ಇಂದು ವಿಶ್ವ ಕುಟುಂಬ ದಿನದ ನಿಮಿತ್ತ ಲೇಖನ
ಕಳಚದಿರಲಿ ಸಂಬಂಧಗಳ ಕೊಂಡಿ
ಇಂದು ಒಟ್ಟಾಗಿ ಬಾಳುವ ಕುಟುಂಬ ಕಾಣಸಿಗುವುದು ಅಪರೂಪ. ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ದೊಡ್ಡಪ್ಪ-ದೊಡ್ಡಮ್ಮ, ಕಾಕಾ-ಕಕ್ಕಿ, ಅವರ ಮಕ್ಕಳು, ಮೊಮ್ಮಕ್ಕಳು ಹೀಗೆ ಕೂಡಿ ಬಾಳುವುದರಲ್ಲಿ ಇರುವ ಆನಂದ ಮತ್ತೆದರಲ್ಲೂ ಸಿಗದು.
ಆದರೆ ಇಂದು ಏನಾಗಿದೆ? ಕುಟುಂಬದಲ್ಲಿ ಸಾಮರಸ್ಯ ಎನ್ನುವುದೇ ಇಲ್ಲ. ಕೂಡಿ ಬಾಳುವ ಮನಸ್ಸುಗಳಿಲ್ಲ. ಅದಕ್ಕೆ ಹಿರಿಯರಿಂದ ಸಾಮರಸ್ಯ ಇರುವ ಕುಟುಂಬವನ್ನು ದೀಪ ಹಚ್ಚಿ ಹುಡುಕಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಇದಕ್ಕೆಲ್ಲಾ ನಾವೇ ಕಾರಣ ಎಂಬುದನ್ನು ಮರೆಯುವಂತಿಲ್ಲ.
ಆ ಕುಟುಂಬ ಹೇಗಿದೆ ನೋಡು? ಅವರ ಮನೆಯಲ್ಲಿ ಜಗಳವೆನ್ನುವುದೇ ಇಲ್ಲ ಎಂದು ನಾವುಗಳೇ ಭಾವಿಸಿಕೊಳ್ಳುತ್ತೇವೆ. ಎಲ್ಲರ ಮನೆ, ಎಲ್ಲ ಕುಟುಂಬಗಳಲ್ಲಿ ಜಗಳ ಇದ್ದದ್ದೆ. ಎಲ್ಲರ ಮನೆ ದೋಸೆನೇ.... ಎನ್ನುವ ಗಾದೆಯಂತಿದೆ ವಾಸ್ತವ.
ಆದರೆ ಈ ಜಗಳಗಳನ್ನು ಬಗೆಹರಿಸುವ ಹಿರಿಯರ ಮಾರ್ಗದರ್ಶನದ ಕೊರತೆ ಎಲ್ಲರನ್ನೂ ಕಾಡುತ್ತಿದೆ. ಅವಿಭಕ್ತ ಕುಟುಂಬ ಮಾಯವಾಗಿದ್ದು, ಎಲ್ಲಿ ನೋಡಿದರಲ್ಲಿ ಗಂಡ-ಹೆಂಡತಿ, ಇಬ್ಬರು ಮಕ್ಕಳ ಕುಟುಂಬ ಮಾತ್ರ ಕಾಣುತ್ತೇವೆ. ಇಲ್ಲಿ ಗಂಡ- ಹೆಂಡತಿ ಜಗಳವಾಡಿದರೆ ಬಿಡಿಸುವವರಾರು? ಹಿರಿಯರನ್ನಂತೂ ಇವರೇ ಸೇರಿಸುವುದಿಲ್ಲ. ಇದಕ್ಕೇ ವಿಚ್ಛೇದನವೇ ಅಂತಿಮ ಆಯ್ಕೆ ಜಾಸ್ತಿಯಾಗುತ್ತಿರುವುದು.
ವಿಚ್ಛೇದನ ಪ್ರಕರಣಗಳು ಈ ಹಿಂದೆ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ಇರುತ್ತಿದ್ದವು. ಈಗ ಸಣ್ಣಪುಟ್ಟ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಹಿರಿಯ ನ್ಯಾಯವಾದಿಯೊಬ್ಬರು.
ಈ ಹಂತದಲ್ಲಿ ಕುಟುಂಬಗಳು ಒಡೆಯುತ್ತವೆ. ಮನಸ್ಸುಗಳು ಹಾಳಾಗುತ್ತವೆ. ಸಂಬಂಧಗಳು ಕಳಚುತ್ತವೆ. ಇವರನ್ನು ಒಂದುಗೂಡಿಸಲು ಮನೆಯಲ್ಲಿ ಬೇರೆ ಸದಸ್ಯರು ಇಲ್ಲದಿರುವುದೇ ಇದಕ್ಕೆ ಕಾರಣ. ಮಕ್ಕಳಿಗೆ ತಮ್ಮ ಕುಟುಂಬ ಎಷ್ಟು ದೊಡ್ಡದಿದೆ ಎಂಬ ಅರಿವೇ ಇರುವುದಿಲ್ಲ. ಯಾವುದೋ ಒಂದು ಕಾರ್ಯಕ್ಕೆ ಎಲ್ಲರೂ ಒಂದೆಡೆ ಸೇರಿದಾಗ ಇವರಾರು ಪುಟ್ಟಾ ಎಂದು ತಮ್ಮ ಮಕ್ಕಳನ್ನು ಕೇಳಿದಾಗ, ಗೊತ್ತಿಲ್ಲ ಎಂಬ ಉತ್ತರ ಸಹಜ. ಇದರಿಂದ ಎಷ್ಟೋ ಬಾರಿ ಕೇಳಿದವರಿಗೆ ಅವಮಾನವಾಗಿರಲಿಕ್ಕೂ ಸಾಕು. ಮೊಬೈಲ್‌ನಲ್ಲಿ ಹಾಯ್ ಅಂಕಲ್, ಬೈ ಆಂಟಿ ಹೆಚ್ಚಾಗಿದೆ.
ದೂರದ ಸಂಬಂಧಿಗಳಿರಲಿ, ಅತಿ ಹತ್ತಿರದ ಅಜ್ಜ- ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಕಾಕಾ-ಕಕ್ಕಿ, ಅವರ ಮಕ್ಕಳು, ಸೋದರ ಮಾವ, ಅತ್ತೆಯಂದಿರ ಪರಿಚಯ ಇಲ್ಲದಿರುವುದು ದುರದೃಷ್ಟಕರ. ಇವಕ್ಕೆಲ್ಲ ಕಾರಣವೆಂದರೆ ಹೊಂದಾಣಿಕೆ ಕೊರತೆ. ಇದೊಂದು ಇದ್ದಲ್ಲಿ ಸಮಸ್ಯೆಯೇ ಉದ್ಭವಿಸದು. ಆದ್ದರಿಂದ ಈ ಹೊಂದಾಣಿಕೆ ಪದವನ್ನು ಮಾತ್ರ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ.
ಹಿಂದಿನ ಕುಟುಂಬದಲ್ಲಿ ಯಾರೇನೇ ಅಂದರೂ ಸದಸ್ಯರು ಸಹಿಸಿಕೊಳ್ಳುತ್ತಿದ್ದರು. ಈಗ ಎಲ್ಲರೂ ಆರ್ಥಿಕವಾಗಿ ಸದೃಢರಾಗಿ ಬೆಳೆದಿರುವುದರಿಂದ ಸಮಸ್ಯೆಗಳು ಹೆಚ್ಚುತ್ತಿವೆ. ಒಂದೇ ಕುಟುಂಬದವರು ಒಂದೇ ಊರಿನಲ್ಲಿದ್ದರೂ ಎರಡ್ಮೂರು ಮನೆಗಳನ್ನು ಕಾಣುತ್ತಿದ್ದೇವೆ.
ಕುಟುಂಬದಲ್ಲಿ ನೆಮ್ಮದಿ ಹಾಗೂ ಶಾಂತಿಯ ಬಾಳು ಕಾಣಬೇಕಾದರೆ ಒಮ್ಮೆ ಹೊಂದಾಣಿಕೆ ಪ್ರಯೋಗ ಮಾಡಿನೋಡಿ. ಪ್ರಯೋಗ ಮಾಡುವುದರಲ್ಲಿ ತಪ್ಪೇನಿಲ್ಲವಲ್ಲ. ಇದರಿಂದ ವಿವಾಹ ವಿಚ್ಛೇದನದ ಪ್ರಕರಣಗಳೂ ಕಮ್ಮಿಯಾಗಬಹುದು.
ಪೀಳಿಗೆಯ ಅಂತರ ಸಮತೋಲನ ಮಾಡುವ ಹಿರಿಯರನ್ನು ಕಡೆಗಣಿಸಿದ್ದರಿಂದ ಪಾಲಕರು ಮತ್ತು ಅವರ ಮಕ್ಕಳು ಜೀವನ ನೋಡುವ ದೃಷ್ಟಿಯಲ್ಲಿ ಇರುವ ವ್ಯತ್ಯಾಸ ಮತ್ತು ವಿಭಿನ್ನತೆಗಳು ದೂರು-ದುಮ್ಮಾನಗಳಾಗಿ ಪರಿವರ್ತಿತವಾಗಿವೆ. ದೂರುಗಳನ್ನು ದೂರ ಸರಿಸಲು ಅವಿಭಕ್ತ ಕುಟುಂಬದ ಸನಾತನ ಚಿಂತನೆಗಳನ್ನು ಕಾಲಾನುಕೂಲ ಆಚಾರಗಳನ್ನಾಗಿಸಿ ವಿಭಕ್ತ ಕುಟುಂಬದ ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು. ಒಲ್ಲದ ವಿಷಯಗಳನ್ನು ಪಕ್ಕಕ್ಕಿರಿಸಿ ಒಪ್ಪುವ ವಿಷಯಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವೆನಿಸಿದೆ.
ಕಾಲದ ಹೊಡೆತಕ್ಕೆ ಅವಿಭಕ್ತ ಕುಟುಂಬದ ಸುಮಧುರ ಬಂಧನ ಕರಗಿರುವುದು ಎದ್ದು ಕಾಣುತ್ತದೆ. ಚಿಕ್ಕ ಕುಟುಂಬ, ಚೊಕ್ಕ ಕುಟುಂಬ ಎಂಬ ಆಕರ್ಷಣೆಗೆ ಮರುಳಾಗಿ ಮತ್ತು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ವಿಭಕ್ತ ಕುಟುಂಬ ಸ್ವೀಕರಿಸಿದ್ದೇವೆ. ಸಂಬಂಧಗಳನ್ನು ಹಳಸದೇ ಸಮಸ್ಯೆಯ ಉದರದೊಳಗಿಂದ ಸಮಾಧಾನ ಹುಡುಕಿ ತೆಗೆದು ಜೀವನ ಮಧುರವಾಗಿಸಿಕೊಂಡು ಬದುಕಲು ಪ್ರತಿಯೊಬ್ಬರು ಮನಸ್ಸು ಮಾಡಬೇಕಿದೆ.
*ಇಂದಿನ ಪೀಳಿಗೆಗೆ ಕುಟುಂಬದ ತಾತ್ಪರ್ಯ ತಿಳಿಹೇಳಿ.
*ವೈಮನಸ್ಸು ಉಂಟಾಗದಂತೆ ಮನಸ್ಸನ್ನು ಹತೋಟಿಯಲ್ಲಿಡಿ.
*ಜಗಳವಾಡುವ ಪ್ರಸಂಗ ಎದುರಾದಲ್ಲಿ ಒಬ್ಬರು ಸುಮ್ಮನಿರಿ.
* ಸಿಟ್ಟು ಬಂದಾಗ ನುಂಗಿಕೊಳ್ಳಿ. (1ರಿಂದ 100ರವರೆಗೆ ಮಗ್ಗಿ ಎಣಿಸಿ)
*ಆಸ್ತಿಗಾಗಿ ಜಗಳ ಬೇಡ. ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ.
*ಹಬ್ಬ-ಹರಿದಿನಗಳಂದು ಎಲ್ಲರೂ ಸೇರಿ ಸಂಭ್ರಮಿಸಿ, ಪರಸ್ಪರ ಸುಖ-ದುಃಖ ಹಂಚಿಕೊಳ್ಳಿ.
-ಎಂ.ಆರ್. ದೇಸಾಯಿ