಂದ ಈ ಐತಿಹಾಸಿಕ ಕೋಟೆ.  ಕಾಲೇಜು, ಕ್ರೀಡಾಂಗಣ, ಈ ಗರಡಿ ಮನೆಗಳು ವಿಷ್ಣು ಇಲ್ಲದೇ ಖಾಲಿ ಖಾಲಿಯಾಗಿ ಉಳಿದಿವೆ. ಕೇವಲ ನೆನಪಿನೊಂದಿಗೆ...


























No comments:

Post a Comment