ಶ್ರೀಶ್ರೀಶ್ರೀ ಶ್ರೀಧರಮೂರ್ತಿ ಗುರೂಜಿ
ಗುರು ಪೀಠಾಧಿಪತಿಗಳು
ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನ, ಕಳವಿಭಾಗಿ
ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ, ಕಳವಿಭಾಗಿ
ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ಈಗಿನ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಎಂ.ಡಿ.ಕೋಟೆ(ಮದಕರಿನಾಯಕನಕೋಟೆ)ಎಂಬ ಊರಿನಲ್ಲಿ ಶ್ರೀರಂಗನಾಥ ಸ್ವಾಮಿಯ ಪುರಾತನ ದೇವಾಲಯವು ಇದ್ದಿತು. ಆಗಿನ ಕಾಲದಲ್ಲಿ ಶ್ರೀವೈಷ್ಣವ ಸಮಾಜದವರು ಶ್ರೀರಂಗನಾಥ ಸ್ವಾಮಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆ ದೇವಾಲಯದ ಮುಂಭಾಗದಲ್ಲಿ ಪುರಾತನಕಾಲದ ಒಂದು ಬಾವಿ ಇದ್ದಿತು. ಆ ಬಾವಿಯು ಮಚ್ಚನಬಾವಿ ಅಂದರೆ ಪಂಚ ಕನ್ನಿಕೆಯರು ಗಂಗಾ ಪೂಜೆ ಮಾಡುವ ಸ್ಥಳವಾಗಿತ್ತು. ಆ ಬಾವಿಯ ಹಿಂಭಾಗದಲ್ಲಿ ದಡವಿತ್ತು. ಆ ಅರ್ಚಕರು ಬಾವಿಯ ಬದಿಗೆ ಹಾಕಿದ್ದ ಘಂಟೆಯನ್ನು ಹಿಡಿದುಕೊಂಡು ಬಾವಿ ದಾಟಿ ಇನ್ನೊಂದು ಬದಿಯಲ್ಲಿದ್ದ ರಂಗನಾಥ ಸ್ವಾಮಿಯ ಸೇವೆ ಮಾಡಿ ಪುನಃ ಘಂಟೆಯನ್ನು ಹಿಡಿದುಕೊಂಡು ಬಾವಿ ದಾಟಿ ವಾಪಸ್ಸು ಬರುತ್ತಿದ್ದರು. ಒಂದು ದಿನ ಈ ರೀತಿ ಅರ್ಚಕರು ಬಾವಿ ದಾಟುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಗಂಗೆಯಲ್ಲಿ ಐಕ್ಯವಾದರು. ನಂತರ ಶ್ರೀ ರಂಗನಾಥ ಸ್ವಾಮಿ ಪೂಜಾ ಕಾರ್ಯಗಳು ಸಾಕಷ್ಟು ಕಾಲ ನಿಂತುಹೋದವು.ಕೆಲ ವರ್ಷಗಳ ನಂತರ ಕೆಲವು ಮೈಲಿಗಳಷ್ಟು ದೂರದಲ್ಲಿದ್ದಲ್ಲಿ ಕಳವಿ ಗಿಡಗಳು ಹೇರಳವಾಗಿ ಬೆಳೆದಿದ್ದವು. ಆ ಕಳವಿ ಗಿಡಗಳು ಬೆಳೆದಿದ್ದ ಮೈದಾನದಲ್ಲಿ ಒಂದು ಊರು ಹುಟ್ಟಿ ಬೆಳೆದ ಕಾರಣವಾಗಿ ಆ ಊರಿಗೆ ಕಳವಿಭಾಗಿ ಎಂಬ ಹೆಸರು ಬಂದಿತು.
ನಂತರದ ವರ್ಷಗಳಲ್ಲಿ ವಿಜಯನಗರದ ಸಾಮ್ರಾಜ್ಯ ಕಾಲದಲ್ಲಿ ಉತ್ತರಪ್ರದೇಶದಿಂದ ಯಾತ್ರಿಕರು, ರಾಜರು ಒಂಟೆ ಕುದುರೆ ಸವಾರರಾಗಿ ವಜ್ರವೈಢೂರ್ಯಗಳ ವ್ಯಾಪಾರಸ್ತರಾಗಿ ಆ ಕಳವಿಭಾಗಿಯ ವಿಶಾಲವಾದ ಮೈದಾನದಲ್ಲಿ ಬಂದು ಬೇವಿನಮರದ ಆಶ್ರಯದಲ್ಲಿ ತಂಗುತ್ತಿದ್ದರು. ಅವರು ತಮ್ಮ ಅಡುಗೆ ಒಲೆಗೆ ಪಾತ್ರೆ ಇಡುವುದಕ್ಕಾಗಿ ಪಕ್ಕದಲ್ಲೇ ಇದ್ದ ಒಂದು ಕಲ್ಲನ್ನು ಕೀಳುತ್ತಿದ್ದಾಗ ಭೂಮಿಯ ಆಳಕ್ಕಿದ್ದ ಆ ಕಲ್ಲನ್ನು ಅಲ್ಲಾಡಿಸಲಾಗಲಿಲ್ಲ. ಹಾಗಾಗಿ ಅವರು ಆ ಕಲ್ಲಿನ ಪಕ್ಕದಲ್ಲಿ ಇನ್ನೆರಡು ಕಲ್ಲುಗಳನ್ನಿಟ್ಟು ಅಡುಗೆ ಮಾಡಲು ಪ್ರಾರಂಭಿಸಿದರು. ಆಗ ಕಟ್ಟಿಗೆಯಿಂದ ಶಾಖೋತ್ಪನ್ನವಾಗಿ ಆಳಕ್ಕಿದ್ದ ಕಲ್ಲು ಸಿಡಿದು ಆ ಕಲ್ಲು ಭದ್ರವಾಗಿ ಅಲ್ಲೇ ಸ್ಥಾಪಿತವಾಯಿತು. ಅಲ್ಲಿದ್ದ ಹಸುಕರು, ಮತ್ತು ಕುರಿಗಳೆಲ್ಲಾ ಸ್ತಬ್ಧವಾದವು. ಆ ವ್ಯಾಪಾರಿಗಳಿಗೆ ಗಾಬರಿಯಾಯಿತು. ಆಗ ಸಮೀಪದಲ್ಲೇ ಇದ್ದ ಗೊಲ್ಲರಹಟ್ಟಿಯ ಒಬ್ಬ ಪಶುಪಾಲಕನಾದ ಬಾಲಕನ ಮೇಲೆ ಭಗವಂತನ ಅನುಗ್ರಹವಾಗಿ ಆ ಬಾಲಕನ ಬಾಯಿಂದ ನಾನು ಇಲ್ಲಿ ರಂಗನಾಥ ಸ್ವಾಮಿಯಾಗಿ ಶಿಲೆಯ ರೂಪದಲ್ಲಿ ನೆಲೆಗೊಂಡಿರುವೆ ಎಂದು ಘೋಷಣೆಯಾಯಿತು. ಆ ನಂತರ ಸ್ತಬ್ಧವಾಗಿದ್ದ ದನಕರುಗಳೆಲ್ಲಾ ಚೇತನಗೊಂಡವು. ಆಗ ರಂಗನಾಥನ ಮಹಿಮೆ ಆ ವ್ಯಾಪಾರಿಗಳಗೆ ಅರ್ಥವಾಯಿತು.
ಆ ದಿನ ಕಳವಿಭಾಗಿಯ ಗ್ರಾಮಸ್ಥರು ಪ್ರತಿಮನೆಯೊಬ್ಬರೂ ಭಕ್ತಿಯಿಂದ ಸ್ವಾಮಿಯಸನ್ನಿಧಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರು. ತದನಂತರ ಆ ಗ್ರಾಮದ ಕುಂಚಿಟಿಗ ಸಮಾಜದ ಜನರು ಸೇರಿ ಮರಳು ಮತ್ತು ಸುಣ್ಣದ ಕಲ್ಲಿನಿಂದ ಅರೆದು ಹಳ್ಳದ ನೀರನ್ನು ಗಡಿಗೆಯಲ್ಲಿ ಹೊತ್ತುತಂದು ಶ್ರೀ ರಂಗನಾಥಸ್ವಾಮಿಯ ಚಿಕ್ಕದಾದ ದೇವಸ್ಥಾನದ ನಿರ್ಮಾಣ ಮಾಡಿದರು. ಅಂದಿನ ದಿನಗಳಲ್ಲಿ ಶ್ರೀ ರಂಗನಾಥ ಸ್ವಾಮಿಯನ್ನು ಜೆಜ್ಜುಕಲ್ಲು ರಂಗಪ್ಪ ಎಂದು ಕರೆಯಲಾಗುತ್ತಿತ್ತು. ಅಂದಿನಿಂದ ಕುಂಚಿಟಿಗ ಸಮಾಜಕ್ಕೆ ಸೇರಿದ ಅಣ್ಣತಮ್ಮಂದಿರು ಮತ್ತು ಇತರೆ ಸಮಾಜದ ಭಕ್ತಾದಿಗಳು ಸೇವಾಕಾರ್ಯದಲ್ಲಿ ಪಾಲ್ಗೊಂಡರು.
ಈ ಸ್ವಾಮಿಯ ಜಾತ್ರಾ ಮಹೋತ್ಸವವು ಭಗವಂತನ ಅನುಗ್ರಹದಿಂದ ಪ್ರತಿವರ್ಷ ಆಷಾಡಮಾಸದ ಶುದ್ಧ ಗುರು ಪೌರ್ಣಿಮೆಯ ಶುಭ ದಿನದಲ್ಲಿ ಸ್ವಾಮಿಯ ರಥೋತ್ಸವದಲ್ಲಿ ಅಲಂಕೃತನಾಗಿ ಮಾನವನ ಕುಲಕೋಟಿಗೆ ಲಕ್ಷ್ಮೀಲೋಲನಾಗಿ ಪ್ರಜ್ವಲಿಸುವನು. ಆ ರಥಾರೂಢನಾದ ಸ್ವಾಮಿಯನ್ನು ಸಮಸ್ತ ಭಕ್ತಾದಿಗಳೂ ಮೇಲೆ ದಿವ್ಯ ಸಾನಿಧ್ಯದಲ್ಲಿರುವ ಸನ್ನಿಧಿಗೆ ಸ್ವಾಮಿಯನ್ನು ರಥದಲ್ಲಿ ಶಂಖ, ನಾದ ಗಂಟೆ ವಾದ್ಯಘೋಷ್ಠಿಗಳೊಂದಿಗೆ ವಿಜೃಂಭಣೆಯಿಂದ ಕರೆದುಕೊಂಡು ಹೋಗುವ ಸಮಯದಲ್ಲಿ ಮಾರ್ಗಮಧ್ಯದಲ್ಲಿ ತೊಟ್ಟಿಲು ತಿಮ್ಮಪ್ಪನ ಸಾನಿಧ್ಯವಿರುವುದು, ಆ ಸ್ವಾಮಿಯನ್ನು ಇತ್ತೀಚೆಗೆ ಶೇಷಾದ್ರಿವಾಸ ಎಂದು ಕರೆಯುವರು. ಅಲ್ಲಿ ಆ ಸ್ವಾಮಿಗೆ ಆ ರಥವನ್ನು ನಿಲ್ಲಿಸಿ ಪೂಜಾರಿ, ದಾಸಪ್ಪ, ಕೋಲ್ಕಾರ ಮತ್ತು ಈ ದೇವಸ್ಥಾನದ ಗುಡಿ ಗೌಡರಾದವರ ಸಮೇತರಾಗಿ ಪೂಜೆ ಮಾಡಿಸಿ ಮಹಾ ಮಂಗಳಾರತಿಯನ್ನು ಮಾಡಿ ನಂತರ ಬಂದು ಅದೇ ಸನ್ನಿಧಿಯಲ್ಲಿ ಮಣೇವು ಹಾಕಿಸಿಕೊಂಡು ರಥಾರೂಢನಾಗಿರುವಂತ ಶ್ರೀರಂಗನಾಥಸ್ವಾಮಿಗೆ ಪುನಃ ಮಂಗಳಾರತಿಯನ್ನು ಮಾಡಿಸಿಕೊಂಡು, ಅದೇ ರಥದಲ್ಲಿ ಭಕ್ತಾದಿಗಳು ಮರಡಿ(ಮರಡಿ ಎಂದರೆ ಎತ್ತರದ ಜಾಗ ಎಂದರ್ಥ) ಮೇಲಕ್ಕೆ ಹೋಗಿ ಪುನಃ ಸ್ವಾಮಿಯನ್ನು ಉತ್ಸವ ಅಂದರೆ ವಾದ್ಯ ಗೋಷ್ಠಿಗಳ ಪ್ರಕಾರವಾಗಿ ನಡೆ-ಮಡಿಯಿಂದ ಸ್ವಾಮಿ(ಉತ್ಸವ ಮೂರ್ತಿ)ಯನ್ನು ಉದ್ಭವ ಮೂರ್ತಿಯ ಸನ್ನಿಧಿಗೆ ಪೂರ್ವ ದಿಕ್ಕಿನ ಬಾಗಿಲಿನಿಂದ ಪ್ರವೇಶ ಮಾಡಿಸಿ ಉತ್ಸವಮೂರ್ತಿಯನ್ನು ನೆಲೆಸುವರು. ಪುನಃ ಸ್ವಾಮಿಗೆ ರಥಾರೂಡನಾಗಿ ಹೋಗುವ ಸಮಯದಲ್ಲಿ ದೇವಸ್ಥಾನದ ಗುರುಗಳ ನೇತೃತ್ವದಲ್ಲಿ ಕಾರ್ಯಕರ್ತರಾದ ಹಾಲಿ ಗುಡಿಗೌಡರು ಮನೆಯಲ್ಲಿ ಭಕ್ತಿಪೂರ್ವಕವಾಗಿ ಸ್ವಾಮಿಯ ರಥದ ಗಾಲಿಗೆ ಅನ್ನ, ಹಣ್ಣು ಮತ್ತು ಕಾಯಿ ಪೂಜಾ ಸಾಮಗ್ರಿಗಳನ್ನು ತಂದು ಅವರ ಕುಟುಂಬ ಸಮೇತರಾಗಿ ಬಂದು ಭಗವಂತನ ಕೃಪೆಗೆ ಪಾತ್ರರಾಗಿ ಈ ಕಾರ್ಯವನ್ನು ನೆರವೇರಿಸುವರು(ಈ ಕಾರ್ಯಕ್ಕೆ ಬಂಡಿಬಾನ ಎನ್ನುತ್ತಾರೆ).
ತದನಂತರ ಪುನಃ ಮಾರನೇ ದಿನದ ಬೆಳಿಗ್ಗೆ ತೊಟ್ಟಿಲು ತಿಮ್ಮಪ್ಪನ ಕ್ಷೇತ್ರ ಅಂದರೆ ಶೇಷಾದ್ರಿಗಿರಿ ಸ್ಥಾನದ ದೇವಾಲಯದಿಂದ ಅಲ್ಲಿ ಪಕ್ಕದಲ್ಲಿ ಹಿಂದಿನ ಕಾಲದಿಂದಲೂ ಇದ್ದ ಬಾವಿಯ ನೀರಿನಲ್ಲಿ ಪ್ರತಿಯೊಬ್ಬರೂ ಸ್ನಾನ ಮಾಡಿ ತೊಟ್ಟಿಲು ತಿಮ್ಮಪ್ಪನ ಪ್ರದಕ್ಷಿಣೆ ಪೂರ್ವಕವಾಗಿ ದರ್ಶನ ಮಾಡಿ ಗುರುಗಳಿಂದ ಕುಂಕುಮ ಇಡಿಸಿಕೊಂಡು ಭಗವಂತನ ಭಕ್ತರಾಗಿ ಸ್ವಾಮಿಯ ವೇದಘೋಷಗಳಿಂದ ಗೋವಿಂದ ನಾಮಸ್ಮರಣೆಯಿಂದ ಹೆಜ್ಜೆಹೆಜ್ಜೆಗೂ ದೀರ್ಘವಾದ ಪ್ರಣಾಮಗಳನ್ನು ಅರ್ಪಿಸಿಕೊಂಡು ಸ್ವಾಮಿಯ ಕ್ಷೇತ್ರಕ್ಕೆ ಹೋಗಿ ದೇವಾಲಯವನ್ನು ಪ್ರದಕ್ಷಿಣೆ ಮಾಡಿ ಸ್ವಾಮಿಯನ್ನು ದರ್ಶನಮಾಡಿ ಪುನಃ ಬಂದು ಸ್ನಾನಾದಿ ಮಾಡಿ ಭಕ್ತ ಸಮೂಹವು ಯಾತ್ರಾರ್ತಿಗಳ ಸಮೇತ ಬಂದು ಆ ದೇವರ ಸಾನಿಧ್ಯದಲ್ಲಿ ಪರಮ ಪುಣ್ಯಕರವಾದ ಸೇವೆಗೆ ಪಾಲ್ಗೊಳ್ಳುವರು.
ಅಲ್ಲಿ ಸೇವಾ ಕಾರ್ಯಗಳು ಚಕ್ರಾಂತಿ(ದಾಸಪ್ಪನ ಮುದ್ರೆ ಒತ್ತುವುದು-ಮುದ್ರಾರ್ಪಣೆ) ಹಾಗೂ ಚೌಲೋಪನೆ(ಮುಡಿ ತೆಗೆಯುವುದು) ಮತ್ತು ಅವರು ಶುದ್ಧರಾಗಿ ಆ ಭಗವಂತನ ದೇವಾಲಯದ ಸುತ್ತಲೂ ವೈಭವವಾಗಿ ಜಜ್ಜುಕಲ್ಲಿನಲ್ಲಿ ಉರುಳುಸೇವೆ ಮಾಡಿ ಸಂತೋಷಪಡುವರು. ಹಾಗೂ ಪರಮಾತ್ಮನಿಗೆ ಪೂಜೆ ಮಾಡಿಸಿ ಅಲ್ಲೆ ಸನ್ನಿಧಿಯಲ್ಲಿ ದೇವರ ಹೆಸರಿನಲ್ಲಿ ಸವಿರುಚಿಯಾದ ಪ್ರಸಾದವನ್ನು ಸ್ವೀಕರಿಸಿಕೊಂಡು ಹೋಗುವರು.
ದೈವಸೇವಾ ಕಾರ್ಯಗಳು ನಡೆದ ನಂತರ ಶ್ರೀ ಸ್ವಾಮಿಯ ಹೆಸರಿನಲ್ಲಿ ಶ್ರೀ ಗುರುಗಳಿಂದ ನಾಮತೀರ್ಥ, ಪ್ರಸಾದ ವಿನಿಯೋಗ ಆದ ನಂತರ ಶ್ರೀ ಸ್ವಾಮಿಯ ಹೆಸರಿನಲ್ಲಿ ಮೇಲು ದೀಪಾರಾಧನೆಯನ್ನು ಈ ದೇವಸ್ಥಾನಕ್ಕೆ ಸಂಬಂಧಿಸಿದ ಭಕ್ತಮಹಾಶಯರು ಮತ್ತು ಗುಡಿ ಗೌಡರು, ಪ್ರಮುಖರುಗಳು ಸೇರಿ ಶ್ರೀ ಸ್ವಾಮಿಗೆ ಮಹಾಮಂಗಳಾರತಿ ಮಾಡಿಸಿ, ಸ್ವಾಮಿಯ ಸನ್ನಿಧಿಯಿಂದ ದೀಪ ಬೆಳಗಿಸಿ ಸಂಬಂಧಪಟ್ಟಂತಹ ದಾಸಪ್ಪನ ಕಡೆಯಿಂದ ಆ ದೀಪವನ್ನು ಹಿಡಿದುಕೊಂಡು ಸಮಸ್ತ ಭಕ್ತಾದಿಗಳ ಸಮ್ಮುಖದಲ್ಲಿ ಸ್ವಾಮಿಯ ನಾಮಸ್ಮರಣೆಯಿಂದ ಆ ಸ್ವಾಮಿಯ ಎದುರಿನಲ್ಲಿ ಧ್ವಜ ಸ್ತಂಭದ ಮೇಲಿಟ್ಟು ಪುನಃ ಸ್ವಾಮಿಯ ಹೆಸರಿನಲ್ಲಿ ಇತ್ತಿಚೆಗೆ ಮಾಡಿರುವ ಅನ್ನದಾಸೋಹ ಸಮಾರಂಭವನ್ನು ಪ್ರಾರಂಭಿಸುವರು.
ಮಚ್ಚನಬಾವಿ : ಆ ಸನ್ನಿಧಿಯ ಪಕ್ಕದಲ್ಲಿರುವ ಮಚ್ಚನಬಾವಿ ಪುರಾತನ ಕಾಲದಲ್ಲೂ ಇತ್ತು. ಈ ದೇವಸ್ಥಾನಕ್ಕೆ ಕರ್ನಾಟಕದ ತುಮಕೂರು, ಚಿತ್ರದುರ್ಗ ಹಾಗು ಶಿವಮೊಗ್ಗ ಜಿಲ್ಲೆಗಳಲ್ಲದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರೂ ಬಂದು ಭಗವಂತನ ಸೇವೆಯಲ್ಲಿ ಪಾಲ್ಗೊಳ್ಳುವರು. ಭಕ್ತರಲ್ಲಿ ಅನಂತಪುರ ಜಿಲ್ಲೆ ಮತ್ತು ಶಿರಾ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿನ ಕುಂಚಿಟಿಗರ ಜಾತಿಯ ಬೆಳ್ಳೆನವರ ಕುಲಕ್ಕೆ ಸೇರಿದವರಾಗಿರುತ್ತಾರೆ.
ತುಮಕೂರು, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಯವರು ಹೆಚ್ಚಿನವರು ಕುಂಚಿಟಿಗರ ಜಾತಿಯ ಒಳಕಲ್ಲು ಕುಲಕ್ಕೆ ಸೇರಿದವರಾಗಿರುತ್ತಾರೆ. ಇವರೆಲ್ಲರೂ ದೇವಾಲಯದ ಕಾರ್ಯಮುಗಿಸಿ, ಸಂತಾನಭಾಗ್ಯ ಇಲ್ಲದವರು, ಮದುವೆಯಾಗದವರು ಆ ಮಚ್ಚನ ಬಾವಿಯಲ್ಲಿ ಗಂಗಾ ದೇವತೆಯನ್ನು ಪೂಜೆ ಮಾಡಿಕೊಂಡು ಹೋಗುವರು. ಈ ಬಾವಿಯು ಇತಿಹಾಸ ಮಂಗಳಕರ ಹಾಗೂ ಪ್ರಸಿದ್ಧವಾದದ್ದು. ಈ ಬಾವಿಯಲ್ಲಿ ನೀರನ್ನು ಹಾಕಿಸಿಕೊಂಡು ಪುನೀತರಾಗಿ ಹೋದಂತಹ ಮಹಾಭಕ್ತಾರಿಗೆ ಆ ರಂಗನಾಥ ಸ್ವಾಮಿಯ ಕಾರಣವಿಶೇಷದಿಂದ ಅವರಿಗೆ ಸಂತಾನಭಾಗ್ಯ ಮತ್ತು ವಿವಾಹಯೋಗ ಪ್ರಾಪ್ತವಾಗುವವು.
ಪುನಃ ಆ ಸ್ವಾಮಿಯ ಸೇವಾಕಾರ್ಯ ಮುಗಿದ ಮೇಲೆ ರಾತ್ರಿ 9ರ ನಂತರ ಎಲ್ಲ ಭಕ್ತ ಸಮೂಹದಲ್ಲಿ ಪುನಃ ಕಳವಿಭಾಗಿ ಗ್ರಾಮಕ್ಕೆ ಬೆಳ್ಳೆನವರ ಕಡೆಯಿಂದ ಪ್ರಥಮವಾಗಿ ಮಣೇವು ಹಾಕಿಸಿಕೊಂಡು ಸ್ವಾಮಿಯು ಇತರರ ಕಡೆಯಿಂದ ಮಣೆವನ್ನು ಹಾಕಿಸಿಕೊಂಡು ಪರಮಾತ್ಮನು ವಾದ್ಯಗೋಷ್ಟಿಯಿಂದ ಪುನಃ ದೇವಾಲಯ ಸನ್ನಿಧಿಗೆ ಬರುವ ಬೆಳ್ಳೆನವರ ಅಂಶ ಒಳಕಲ್ಲಿನವರ ಮನೆಯಿಂದ ಬೆಳ್ಳೆನವರ ಮನೆಗೆ ಕನ್ಯಾದಾನ ಮಾಡಿದ್ದೇವೆ. ಕನ್ಯಾದಾನ ಆದ ನಂತರ ಆ ಹೆಣ್ಣುಮಗಳಿಗೆ ಸಂತಾನ ಭಾಗ್ಯ ಯೋಗ ಇಲ್ಲದ್ದರಿಂದ ಆ ಹೆಣ್ಣುಮಗಳಿಗೆ ಹೊಟ್ಟೆ ಶೂಲೆ ಪ್ರಾಪ್ತವಾಗಿದೆ. ಆಗ ಆ ಮನೆತನದ ಹಿರಿಯರಿಗೆ ಸ್ವಾಮಿಯು ದಾಸಪ್ಪನ ರೂಪದಲ್ಲಿ ಕಾಣಿಸಿಕೊಂಡು ಮಗಳೆ, ನೀನು ನಮ್ಮ ಮನೆತನದ ಹೆಣ್ಣು ಮಗಳು. ನೀನು ಮತ್ತು ನನ್ಮ ಕುಟುಂಬದವರೆಲ್ಲರು ಎಲ್ಲರೂ ಬಂದು ರಂಗನಾಥ ಸ್ವಾಮಿಯ ದರ್ಶನ ಪಡೆದು ಸಂತಾನ ಭಾಗ್ಯಕ್ಕಾಗಿ ಆಶೀರ್ವಾದ ಪಡೆದಳು. ಮೂರು ವರ್ಷದಲ್ಲೇ ಆ ಹೆಣ್ಣಿನ ವಂಶ ಉದ್ಧಾರವಾಯಿತು. ಅಂದಿನಿಂದ ಆ ವಂಶದವರೆಲ್ಲರೂ ಶ್ರೀಕ್ಷೇತ್ರಕ್ಕೆ ಪ್ರತಿ ವರ್ಷದ ಜಾತ್ರೆಗೆ ಅವರ ಮನೆಯಲ್ಲಿ ಎಮ್ಮೆ ಹಸುಗಳು ಕರೆಯುವ ಹಾಲನ್ನು ಸಂಗ್ರಹಿಸಿ ತುಪ್ಪ ಮಾಡಿ ಸ್ವಾಮಿಯ ಸನ್ನಿಧಿಗೆ ಅಟ್ಟಣಿಗೆ ಹೊತ್ತುಕೊಂಡು ಪಾದಯಾತ್ರೆಯಿಂದ ಪರಮಾತ್ಮನ ದಿವಯಸಾನಿಧ್ಯಕ್ಕೆ ಬೆಳಗುವ ತುಪ್ಪವನ್ನು ಅರ್ಪಿಸುವರು.
ಆನಂತರ ಅವರ ಸಮೇತ ಅಂದಿನಿಂದ ಇಂದಿನವರೆಗೂ ಎಂದೆಂದಿಗೂ ಸಮೇತರಾಗಿ ರಂಗನಾಥಸ್ವಾಮಿಯ ಪ್ರತಿಯೊಂದು ಕಾರ್ಯದಲ್ಲೂ ಪಾಲ್ಗೊಂಡು ಅವರು ಮುಕ್ತಿ ಪರವಶರಾಗುವರು. ಈ ಸ್ವಾಮಿಯು ಪ್ರಥಮ ರಥಾರೂಢನಾಗಿ ಊರಿಗೆ ಬರುವಾಗ ಬೆಳ್ಳೆನವರ ಹೆಣ್ಣುಮಗಳು ಒಂದು ಕುಟುಂಬಕ್ಕೆ ಸ್ವಾಮಿಯು ಸಂಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದಾನೆ. ಆದ್ದರಿಂದ ಬೆಳ್ಳೆನವರೆಂದರೆ ಪ್ರಥಮ ಮಣೇವು ಸ್ವಾಮಿಗೆ ಇಷ್ಟದಾಯಕವಾದುದಾಗಿದೆ. ಆದ್ದರಿಂದ ಬೆಳ್ಳೆನವರು ಪ್ರತಿಯೊಂದು ಕಾರ್ಯದಲ್ಲೂ ಬಂದು ಅವರ ಇಷ್ಟಾರ್ಥಗಳನ್ನು ಭಕ್ತಿಯಿಂದ ಅರ್ಪಿಸಿ ಭಗವಂತನ ಕೃಪೆಗೆ ಪಾತ್ರರಾಗುವರು.
ಒಳಕಲ್ಲಿನ ಗುಂಪಿನಲ್ಲಿ ಎರಡು ಭಾಗವಿದೆ. ಒಂದು ಕುಟುಂಬ ವರ್ಗದವರು ದೊಡ್ಡ ಹೆಂಡತಿ ಮಕ್ಕಳು ಮತ್ತು ಇನ್ನೊಂದು ಕುಟುಂಬದವರು ಚಿಕ್ಕ ಹೆಂಡತಿ ಮಕ್ಕಳು. ಇರ್ವರೂ ಸ್ವಾಮಿಯ ಸೇವೆಗೆ ಪಕ್ಕದ ಹಳ್ಳಿಯಲ್ಲಿರುವ ಮುದಿಯಪ್ಪನ ಕೊಟ್ಟಿಗೆ ಮತ್ತು ಮಲ್ಲಪ್ಪನಹಳ್ಳಿ ಮತ್ತು ಮಾರೇನಹಳ್ಳಿ ಮತ್ತು ಗುಳಗೊಂಡನಹಳ್ಳಿ ಮತ್ತು ರಂಗೇನಹಳ್ಳಿ ಇರುವ ರಂಗನಾಥನ ಭಕ್ತರು 5 ವರ್ಷಕ್ಕೊಮ್ಮೆ ಸರತಿಯಲ್ಲಿ ಗುಡಿ ಗೌಡರಾಗಿ 5 ವರ್ಷಗಳಲ್ಲಿ ನಡೆಯುವ ಕಾರ್ಯಗಳಿಗೆ ಭಕ್ತಿಪೂರ್ವಕವಾಗಿ ಅವರ ಕುಟುಂಬದವರೆಲ್ಲರೂ ಸೇರಿ ಸರತಿ ಮುಗಿಯುವವರೆಗೆ ಭಗವಂತನ ಸೇವೆ ಮಾಡಿ ಕೃತಾರ್ಥರಾಗುವರು ಮತ್ತು ಈ ಗ್ರಾಮದಲ್ಲಿ ನಡೆಯುವ ಶ್ರಾವಣ ಮಾಸ ಮತ್ತು ವಿಜಯದಶಮಿಯಂದು ಸ್ವಾಮಿಯನ್ನು ಚೌಕಿ(ಉತ್ಸವಮೂರ್ತಿ)ಯನ್ನು ಉತ್ಸವದಲ್ಲಿ ಕರೆದುಕೊಂಡು ಪೂಜಾರರ, ದಾಸಪ್ಪ ಮತ್ತು ಗುಡಿಗೌಡರ ಸಮಕ್ಷಮದಲ್ಲಿ ದಶಮಿಯನ್ನು ಬನ್ನಿಯ ಶಮೀ ವೃಕ್ಷಕ್ಕೆ ಬಾಣಪ್ರಯೋಗವನ್ನು ಮಾಡಿ ಬರುವಂತ ಪತ್ರೆಯನ್ನು ತೆಗೆದುಕೊಂಡು ಪೂಜೆ ಮುಗಿಸಿಕೊಂಡು ಸ್ವಾಮಿಯನ್ನು ಕರೆದುಕೊಂಡು ಬಂದು ಸನ್ನಿಧಿಗೆ ನೆಲೆಸುವರು.
ನಂತರ ಅವರವರ ಮನೆಗೆ ಬಂದು ಸ್ನಾನ ಮಾಡಿ ಪ್ರಸಾದ ಸ್ವೀಕರಿಸುವರು. ಈ ಶುಭ ದಿವಸಕ್ಕೆ ವಿಜಯದಶಮಿ ಎಂದು ಕರೆಯುವರು. ಪ್ರತಿ ವರ್ಷದಲ್ಲಿ ಸ್ವಾಮಿಯನ್ನು ಊರಿನ ಸಮಸ್ತ ಭಕ್ತಾದಿಗಳು ಉತ್ಸವ ಮೂರ್ತಿಯನ್ನು ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಅನ್ನ ದಾಸೋಹದ ಕಾರ್ಯ ನಡೆಸಿಕೊಂಡು ಪುನಃ ಸ್ವಾಮಿಯನ್ನು ಸನ್ನಿಧಿಗೆ ಉತ್ಸವ ಮೂರ್ತಿಯನ್ನು ಬಿಟ್ಟು ಅವರವರ ಊರಿಗೆ ಹೋಗುವರು.
ಕಳವಿಭಾಗಿಯ ಗ್ರಾಮಸ್ಥರು, ಅಣ್ಣತಮ್ಮಂದಿರು ಭಗವಂತನ ಹೆಸರಿನಿಂದ ಸ್ವಾಮಿಯ ಪ್ರಸಾದವನ್ನು ಅಪ್ಪಣೆಯಂತೆ ತೆಗೆದುಕೊಂಡು ಮಂಗಳ ಕಾರ್ಯಗಳನ್ನು ಮಾಡುವರು.
ಜೀರ್ಣೊದ್ಧಾರ:
ಸುಮಾರು 3 ವರ್ಷಗಳಿಂದ ಈಚೆಗೆ ಕಳವಿಭಾಗಿಯ ಶ್ರೀ ರಂಗನಾಥ ಸ್ವಾಮಿಯ ಮೂಲಸ್ಥಾನದ ದೇವಾಲಯದ ನಿರ್ಮಾಣ ಕಾರ್ಯವು ಭಕ್ತಸಮೂಹದ ಕಾರ್ಯಕರ್ತರಲ್ಲಿ ನೆರವೇರಿತು. ಜೀರ್ಣೋದ್ಧಾರವಾಯಿತು. ನಂತರ ಈ ದೇವಾಲಯಕ್ಕೆ ಸಂಬಂಧಪಟ್ಟಂತಹ ಅಕ್ಕಪಕ್ಕದಲ್ಲಿರುವ ಜಮೀನುಗಳನ್ನು ಖರೀದಿಗೆ ತೆಗೆದುಕೊಂಡು ಸ್ವಾಮಿಯ ಹೆಸರಿಗೆ ದಾನವಾಗಿ ಅರ್ಪಿಸಿದರು ಈ ಗ್ರಾಮಸ್ಥರು.
ನಂತರ ಆ ಸ್ಥಳದಲ್ಲಿ ರಂಗನಾಥ ಸ್ವಾಮಿಯ ಹೆಸರಿನಲ್ಲಿ ಆಗುವಂತಹ ಜಾತ್ರೆ, ದೈವ ಸೇವೆ ಇಂತಹ ಕಾರ್ಯಕ್ರಮಗಳಲ್ಲಿ ಅನ್ನದಾಸೋಹ ಕಾರ್ಯಕ್ರಮವು ಆ ಸಮುದಾಯ ಮಂದಿರದಲ್ಲಿ ಪ್ರತಿವರ್ಷವೂ ಯಶಸ್ವಿಯಾಗಿ ನೆರವೇರುವುದು. ಪ್ರಾತಃಕಾಲದಿಂದ ಜಾತ್ರೆಯ ಕಾಲದಲ್ಲಿ ಸಾಯಂಕಾಲದವರೆಗೆ ಶ್ರೀ ಸ್ವಾಮಿಯ ಅಪ್ಪಣೆಯ ಮೇರೆಗೆ ಅನ್ನ ದಾಸೋಹವನ್ನು ಸಮಸ್ತ ಭಕ್ತಸಮೂಹಕ್ಕೆ ನಡೆಸುವರು.
ಈ ಊರಿನ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಗುಡಿ ಗೌಡರು, ಅಣ್ಣತಮ್ಮಂದಿರು ಈ ದೇವಸ್ಥಾನಕ್ಕೆ ಸಂಬಂಧಪಟ್ಟಂತಹ ಅಣ್ಣತಮ್ಮಂದಿರು ಭಕ್ತಮಹಾಶಯರು ಸೇರಿ ಸ್ವಾಮಿಯ ಕೃಪೆಗೆ ಪಾತ್ರರಾಗಿರುವರು. ಆ ಅನ್ನ ದಾಸೋಹವು ಪವಿತ್ರವಾದಂತಹ ಗಂಗಾಜಲದಲ್ಲಿ ಭಕ್ತಿ, ನಿಷ್ಠೆ ಮತ್ತು ನಿಷ್ಕಾಮ್ಯ ಪದ್ಧತಿಯಿಂದ ಅಡುಗೆ ಮಾಡಿ, ಅಡುಗೆ ಸೇವಾಕರ್ತರು ಹಾಗೂ ಊಟಕ್ಕೆ ಬಡಿಸುವವರ ಸಮೇತ ಶ್ರದ್ಧೆಯುಳ್ಳವರಾಗಿರುತ್ತಾರೆ ಹಾಗೂ ಸ್ವಾಮಿಯ ಹೆಸರಿನಲ್ಲಿ ಮಾಡಿರುವ ಪ್ರತಿಯೊಂದು ಅನ್ನದ ಅಗುಳಿನಲ್ಲಿಯೂ ಸಹ ಸ್ವಾಮಿಯ ಹೆಸರಿರುವುದು. ಆದ್ದರಿಂದ ಪಂಚಾಮೃತಕ್ಕೆ ಸರಿಸಮಾನವಾದ ಅನ್ನ ದಾಸೋಹ ಎನ್ನುವರು. ಸ್ವಾಮಿಯ ದಿವ್ಯ ಕ್ಷೇತ್ರದಲ್ಲಿ ಗಂಗಾಜಲವು ಸಕಲ ಆರೋಗ್ಯ ಭಾಗ್ಯವನ್ನು ಪವಿತ್ರವಾದ ಗಂಗಾ ಮಾತೆಯಾಗಿ ಪ್ರಜ್ವಲಿಸುವಳು. ಒಮ್ಮೆ ದಾಸೋಹವನ್ನು ಸೇವನೆ ಮಾಡಿರುವ ಭಕ್ತಮಹಾಶಯರು ಪುನಃ ಭಗವಂತನ ಪ್ರಸಾದಕ್ಕೋಸ್ಕರವಾಗಿ ಈ ಸ್ಥಳದಲ್ಲಿ ಕಾರ್ಯಕ್ರಮಗಳನ್ನು ಆನಂದ ಭಾಷ್ಪರಾಗಿ ಆಗಮಿಸುವರು.
ಶ್ಲೋಕ:
ಕಾವೇರಿ ಮಧ್ಯೆ ನಿಲಯೇ
ಕಲ್ಪಾಂತ ಸ್ಥಾಯಿ ಮಂದಿರ
ಶ್ರೀ ಕಳವಿಭಾಗಿ ನಿವಾಸಾಯ
ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಭಜೆ ನಮೋ ನಮಃ
ಮಾರ್ಗ: ಹಿರಿಯೂರಿನಿಂದ ಚಳ್ಳಕೆರೆ ಮಾರ್ಗ:
ಹಿರಿಯೂರಿನಿಂದ 18ಕಿ.ಮಿ.ದೂರದಲ್ಲಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಗುಡಿಗೌಡರು: 1. ಶ್ರೀ ರಾಮಣ್ಣ - ಮೊ. 9972199307, 2. ಶ್ರೀರಂಗಪ್ಪ - ಮೊ. 9980889710
=======================================================
No comments:
Post a Comment