Thursday, August 22, 2013
Monday, August 19, 2013
ಹಾಲುಮತ ಸಮುದಾಯ
ಹಾಲುಮತ ಸಮುದಾಯ : ಸಂಸ್ಕೃತಿ ಮಹಿಳೆ
ಉದ್ದೇಶ, ಚಾರಿತ್ರಿಕ ಹಿನ್ನಲೆಮೊಲೆ ಮುಡಿ ಬಂದದ್ದೇ ಶಾಪ
ಭಾರತೀಯರು ಸಮಾಜದ ಯಾವುದೇ ಧರ್ಮ, ಜಾತಿ, ಜನಾಂಗ, ಬುಡಕಟ್ಟುಗಳನ್ನು ಪರಿಶೀಲಿಸಿದರೆ ಅಲ್ಲಿ ಮಹಿಳೆ ಎರಡನೆಯ ದರ್ಜೆಯ ಪ್ರಜೆಯಾಗಿ ಪರಿಗಣಿಸಲ್ಪಟ್ಟಿರುವುದು ತಿಳಿದು ಬರುತ್ತದೆ. ಜೈವಿಕ ಗುಣಲಕ್ಷಣಗಳ ಕಾರಣದಿಂದ ಮಹಿಳೆಯು ಪುರುಷನಿಗಿಂತ ಭಿನ್ನವಾಗಿದ್ದಾಳೆ ಅಷ್ಟೆ. ಆದರೂ ಪುರುಷ ಪ್ರಧಾನ ಸಮಾಜ ಅವಳ ಜೈವಿಕ ರಚನೆಯ ವ್ಯತ್ಯಾಸದ ನೆಪವೊಡ್ಡಿ ಅವಳನ್ನು ಅನೇಕ ಸಂದರ್ಭ ಸನ್ನಿವೇಶಗಳಲ್ಲಿ ಶೂದ್ರರಿಗಿಂತಲೂ ಕಡೆಯಾಗಿ ನೋಡಿದೆ. ಭಾರತೀಯ ಸಮುದಾಯದ ಎಲ್ಲ ಸ್ಥರಗಳಲ್ಲೂ ಮಹಿಳೆ ತಾನು ಪಡೆಯಬೇಕಾದ ಸ್ಥಾನಮಾನಗಳಿಂದ ವಂಚಿತಳಾಗುತ್ತ ಬಂದಿದ್ದಾಳೆ. ಮನು ಪ್ರಣೀತ ಪುರುಷ ಅಹಂಕಾರ ಎಲ್ಲ ಜನಾಂಗಗಳಲ್ಲೂ ಅಘೋಷಿತವಾಗಿ ಸ್ವೀಕೃತವಾಗಿದೆ. ಮೊಲೆಮುಡಿ ಬಂದಡೆ ಹೆಣ್ಣೆಂಬರು ಗಡ್ಡಮೀಸೆ ಬಂದಡೆ ಗಂಡೆಂಬರು ಎಂದು ಹನ್ನೆರಡನೆಯ ಶತಮಾನದಲ್ಲಿಯೇ ಶರಣರು ಹೇಳಿದ್ದಾರಾದರೂ ಶರಣ ತತ್ವಕ್ಕಿಂತ ಮನುತತ್ವವೇ ಪುರುಷವರ್ಗವನ್ನು ಆಕರ್ಷಿಸಿದೆ. ಒಟ್ಟಾರೆ ಮೊಲೆ ಮುಡಿ ಮಹಿಳೆಗೆ ಶಾಪವಾಗಿ ಪರಿಣಮಿಸಿವೆ. ಇದಕ್ಕೆ ಕುರುಬ, ಗೊಂಡ, ರಾಜಗೊಂಡ ಮಹಿಳೆಯರು ಹೊರತಾಗಿಲ್ಲ.
ಒಟ್ಟು ಮಹಿಳಾ ಸಮುದಾಯವನ್ನು ಸಮಗ್ರವಾಗಿ ನೋಡಿದಾಗ ಅವರೆಲ್ಲರ ಸ್ಥಿತಿ ಒಂದೇ ತೆರನಾಗಿದ್ದರೂ ಬೇರೆ ಬೇರೆ ಜನಾಂಗದ ಮಹಿಳೆಯರನ್ನು ಪ್ರತ್ಯೇಕಿಸಿ ನೋಡಿದಾಗ ಒಬ್ಬರಿಗಿಂತ ಮತ್ತೊಬ್ಬರು ಭಿನ್ನವಾಗಿ ತೋರುತ್ತಾರೆ. ಅವರೆಲ್ಲರ ನೋವಿನ ರಾಗ ಒಂದೇ ಆಗಿದ್ದರು ಆಲಾಪ ಭಿನ್ನವಾಗಿರುವುದು ಕಂಡು ಬರುತ್ತದೆ.
ಪ್ರಸ್ತುತ ಅಧ್ಯಯನದಲ್ಲಿ ಕುರುಬ, ಗೊಂಡ, ರಾಜಗೊಂಡ ಮಹಿಳೆಯರ ಪ್ರತ್ಯೇಕ ಆಲಾಪವನ್ನು ಕೇಳಿಸುವ ಪ್ರಯತ್ನ ಮಾಡಲಾಗಿದೆ.
ಜನಾಂಗವೊಂದು ನಾಮಹಲವು
ಗೊಂಡ, ರಾಜಗೊಂಡ, ಕುರುಬ ಎನ್ನುವ ಪದಗಳು ಒಂದೇ ಜನಾಂಗವನ್ನು ಹೆಸರಿಸುವ ಭಿನ್ನ ಭಿನ್ನ ಪ್ರದೇಶಗಳಲ್ಲಿ ಬಳಸುವ ಭಿನ್ನ ಭಿನ್ನ ಪದಗಳು. ಹಾಲುಮತ ಎನ್ನುವುದು ಇವೆಲ್ಲವನ್ನು ಒಳಗೊಳ್ಳುವ ಶಬ್ದ. ಕುರುಬ, ಗೊಂಡ ಎಂದು ಹೇಳಿಕೊಳ್ಳಲು ಸಂಕೋಚಪಡುವವರು ಹಾಲುಮತದವರು ಎಂದ ಗುರುತಿಸಿಕೊಳ್ಳಲು ಬಯಸುತ್ತಾರೆ. ಕುರುಬ, ಗೊಂಡ, ರಾಜಗೊಂಡ ಇವರೆಲ್ಲರ ಮಧ್ಯೆ ಪ್ರಾದೇಶಿಕವೆನ್ನಬಹುದಾದ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಕುರುಬರು ಗೊಂಡರೆನ್ನಿಸಿಕೊಂಡವರಿಗಿಂತ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಗೆ ಆಧುನೀಕರಣಗೊಂಡಿದ್ದಾರೆ.
ಕುರುಬ ಹಾಗೂ ಗೊಂಡ ಈ ಎರಡೂ ಶಬ್ದಗಳು ಅವರಿಬ್ಬರೂ ಒಂದೇ ತೆರನಾದ ಪ್ರಾದೇಶಿಕ ಸನ್ನಿವೇಶದಲ್ಲಿ ನೆಲೆನಿಂತವರು ಎಂಬುದನ್ನು ಸೂಚಿಸುತ್ತವೆ. ಕುರುಬದ ಮೂಲದಲ್ಲಿರುವ ಕುರು, ಗೊಂಡದ ಮೂಲದಲ್ಲಿರುವ ಕೊಂಡ ಎರಡೂ ಶಬ್ದಗಳು ಎತ್ತರವಾದ ಪ್ರದೇಶ, ಗುಡ್ಡಬೆಟ್ಟವನ್ನು ಸೂಚಿಸುತ್ತವೆ.
ಪಾರ್ವತಿಯ ಎಡಗೈ ಗೊಂಬೆ
ಮಹಿಳೆ ಪುರುಷನಿಗಿಂತ ಕಡಿಮೆ ಎನ್ನುವ ವಿಚಾರವನ್ನು ಕುರುಬ-ಗೊಂಡ ಎಂಬ ಭೇದವಿಲ್ಲದೆ ತಾವು ಕಟ್ಟಿಕೊಂಡ ಪುರಾಣ ಹಾಗೂ ಜನಪದ ಕತೆಗಳ ಮೂಲಕ ದಾಖಲಿಸುತ್ತ ಬಂದಿದ್ದಾರೆ. ಹಾಲುಮತ ಸಂಬಂಧ ಪುರಾಣಗಳು ಇಂತದೊಂದು ಉಪಕಥನವನ್ನು ಕಟ್ಟಿಕೊಂಡಿವೆ. ಒಂದು ದಿವಸ ಶಿವ ಪಾರ್ವತಿಯರು ಭೂಲೋಕ ಸಂಚಾರಕ್ಕೆ ಬಂದಿರುತ್ತಾರೆ. ಸುಂದರವಾದ ಸರೋವರದ ತಟದಲ್ಲಿ ಕುಳಿತಿರುವಾಗ ಶಿವನು ಪಾರ್ವತಿಯೊಂದಿಗೆ ಸರಸ ಚೇಷ್ಠೆಯಲ್ಲಿ ತೊಡಗುತ್ತಾನೆ. ಉತ್ತೇಜಿತಳಾದ ಪಾರ್ವತಿಯ ಎದೆಯಿಂದ ಹಾಲು ಚಿಮ್ಮಿ ಭೂಮಿಯ ಮಣ್ಣನ್ನು ತೋಯಿಸುತ್ತದೆ. ಹಾಲು ಮಿಶ್ರಿತ ಮಣ್ಣನ್ನು ಪಾರ್ವತಿ ತನ್ನ ಎರಡೂ ಕೈಗಳಲ್ಲಿ ಹಿಡಿದುಕೊಂಡು ಕಲಸಿ ಮುದ್ದೆ ಮಾಡುತ್ತಾಳೆ. ಬಲಗೈ ಮಣ್ಣಿನಿಂದ ಗಂಡಿನ ಗೊಂಬೆಯನ್ನೂ, ಎಡಗೈ ಮಣ್ಣಿನಿಂದ ಹೆಣ್ಣಿನ ಗೊಂಬೆಯನ್ನು ಮಾಡುತ್ತಾಳೆ. ಗಂಡಿನ ಗೊಂಬೆಯನ್ನೂ, ಎಡಗೈ ಗೊಂಬೆಗಳಿಗೆ ಜೀವ ಪ್ರತಿಷ್ಠಾನ ಮಾಡುತ್ತಾನೆ. ಗಂಡಿಗೆ ಮುದ್ದಪ್ಪ ಎಂತಲೂ ಹೆಣ್ಣಿಗೆ ಮುದ್ದಾಯಿ ಎಂತಲೂ ಹೆಸರಿಡುತ್ತಾರೆ. ಈ ಇಬ್ಬರು ಕುರುಬ ಹಾಗು ಗೊಂಡರ ಮೂಲ ಪುರುಷ ಮಹಿಳೆಯರು. ಗಂಡು(ಶಿವ) ಹೆಣ್ಣು(ಶಿವೆ)ಗಳ ಮಿಲನದಲ್ಲಿ ಜೀವಾಂಕುರವಾಗುತ್ತದೆ. ನಿಜ, ಆದರೆ ಗಂಡನ್ನು ಬಲಗೈ ಮಣ್ಣಿನ ಮುದ್ದೆಯಲ್ಲಿ ಹಾಗು ಹೆಣ್ಣನ್ನು ಎಡಗೈ ಮಣ್ಣಿನ ಮುದ್ದೆಯಲ್ಲಿ ಸೃಷ್ಟಿಸಿರುವುದರ ಹಿಂದೆ ಪುರುಷಪ್ರದಾನ ವ್ಯವಸ್ಥೆ ಕೆಲಸ ಮಾಡಿದೆ ಎಂದು ಹೇಳದೇ ವಿಧಿಯಿಲ್ಲ. ಪುರುಷ ಬಲ ಹಾಗೂ ಶೌರ್ಯದ ಸಂಕೇತ; ಹೆಣ್ಣು ಎಡ ಹಾಗೂ ಹೀನತೆಯ ಸಂಕೇತವೆಂದು ನಂಬಿರುವುದರಿಂದ ಉದ್ದೇಶಪೂರ್ವಕವಾಗಿಯೇ ಹೆಣ್ಣನ್ನು ಎಡಗೈ ಗೊಂಬೆಯಾಗಿಸಿದ್ದಾರೆ. ಮೇಲಾಗಿ ಎಡಗೈ ಅಶುಭ ಸಂಕೇತವಾಗಿರುವುದರಿಂದ ಹೆಣ್ಣು ಕೂಡಾ ಅಶುಭದ ಸಂಕೇತವೆಂಬಂತೆ ಬಿಂಬಿಸುವ ಪ್ರಯತ್ನ ಇಲ್ಲಿ ನಡೆದಿದೆ.
ಚರಿತ್ರೆಯ ಕತ್ತಲಲ್ಲಿ ಕಾಣದಾದವರು
ಕುರುಬರಿಗೆ ಅತ್ಯಂತ ಪ್ರಾಚೀನವಾದ ಚರಿತ್ರೆಯಿದೆ. ಆದರೆ ಅಂಥ ಸುದೀರ್ಘ ಚರಿತ್ರೆಯಲ್ಲಿ ಕುರುಬ ಮಹಿಳೆ ಕಾಣದಿರುವುದು ವಿಷಾದದ ಸಂಗತಿ. ಭಾರತದ ದಕ್ಷಿಣಾಪಥದಲ್ಲಿ ದೊರೆತ ಗೋರಿ ಹಾಗೂ ಇತರೆ ಅವಶೇಷಗಳ ಆಧಾರದ ಮೇಲೆ ವಂಶಶಾಸ್ತ್ರಜ್ಞರಾದ ಹ್ಯಾಡೋನ್ ಅವರು ಕುರುಬರ ಚರಿತ್ರೆಯನ್ನು ಕ್ರಿ.ಶ.ಪೂ.4000-5000 ದಷ್ಟು ಹಿಂದಕ್ಕೆ ಒಯ್ತುತ್ತಾರೆ. ಮಧ್ಯ ಏಶಿಯಾದಿಂದ ಹೊರಟು ತಮ್ಮ ಬದುಕಿಗೆ ನೆಲೆಗಳನ್ನು ಹುಡುಕುತ್ತ ಇವರು ಬೋಲನ್ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸಿ ಇಲ್ಲಿ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾರೆ.
ಕುರುಬರನ್ನು ಹಟ್ಟಿಕಾರರೆಂದೂ ಕರೆಯುತ್ತಾರೆ. ಈ ಹಟ್ಟಿಕಾರರ ಉಲ್ಲೇಖ ರುದ್ರಾಧ್ಯಾಯದಲ್ಲಿ ಬರುತ್ತದೆಯಾದ್ದರಿಂದ ಕ್ರಿ.ಶ.ಪೂ 1200-2000 ವೇಳೆಗೆ ಕುರುಬ ಸಮಾಜ ಸುವಿಖ್ಯಾತವಾಗಿತ್ತೆಂದು ಸಂಬಾ ಜೋಶೀ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ. ಮೂರನೆಯ ತಮಾನದಷ್ಟೊತ್ತಿಗೆ ಕುರುಬರು ಪ್ರಭುಗಳಾಗಿ ಅಧಿಕಾರದ ಗದ್ದುಗೆ ಏರಿದ್ದರು ಎಂದು ಸರ್ ಡಬ್ಲೂ ಇಲಿಯಟ್ ಅಭಿಪ್ರಾಯಪಡುತ್ತಾರೆ/ ದಕ್ಷಿಣ ಭಾರತದಲ್ಲಿ ದೊರೆಯುವ ಅತೀ ಪ್ರಾಚೀನ ನಾಣ್ಯಗಳೆಂದರೆ ಕುರುಬರದೇ ಎನ್ನುತ್ತಾರೆ ಇಲಿಯಟ್.
ಕುರುಬರು ಮೊದಲು ಸ್ಥಾಪನೆ ಮಾಡಿದ ಪಟ್ಟಣದ ಹೆಸರು ಪುಲಾಲ. ಈ ರಾಜ್ಯಕ್ಕೆ ಕುರುಂಬರ ನಾಡು ಎಂದು ಕರೆಯುತ್ತಿದ್ದರು. ಕೇರಳದ ಮಲಬಾರ ಜಿಲ್ಲೆಯಲ್ಲಿ ಈ ಹೆಸರಿನ ಪ್ರದೇಶ ಇಂದಿಗೂ ದೊರೆಯುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಹಕ್ಕಬುಕ್ಕರು, ಕದಂಬರು, ಪಲ್ಲವರು, ದೇವಗಿರಿಯ ಯಾದವರು, ಇಂದೂರಿನ ಹೋಳ್ಕರ್, ಬಡೋದೆಯ ಗಾಯಕವಾಡರು, ರಾಷ್ಟ್ರಕೂಟದೊರೆಗಳು ಇವರೆಲ್ಲ ಕುರುಬರೇ ಎಂದು ಚರಿತ್ರೆಕಾರರು ನಿರ್ಣಯಿಸಿದ್ದಾರೆ.
ಹೀಗೆ ಕುರುಬರ ಚರಿತ್ರೆಯೇನೋ ಬಹು ಪ್ರಾಚೀನವಾಗಿದೆ. ನಿಜ. ಆದರೆ ಇಷ್ಟು ದೀರ್ಘಚರಿತ್ರಯಲ್ಲಿ ಮಹಿಳೆ ಸಂಪೂರ್ಣವಾಗಿ ಗೈರುಹಾಜರಿಯಾಗಿದ್ದಾಳೆ. ಅಹಲ್ಯಾಬಾಯಿ ಹೋಳ್ಕರ್ ಎಂಬ ಮಹಿಳೆಯನ್ನು ಬಿಟ್ಟರೆ ಚರಿತ್ರೆಯ ಮಹಾಬೆಳಕಿನಲ್ಲಿ ಯಾವ ಮಹಿಳೆಯೂ ಗೋಚರಿಸುವುದಿಲ್ಲ. ಮಹಿಳೆಯನ್ನು ಗಮನದಲ್ಲಿಟ್ಟುಕೊಂಡು ಕುರುಬರ ಚರಿತ್ರೆಯನ್ನು ಗಮನಿಸಿದರೆ ಇದೊಂದು ಕತ್ತಲೆಯ ಚರಿತ್ರೆಯೆಂದೇ ಭಾವಿಸಬೇಕಾಗುತ್ತದೆ. ಪುರುಷ ಪರವಾದ ಚರಿತ್ರೆಯ ಕತ್ತಲಲ್ಲಿ ಮಹಿಳೆ ಕಳೆದು ಹೋಗಿದ್ದಾಳೆೆ. ಕುರುಬರು ದೊರೆಗಳಾಗಿ ಧರೆಯನಾಳಿದ ಸಂದರ್ಭದಲ್ಲಿಯೇ ಬೆಳಕಿಗೆ ಬಾರದ ಕುರುಬ ಮಹಿಳೆಯರು ನಂತರದ ದಿನಮಾನಗಳಲ್ಲಿ ಕತ್ತಲೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದರೆ ಆಶ್ಚರ್ಯವೇನಿಲ್ಲ.
ಲೆಕ್ಕಕ್ಕುಂಟು ಆಟಕ್ಕಿಲ್ಲ
ಕುರುಬರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಹರಡಿಕೊಂಡಿದ್ದಾರೆ. ಜಾತಿವಾರು ಜನಗಣತಿ ಆಗಿಲ್ಲವಾದ ಕಾರಣ ರಾಜ್ಯದ ಕುರುಬರ ಒಟ್ಟು ಸಂಖ್ಯೆಯನ್ನು ಅಂದಾಜಿಸಿಯೇ ಹೇಳಬೇಕಾಗಿದೆ. ರಾಜ್ಯದ ಒಟ್ಟು 175 ತಾಲೂಕುಗಳಲ್ಲಿ 125 ತಾಲೂಕುಗಳಲ್ಲಿ ಕುರುಬರು ಬಹು ಸಂಖ್ಯೆಯಲ್ಲಿದ್ದಾರೆ.
ಕರ್ನಾಟಕದಲ್ಲಿ ಬೀದರ ಜಿಲ್ಲೆ ಹಾಗು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೊಂಡರು ನೆಲೆಸಿದ್ದಾರೆ. 2001ರ ಜನಗಣತಿ ಪ್ರಕಾರ ಬೀದರ ಜಿಲ್ಲೆಯ ಗೊಂಡರ ಜನಸಂಖ್ಯೆ 1,82,219. ಇವರಲ್ಲಿ 93445 ಪುರುಷರು ಹಾಗೂ 88774 ಮಹಿಳೆಯರು. 1991ರಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಉತ್ತರ ಕನ್ನಡ ಜಿಲ್ಲ್ಲೆ ಪರಿಷತ್ತು ಒದಗಿಸಿದ ಮಾಹಿತಿ ಪ್ರಕಾರ ಆ ಭಾಗದಲ್ಲಿದ್ದ ಗೊಂಡರ ಸಂಖ್ಯೆ 7319. ಇವರಲ್ಲಿ 3712 ಪುರುಷರು ಹಾಗೂ 3607 ಮಹಿಳೆಯರು. ಸದ್ಯ ಸಮಾಜ ಕಲ್ಯಾಣ ಇಲಾಖೆ ಭಟ್ಕಳದಲ್ಲಿ ದೊರೆಯುವ ಅಂಕಿ ಸಂಖ್ಯೆಗಳ ಪ್ರಕಾರ ಆ ಭಾಗದ ಒಟ್ಟು ಗೊಂಡರ ಸಂಖ್ಯೆ 18,955. ಪುರುಷ ಮಹಿಳೆಯರ ಅನುಪಾತ ಲಭ್ಯವಾಗಿಲ್ಲ. ರಾಜಗೊಂಡರು ಕರ್ನಾಟಕದಲ್ಲಿ ಅಲ್ಲಲ್ಲಿ ಅಲ್ಪ ಸಂಖ್ಯೆಯಲ್ಲಿ ಚದುರಿ ಹೋಗಿದ್ದಾರೆ. ಬೀದರದ ಹೊರ ವಲಯದ ಹಳ್ಳದಕೇರಿ, ಹರಿಹರ ತಾಲೂಕಿನ ಬೆಳ್ಕೋಡಿ ಮತ್ತು ಬೆಂಗಳೂರಿನ ಮಾರುತಿ ಸೇವಾನಗರದಲ್ಲಿ ರಾಜಗೊಂಡರು ನೆಲೆಸಿದ್ದಾರೆ. ರಾಜ್ಯದ ರಾಜಗೊಂಡರ ಸಂಖ್ಯೆ ಲಭ್ಯವಾಗಿಲ್ಲ. ಆದರೆ ಭಾರತದಾದ್ಯಂತ ಹರಡಿರುವ ರಾಜಗೊಂಡರ ಒಟ್ಟು ಸಂಖ್ಯೆ 10,000 ಎಂದು ಅಂದಾಜಿಸಲಾಗಿದೆ.
ಲೇಖಕನ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗಮನಕ್ಕೆ ಬಂದ ಅಂಶವೆಂದರೆ ಕುರುಬರಲ್ಲಿಯೇ ಆಗಲಿ ಗೊಂಡರಲ್ಲಿಯೇ ಆಗಲಿ ಮಹಿಳೆ ಅಂಕಿ ಅಂಶಗಳಲ್ಲಿ ಮಾತ್ರ ಲೆಕ್ಕಕ್ಕೆ ಬಂದಿದ್ದಾಳೆಯೇ ಹೊರತು ಅವಳ ಆಸ್ತಿತ್ವದ ವಿಷಯಕ್ಕೆ ಬಂದರೆ ಅವಳಿಗೆ ಯಾವುದೇ ರೀತಿಯ ಸ್ಥಾನಮಾನವಿಲ್ಲ ಎನ್ನುವುದು. ಆ ಅರ್ಥದಲ್ಲಿಯೇ ಕುರುಬ, ಗೊಂಡಮಹಿಳೆಯರು ಅಂಕಿ ಅಂಶಗಳ ಲೆಕ್ಕದಲ್ಲಿ ದೊರೆಯುತ್ತಾರೆಯೇ ಹೊರತು ಅವರ ಆಸ್ತಿತ್ವದ ಆಟದಲ್ಲಿ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕುರುಬ, ಗೊಂಡ ಮಹಿಳೆಯ ಸ್ಥಾನಮಾನದಲ್ಲಿ ಕುಸಿತ ಕಂಡು ಬಂದಿರುವ ಅಂಶವನ್ನು ಪುರುಷ ಮಹಿಳೆಯರ ಅನುಪಾತದ ವೈಪರೀತ್ಯದಲ್ಲಿ ಗಮನಿಸಬಹುದು. ಪುರುಷರಿಗೆ ಹೋಲಿಸಿದಾಗ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿಯಾಗಿದೆ. ಈ ರೀತಿಯ ಅನುಪಾತ ವೈಪರೀತ್ಯ ಮುಂಬರುವ ದಿನಗಳಲ್ಲಿ ಕುರುಬ, ಗೊಂಡರ ಕೌಟುಂಬಿಕ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವ ಸಾಧ್ಯತೆಯಿದೆ.
ಮೇಷ-ವೃಷಭ ತರತಮ
ಕರ್ನಾಟಕದ ಕುರುಬರನ್ನು ವೃತ್ತಿಯ ಆಧಾರದ ಮೇಲೆ ಎರಡು ಗುಂಪುಗಳಾಗಿ ನೋಡುತ್ತೇವೆ. ಕುರಿಗಾರ ಹಾಗೂ ಕೃಷಿಕ. ಕುರಿಗಾರರಲ್ಲಿ ಕುರಿಕಾಯುವುದು ಪ್ರಮುಖ ಕಸುಬಾದರೆ ಕಂಬಳಿ ನೇಯುವುದು ಉಪಕಸಬು. ಬೇಸಾಯ ಮಾಡುವವರಲ್ಲಿ ಸ್ವಂತ ಭೂಮಿಯನ್ನು ಹೊಂದಿದವರು ಹಾಗೂ ಅನ್ಯರ ಹೊಲಗಳಲ್ಲಿ ದುಡಿಯುವ ಕೃಷಿಕೂಲಿಗಳು ಎಂದು ಎರಡು ಪ್ರಭೇದ ನೋಡಬಹುದು. ಈ ಎಲ್ಲ ರೀತಿಯ ಕುರುಬರಲ್ಲಿಯೂ ಮಹಿಳೆಯರು ತಮ್ಮ ತಮ್ಮ ಗಂಡಂದಿರ ಕಸಬಿಗೆ ಪೂರಕವಾಗುವಂತೆ ತೊಡಗಿಸಿಕೊಳ್ಳಲೇಬೇಕು. ಹೀಗೆ ತೊಡಗಿಸಿಕೊಳ್ಳದೇ ಮನೆಯಲ್ಲಿಯೆ ಕುಳಿತು ಯಜಮಾನಿಯಂತೆ ಇರುವ ಕುಟುಂಬಗಳು ಇಲ್ಲವೆ ಇಲ್ಲವೆನ್ನಿಸುವಷ್ಟು ಕಡಿಮೆ. ಕರ್ನಾಟಕದ ಕುರುಬರು ವರ್ಗದ ಹಿನ್ನೆಲೆಯಲ್ಲಿ ಕೆಳ ಮಧ್ಯಮವರ್ಗ ಹಾಗು ಕೆಳವರ್ಗಕ್ಕೆ ಸೇರಿದವರು ವರ್ಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಶೂದ್ರರೆಂದು ಪರಿಗಣಿಸಲ್ಪಟ್ಟವರು. ಆದರೆ ಆಶ್ಚರ್ಯದ ಸಂಗತಿಯೆಂದರೆ ಕುರುಬ ಮಹಿಳೆಯರು ತಾವು ತೊಡಗಿಸಿಕೊಂಡಿರುವ ಕಸಬಿನ ಆಧಾರದ ಮೇಲೆ ತಮ್ಮ ತಮ್ಮಲ್ಲಿಯೇ ತಾರತಮ್ಯಗಳನ್ನು ಕಲ್ಪಿಸಿಕೊಂಡಿದ್ದಾರೆ.
ಸ್ವಂತ ಜಮೀನುಳ್ಳ ಕುರುಬ ಕೃಷಿಕನ ಹೆಂಡತಿ ಅನ್ಯರ ಹೊಲದಲ್ಲಿ ದುಡಿಯುವ ಕೃಷಿ ಕೂಲಿಕಾರನ ಹೆಂಡತಿಗಿಂತ ಹೆಚ್ಚು ಎಂದ ಸಂಭ್ರಮಿಸುತ್ತಾಳೆ. ಇವರಿಬ್ಬರೂ ಕುರಿಕಾಯುವ ಇಲ್ಲವೆ ಕಂಬಳಿ ನೇಯುವವನ ಹೆಂಡತಿಗಿಂತ ಮೇಲು ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಕೃಷಿಕ ಕುರುಬನ ಹೆಂಡತಿ ದನಗಳ ಹೆಂಡಿ ಕಸ ಮಾಡಲೇಬೇಕು. ಆದರೂ ತನ್ನ ಕೆಲಸ ಕುರಿಗಾರನ ಹೆಂಡತಿ ಕುರಿಗಳ ಹಿಕ್ಕಿ-ಉಚ್ಚೆ ಗುಡಿಸುವುದಕ್ಕಿಂತ ಶ್ರೇಷ್ಠವೆನ್ನುತ್ತಾಳೆೆ. ಎತ್ತುಗಳನ್ನು(ವೃಷಭ) ಕಟ್ಟಿ ಒಕ್ಕಲುತನ ಮಾಡುವ ಮನೆತನದ ಕುರುಬ ಮಹಿಳೆಬಸವಣ್ಣ (ಎತ್ತು) ನಿನ್ನ ಸೆಗಣಿಯ ಬಳಿದ ಕೈ ಎಸಳ ಯಾಲಕ್ಕಿ ಗೊನೆನಾತ ಎಂದು ಹೆಂಡಿ ಕಸ ಮಾಡುವ ತನ್ನ ಕೆಸವನ್ನು ವೈಭವೀಕರಿಸಿಕೊಳ್ಳುತ್ತಾಳೆ. ಕುರಿದೊಡ್ಡಿಯಲ್ಲಿ ಕುರಿಗಳ ಹಿಕ್ಕಿ ಉಚ್ಚೆಗಳ ಚಿಂಗನಾತದಲ್ಲಿ ಜೀವನ ನಡೆಯಿಸುವ ಕುರಿಗಾರ ಮನೆತನದ ಮಹಿಳೆಯನ್ನು ಕೀಳಾಗಿ ಕಾಣುವ ಮನೋಭಾವ ಹೊಂದಿದ್ದಾರೆ.
ಕೃಷಿಕ ಕುರುಬನ ಹೆಂಡತಿ ಮಳೆ ಬಿಸಿಲೆನ್ನದೆ ತನ್ನ ಗಂಡನ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ, ಕುರಿಗಾರನ ಹೆಂಡತಿಯೂ ಮಳೆಬಿಸಿಲೆನ್ನದೆ ಕುರಿಗಾರಿಕೆ ಸಂಬಂಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾಳೆ. ಇವರಿಬ್ಬರೂ ತಾವು ತೊಡಗಿಸಿಕೊಂಡಿರುವ ಆರ್ಥಿಕ ಚಟುವಟಿಕೆಗಳಲ್ಲಿ ಪಗಾರ ರಹಿತ ಕೂಲಿಗಳೇ ಆಗಿದ್ದರು ವೃಷಭದೊಂದಿಗಿನ ಬದುಕು ಮೇಷದೊಂದಿಗಿನ ಬದುಕಿಗಿಂತ ಶ್ರೇಷ್ಠವೆಂಬ ತಾರತಮ್ಯವನ್ನು ಸೃಷ್ಟಿಸಿಕೊಂಡಿದ್ದಾರೆ. ನೂರು ಕುರಿಗಳನ್ನು ಹೊಂದಿದ ಕುರಿಗಾರನ ಹೆಂಡತಿಗಿಂತ ಕೇವಲ ಎರಡೇ ಎತ್ತು ಹೊಂದಿರುವ ಕೃಷಿಕ ಕುರುಬನ ಹೆಂಡತಿ ತಾನು ಮೇಲು ಎಂದು ಭ್ರಮಿಸಿರುವುದನ್ನು ಕುರುಬ ಮಹಿಳೆಯರ ಬದುಕಿನ ಮಹಾ ವ್ಯಂಗ್ಯವೆಂದೆನ್ನದೆ ವಿಧಿಯಿಲ್ಲ.
ಬೀದರ ಹಾಗು ಭಟ್ಕಳದ ಗೊಂಡರ ಬಗೆಗೆ ಹೇಳುವುದಾದರೆ ಬೀದರದ ಗೊಂಡರ ಸ್ಥಿತಿ ಕರ್ನಾಟಕದಾದ್ಯಂತ ವಾಸಿಸುವ ಕುರಿಗಾರರಿಗಿಂತ ಕಷ್ಟದ ಸ್ಥಿತಿಯಲ್ಲಿದ್ದಾರೆ. ಭಟ್ಕಳದ ಗೊಂಡರ ಸ್ಥಿತಿ ಸ್ವಲ್ಪ ಭಿನ್ನವೆನ್ನಬೇಕು. ಇಲ್ಲಿ ಕುರಿಗಾರಿಕೆ ಇಲ್ಲವೇ ಇಲ್ಲವೆನ್ನಬೇಕು. ಹೀಗಾಗಿ ಗೊಂಡ ಮಹಿಳೆಯರಲ್ಲಿ ಮೇಷ ವೃಷಭದ ತಾರತಮ್ಯದ ಭಾವನೆಗಳಿಲ್ಲ. ಆದರೆ ಇಲ್ಲಿಯ ತಾರತಮ್ಯದ ಭಾವನೆ ಕೃಷಿ ಹಾಗೂ ಕೃಷಿಕೂಲಿಗೆ ಸಂಬಂಧಪಟ್ಟದ್ದು. ಇಲ್ಲಿ ಕೆಲವೇ ಕೆಲವು ಗೊಂಡರು ಕೃಷಿಗೆ ಯೋಗ್ಯವಾದ ಅಲ್ಪಸ್ವಲ್ಪ ಭೂಮಿಯನ್ನು ಹೊಂದಿದ್ದಾರೆ. ಕೃಷಿ ಭೂಮಿಯಿಲ್ಲದ ಗೊಂಡರು ಕೃಷಿಕ ಗೊಂಡರಲ್ಲಾಗಲಿ ಇಲ್ಲವೆ ಹವ್ಯಕ ಬ್ರಾಹ್ಮಣರ ಭೂಮಿಯಲ್ಲಾಗಲಿ ಕೃಷಿ ಕೂಲಿಗೆ ಹೋಗುತ್ತಾರೆ. ಕೃಷಿಕ ಗೊಂಡನಾದವನು ಒಂದಿಷ್ಟು ಕೃಷಿ ಯೋಗ್ಯ ಜಮೀನು ಹೊಂದಿದ್ದಾನೆ ಎನ್ನುವುದನ್ನು ಬಿಟ್ಟರೆ ಅವನೂ ಭೂಹೀನ ಕೃಷಿಕೂಲಿಗೊಂಡನಂತೆ ತನ್ನ ಹೊಲ ಗದ್ದೆಯಲ್ಲಿ ದುಡಿಯಲೇಬೇಕು. ಆದರೂ ಕೃಷಿಗೊಂಡನ ಹೆಂಡತಿ ಕೃಷಿಕೂಲಿಗೊಂಡನ ಹೆಂಡತಿಗಿಂತ ಹೆಚ್ಚಿನವಳು ಎಂದು ಭ್ರಮಿಸುವುದು ವಿಪರ್ಯಾಸ.
ಗೊಂಡ ಮಹಿಳೆಯರು ಏನೆಲ್ಲಾ ತರತಮ ಕಲ್ಪಿಸಿಕೊಂಡರೂ ತಮ್ಮ ತಮ್ಮ ಗಂಡಂದಿರ ಎದುರಿಗೆ ಅವರು ಹೀನಾಯವಾಗಿಯೇ ಉಳಿದಿದ್ದಾರೆ. ಭಟ್ಕಳದ ಗೊಂಡರಲ್ಲಿ ಇಂದಿಗೂ ಗೊಂಡ ಮಹಿಳೆ ತನ್ನ ಗಂಡ ಉಂಡು ಬಿಟ್ಟ ತಾಟಿನಲ್ಲಿ ಕಡ್ಡಾಯವಾಗಿ ಊಟಮಾಡಬೇಕಾದ ಸ್ಥಿತಿಯಿದೆ. ಸುದೈವ ವಶಾತ್ ಹಬ್ಬ ಹರಿದಿನಗಳಲ್ಲಿ ಇಂಥ ಕಡ್ಡಾಯದ ವಿಧಿಯಿಂದ ವಿನಾಯಿತಿ ಇದೆ!
ಕುರುಬ, ಗೊಂಡ ಮಹಿಳೆ ಸಂಸ್ಕಾರ, ಸಂಪ್ರದಾಯ
ವ್ಯಕ್ತಿಯೊಬ್ಬನಿಗೆ ಬೇರೆ ಬೇರೆ ಸಂದರ್ಭದಲ್ಲಿ ಕೊಡುವ ಸಂಸ್ಕಾರಗಳು, ಆ ವ್ಯಕ್ತಿ ಸಮಾಜದಲ್ಲಿ ಪಾಲಿಸಬೇಕಾದ ವಿಧಿವಿಧಾನಗಳನ್ನು ಹಾಗೂ ಸಮಾಜ ಆ ವ್ಯಕ್ತಿಯನ್ನು ನಡೆಯಿಸಿಕೊಳ್ಳುವ ರೀತಿ ನೀತಿಯ ನಿಲುವನ್ನು ಸೂಚಿಸುತ್ತದೆ. ಕುರುಬ ಮಹಿಳೆಗೆ ಕೊಡುವ ಸಂಸ್ಕಾರಗಳನ್ನು ಗಮನಿಸಿದಾಗ ಸಮಾಜ ಅವಳನ್ನು ನಡೆಯಿಸಿಕೊಳ್ಳುವ ಪರಿಯನ್ನು ನೋಡಿದಾಗ ಅವಳನ್ನು ಬಹಳಷ್ಟು ಸಂದರ್ಭದಲ್ಲಿ ನಾನು ಹೀನಳು, ನೀನು ಅತಂತ್ರಳು, ನೀನು ಸೂತಕಗಳ ಸರಮಾಲೆಯವಳು, ನೀನು ಪುರುಷನೊಂದಿಗೆ ಸರಿಸಮಾನಳಾಗಲಾರಿ ಎಂದು ಪದೇ ಪದೇ ನೆನಪಿಸುವುದಕ್ಕೋಸ್ಕರವೇ ರಚಿಸಿದಂಥವುಗಳು ಎಂದು ತಿಳಿದು ಬರುತ್ತದೆ. ಅವಳ ಜನನ, ಅವಳ ಮುಟ್ಟು, ಅವಳನ್ನು ಮದುವೆಗೆ ಆಯ್ಕೆ ಮಾಡುವ ಕ್ರಮ, ವಿವಾಹ ಮಾಡಿಕೊಡುವ ರೀತಿ, ಹೊಸ ಮಾಲಗಿತ್ತಿಯಾಗಿ ಬಂದವಳನ್ನು ಸ್ವಾಗತಿಸುವ ಪರಿ, ಮರು ಮದುವೆಯನ್ನು ಸಮಾಜ ಸ್ವೀಕರಿಸುವ ರೀತಿ ಎಲ್ಲವನ್ನು ಗಮನಿಸಿದಾಗ ಕುರುಬ ಮಹಿಳೆಯನ್ನು ಹೆಜ್ಜೆಹೆಜ್ಜೆಗೂ ಅಧೀರಳನ್ನಾಗಿ ಮಾಡುವ ಪ್ರಯತ್ನ ನಡೆದಿರುವುದು ಗೋಚರಿಸುತ್ತದೆ.
ಮೂರು ತಿಂಗಳ ಸೂತಕ
ಹೆರಿಗೆ ಋತುಮತಿಯಂಥ ವೃದ್ಧಿಸೂತಕವೇ ಇರಲಿ ಸಾವಿನಂಥ ಮೃತ್ಯು ಸೂತಕವೇ ಇರಲಿ ಅವುಗಳ ಕಾಲ ಹೆಚ್ಚೆಂದರೆ ಹದಿಮೂರು ದಿವಸ. ಆದರೆ ಪ್ರಥಮ ಬಾರಿಗೆ ಗರ್ಭಧರಿಸುವ ಮಹಿಳೆಗೆ ಮೂರು ತಿಂಗಳ ಸೂತಕವಿರುತ್ತದೆ. ಹೀಗೆ ಸೂತಕದಲ್ಲಿರುವ ಕುರುಬ ಮಹಿಳೆ ಮೂರು ತಿಂಗಳವರೆಗೆ ಹೂವು ಮುಡಿಯುವುದಿಲ್ಲ. ಹೊಸ ಬಟ್ಟೆ ಧರಿಸುವುದಿಲ್ಲ ಹಾಗು ನದಿ ಹೊಳೆ ದಾಟುವುದಿಲ್ಲ. ಕುರುಬ ಮಹಿಳೆಯ ಈ ಸೂತಕ ಕಳೆಯುವುದು ಎಂಬಲಿ ಗಡಿಗೆ ಯೊಳಗಿನ ಹುಳಿ ತೆಗೆದು ಅದರಲ್ಲಿ ತಯಾರಿಸಿದ ಬಾನವನ್ನು ತಿನ್ನಿಸಿದಾಗಲೇ. ಗರ್ಭ ನಿಂತು ಮೂರು ತಿಂಗಳಾದ ನಂತರ ಕುರುಬ ಮಹಿಳೆಯ ತವರು ಮನೆಯವರು ಅವಳ ಸೂತಕ ಕಳೆಯಲು ಬರುತ್ತಾರೆ. ಅವಳ ತವರು ಮನೆಯವರು ಬರುತ್ತಾರೆ ಎಂದು ಗಂಡಿನ ಮನೆಯವರಿಗೆ ಗೊತ್ತಾದ ಕೂಡಲೇ ಮನೆಯಲ್ಲಿ ಹೊಸ ಗಡಿಗೆಯೊಂದರಲ್ಲಿ ಮುತ್ತೈದೆಯರು ಅಂಬಲಿ ತಯಾರಿಸುತ್ತಾರೆ. ತವರು ಮನೆಯವರು ಬಂದು ತಮ್ಮ ಮಗಳಿಗೆ ಪಂಚಮೃತಹಾಕಿ ಎರೆಯುತ್ತಾರೆ. ಎರೆದ ನಂತರ ಬಸುರಿ ಮಗಳಿಗೆ ಒಂದು ಹಸಿರು ಖಣ ಕೊಡುತ್ತಾರೆ. ಹಾಗೂ ಅಂಬಲಿ ಗಡಿಗೆಗೆ ಇನ್ನೊಂದು ಹಸಿರು ಖಣ ಏರಿಸುತ್ತಾರೆ. ಹಾಗೆ ಕೊಟ್ಟ ಹಸಿರು ಖಣದಿಂದ ಅವಳು ಕೊಂಕಳ ಖಾಲಿಯಿರುವಂತೆ ಕುಪ್ಪಸ/ಬ್ಲೌಸು ಹೊಲಿಸಿಕೊಳ್ಳುತ್ತಾಳೆ. ಹಾಗೂ ಅಂಬಲಿ ಗಡಿಗೆಗೆ ಏರಿಸಿದ ಖಣದಿಂದಲೇ ಅವಳಿಗೆ ಮುಂದೆ ಜನಿಸುವ ಮಗುವಿಗೆ ಕುಂಚಗಿ ಮಾಡಿ ಹೊಲಿಸುತ್ತಾರೆ.
ಅಂಬಲಿ ಗಡಗಿಯೊಳಗಿನ ಹುಳಿಯನ್ನು ತೆಗೆದು ಕುಟ್ಟಿದ ಜೋಳದಲ್ಲಿ ಕುದಿಸಿಬಾನ ವನ್ನು ತಯಾರಿಸುತ್ತಾರೆ. ಹೀಗೆ ತಯಾರಾದ ಹುಳಿ ಬಾನವನ್ನು ತಿನ್ನಿಸುವ ಮೂಲಕ ಅವಳ ಬಯಕೆ ಗಳ ಈಡೇರಿಕೆಯ ಪ್ರಾರಂಭವನ್ನು ಮಾಡಲಾಗುತ್ತದೆ. ಆದಾದ ನಂತರವೇ ಅವಳಿಗೆ ಹುಗ್ಗಿ ಹೋಳಿಗೆಯ ಊಟ ಮಾಡಿಸುತ್ತಾರೆ. ಈ ವಿಧಿಗೆ ಕಳಗುಬಸ ಕಾರಣವೆಂದೂ ಕರೆಯುತ್ತಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವೃದ್ಧಿ ಸೂತಕದ ಸಂಕೇತವಾದ ಬಸಿರಿಗೆ ಮೂರು ತಿಂಗಳ ಸೂತಕ.
ಇಲ್ಲಿಯೇ ಇನ್ನೊಂದು ಅಂಶವನ್ನು ಗಮನಿಸಬೇಕು. ಅಂಬಲಿ ತಯಾರಿಸಲು ಬಳಸಿದ ಈ ಗಡಿಗೆಯನ್ನು ಜತನದಿಂದ ಕಾಯ್ದಿರಿಸಿಕೊಂಡಿರುತ್ತಾರೆ. ಯಾಕೆಂದರೆ ಮುಂದೆ ಹುಟ್ಟುವ ಮಗುವಿನ ಮಾಸವನ್ನು ಇದೇ ಗಡಿಗೆಯಲ್ಲಿಟ್ಟು ಹೂಳೂತ್ತಾರೆ.
ಹೆಣ್ಣು ಮಾಸ ತಿಪ್ಪೆಯಲ್ಲಿ
ಬೇರೆಲ್ಲ ಸಮಾಜದಲ್ಲಿ ಇರುವಂತೆ ಕುರುಬ ಸಮಾಜದವರಲ್ಲಿಯೂ ಕೂಸಿನ ಮಾಸವನ್ನು ಹೂಳುವ ಪದ್ಧತಿಯಿದೆ. ಈಗಾಗಲೇ ತಿಳಿಸಿದಂತೆ ಬಯಕೆ ತೀರಿಸುವ ಪ್ರಥಮ ಘಟ್ಟದಲ್ಲಿ ಬಳಕೆಯಾದ ಅಂಬಲಿ ಗಡಿಗೆಯಲ್ಲಿಯೇ ಕೂಸಿನ ಮಾಸವನ್ನಿಟ್ಟು ಹೂಳುತ್ತಾರೆ. ಕುರುಬ ಸಮಾಜದವರು, ಜನಿಸಿದ ಕೂಸು ಗಂಡಾಗಿದ್ದಾರೆ ಅದರ ಮಾಸವನ್ನು ಈ ಗಡಿಗೆಯಲ್ಲಿಟ್ಟು ಮನೆಯಲ್ಲಿಯೇ ಹೂಳುತ್ತಾರೆ. ಜನಿಸಿದ ಕೂಸು ಹೆಣ್ಣಾಗಿದ್ದರೆ ಈ ಗಡಿಗೆಯಲ್ಲಿ ಹಾಕಿ ತಿಪ್ಪೆಯಲ್ಲಿ ಹೂಳುತ್ತಾರೆ. ಲಿಂಗ ತಾರತಮ್ಯ ಭಾವ ಕುರುಬರಲ್ಲಿ ಕೂಸಿನ ಜನನದೊಂದಿಗೆ ಪ್ರಾರಂಭವಾಗುತ್ತದೆ. ಸ್ತ್ರೀಯನ್ನು ಬಹಿಷ್ಕರಿಸುವ ಅನ್ಯಗೊಳಿಸುವ ಕ್ರಿಯೆ ಇಲ್ಲಿಂದಲೇ ಆರಂಭವಾಗುತ್ತದೆ.
ಆಮೆ ಹೊಂಡದಲ್ಲಿ ಅಡಿಕೆ ಬಾಳೆ
ಜನನಕ್ಕೆ ಸಂಬಂಧಪಟ್ಟಂತೆ ಭಟ್ಕಳದ ಗೊಂಡರಲ್ಲಿ ಇನ್ನೊಂದು ವಿಲಕ್ಷಣವಾದ ಪರಿಯಿದೆ. ಲಿಂಗ ತಾರತಮ್ಯವನ್ನು ಈ ಆಚರಣೆ ಇನ್ನಷ್ಟು ಪ್ರಖರವಾಗಿ ಬಿಂಬಿಸುತ್ತದೆ.
ಗೊಂಡ ಮಹಿಳೆಯ ಪ್ರಥಮ ಹೆರಿಗೆ ತವರು ಮನೆಯಲ್ಲಿಯೇ ಆಗುತ್ತದೆ. ಅವಳ ನಂತರದ ಹೆರಿಗೆಗಳು ತವರು ಮನೆಯಲ್ಲಿ ಅಗುತ್ತವೆ. ಹಾಗೆ ನೋಡಿದರೆ ಗೊಂಡರು ತಮ್ಮ ಹೆಣ್ಣುಮಗಳನ್ನು ನೋಡಿಕೊಳ್ಳುವ ರೀತಿ ಕುರುಬರು ತಮ್ಮ ಹೆಣ್ಣುಮಗಳನ್ನು ನೋಡಿಕೊಳ್ಳುವ ರೀತಿಗಿಂತ ಹೆಚ್ಚು ಅಂತಃಕರಣಪೂರಿತವಾದುದೆಂದೇ ಹೇಳಬೇಕು. ಯಾಕೆಂದರೆ ಕುರುಬರು ತಮ್ಮ ಮಗಳ ಮೊದಲ ಹೆರಿಗೆಯನ್ನು ತವರು ಮನೆಯಲ್ಲಿ ಮಾಡಿಸಿ ಕೈತೊಳೆದುಕೊಳ್ಳುತ್ತಾರೆ. ನಂತರದ ಹೆರಿಗೆಗಳಿಗೆ ಗಂಡನ ಮನೆಯವರೇ ಹೊಣೆಗಾರರು ಎಂದು ಭಾವಿಸುತ್ತಾರೆ.
ಗೊಂಡ ಮಹಿಳೆಯ ಹೆರಿಗೆಯಲ್ಲಿ ಕೂಸಿನೊಂದಿಗೆ ಬರುವ ಮಾಸವನ್ನು ಅವರು ಮನೆಯ ಹೊರಗೆ ಅಂಗಳದಲ್ಲಿ ಹೂಳುತ್ತಾರೆ. ಈ ಸಂದರ್ಭದಲ್ಲಿ ಮಾಸ ಗಂಡುಕೂಸಿನದೋ ಹೆಣ್ಣು ಕೂಸಿನದೋ ಗಣನೆಗೆ ಬರುವುದಿಲ್ಲ. ಕೂಸಿನ ಮಾಸವನ್ನು ಹೂಳಲು ತೋಡಿದ ಹೊಂಡಕ್ಕೆ ಗೊಂಡರುಆಮೆ ಹೊಂಡ ಎನ್ನುತ್ತಾರೆ. ಪ್ರತಿನಿತ್ಯ ಬಾಣಂತಿ ಹಾಗೂ ಕೂಸನ್ನು ಎರೆದ ನೀರು ಆಮೆ ಹೊಂಡಕ್ಕೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಹೆರಿಗೆಯಾದ ಮೂರು ಇಲ್ಲವೆ ಐದು ಇಲ್ಲವೆ ಒಂಬತ್ತನೆಯ ದಿವಸ ಗೊಂಡರು ಮನೆಯನ್ನು ಶುಚಿಗೊಳಿಸಿ ಮನೆಗೆ ಅಂಟಿದ ಸೂತಕ ಕಳೆಯುತ್ತಾರೆ. ಅಂದಿನ ದಿವಸವೇ ಗೊಂಡಬಾಣಂತಿ ತಾನೂ ಶುಚಿಯಾಗಿ ಹೆರಿಗೆ ನಂತರದಲ್ಲಿ ಪ್ರಥಮ ಬಾರಿಗೆ ಕಣ್ಣಿಿಗೆ ಕಾಡಿಗೆ ಹಚ್ಚಿಕೊಳ್ಳುತ್ತಾಳೆ.
ಇದೇ ದಿವಸ ಆಮೆ ಹೊಂಡದಲ್ಲಿ ಸಸಿ ನೆಡುವ ಆಚರಣೆ ನಡೆಯುತ್ತದೆ. ಆ ಆಮೆ ಹೊಂಡದಲ್ಲಿ ಗಂಡು ಕೂಸಿನ ಮಾಸ ಹೂಳಿದ್ದರೆ ಅದರಲ್ಲಿ ಅಡಿಕೆ ಸಸಿಯನ್ನು ನೆಡುತ್ತಾರೆ, ಹೆಣ್ಣು ಕೂಸಿನ ಮಾಸನವನ್ನು ಹೂಳಿದ್ದರೆ ಬಾಳೆ ಅಗಿಯನ್ನು ನೆಡುತ್ತಾರೆ. ಹಾಗೆ ಮಾಡುವ ಮೂಲಕ ಲಿಂಗತಾರತಮ್ಯವನ್ನು ಬಿಂಬಿಸಲಾಗುತ್ತದೆ. ಗಂಡಿನ ಬೆಳವಣಿಗೆಗೆ ಮಿತಿ ಎಂಬುದು ಇಲ್ಲ. ಆಕಾಶಕ್ಕೂ ಆತ ಕೈಚಾಚಬಲ್ಲ. ಸೆಟೆದು ನಿಲ್ಲಬಲ್ಲ, ಗೋಣೆತ್ತಿ ನಿಲ್ಲಬಲ್ಲ ಹಾಗೂ ವೃಷಣ ಬೀಜದಂಥ ಕಾಯಿಗಳನ್ನು ಹೊಂದಬಲ್ಲ ಎಂಬುದನ್ನು ಅಡಿಕೆ ಸಸಿ ನೆಡುವ ಆಚರಣೆ ಸಂಕೇತಿಸುತ್ತದೆ. ಹೆಣ್ಣು ಬಾಳೆಯ ಸಸಿಯ ಹಾಗೆ ಕೋಮಲ ಹಾಗೂ ದುರ್ಬಲ. ಅವಳು ಬಿಸಿಲನ್ನು ತಾಳಲಾರಳೂ. ಅವಳು ಬಿಸಿಲಿಗೆ ಬಾಡುವಂಥವಳು. ಅವಳು ಗೊನೆಗಳನ್ನು ಹೊರಬಲ್ಲಳು ಹಾಗೂ ಗೊನೆಯ ಹಾಗೆ ಬಾಗಬಲ್ಲವಳು ಎಂಬುದನ್ನು ಬಾಳೆ ಅಗಿ ನೆಡುವ ಆಚರಣೆ ಸಂಕೇತಿಸುತ್ತದೆ.
ಗುಂಡುಕಲ್ಲಿಗೆ ಉಡದಾರ
ಈ ಲಿಂಗ ತಾರತಮ್ಯವನ್ನು ಶೆಟಗಿ ಆಚರಣೆಯಲ್ಲೂ ನೋಡಬಹುದು. ಕೂಸು ಹುಟ್ಟಿದ ಐದನೆಯ ದಿವಸಕ್ಕೆ ಶೆಟಗೆವ್ವ ಬಂದು ಕೂಸಿನ ಹಣೆಬರಹ ಬರೆಯುತ್ತಾಳೆ ಎಂದು ಕುರುಬರು ನಂಬುತ್ತಾರೆ. ಶೆಟಗಿ ಆಚರಣೆ ಮಾಡುವಾಗ, ಕೂಸು ಗಂಡಸಾಗಿದ್ದರೆ, ಹೊರಸಿನ ಕೆಳಗಿಟ್ಟು ಪೂಜೆ ಮಾಡುವ ಗುಂಡುಕಲ್ಲಿಗೆ ದಾರ ಸುತ್ತುತ್ತಾರೆ. ಕೂಸು ಹೆಣ್ಣಾಗಿದ್ದರೆ ಗುಂಡು ಕಲ್ಲಿಗೆ ದಾರ ಸುತ್ತುವುದಿಲ್ಲ. ಇಲ್ಲಿ ದಾರ ಗಂಡಿನ ನಡಕ್ಕಿರುವ ಉಡದಾರವಿದ್ದ ಹಾಗೆ. ಹೀಗಾಗಿ ಶೆಟಿಗೆವ್ವ ಉಡದಾರವಿದೆಯೋ ಇಲ್ಲವೋ ನೋಡಿ ಹಣೆಬರಹ ಬರೆಯಲಿ ಎಂಬ ಧೋರಣೆ ಈ ಆಚರಣೆಯಲ್ಲಿ ಇದ್ದಂತಿದೆ.
ಉಟದಟ್ಟಿ
ಹೆಣ್ಣು ಹುಡುಗಿ ಬೆಳೆಯುತ್ತ ಬರುತ್ತಿದ್ದಂತೆ ಅವಳು ಹುಡುಗನಿಗಿಂತ ಭಿನ್ನ ಹಾಗೂ ಹೀನ ಎಂಬ ಅನೇಕ ಆಚರಣೆಗಳು ಜರುಗುತ್ತವೆ. ಹುಡುಗನಿಗೆ ಬಾಲ್ಯದಲ್ಲಿ ಕೇವಲ ಕಿವಿ ಚುಚ್ಚಿ ಹುಟಿಮುರುವು ಹಾಕಿದರೆ ಮುಗಿಯಿತು. ಆದರೆ ಹುಡುಗಿಗೆ ಕಿವಿಯಲ್ಲಿ ನಾಲ್ಕೈದು ಕಡೆಗೆ ಚುಚ್ಚಿ ಬೆಂಡವಾಲಿ, ಬುಗುಡಿ, ಗುರಂಬಾವಲಿ, ತಾಲೂಕ, ಇತ್ಯಾದಿ ಆಭರಣ ತೊಡಿಸುತ್ತಾರೆ. ಕಡ್ಡಾಯವಾಗಿ ಮೂಗು ಚುಚ್ಚಿ ಮೂಗಬಟ್ಟು ಹಾಕುತ್ತಾರೆ. ಈ ಮೂಗಬಟ್ಟು ಅವಳ ಮುತ್ತೈದೆತನದ ಹಲವಾರು ಸಂಕೇತಗಳಲ್ಲಿ ಒಂದಾಗಿದೆ. ಗಂಡ ಸತ್ತ ವಿಧವೆ ಈ ಆಭರಣ ಧರಿಸಬಾರದೆಂಬ ವಿಧಿಯಿದೆ. ಅನ್ಯ ಸಮಾಜಗಳಲ್ಲಿ ಇರುವಂತೆ ಕುರುಬರಲ್ಲಿಯೂ ಉಟದಟ್ಟಿ ಉಡಿಸುವ ಸಂಪ್ರದಾಯವಿದೆ. ಹುಡುಗಿಯೊಬ್ಬಳು ಬೆಳೆದು ಮೂರು ವರ್ಷದವಳಾದ ಮೇಲೆ ಹಾಗೂ ಹತ್ತುವರ್ಷದವಳಾಗುವುದರೊಳಗೆ ಈ ಆಚರಣೆಯನ್ನು ಮಾಡಿ ಮುಗಿಸುತ್ತಾರೆ. ಇದನ್ನು ಹುಟಕಿರಣಿ ಅಥವಾ ಹುಟಿಗಿರಣಿ ಎಂಬ ಹೆಸರಿನಲ್ಲಿಯೂ ಕರೆಯುತ್ತ್ತಾರೆ. ಈ ಆಚರಣೆಯಲ್ಲಿ ಹೆಣ್ಣು ಮಗುವಿಗೆ ಅವಳ ಸೋದರ ಮಾವನಾದವನು ತಂದ ಸೀರೆಯನ್ನು ಉಡಿಸಲಾಗುತ್ತೆ. ನೀನೀಗ ಬೆಳೆದಿರುವಿ, ಇನ್ನು ಮೇಲೆ ಈ ಲಂಗದಾವಣೆ ಸಾಕು, ಇನ್ನು ಮೇಲೆ ನೀನು ಸೀರೆಯನ್ನೇ ಉಟ್ಟುಕೊಳ್ಳಬೇಕು ಎಂಬುದನ್ನು ನೆನಪಿಸುವ ಆಚರಣೆ ಇದಾಗಿದೆ. ಅದಲ್ಲದೆ ಸೋದರಮಾವನಾದವನು ತಂಗಿಯ ಮಗಳಾದ ಈ ಹುಡುಗಿಯನ್ನು ತನ್ನ ಮಗನಿಗೆ ತೆಗೆದುಕೊಳ್ಳಲು ಒಪ್ಪಿಗೆಯಿದೆ ಎನ್ನವುದರ ಕುರುಹು ಇದು ಎಂದು ಭಾವಿಸುವುದಾದರೆ ಬಾಲ್ಯ ವಿವಾಹದ ಕಡೆಗೆ ಈ ಆಚರಣೆ ಬೆರಳು ಮಾಡುತ್ತಿರುವಂತಿದೆ.
ಹಚ್ಚೆ ಹಾಕಿಸಿಕೊಳ್ಳುವುದು
ಹಚ್ಚೆ ಹಾಕಿಸಿಕೊಳ್ಳುವುದು ಕೆಳವರ್ಗದ ಎಲ್ಲ ಸಮಾಜದ ಹೆಣ್ಣು ಮಕ್ಕಳಿಗೆ ಕಡ್ಡಾಯವಾದ ಸಂಪ್ರದಾಯವಾಗಿ ಬೆಳೆದು ಬಂದಿದೆ. ಗಂಡಸರು ಹಚ್ಚೆ ಹಾಕಿಸಿಕೊಳ್ಳುತ್ತಾರಾದರೂ ಅದು ಅವರಿಗೆ ಕಡ್ಡಾಯವಾದ ಆಚರಣೆಯಲ್ಲ. ಮೇಲಾಗಿ ಅವರು ಕೇವಲ ಮುಂಗೈ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡರೆ, ಮಹಿಳೆಯಾದವಳು ಕಡ್ಡಾಯವಾಗಿ ಹಲವಾರು ಕಡೆಗೆ ಹಚ್ಚೆ ಹಾಕಿಸಿಕೊಳ್ಳಲೇಬೇಕು. ಅದರಲ್ಲೂ ವಿಶೇಷವಾಗಿ ಹಣೆಯ ಮೇಲಿನ ಹಚ್ಚೆಯನ್ನು ಯಾವುದೇ ಸಂದರ್ಭದಲ್ಲಿ ಹಾಕಿಸಿಕೊಳ್ಳದೆ ಇರುವಂತಿಲ್ಲ. ಹಣೆಯ ಮೇಲಿನ ಹಚ್ಚೆಯಲ್ಲದೆ ಗದ್ದ, ಗಲ್ಲ, ಮುಂಗೈ, ಮುಂಗೈ ತೋಳಿನ ಮೇಲೆ, ಕಾಲಿನ ಬೆರಳುಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದಿದೆ. ಮುಂಗೈ ತೋಳಿನ ಮೇಲೆ ಹಚ್ಚೆಹಾಕುವ ವಿಶಾಲ ಜಾಗೆೆ ಇರುವುದರಿಂದ ಇಲ್ಲಿ ತೇರಿನ ಚಿತ್ರವನ್ನೋ, ದೇವರ ಚಿತ್ರವನ್ನೋ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹಣೆಯ ಮೇಲೆ ಹಚ್ಚೆ ಇರದಿದ್ದರೆ ಇದೇನು ಬೋಳು ಹಣೆ ಎಂದು ಛೇಡಿಸುತ್ತಾರೆ. ಕೈಬೆರಳ ಮೇಲಿನ ಹಚ್ಚೆಯ ಕುರಿತು ಕುರುಬರಲ್ಲಿ ಒಂದು ವಿಶೇಷ ನಂಬಿಕೆ ಇದೆ. ಕೈಬೆರಳ ಮೇಲೆ ಹಚ್ಚೆ ಹಾಕಿಸಿಕೊಂಡ ಮಹಿಳೆ ತಯಾರಿಸಿದ ಅಡುಗೆ ಬೇಗನೆ ಹಳಸುವುದಿಲ್ಲ ಎಂದು ನಂಬಲಾಗಿದೆ.
ಇಂದು ಕಾಲ ಬದಲಾಗಿದೆ. ಹಚ್ಚೆ ಹಾಕಿಸಿಕೊಳ್ಳ್ಳುವ ಜಾಗಗಳ ಸಂಖ್ಯೆ ಕೇವಲ ಒಂದೇ ಜಾತಿಗೆ ಸೀಮಿತವಾಗಿದೆ ಅದು ಹಣೆ. ಅದು ಅಲದಲೆ ಹಣೆಯ ಮೇಲಿನ ಹಚ್ಚೆಯ ಗಾತ್ರ ನಿಧಾನವಾಗಿ ಸಣ್ಣದಾಗುತ್ತ ನಡೆದಿದೆ. ನಗರ ಪ್ರದೇಶಗಳಲ್ಲಿ ಹಚ್ಚೆ ಸಂಪೂರ್ಣವಾಗಿ ಮಾಯವಾಗಿದೆ. ಅದರ ಜಾಗೆಯಲ್ಲಿ ಚಿಕ್ಕ ಚಿಕ್ಕ ಟಿಕಳಿಗಳು ಬಂದಿವೆ.
ಹಸಿರು ಗಿಡ ಮುಟ್ಟು
ಹೆಣ್ಣಾದವಳು ಮೈನೆರೆಯುವುದು ಒಂದು ಜೈವಿಕ ಕ್ರಿಯೆ. ಆದರೆ ಈ ಜೈವಿಕ ಕ್ರಿಯೆಯ ಸುತ್ತ ಹಬ್ಬಿರುವ ಆಚರಣೆ ಹಾಗೂ ನಂಬಿಕೆಗಳು ಅವಳನ್ನು ಆತಂಕಕ್ಕೆ ದೂಡುತ್ತದೆ. ಈ ಆತಂಕದ ಅಗ್ನಿ ದಿವ್ಯವನ್ನು ಅನ್ಯ ಸಮಾಜದ ಹುಡುಗಿಯರು ಎದುರಿಸುವಂತೆ ಕುರುಬ ಹುಡುಗಿಯೂ ಅನುಭವಿಸುತ್ತಾಳೆ. ಕಾರಣವಿಲ್ಲದೆ ಈವರೆಗೆ ಆ ಹುಡುಗಿಗೆ ನೀನು ಹಾಗೆ ಮಾಡಬೇಡ, ನೀನು ಹೀಗೆ ಮಾಡಬೇಡ, ನೀನು ಅಲ್ಲಿ ಹೋಗಬೇಡ, ನೀನು ಇಲ್ಲಿ ಹೋಗಬೇಡ ಎನ್ನುವಂಥ ನಿಷೇಧಗಳನ್ನು ಹೇರುತ್ತ ಬಂದ ಸಮಾಜ ಇಂದು ಅಗೋ ನೋಡು, ನೀನು ಈ ಕಾರಣಕ್ಕಾಗಿ ಆ ಎಲ್ಲ ನಿಷೇಧಗಳಿಗೆ ಗುರಿಯಾಗಿದ್ದಿ ಎಂದು ಸಾಕ್ಷಿ ಸಮೇತ ತಮ್ಮ ನಿಷೇಧಗಳನ್ನು ಹೇರುವ ಸಂದರ್ಭವಿದು. ಈ ಆತಂಕವನ್ನು ಅನುಭವಿಸುತ್ತಿರುವವಳು ಇವಳೇ ಮೊದಲನೆಯವಳಲ್ಲ ಹಾಗೂ ಕೊನೆಯವಳಲ್ಲ. ಪುರಾಣಪಾತ್ರ ದ್ರೌಪದಿಯೂ ಇದಕ್ಕೆ ಹೊರತಾಗಿರಲಿಲ್ಲ ಎನ್ನುವುದನ್ನು ಸೂಚಿಸುವ ಜನಪದ ಗೀತೆಯೊಂದಿದೆ.
ಹನ್ನೆರಡೊರುಷದ ಬಾಲಿ ಕನ್ಯೆ ದ್ವೌಪದಿದೇವಿ
ತನ್ನ ಹೊಲಿಯುವ ಕಂಡು ಬೋರಾಡಿ ಅಳುತ್ತಿದ್ದಾಳ
ಎಂದು ಈ ಗೀತೆ ಪ್ರಾರಂಭವಾಗುತ್ತದೆ.
ತನ್ನ ದೇಹದಲ್ಲಿ ಕಂಡು ಬಂದ ಈ ಅಗಾಧವಾದ ಬದಲಾವಣೆಗಳನ್ನು ಕಂಡು ದಿಕ್ಕೇ ತೋಚದಂತಾಗಿರುವ ಹುಡುಗಿಯನ್ನು ಇನ್ನು ಹೆಚ್ಚಿನ ಆತಂಕಕ್ಕೊಳಮಾಡುವ, ಇನ್ನೂ ಸಂದಿಗ್ಧಕ್ಕೆ ದೂಡುವ ಹಲವಾರು ನಂಬಿಕೆ ಆಚರಣೆಗಳು ಈ ಸಂದರ್ಭದಲ್ಲಿ ನಡೆಯುತ್ತವೆ.
ಹುಡುಗಿ ಮೈನೆರೆದಾಗ ಅವಳು ಧರಿಸಿದ ಬಟ್ಟೆ ಕೆಂಪು ಬಣ್ಣದ್ದಾಗಿರದೆ ಬೇರೆ ಬಣ್ಣದ್ದಾಗಿದ್ದರೆ ಅದನ್ನು ಅಶುಭವೆಂದು ಭಾವಿಸುತ್ತಾರೆ. ಬಣ್ಣ ಯಾವುದೇ ಇರಲಿ ಅಂದು ಅವಳು ಹೊಸಬಟ್ಟೆ ಉಟ್ಟಿದ್ದರೆ ಇನ್ನೂ ಹೆಚ್ಚಿನ ಅಶುಭವೆಂದು ತಿಳಿಯುತ್ತಾರೆ. ಈ ಸಂದರ್ಭದಲ್ಲಿ ಸೂತಕದಲ್ಲಿದ್ದವಳೆಂದು ಭಾವಿಸಿ ಅವಳನ್ನು ಗುಂಪಿನಿಂದ ಪ್ರತ್ಯೇಕಿಸುತ್ತಾರೆ. ಪ್ರಥಮ ಬಾರಿಗೆ ಸಕಾರಣವಾಗಿ ತನ್ನನ್ನು ಅನ್ಯ ಗೊಳಿಸಿದರು ಎನ್ನುವ ಅನುಭವ ಅವಳಿಗಾಗುತ್ತದೆ. ಓಣಿಯ ಮಹಿಳೆಯರೆಲ್ಲ ಸೇರಿ ಅವಳಿಗೆ ಧೈರ್ಯ ತುಂಬುವ ಬದಲು ಅವಳ ಆತಂಕ ಇನ್ನೂ ಹೆಚ್ಚಾಗುವಂತೆ ಮಾಡುತ್ತಾರೆ. ನೀನು ಹೋಗಿ ಆ ಹಸಿರು ಗಿಡ ಮುಟ್ಟಿ ಬಾ ಎನ್ನುತ್ತಾರೆ. ಹಾಗೆ ಅವಳು ಮುಟ್ಟಿಬಂದ ಗಿಡವನ್ನು ಅವರೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಏನೋ ಕಾರಣದಿಂದ ಆ ಗಿಡ ಬಾಡಿದರೆ ಅವಳ ಮುಟ್ಟು ದೋಷಪೂರಿತವಾದುದೆಂದು ತೀರ್ಮಾನಿಸುತ್ತಾರೆ. ಅಂಥ ಆಪಾದನೆಗೆ ಇವಳು ಒಮ್ಮೆ ತುತ್ತಾದರೆ ಇವಳು ತಿಂಗಳಿಗೊಂದಾವರ್ತಿ ನರಕಸದೃಶ್ಯ ಹಿಂಸೆಯನ್ನು ಅನುಭವಿಸುತ್ತಲೇ ಇರಬೇಕಾಗುತ್ತದೆ.
ಮೈನೆರೆದಾದ ಐದು ದಿವಸಗಳವರೆಗೆ ಇವಳನ್ನು ನಿತ್ಯ ಎರೆಯುವ ಕಾರ್ಯಕ್ರಮವಿರುತ್ತದೆ. ಇವಳನ್ನು ಎರೆಯಲು ಸೋದರತ್ತೆಯೋ ಇಲ್ಲವೆ ನೆರೆಹೊರೆಯ ಮುತ್ತೈದೆಯರೋ ಬರುತ್ತಾರೆ. ಇವಳನ್ನು ಎರೆಯಲು ಬಂದ ಅವರಿಗೂ ಇವಳ ಸೂತಕ ಅಂಟಿಕೊಳ್ಳುತ್ತದೆ ಎಂದು ಭಾವಿಸುತ್ತಾರಾದ್ದರಿಂದ ಎರೆದವರು ತಮ್ಮ ಮನೆಯೊಳಗೆ ಹೋಗುವ ಮುನ್ನ ಬಾಗಿಲ ಹೊರಗೇ ಕುಳಿತು ಸ್ನಾನ ಮಾಡಿಕೊಂಡು ಮೈಲಿಗೆ ಕಳೆದುಕೊಳ್ಳಬೇಕಾಗುತ್ತದೆ. ಅಂದರೆ ಇವಳ ಸೂತಕ ಸಾಂಕ್ರಾಮಿಕ. ಇವಳನ್ನು ಮುಟ್ಟಿದವರಿಗೆಲ್ಲ ಆ ಸೂತಕ ಹಬ್ಬುತ್ತದೆ ಎಂಬ ನಂಬಿಕೆ ಅವರಲ್ಲಿ ಒಂದು ರೀತಿಯ ಪಾಪಪ್ರಜ್ಞೆಯನ್ನು ಮೂಡಿಸುತ್ತದೆ.
ಪ್ರಥಮ ಮುಟ್ಟಿನ ಕುರಿತು ಇನ್ನೊಂದು ನಂಬಿಕೆಯಿದೆ. ಈ ನಂಬಿಕೆಯೊಳಗಿರುವ ಧೋರಣೆ ಅವಳ ಕುರಿತು ಸಕಾರಾತ್ಮಕವಾದುದೋ ನಕಾರಾತ್ಮಕವಾದುದೋ ಎಂದು ತಿಳಿಯದಂತೆ ಸಂದಿಗ್ಧವನ್ನುಂಟುವಂಥದ್ದಾಗಿದೆ. ಮುಟ್ಟಾಗಿ ಮೂಲೆಯಲ್ಲಿ ಪ್ರತ್ಯೇಕಿಸಲ್ಪಟ್ಟ ಇವರ ಉಡಿಯಲ್ಲಿ ಇದೀಗ ತಾನೇ ಹುಟ್ಟಿದ ಕೂಸನ್ನು ಹಾಕಿದರೆ ಆ ಕೂಸಿಗೆ ಮುಟ್ಟುದೋಷವಾಗುವುದಿಲ್ಲವೆಂದು ನಂಬುತ್ತಾರೆ. ಈ ನಂಬಿಕೆಯನ್ನು ಒಂದು ನಿಟ್ಟಿನಿಂದ ನೋಡಿದರೆ ತನ್ನ ಪ್ರಥಮ ಮುಟ್ಟಿನ ಮೂಲಕ ತಾಯಿಯಾಗುವ ಸಾಮರ್ಥ್ಯದ ಮುನ್ಸೂಚನೆಯನ್ನು ನೀಡಿರುವ ಇವಳು ಸಧ್ಯದಲ್ಲಿ ತಾಯಿಯ ಸ್ವರೂಪದವಳೇ. ಆದ್ದರಿಂದ ಇವಳ ಮುಟ್ಟು ಕೂಸಿಗೆ ಸೂತಕವನ್ನು ಅಂಟಿಸುವುದಿಲ್ಲ ಎನ್ನುವ ನಿಲುವು ಇಲ್ಲಿರಬಹುದು ಅನ್ನಿಸುತ್ತದೆ. ಆದರೆ ಈ ನಂಬಿಕೆಯನ್ನು ಇನ್ನೊಂದು ನಿಟ್ಟಿನಿಂದ ನೋಡಿದರೆ ಮುಟ್ಟಾದ ಇವಳೂ ಸೂತಕದಲ್ಲಿರುವವಳೇ ಹಾಗೂ ಇದೀಗ ಹುಟ್ಟಿದ ಕೂಸೂ ಸೂತಕದಲ್ಲಿ ಇರುವಂಥದೇ ಹೀಗಾಗಿ ಸೂತಕದಲ್ಲಿರುವ ಒಂದು ಅಂಥದೇ ಸೂತಕದಲ್ಲಿರುವ ಇನ್ನೊಮದನ್ನು ಮುಟ್ಟಿದರೆ ಅಥವಾ ಮುಟ್ಟಿಸಿಕೊಂಡರೆ ಯಾವುದೇ ಸೂತಕ ಸಂಸರ್ಗವಾಗಲಾರದು ಎನ್ನುವ ನಿಲುವು ಇಲ್ಲಿರಬಹುದು.
ಗ್ರಾಮೀಣ ಕುರುಬ ಸಮಾಜದಲ್ಲಿ ಹುಡುಗಿಯೊಬ್ಬಳು ಮೈನೆರೆದರೆ ತಮ್ಮ ಮನೆಯ ಬಾಗಿಲಿಗೆ ಚಪ್ಪಲಿ ಹಾಗೂ ಕಸಬರಿಗೆ ಜೋತು ಬಿಡುವ ಸಂಪ್ರದಾಯವಿದೆ. ಹುಡುಗಿ ಮೈನೆರೆಯುವ ಮೂಲಕ ತಮ್ಮ ಮನೆಯನ್ನು ಹೊಲೆ ಗೊಳಿಸಿದಳು ಎಂದು ಕುರುಬರು ಭಾವಿಸುತ್ತಾರೆ. ಹಾಗೂ ಹೀಗೆ ಹೊಲೆಗೊಂಡ ಮನೆಯಲ್ಲಿ ಭೂತಪ್ರೇತಗಳು ನಿರಾತಂಕವಾಗಿ ಸಂಚರಿಸುತ್ತವೆ. ಭೂತಪ್ರೇತಗಳು ಮನೆಯೊಳಗೆ ಬರಬಾರದೆಂದು ಚಪ್ಪಲಿ ಹಾಗೂ ಕಸಬರಿಗೆಯನ್ನು ಮನೆ ಬಾಗಿಲಿಗೆ ಜೋತು ಬಿಡುತ್ತಾರೆ.
ಬೀದರದ ಗೊಂಡರು ತಮ್ಮ ಮನೆಯ ಹುಡುಗಿ ಮೈನೆರೆದರೆ ಅವಳಿಗೆ ಐದು ದಿವಸದ ಸೂತಕ ಕಳೆಯಿಸಿದ ನಂತರ ಅವಳ ಕಾಲಿಗೆ ಕಡ್ಡಾಯವಾಗಿ ರುಳಿಯನ್ನು ಹಾಕುತ್ತಾರೆ. ಹಾಗೆ ಹಾಕುವ ಮೂಲಕ ಈ ಹುಡುಗಿ ವಿವಾಹಕ್ಕೆ ಯೋಗ್ಯವಾದ ಕನ್ಯೆಯಾಗಿದ್ದಾಳೆ ಎಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ. ಹುಡುಗರಿಗಿಲ್ಲದ ಈ ರೀತಿಯ ಘೋಷಣೆ ಹುಡುಗಿಯರ ವಿಷಯದಲ್ಲಿ ಪ್ರಚಲಿತವಿರುವುದು ಲಿಂಗತಾರತಮ್ಯದ ದ್ಯೋತಕವಾಗಿದೆ.
ಸಮಬೆಡಗು ವಿಷಮ ಕಂಕಣ ನಿಷಿದ್ಧ
ಕುರುಬರು ವಿವಾಹಕ್ಕೆ ಸಂಬಂಧಪಟ್ಟಂತೆ ನಂಬಿಕೊಂಡಿರುವ ಸಂಪ್ರದಾಯಗಳು ಕುತೂಹಲಕರವಾಗಿವೆ. ಕನ್ಯೆ ನೋಡಲು ಹೋಗುವ ಮುನ್ನ ಇಲ್ಲವೆ ತೋರಿಸುವ ಮುನ್ನ ಇಲ್ಲವೆ ಕನ್ಯೆ ತೋರಿಸುವ ಮುನ್ನ ಅವರು ಬೆಡಗು ಕಂಕಣಗಳ ಬಗೆಗೆ ಕೂಲಂಕಷವಾಗಿ ತಿಳಿದುಕೊಳ್ಳುತ್ತಾರೆ. ಕುರುಬರಲ್ಲಿ ಎರಡು ರೀತಿಯ ಕಂಕಣದವರಿದ್ದಾರೆ: ಹತ್ತಿ ಕಂಕಣದವರು ಮತ್ತು ಉಣ್ಣೆ ಕಂಕಣದವರು. ಕುರುಬರು ಸಮ ಕಂಕಣದವರೊಂದಿಗೆ ಮಾತ್ರ ಸಂಬಂಧ ಬೆಳೆಯಿಸುತ್ತಾರೆ. ಹತ್ತಿಕಂಕಣದವರು ಉಣ್ಣೆಕಂಕಣದವರೊಂದಿಗೆ ಸಂಬಂಧ ಏರ್ಪಡಿಸಲು ಒಪ್ಪುವುದಿಲ್ಲ. ಆ ಸಂದರ್ಭದಲ್ಲಿ ಕುರುಬ ಮಹಿಳೆಯರೂ ಪುರುಷರೊಂದಿಗೆ ದನಿಗೂಡಿಸುತ್ತಾರೆ. ಇಂಥ ಸಂಬಂಧಗಳ ನಿಷೇಧಕ್ಕೆ ಕಾರಣ ಸೂಚಿಸುವಂಥ ಪುರಾಣ ಕತೆಯನ್ನು ಕುರುಬರು ಕಟ್ಟಿಕೊಂಡಿದ್ದಾರೆ. ಕುರುಬರ ಮೂಲಪುರುಷರಲ್ಲಿ ಒಬ್ಬನಾದ ಪದ್ಮಗೊಂಡನು ತನಗೆ ಈಗಾಗಲೆ ವಿವಾಹವಾಗಿದ್ದರೂ ರಾಕ್ಷಸಿಯೊಬ್ಬಳ ಸಾಕು ಮಗಳಾದ ಚುಮಲೆಯನ್ನು ಮದುವೆಯಾಗುತ್ತಾನೆ. ಚುಮಲೆಯನ್ನು ಮದುವೆಯಾಗುವಾಗ ಕಂಕಣ ಕಟ್ಟಲು ಹತ್ತಿಯಿಂದ ತಯಾರಿಸಿದ ನೂಲು ದೊರೆಯದಿದ್ದಾಗ ಅಲ್ಲಿಯೇ ಇದ್ದ ಕುರಿಗಳ ಉಣ್ಣೆಯ ಎಳೆಗಳನ್ನು ತೆಗೆದು ಕಂಕಣ ಕಟ್ಟಿಕೊಳ್ಳುತ್ತಾರೆ. ಅದಾದ ನಂತರ ಪದ್ಮಗೊಂಡ ಚುಮಲೆಯರಿಗೆ ಹುಟ್ಟಿದ ಮಕ್ಕಳ ವಂಶದವರನ್ನು ಹತ್ತಿ ಕಂಕಣದವರೆಂದೂ ಕಂಕಣ ಮೂಲಗಳನ್ನು ಗುರುತಿಸಿಕೊಳ್ಳುತ್ತಾರೆ. ಎರಡನೆಯ ಹೆಂಡತಿಯ ಮಕ್ಕಳು ಮತ್ತು ರಾಕ್ಷಸಿಯ ಸಾಕುಮಗಳ ಮಕ್ಕಳು ಎನ್ನುವ ಕಾರಣಕ್ಕೆ ಉಣ್ಣೆ ಕಂಕಣದವರನ್ನು ಕಡಿಮೆ ಎಂದು ಹತ್ತಿ ಕಂಕಣದವರು ಭಾವಿಸಿದಂತೆ ಇದೆ.
ಆದರೆ ಕಾಲ ಬದಲಾಗುತ್ತಿದೆ. ಬದಲಾದ ಕಾಲದೊಂದಿಗೆ ಕುರುಬರ ನಂಬಿಕೆಗಳು ಮೊದಲಿನಷ್ಟು ಕಠೋರವಾಗಿ ಉಳಿದಿಲ್ಲ. ಹೀಗಾಗಿ ಅಲ್ಲೊಂದು ಇಲ್ಲೊಂದು ವಿಷಮ ಕಂಕಣದ ವಿವಾಹ ಸಂಬಂಧಗಳು ನಡೆಯುತ್ತಿವೆ. ಆದರು ನಿರೀಕ್ಷಿತ ಮಟ್ಟದಲ್ಲಿ ಕಠೋರತೆ ಕಡಿಮೆಯಾಗಿಲ್ಲ.
ಕುರುಬರಲ್ಲಿ ವಿಷಮ ಕಂಕಣ ವಿವಾಹ ನಿಷಿದ್ಧವಾಗಿರುವಂತೆ ಸಮಬೆಡಗು ವಿವಾಹವು ನಿಷಿದ್ಧವಾಗಿದೆ. ಕುರುಬರು ಒಂದೇ ಬೆಡಗಿನವರನ್ನು ಸೋದರ ಸಂಬಂಧಿಗಳೆಂದು ಭಾವಿಸುತ್ತ್ತಾರೆ. ಒಂದು ವೇಳೆ ಆಚಾತುರ್ಯದಿಂದ ಒಂದೇ ಬೆಡಗಿನವರಲ್ಲಿ ವಿವಾಹ ಸಂಬಂಧ ನಡೆದಿದ್ದರೆೆ ಅಂಥವರಿಗೆ ಹುಟ್ಟುವ ಮಕ್ಕಳನ್ನು ಎಳೆಗುಲ ದವರೆಂದು ಪರಿಗಣಿಸುತ್ತಾರೆ. ಇಂಥ ಎಳೆಗುಲದವರನ್ನು ಸಮಾಜದ ಮಂಗಲ ಕಾರ್ಯಗಳಲ್ಲಿ ಪಾಳ್ಗೊಳ್ಳದಂತೆ ನಿಷೇಧಿಸುತ್ತಾರೆ. ಆದರೆ ಸಮಾಧಾನದ ಸಂಗತಿಯೇನೆಂದರೆ ಇಂಥ ಎಳೆಗುಲದರವನ್ನು ಗುರುಸ್ವಾಮಿಗಳು ಮೂಲದೈವದವರೊಂದಿಗೆ ಮರಳಿ ಬೆರೆಯುವಂತೆ ಮಾಡುವಲ್ಲಿ ಕೆಲವು ಆಚರೆಣೆಗಳನ್ನು ನೆರವೇರಿಸುತ್ತಾರೆ.
Monday, August 12, 2013
ಹರ್ತಿಕೋಟೆ : ನಾಮಕರಣ ಮಹೋತ್ಸವ...ಪತ್ರಕರ್ತ ಮಾಲತೇಶ್ ಅರಸ್ ಹಾಗೂ ಶೃತಿ ಎಂ.ಅರಸ್ ಅವರ ಪುತ್ರ ವಿಖ್ಯಾತ್ ಅರಸ್
ಬಯಲು ಸೀಮೆಯನ್ನು ಮಲೆನಾಡಾಗಿಸಿ..
*ದೇಗುಲದಲ್ಲಿ ಅರಳಿದ ಹಸಿರ ವೈಭವ..
* ಹೆಸರಿನ ಜೊತೆಗೆ ಹಸಿರಿನ ಸಂಭ್ರಮ
*ಮಕ್ಕಳನ್ನು ಹಸಿರು ರಾಯಭಾರಿಯಾಗಿಸಿ
*ಎಲ್ಲರ ಕೈಯಲ್ಲೂ ಪುಟ್ಟ ಸಸಿಗಳ ಮೆರವಣಿಗೆ
*ಶ್ರಾವಣೋತ್ಸವ, ನಾಮಕರಣ ಮಹೋತ್ಸವ
*ಪ್ರತಿಯೊಬ್ಬರು ಮನೆ ಮುಂದೊಂದು ಸಸಿ ನೆಡಿ
ಚಿತ್ರದುರ್ಗ: ಪ್ರತಿ ಮನೆ ಮನೆಯಲ್ಲೂ ಹಬ್ಬಗಳ ಸವಿ ನೆನಪಿಗಾಗಿ ನಾವೂ ಸಸಿ ನೆಡುವ ಮೂಲಕ ಪರಿಸರವನ್ನು ನಾವು ಕಾಪಾಡಬೇಕಿದೆ. ಬಯಲು ಸೀಮೆಯನ್ನು ಮಲೆನಾಡಾಗಿ ಪರಿವರ್ತಿಸಿದರೇ ಸಮೃದ್ಧ ಮಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮುಂದೊಂದು ಸಸಿ ನೆಡಬೇಕು ಹರ್ತಿಕೋಟೆ ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಡಿಸಿಸಿ ನಿರ್ದೇಶಕ ಗುರುಲಿಂಗಪ್ಪ ಕರೆ ನೀಡಿದರು.
ಹರ್ತಿಕೋಟೆ ಗ್ರಾಮದ ಶ್ರೀ ಕೆಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಪತ್ರಕರ್ತ ಮಾಲತೇಶ್ ಅರಸ್ ಹಾಗೂ ಶೃತಿ ಎಂ.ಅರಸ್ ಅವರ ಪುತ್ರ ವಿಖ್ಯಾತ್ ಅರಸ್ ನಾಮಕರಣದ ನೆನಪಿಗೆ ಏರ್ಪಡಿಸಿದ್ದ ಹಸಿರೋತ್ಸವ, ಹೆಸರು ಹಸಿರ ಸಂಭ್ರಮ ಸಮಾರಂಭದಲ್ಲಿ ಮಾತನಾಡಿ. ನಾವು ಪರಿಸರ ಕಾಳಜಿ ಬೆಳಸಿಕೊಳ್ಳಬೇಕು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.
ಬಯಲು ಸೀಮೆಯನ್ನು ಮಲೆನಾಡಾಗಿಸಿ:ಇದೇ ವೇಳೆ ಸಸಿ ವಿತರಿಸಿ ಮಾತನಾಡಿದ ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಲಿಂಗಪ್ಪ. ಪರಿಸರವನ್ನು ನಾವೆಲ್ಲಾ ಕಾಪಾಡಬೇಕಿದೆ. ಹಬ್ಬ ಹರಿದಿನಗಳಲ್ಲಿ ನಾವು ಏನೆಲ್ಲಾ ಕೆಲಸ ಮಾಡುತ್ತಿದ್ದರೂ ಸಸಿ ನೆಡುವುದನ್ನೇ ಮರೆಯುತ್ತಿದ್ದೇವೆ. ಬಯಲು ಸೀಮೆಯನ್ನು ಮಲೆನಾಡಾಗಿ ಪರಿವರ್ತಿಸಿದರೇ ಸಮೃದ್ಧ ಮಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮುಂದೊಂದು ಸಸಿ ನೆಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ. ಮಹಂತೇಶ್ ಮಾತನಾಡಿ, ಕೇವಲ ಸುದ್ದಿ ಬರೆದು ನಮ್ಮ ಕಾಯಕ ಮುಗಿತೆಂದು ಸುಮ್ಮನಾಗುವ ಬದಲಿಗೆ ಮಾಲತೇಶ್ ಅರಸ್ ತಮ್ಮ ಮಗನ ನಾಮಕರಣದ ನೆನಪಿಗೆ ಜೀವಾಮೃತವಾಗಿರುವ ಸಸಿಗಳನ್ನು ನೀಡಿರುವುದು ಅರ್ಥಪೂರ್ಣ ಹಾಗೂ ಶ್ಲಾಘನೀಯ. ರಾಜಕಾರಣಿಗಳು ಹುಟ್ಟು ಹಬ್ಬಗಳಿಗೆ ಆಸ್ಪತ್ರೆಗಳಿಗೆ ತೆರಳಿ ಹಣ್ಣುಗಳನ್ನು ವಿತರಿಸಿದರೇ, ಇವರು ಹಣ್ಣನ್ನೇ ನೀಡುವ ಸಸಿಗಳನ್ನು ನೀಡುವ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ಲೋಕಾಯುಕ್ತ ಸಬ್‌ಇನ್ಸ್‌ಪೆಕ್ಟರ್ ಆನಂದ್ ಮಾತನಾಡಿ, ಮಗನನ್ನು ಹಸಿರು ರಾಯಭಾರಿಯಾಗಿಸುವ ನಿಟ್ಟಿನಲ್ಲಿ ಹೊಸ ಮುನ್ನುಡಿಯನ್ನು ಬರೆದಿರುವುದು ಎಲ್ಲರಿಗೂ ಆದರ್ಶಪ್ರಾಯವಾಗಿರಲಿ, ಮುಂದಿನ ಪೀಳಿಗೆಯು ಸ್ವಚ್ಚಂದವಾದ ಹಸಿರಿನ ಪರಿಸರದಲ್ಲಿ ಒಳ್ಳೆಯ ಗಾಳಿ, ಬೆಳಕು ಹಾಗೂ ನೈಸರ್ಗಿಕವಾದ ಸಂಪತ್ತನ್ನು ತಮ್ಮದಾಗಿಸಿಕೊಳ್ಳಲಿ. ಏನಾದರೂ ಮಾಡು ಎಲ್ಲರಿಗೂ ಉಪಯೋಗ ವಾಗುವಂತಿರಲಿ ಎನ್ನುವಂತಹ ಮಾತನ್ನು ಈ ರೀತಿ ಸತ್ಯಗೊಳಿಸಿರುವ ಇವರ ಅವಿರತ ಶ್ರಮ ಶ್ಲಾಘನೀಯ ಎಂದು ನುಡಿದರು.
ಮನೆ ಮುಂದೊಂದು ಗಿಡ ನೆಡಿ ಎಂಬ ವಿನಂತಿಯೊಂದಿಗೆ ಸವಿನೆನಪಿಗಾಗಿ ಸಂಪಿಗೆ, ಮಾವು, ನೇರಳೆ, ಕರಿಬೇವು, ಶ್ರೀಗಂಧ, ತೇಗ, ಹೊನ್ನೆ, ಸೀತಾಫಲ ಸೇರಿದಂತೆ ವಿವಿಧ ಬಗೆಯ 160 ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ದೇಗುಲದ ಮುಂಭಾಗದಲ್ಲಿ ಸಸಿ ನೆಡಲಾಯಿತು. ಹರ್ತಿಕೋಟೆ ಅಲ್ಲದೆ ಹಿರಿಯೂರು, ಸಂಗೇನಹಳ್ಳಿ, ಗೊರ‌್ಲತ್ತು, ಚನ್ನಮ್ಮನಹಳ್ಳಿ, ಕಳವಿಭಾಗಿ, ಮುದಿಯಪ್ಪನ ಕೊಟ್ಟಿಗೆ, ಶಿರಾ, ಚಳ್ಳಕೆರೆ, ಚಿತ್ರದುರ್ಗ, ರಾಮಗಿರಿ, ವಡೇರಹಳ್ಳಿ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಿದ್ದವರೆಲ್ಲರ ಕೈಯಲ್ಲಿ ಪುಟ್ಟ ಪುಟ್ಟ ಸಸಿಗಳೇ ಇದ್ದವು.
ಬಂದಿದ್ದ ಪ್ರತಿಯೊಬ್ಬರಿಗೂ ಸಸಿ ವಿತರಿಸುವ ಮೂಲಕ ಹಸಿರು ಜಾಗೃತಿ ಮೂಡಿಸುವ ಕಾರ್ಯವೂ ನಡೆಯಿತು. ಇದೇ ವೇಳೆ ಶ್ರಾವಣದ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳೂ ಜರುಗಿದವು.
ಹರ್ತಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಗಣಾಚಾರ್ ರಾಮಲಿಂಗಯ್ಯ, ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್ ಎಲ್.ವೀರಭದ್ರಯ್ಯ, ವೆಟ್ರನರಿ ಇನ್ಸ್‌ಪೆಕ್ಟರ್ ರುದ್ರಮುನಿ, ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಯಶೋಧರ್ ಪೂಜಾರ್, ಹಿರಿಯೂರು ಜಯರಾಂ, ಪೋಲೀಸ್ ಲಕ್ಷ್ಮಿ ನಾರಾಯಣ, ವಿಶ್ವ ಹಾಲುಮತ ಯುವ ವೇದಿಕೆ ಕಾರ್ಯದರ್ಶಿ ಸಂಗೇನಹಳ್ಳಿ ಮಂಜುನಾಥ್, ತಾಲೂಕು ಕನಕ ಯುವ ಸೇನೆ ಅಧ್ಯಕ್ಷ ಜಗದೀಶ್ ಭಂಡಾರಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಂತರಾಜ್ ಹುಲಿ, ಕನಕ ಯುವಕ ಸಂಘದ ಖಜಾಂಚಿ ಶ್ರೀನಿವಾಸ್, ಗಣಾಚಾರ್ ಕುಮಾರಸ್ವಾಮಿ, ನಂಜುಂಡಯ್ಯ ಒಡೆಯರ್, ನಾಗಯ್ಯ ಒಡೆಯರ್, ಇತರರು ಇದ್ದರು.
((ಬಾಕ್ಸ್))
ಅಲ್ಲಿ ಸಂಪಿಗೆ ಸುವಾಸನೆ, ಮಾವಿನ ಆಹ್ಲಾದಕರ, ನೇರಳೆಯ ಕಂಪು, ಶ್ರೀಗಂಧದ ವೈಭವ, ಕರಿಬೇವಿನ ಗಮ್ಮತ್ತು, ಸೀತಾಫಲದ ರುಚಿ, ನಿಂಬೆಯ ಸವಿ, ಗಂಟೆಯ ನಿನಾದ, ಅರ್ಚನೆಯ ಸುಮಧುರತೆ, ಕಿವಿಗಿಂಪಾದ ಗಾಯನ, ಮಕ್ಕಳ ಆಟವೂ ಇತ್ತು. ಅಕ್ಷರಶಃ ದೇಗುಲದಲ್ಲಿ ಹಸಿರಿನ ಹಬ್ಬವೇ ಮೂಡಿತ್ತು. ಹೆಸರಿನ ಜೊತೆಗೆ ಹಸಿರೋತ್ಸವ. ಹಳ್ಳಿಗಾಡಿನ ಸೊಗಡು, ಊರ ಮಂದಿ ಕೈಯಲ್ಲಿ ಪುಟ್ಟ ಸಸಿಗಳ ಮೆರವಣಿಗೆ ನಡೆಯಿತು.
Thursday, August 1, 2013
Subscribe to:
Posts (Atom)