Tuesday, February 18, 2014

ಚಿತ್ರದುರ್ಗ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ Dist Youth Award

ಚಿತ್ರದುರ್ಗ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ 

ನೆಹರು ಯುವ ಕೇಂದ್ರ ಚಿತ್ರದುರ್ಗ. ಕೇಂದ್ರ ಸರ್ಕಾರ (2004)


Rajyotsava Award. Malathesh Urs Harthikote ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ :

 ಯುವಜನ ಸೇವೆಯಲ್ಲಿ ಮತ್ತು ಪರಿಸರ ಸಂರಕ್ಷಣೆಗಾಗಿ.(2006) 



"ಮಠದೊಳಗೊಂದು ಮಹಾಮನೆ. ..." Malathesh Urs Harthikote_ Murugha math poem

ಮಠದೊಳಗೊಂದು ಮಹಾಮನೆ. 


ವೇದ ಘೋಷಗಳಿಲ್ಲ, ವಾದ್ಯ ಮೇಳವಿಲ್ಲ. 
ಅಕ್ಷತೆಯ ಹಾರೈಕೆ ಮೊದಲೇ ಇಲ್ಲ. 
ಅಮಾವಾಸ್ಯೆಯ ಭಯವಿಲ್ಲ, ರಾಹುಕಾಲದ ಕಾಟವಿಲ್ಲ. 
ಜಾತಿ ಭೇದಗಳಿಲ್ಲ, ಬಡವರಿಗೆ ಸಾಲದ ಹೊರೆ ಇಲ್ಲ, 
ಸಂತೃಪ್ತಿಯ ದಾಸೋಹ. ಶರಣರ ನೆರಳಲ್ಲಿ 
ಸರಳ ಮತ್ತು ವೈಚಾರಿಕತೆಯ ಹೊಂಬೆಳಕು. 

ಮದುವೆ ಎನ್ನುವುದೇ ಒಂದು ಸಂಭ್ರಮ
ಮುರುಘಾ ಮಠದಲ್ಲಿ ವೈಶಿಷ್ಟತೆಯ ಆಚರಣೆ 
ಸಾಮೂಹಿಕ ವಿವಾಹಗಳಿಗೆ ಎರಡು ದಶಕಗಳ ಸಂಭ್ರಮ. 
ಸರಳ ಮತ್ತು ವೈಚಾರಿಕತೆಯ ಲಕ್ಷಣ ಇಲ್ಲಿಯ ತಿರುಳು.
ಶರಣರು ಕ್ರಾಂತಿಕಾರಕ ಕಾರ್ಯಗಳ ಹರಿಕಾರರು
ಸಮಾನತೆಯ ಸಂಕೇತ ಬಿಂಬಿಸುವ ಸರದಾರರು.

ವೀರ ಮದಕರಿನಾಯಕ ನಾಳಿದ ನಾಡು
ಐತಿಹಾಸಿಕ ಏಳುಸುತ್ತಿನ ಕಲ್ಲಿನ ಕೋಟೆಯ ಬೀಡು 
ಓನಕೆ ಓಬವ್ವ ಬಾಳಿದ ಪುಣ್ಯ ಕ್ಷೇತ್ರ. 
ಮುರುಘಾ ಮಠ ಕೋಟೆ ನಗರಿಗೊಂದು ಚಿನ್ನದ ಕಿರೀಟ

ಮದುವೆ ಅಂದ್ರೆ ಬರಿ ಮಾತಲ್ಲ, ಅದು ಜೀವನದ ಹೆಜ್ಜೆ. 
ನಿತ್ಯ ಬದುಕು ಸಾಗಿಸುವ ಎರಡು ಹೃದಯಗಳ ಅಮೃತದ ಕಾಯಕ. 
ಬದುಕುವುದನ್ನು ಕಲಿಸುವ, ಜೀವನವ ತಿದ್ದುವ ಪಾಠಶಾಲೆ. 
ಪಂಚಾಗ, ಕಾಲ, ಗಳಿಗೆ, ಶಾಸ್ತ್ರದ ಹೊಂದಾಣಿಕೆ ಇಲ್ಲಿಲ್ಲ. 
ಅಂತಜರ್ಾತಿ, ವಿಧವಾ, ಅಂತರ್ ಧಮರ್ೀಯ ಪ್ರೇಮವಿವಾಹ
ಕಡು ಬಡವರ ಪಾಲಿಗೆ ಮಠವಲ್ಲ ಇದು ಮಹಾಮನೆ. 

ಬಡವರಿಗೆ ಇದು ಆಶ್ರಯ ಕೊಡುವ ತವರು ಮನೆ.
ಸಾಲ ಮಾಡಿಕೊಳ್ಳದೆ ದಾಂಪತ್ಯಕ್ಕೆ ಕಳಿಸುವ ಮಹಾಮನೆ
ಪ್ರೀತಿ ಸುಮಧುರ. ಪ್ರೀತಿ ಅಜರಾಮರ. ಪ್ರೀತಿ ಅಹ್ಲಾದಕರ 
ಪ್ರೀತಿಸುವ ಮನಗಳಿಗೆ ಮಠದಲ್ಲಿ ಸದಾ ಅವಕಾಶಗಳ ಪೂರ. 
ಪ್ರೇಮಿಗಳಿಗೆ ಇಲ್ಲಿ ಶರಣರೇ ಪೋಷಕರು. 
ವಿಧವೆಯರಿಗೆ ವಿವಾಹ ಭಾಗ್ಯ ನೀಡುವ ದೇವರು. 

ನೂತನ ವಧುವರರಿಗೆ ವಿಭೂತಿ ಧಾರಣೆ, ಕಂಕಣ ಧಾರಣೆ
ಸಮಾನತೆಗೆ ಹೆಣ್ಣಿನಿಂದ ಗಂಡಿಗೆ ರುದ್ರಾಕ್ಷಿ ಧಾರಣೆ. 
ಸತಿಪತಿಗಳು ಸಂಸಾರದಲ್ಲಿ ಸಂಯಮದಿಂದಿರಲು ಪ್ರತಿಜ್ಞಾವಿಧಿ 
ಅಕ್ಕಿಕಾಳಿನ ಅಕ್ಷತೆ ಬದಲಾಗಿ ಪುಷ್ಪವೃಷ್ಟಿ, 

ಅಮವಾಸ್ಯೆ ಕತ್ತಲೆಯ ಭೀತಿಯನ್ನು ಸೃಷ್ಠಿಸುವ ಭೀಕರ ದಿನ. 
ಶುಭ ಕಾರ್ಯಗಳನ್ನು ಮಾಡದಿರುವ ಕೆಟ್ಟ ಅನಿಷ್ಟ ದಿನ 
ಆದ್ರೆ ಶರಣರ ಪಾಲಿಗೆ ಅದು ಶ್ರೇಷ್ಟ ದಿನ.
ಮೌನದ ದಿನ, ಪ್ರಾಕೃತಿಕ ಸಂದೇಶ ಸಾರುವ ಅದೃಷ್ಟದ ದಿನ. 
ವಿಚಾರವಾದಿಗಳು, ಸಾಹಿತಿಗಳು, ಬುದ್ದಿ ಜೀವಿಗಳು 
ಪತ್ರಕರ್ತರು, ತಹಶೀಲ್ದಾರರು. ವೈದ್ಯರು, ವಕೀಲರು 
ಪ್ರೇಮಿಗಳು ಅಮಾವಾಸ್ಯೆಯಂದೇ ಶರಣೆಂದಿದ್ದಾರೆ. 

ಇಲ್ಲಿ ಕಲೆ ಇದೆ. ಸಂಗೀತ ಇದೆ. ಸಾಹಿತ್ಯ ಇದೆ. 
ಸಾಂಸ್ಕೃತಿಕ ಹಿರಿಮೆ ಇದೆ. ವೈಚಾರಿಕತೆ ಇದೆ. 
ಮಠದೊಳಗಿನ ಮಣ್ಣಿನಲ್ಲಿ ಶರಣರ ಆದರ್ಶಗಳಿವೆ. 
ಸಾಲು ಸಾಲು ಅಮೃತದ ನುಡಿಗಳಿವೆ. 
ಇದು ಕೇಲವ ಮಠವಲ್ಲ ಕಾಣೋ ಮಹಾಮನೆ ಮಹಾಮನೆ. 
ಚಿತ್ರದುರ್ಗದ ಮುರುಘೇಶನ ಅರಮನೆ. ಭಕ್ತರ ಪಾಲಿನ ಭಕ್ತಿ ಮನೆ 

- ಮಾಲತೇಶ್ ಅರಸ್  ಹರ್ತಿಕೋಟೆ

Saturday, February 15, 2014

STATE YOUTH AWARD 2007-08 Malathesh Urs Harthikote.


ಮಾಲತೇಶ್ ಅರಸ್  ಹರ್ತಿಕೋಟೆ  ಅವರಿಗೆ ಯುವವಜನ ಸೇವಾ ಮತ್ತು ಕ್ರೀಡಾ ಇಲಾಖೆ ನೀಡುವ                   ೨೦೦೭-೦೮ ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪ್ರದಾನ 



Sunday, February 2, 2014

RAMAGIRI_ರಾಮಗಿರಿ, ಹೊಳಲ್ಕೆರೆ ತಾಲ್ಲೂಕಿನ ಚಿತ್ರದುರ್ಗ ಜಿಲ್ಲೆಯ ಹೋಬಳಿ ಕೇಂದ್ರ.....

 ಸ್ವಪ್ರತಿಷ್ಠೆ, ಗುಂಪುಗಾರಿಕೆಗಳು ಅಭಿವೃದ್ಧಿಗೆ ಮುಳು..
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಂದಾದ ರಾಮಗಿರಿ ಪಟ್ಟಣವಾಗಿ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮಾದರಿ ಗ್ರಾಮ. ಸುಮಾರು 10 ಸಾವಿರ ಜನಸಂಖ್ಯೆ ದಾಟಿರುವ ಈ ಗ್ರಾಮ ಕರಿಸಿದ್ದೇಶ್ವರ ಪುಣ್ಯಕ್ಷೇತ್ರವೆಂದೇ ಖ್ಯಾತಿ ಪಡೆದಿದೆ.
ಗ್ರಾಮದ ದಕ್ಷಿಣಕ್ಕಿರುವ ಕಡಿದಾದ ಬೆಟ್ಟದ ತುದಿಯಲ್ಲಿ ನೆಲೆಸಿರುವ ಕರಿಸಿದ್ದೇಶ್ವರ ಸ್ವಾಮಿಯನ್ನು ಪವಾಡಪುರುಷನೆಂದೇ ಭಕ್ತರು ನಂಬಿದ್ದಾರೆ. ಇಲ್ಲಿ ಸ್ವಾಮಿ ನೆಲೆಸಿದ್ದು, ಗ್ರಾಮಕ್ಕೆ ರಾಮಗಿರಿ ಎಂದು ಹೆಸರು ಬಂದಿದ್ದಕ್ಕೆ ಹಿರಿಯರು ಅನೇಕ ದಂತಕತೆ ಹೇಳುತ್ತಾರೆ. ಕರಿಸಿದ್ದೇಶ್ವರ ಸ್ವಾಮಿ ಸಾವಿರಾರು ಭಕ್ತರ ಆರಾಧ್ಯ ದೈವ. 365 ಮೆಟ್ಟಿಲುಗಳಿರುವ ರಾಮಗಿರಿ ಬೆಟ್ಟ ಮತ್ತು ಗ್ರಾಮಕ್ಕೆ ರೋಚಕ ಇತಿಹಾಸವಿದೆ. ಹಿಂದೆ ಈ ಪ್ರದೇಶ ದಂಡಕಾರಣ್ಯವಾಗಿತ್ತು. ಶ್ರೀರಾಮ ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿಗೆ ಬಂದು ತಂಗಿದ್ದ. ಶ್ರೀರಾಮನಿಗೆ ನಿತ್ಯ ಪೂಜೆ ಸಲ್ಲಿಸಲು ಇಲ್ಲಿ ಯಾವುದೇ ವ್ಯವಸ್ಥೆಗಳಿರಲಿಲ್ಲ. ಆಗ ಅಲ್ಲಿಗೆ ಬಂದ ಒಬ್ಬ ಋಷಿಮುನಿಯನ್ನು ಶ್ರೀರಾಮ ಪೂಜೆಗೆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡನು.
     ಆಗ ಋಷಿ ಒಂದು ಲಿಂಗ ಉದ್ಭವವಾಗುವಂತೆ ಮಾಡಿದರು. ಪೂಜೆಗೆ ಬೇಕಾದ ನೀರಿಗಾಗಿ ಬೆತ್ತ(ಊರುಗೋಲು)ದಿಂದ ನೆಲ ಮುಟ್ಟಿ ನೀರು ಚಿಮ್ಮುವಂತೆ ಮಾಡಿ `ತೃಪ್ತಿಯಾಗುವಂತೆ ಪೂಜಿಸು~ ಎಂದು ಹೇಳಿದರಂತೆ. ರಾಮ ಹಲವು ದಿನ ಇಲ್ಲಿ ತಂಗಿದ್ದರಿಂದ ಇದು `ರಾಮನಗಿರಿ~ ಆಗಿ ಬರಬರುತ್ತ `ರಾಮಗಿರಿ~ ಆಯಿತು ಎನ್ನುತ್ತಾರೆ ಹಿರಿಯರು.
ದೇವರಿಗೆ ಕರಿಸಿದ್ದೇಶ್ವರ ಎಂದು ಹೆಸರು ಬಂದಿದ್ದಕ್ಕೂ ಒಂದು ಕತೆಯಿದೆ. ಹಿಂದೆ ಹೈದರಾಲಿ ಬಾಗೂರು ಪಟ್ಟಣದ ಮೇಲೆ ಯುದ್ದ ಮಾಡಲು ಸೈನ್ಯ ಸಮೇತ ಇದೇ ಮಾರ್ಗದಲ್ಲಿ ಹೋಗುತ್ತಿದ್ದಾಗ ಇಲ್ಲಿ ಅವರ ಪ್ರೀತಿಯ ಪಟ್ಟದ ಆನೆ ಸಾವನ್ನಪ್ಪಿತು.
ಬೆಟ್ಟದ ಮೇಲಿದ್ದ ದೇವರು ಸಾಧುವಿನ ವೇಷದಲ್ಲಿ ಬಂದು `ನಿನ್ನ ಆನೆ ಸತ್ತಿಲ್ಲ, ತಟ್ಟಿ ಎಬ್ಬಿಸು~ ಎಂದು ಹೇಳಿತು. ರಾಜ ಆನೆಯನ್ನು ತಟ್ಟಿದಾಗ ಎದ್ದು ನಿಂತುಕೊಂಡಿತು. ಆನೆ (ಕರಿ)ಯನ್ನು ಬದುಕಿಸಿದ(ಸಿದ್ಧಿಸಿದ)ದೇವರಿಗೆ ಅಂದಿನಿಂದ ಕರಿಸಿದ್ದೇಶ್ವರ ಎಂದು ಹೆಸರು ಬಂತು~ ಎಂದು ಗ್ರಾಮದ ಅನೇಕರು ಪುರಾಣ ಕತೆ ಹೇಳುತ್ತಾರೆ.
ದೇವಾಲಯದ ಒಳಗೆ ಒಂದು ಪುಷ್ಕರಣಿ ಇದೆ. ದೇವರ ಅಪ್ಪಣೆಯಂತೆ ವಿವಿಧ ರೋಗಗಳ ನಿವಾರಣೆಗಾಗಿ ಇಂದಿಗೂ ಇದರ ನೀರನ್ನು ಕೊಡಲಾಗುತ್ತದೆ. ಬರಗಾಲದ ಮುನ್ಸೂಚನೆಗೆ ಇದರಲ್ಲಿನ ನೀರು ಮೇಲೇರುತ್ತದೆ. ಮಳೆ ಬರುವ ಸೂಚನೆ ಇದ್ದರೆ ನೀರು ಕೆಳಕ್ಕೆ ಹೋಗುತ್ತದೆ~ ಎಂದು ಅನುಭವಸ್ಥರು ನುಡಿಯುತ್ತಾರೆ.
ಇಂತಹ ಇತಿಹಾಸ ಪ್ರಸಿದ್ಧ ದೇವಾಲಯ ಈಗ ಕುಸಿದು ಬೀಳುವ ದುಸ್ಥಿತಿಯಲ್ಲಿದೆ. ದೇವಾಲಯದ ಆವರಣದ ತಡೆಗೋಡೆ ಕುಸಿದು ಬಿದ್ದಿದ್ದು, ಯಾವ ಕ್ಷಣದಲ್ಲಾದರೂ ದೇವಾಲಯ ಬೀಳುವ ಅಪಾಯವಿದೆ. `ದೇವಾಲಯದ ಪರಿಸ್ಥಿತಿ ನೋಡಿ ದುಃಖವಾಗುತ್ತದೆ. ಇಡೀ ಗ್ರಾಮದಲ್ಲಿ ಎಲ್ಲರೂ ಕರಿಸಿದ್ದೇಶ್ವರನ ಹೆಸರಿನಿಂದಲೇ ಬದುಕು ನಡೆಸುತ್ತಾರೆ. ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ಕ್ಷೇತ್ರಕ್ಕೆ ಇಂತಹ ದುರ್ಗತಿ ಬಂದಿದೆಯಲ್ಲಾ ಎಂದು ನೋವಾಗುತ್ತದೆ.
ತಡೆಗೋಡೆ ನಿರ್ಮಿಸಲು ಎಷ್ಟು ಹಣ ಬೇಕಾದರೂ ಕೊಡುವ ಭಕ್ತರಿದ್ದಾರೆ. ಶಾಸಕ ಎಂ. ಚಂದ್ರಪ್ಪ ಕೂಡ ರೂ.  5 ಲಕ್ಷ ಅನುದಾನ ನೀಡಿದ್ದಾರೆ. ಆದರೆ, ಗ್ರಾಮದಲ್ಲಿನ ಸ್ವಪ್ರತಿಷ್ಠೆ, ಗುಂಪುಗಾರಿಕೆಗಳು ಅಭಿವೃದ್ಧಿಗೆ ಮುಳುವಾಗುತ್ತಿವೆ. ಎಲ್ಲರ ಸಹಕಾರದಿಂದ ದೇವಾಲಯವನ್ನು ಭದ್ರಪಡಿಸುವ ಜರೂರತ್ತು ಇದೆ ಎನ್ನುತ್ತಾರೆ ಗ್ರಾಮದ ಮುಖಂಡ ರಾಮಣ್ಣ.
ಪ್ರತಿ ಸೋಮವಾರ ದೇವಾಲಯಕ್ಕೆ ನೂರಾರು ಭಕ್ತರು ಬರುತ್ತಾರೆ. ಕಾರ್ತೀಕದ ಲಕ್ಷದೀಪೋತ್ಸವಕ್ಕೆ ರಾಜ್ಯದ ನಾನಾಭಾಗಗಳು ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಭಕ್ತರು ಬರುತ್ತಾರೆ. ಆದರೆ, ಇಲ್ಲಿ ಭಕ್ತರು ಉಳಿಯಲು ಶೌಚಾಲಯ ಮತ್ತು ವಸತಿ ವ್ಯವಸ್ಥೆಗಳಿಲ್ಲ. ದೇವಾಲಯವೂ ಮಳೆಗಾಲದಲ್ಲಿ ಸೋರುತ್ತದೆ. ಎಲ್ಲರೂ ಒಗ್ಗೂಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಅಗತ್ಯ ಇದೆ ಎನ್ನುವುದು ಅರ್ಚಕ ರುದ್ರಸ್ವಾಮಿ ಅವರ ಅಭಿಪ್ರಾಯ.
ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳಿವೆ. ಗ್ರಾಮಗಳ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಇಲ್ಲಿ ಪದವಿ ಕಾಲೇಜು ಇಲ್ಲದೆ ಅನೇಕ ಯುವಕ, ಯುವತಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಪದವಿ ವ್ಯಾಸಂಗಕ್ಕಾಗಿ ಸುಮಾರು 20, 30 ಕಿ.ಮೀ ದೂರದ ತಾಲ್ಲೂಕು ಕೇಂದ್ರ, ಚನ್ನಗಿರಿ, ಹೊಸದುರ್ಗ ಮತ್ತಿತರ ಕಡೆ ಹೋಗುವ ಪರಿಸ್ಥಿತಿ ಇದ್ದು, ಯುವತಿಯರು ಅರ್ಧಕ್ಕೇ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ಅವರು ಒಮ್ಮೆ ಇಲ್ಲಿಗೆ ಬಂದಾಗ ಕಾಲೇಜು ನೀಡುವ ಭರವಸೆ ನೀಡಿದ್ದರು.
ಆದರೆ, ಅದು ಇದುವರೆಗೆ ಈಡೇರಿಲ್ಲ~ಎನ್ನುತ್ತಾರೆ ಸಮಾಜ ಸೇವಕ ಮತ್ತು ವೈದ್ಯ ಡಾ.ಎಚ್.ಪಿ. ನಿಜಗುಣಸ್ವಾಮಿ.
ಗ್ರಾಮದಲ್ಲಿ ರೈಲುನಿಲ್ದಾಣ, ಶಾಲಾ-ಕಾಲೇಜುಗಳು, ಬ್ಯಾಂಕ್, ಹಾಸ್ಟೆಲ್, ಆಸ್ಪತ್ರೆ ಮತ್ತಿತರ ಸೌಲಭ್ಯಗಳಿದ್ದರೂ, ಕಾಲಕ್ಕೆ ತಕ್ಕಂತೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಅಗತ್ಯ ಇದೆ. ಶಾಸಕ ಎಂ. ಚಂದ್ರಪ್ಪ ರೂ. 2 ಕೋಟಿ ವೆಚ್ಚದಲ್ಲಿ ಮುಖ್ಯವೃತ್ತ ಅಭಿವೃದ್ಧಿಪಡಿಸಿದ್ದಾರಾದರೂ, ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.
ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು. ಗ್ರಾಮದಿಂದ ತಾಲ್ಲೂಕು ಕೇಂದ್ರ 17 ಕಿ.ಮೀ. ದೂರವಿದ್ದು, ಗುಂಡೇರಿ ಮಾರ್ಗದಲ್ಲಿ ಹೋದರೆ ಕೇವಲ 9 ಕಿ.ಮೀ. ಆಗುವುದರಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಗ್ರಾಮದ ಐತಿಹಾಸಿಕ ಕೆರೆ ಮಲಿನಗೊಂಡಿದ್ದು, ಕಾಯಕಲ್ಪ ಮಾಡಬೇಕು. ಬಸ್‌ನಿಲ್ದಾಣ, ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು.
ರೈಲುನಿಲ್ದಾಣದಲ್ಲಿ ಮೇಲ್ಚಾವಣೆ ಮತ್ತಿತರ ಸೌಲಭ್ಯ ಒದಗಿಸಬೇಕು. ಗ್ರಾಮವು ತಾಲ್ಲೂಕು ಕೇಂದ್ರ, ಅಜ್ಜಂಪುರ, ಹೊಸದುರ್ಗ, ಚನ್ನಗಿರಿ ಪಟ್ಟಣಗಳನ್ನು ಸಂಧಿಸುವ ಕೇಂದ್ರಸ್ಥಳವಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಧರ್ಮದರ್ಶಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾದ ರಾಮಗಿರಿ ಐತಿಹಾಸಿಕ ದೇಗುಲ.

ಮಾಲತೇಶ್ ಅರಸ್ 
ರಾಮಗಿರಿ : ಆದಾಯ ಮಾತ್ರ ಬೇಕು ಆದ್ರೆ ಅಭಿವೃದ್ದಿ ಮಾತ್ರ ಬೇಡ ಎಂಬುದಕ್ಕೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿ ಐತಿಹಾಸಿಕ ದೇಗುಲ  ಸಾಕ್ಷಿಯಾಗಿದೆ. ನೂರಾರು ವರ್ಷಗಳ ಪುರಾತನ ದೇಗುಲ ಇದೀಗ  ಅಧಿಕಾರಿಗಳ ಮತ್ತು ಧರ್ಮದರ್ಶಿಗಳ ಶೀತಲ ಸಮರಕ್ಕೆ ನಲುಗಿ ಹೋಗಿದ್ದು ಭಕ್ತರ ಹಿಡಿಶಾಪಕ್ಕೆ ಕಾರಣವಾಗಿದೆ.
 
ಕಳೆದ ವರ್ಷ ಸುರಿದ  ಧಾರಾಕಾರ ಮಳೆ ಇಲ್ಲಿನ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇಗುಲದ  ಪಾಲಿಗೆ ಯಮಪಾಶವಾಗಿದೆ.  ದೇವಾಲಯದ ಮುಂದಿರುವ ಕಾಂಪೊಂಡ್ ಸಂರ್ಪೂ ಕುಸಿದು ಬಿದ್ದಿದ್ದು  ಸಂಚಾಲಕರು ಮತ್ತು ಧರ್ಮದರ್ಶಿಗಳು ಅತ್ತ ಮುಖ ಮಾಡಿಲ್ಲ. ಭಕ್ತ ರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ.  ಪುಕ್ಕಟೆ ಅಧಿಕಾರ ಮಾತ್ರ ಬೇಕು. ಆದ್ರೆ ಅಭಿವೃದ್ದಿ ಯಾರಿಗ್  ಬೇಕು ಎನ್ನುವ ಮಾತು ಇವರದ್ದು. ಸಂಚಾಲಕ ಟಿ ಎನ್ ಪಾಳೇಗಾರ್ ಈ ಬಗ್ಗೆ ಚಕಾರ ಎತ್ತದೇ ಇರೋದು ಹಾಸ್ಯಾಸ್ಪದವಾಗಿದೆ. 
 
ಸಮೀಪವೇ ಭಕ್ತರ ಬಲಿಗೆ ಕಾದಿರುವ  ೬೦ ಅಡಿ ಕಂದಕ ಇದ್ದು, ಭಕ್ತರು ನಿತ್ಯ ಜೀವವನ್ನು ಕೈಲಿ ಹಿಡಿದು ಸಾಗುತ್ತಿದ್ದಾರೆ. ಅಲ್ಲದೆ ಇದು ಕುಸಿದಿದ್ದು  ಮೆಟ್ಟಿಲುಗಳು ಬಿರುಕುಬಿಟ್ಟಿವೆ.  ಅಲ್ಲದೆ ಮೂಲ ದೇಗುಲಕ್ಕೆ ಸಾಕಷ್ಟು ಧಕ್ಕೆಯಾಗಿದೆ. ದೇಗುಲದ ಗೋಡೆ ಬಿರುಕು ಬಿಟ್ಟಿದೆ. ಹಾಸು ಬಂಡೆ ಹಾಳಾಗಿವೆ. ಐತಿಹಾಸಿಕ ದೀಪಸ್ಥಂಭ ಅವನತಿಯತ್ತ ಸಾಗಿದೆ. ದೇಗುಲ ಸಾಕಷ್ಟು ಆದಾಯ ತಂದು ಕೊಡುತ್ತಿದ್ದರೂ ಧರ್ಮದರ್ಶಿಗಳು ಮಾತ್ರ ನಿದ್ದೆಗೆ ಜಾರಿರೋದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.  ಈ ಬಗ್ಗೆ ಸಾಕಷ್ಟು ಭಕ್ತರು ಮನವಿ ಮಾಡಿಕೊಂಡರು ಅದನ್ನು ಜೀರ್ಣೋದ್ದಾರ ಮಾಡುವ ಕಾರ್ಯ ಮಾತ್ರ ಕನಸಾಗಿಯೇ ಉಳಿದಿದೆ. 
ಎತ್ತಗೋದ್ರು ಶಾಸಕರು?: ಸದಾ ಕಾಲ  ಮೈದುಂಬಿಕೊಂಡಿರುವ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ‘ ಕೊಟ್ಟೋನ್ ಕೋಡಂಗಿ ಇಸ್ಕೋಂಡೋನ್ ವೀರಭದ್ರ ‘  ಎನ್ನುವಂತೆ ಓಟು  ಪಡೆದು ಹೋದೋರು ಇತ್ತ  ಬಂದೆ ಇಲ್ಲ . ಬಂದ್ರೆ  ಅದು ಬಿಜೆಪಿ ಭಕ್ತರ ಮನೆಗೆ ಬಂದು ಬೋಜನ ಸ್ವೀಕರಿಸಿ ಮಾಯವಾಗೋದು ಅವರ ಹುಟ್ಟುಗುಣವಾಗಿದೆ. 
   ಒಟ್ಟಾರೆ ಧರ್ಮದರ್ಶಿಗಳು ಮತ್ತು ಅಧಿಕಾರಿಗಳ ಶೀತಲ ಸಮರಕ್ಕೆ ದೇಗುಲ ಬಲಿಯಾಗಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳು. ತಹಶೀಲ್ದಾರ್ ಇತ್ತ ಬಂದು ಹೋದವರೂ ಮತ್ತೆ ಗಮನ ಹರಿಸಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ದೇಗುಲ ರಕ್ಷಿಸದೇ ಹೋದರೇ  ಪುರಾತನ ದೇಗುಲವೊಂದು ಯುಗಾಂತ್ಯ ವಾಗುವುದರಲ್ಲಿ ಸಂದೇಹವಿಲ್ಲ. ಎಲ್ಲಾ ಶಿವಮಯವೂ .ಇಲ್ಲಿ ಎಲ್ಲಾ ಶಿವಮಯವೂ ಎನ್ನುವಂತಾಗಿದೆ ಇದೀಗ ಭಕ್ತರ ಸ್ಥಿತಿ. 

ರಾಮಗಿರಿಯಲ್ಲಿ ಸ್ವರ್ಣಗೌರಿ ವೈಭವ.


 ಗಣೇಶನಿಗಿಂತ ಅವನ ಅಮ್ಮನಿಗೆ ಭವ್ಯ ಪೂಜೆ 


 *ದೇವಿಗೆ ಸುಮಂಗಲೆಯರಿಂದ ಭಕ್ತಿ ಸಮರ್ಪಣೆ.  
 * ಮಹಿಳೆಯರ, ಯುವತಿಯರ ಹಬ್ಬ
 * 9 ದಿನಗಳ ಕಾಲ ವೈಭವದ ಪೂಜೆ

 ಮಾಲತೇಶ್ ಅರಸ್ ಹರ್ತಿಮಠ
  ಬಣ್ಣ ಬಣ್ಣದ  ರಂಗೋಲಿಗಳ ಚಿತ್ತಾರ, ಬಾಗಿಲಿಗೆ ತಳಿರು ತೋರಣಗಳ ಅಲಂಕಾರ, ತವರು ಮನೆಯಲ್ಲಿ ಸಂಭ್ರಮದ ಸಡಗರ, ಎಲ್ಲಿ ನೋಡಿದರೂ ಮಹಿಳಾಮಣಿಗಳ ಶಂಗಾರ, ಪುಟಾಣಿಗಳ  ವೈಯ್ಯರ, ಮನೆ- ಮನಗಳಲ್ಲಿ  ಸ್ವರ್ಣ ಗೌರಿ ಮಂತ್ರಗಳ ಝೇಂಕಾರ.
     ಇದು ಗಣೇಶನ ಹಬ್ಬದ ವೈಭವವಲ್ಲ, ಬದಲಿಗೆ ಸ್ವರ್ಣ ಗೌರಿಯ ವೈಭವ. ಚಿತ್ರದುರ್ಗ ಜಿಲ್ಲೆ  ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಸೆ.18 ರಿಂದ   ನಡೆಯುವ ಊರಹಬ್ಬದ  ವೈಭವವಿದು.  ಅದುವೇ ಸ್ವರ್ಣ ಗೌರಿ ವೈಭವ. ಲಕ್ಷ ಲಕ್ಷ ಮಹಿಳೆಯರ ಯುವತಿಯರು ಇಲ್ಲಿ ಸಂಭ್ರಮಿಸುವುದೇ ಒಂದು ವಿಶೇಷ.
  ಚೌತಿ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಹಿರಿಯರು  ವಿವಿಧ ಸಮಿತಿಗಳಲ್ಲಿ  ಒಗ್ಗೂಡಿ ಗಣೇಶನನ್ನು ಬೀದಿ ಬೀದಿಗಳಲ್ಲಿ ಕೂರಿಸುತ್ತಾರೆ. ಇದು ಎಲ್ಲ ಊರಿನಲ್ಲೂ ಕಾಣಸಿಗುತ್ತದೆ.  ಆದರೆ ರಾಮಗಿರಿ ಗ್ರಾಮದ ಜನರು ಇನ್ನು ಒಂದು ಹೆಜ್ಜೆ ಮುಂದೆ .  ಇಲ್ಲಿ ಗಣೇಶನಿಗಿಂತ ಅವನ ಅಮ್ಮನಿಗೆ ಭವ್ಯ ಪೂಜೆ.
  ಭಾದ್ರಪದ ಶುಕ್ಲದ  ಚೌತಿಗಿಂತಾ ಇಲ್ಲಿ ತದಿಗೆಗೆ ತುಂಬಾ ಪ್ರಾಮುಖ್ಯ. ಗೌರಮ್ಮನನ್ನು ಇಲ್ಲಿ ಹೆಚ್ಚು ಶ್ರದ್ದ -ಭಕ್ತಿಯಿಂದ ಪೂಜಿಸುತ್ತಾರೆ. ಅದಕ್ಕಾಗಿ  ವಿವಿಧ ವಿಧಾನಗಳೆಲ್ಲಾ ನಡೆಯುತ್ತವೆ.

  ಇತಿಹಾಸ : 
 ರಾಮಗಿರಿಯ ಇತಿಹಾಸವನ್ನು ಸಷ್ಠಿಸಿ ಮನೆ, ಮನದಾಳದಲ್ಲಿ ನೆಲೆಸಿರುವುದು ಸ್ವರ್ಣಗೌರಿ(ಗೌರಮ್ಮ). ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾ ಬರಲಾಗಿದೆ. ಸ್ವರ್ಣಗೌರಿಯನ್ನು ಗ್ರಾಮದ ಕುಂಬಾರ ವಂಶಸ್ಥರಾದ ಸಣ್ಣ ಬೈರಪ್ಪರ ಕಾಲದಿಂದ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಇದೆ ಸೆ 18ರ ಮಂಗಳವಾರದಂದು ಬೆಳಗಿನ ಜಾವದಲ್ಲಿ ಗ್ರಾಮದ ಕುಂಬಾರ ನಾಗಮ್ಮ  ಮನೆಯಲ್ಲಿ ಸ್ವರ್ಣಗೌರಿಯನ್ನು ವಿಧಿವತ್ತಾಗಿ ಸುಮಂಗಲೆಯರಿಂದ  ಗಂಗಾಪೂಜೆಯೊಂದಿಗೆ ತಂದು ಪ್ರತಿಷ್ಠಾಪಿಸಲಾಗುತ್ತದೆ. 9 ದಿನಗಳ  ವೈಭವದ ಪೂಜೆ  ಜರುಗುತ್ತದೆ, ನಿತ್ಯ ಸುಮಂಗಲೆಯರ ಹಬ್ಬ ನಡೆಯುತ್ತದೆ.
  ಸ್ವರ್ಣಗೌರಿಗೆ ವಿಶೇಷವಾಗಿ ಮಹಿಳೆಯರಿಂದಲೆ ಪೂಜೆಗಳು ನಡೆಯುತ್ತವೆ. ಸ್ವರ್ಣಗೌರಿಗೆ ಶ್ರದ್ದ, ಭಕ್ತಿ ಮುಖ್ಯ, ಪೂಜೆ ಪುನಸ್ಕಾರಗಳು ಆಕೆಯ ಇಷ್ಟದಂತೆಯೇ ನಡೆಯಬೇಕು. ಸದಾ ಭಕ್ತರ ಕೋರಿಕೆಯನ್ನು ಈಡೇಸುವ ಸ್ವರ್ಣಗೌರಿ, ಆಕೆಯನ್ನು ನಿಂದಿಸಿದವರಿಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆಯೊಂದಿಗೆ ಇಲ್ಲಿಗೆ ಬರುವ ದೇವಿಯ ಭಕ್ತ  ಸಮೂಹ ಅಪಾರವಾದುದು.

 ಭಕ್ತರು ಎಲ್ಲೆಡೆಯಿಂದ ಬರ‌್ತಾರೆ: 
 ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತ ಸಮೂಹ ಪಾಪ ಪುಣ್ಯಗಳ ಲೆಕ್ಕ ಮಾಡಿ ಅದನ್ನು ಇಲ್ಲಿ ಶರಣಾಗತಿ ಮಾಡಿಹೋಗುತ್ತಾರೆ,

 ಬೀದಿಬೀದಿಯಲ್ಲಿ ಮೆರವಣಿಗೆ:
  ಸ್ವರ್ಣಗೌರಿ ದೇವಿಯ ಹೊತ್ತ ಮೆರವಣಿಗೆ ಹೂವಿನ ಪಲ್ಲಕ್ಕಿ ಉತ್ಸವದಿಂದ ಗ್ರಾಮದ ಬೀದಿ ಬೀದಿಗಳಲ್ಲಿ ಸಂಚರಿಸುವುದು. ಮರುದಿನ ಕುಂಬಾರ ವಂಶಸ್ಥರು ರಾಮಗಿರಿ ಶ್ರೀ ಕರಿಸಿದ್ದೇಶ್ವರಸ್ವಾಮಿ  ಬೆಟ್ಟದ ತಪ್ಪಲಲ್ಲಿರುವ ಕುಂಬಾರರ ಆರಾದ್ಯ ದೈವವಾದ ಶ್ರೀ ಬೈರಸಿದ್ದೇಶ್ವರ ಸ್ವಾಮಿಗೆ ವಿಧಿವತ್ತಾಗಿ ವಿಶೇಷ ಪೂಜೆ ಸಲ್ಲಿಸುವರು.

 ನವದಿನಗಳ ಪೂಜೆ ;  
 ಸ್ವರ್ಣಗೌರಿಯನ್ನು ಪ್ರತಿಷ್ಠಾಪನೆ ಮಾಡಿದ ನಂತರ ಒಂಬತ್ತು ದಿನಗಳವರೆಗೆ ಪ್ರತಿದಿನ ಬೆಳಗಿನಿಂದ ರಾತ್ರಿಯವರೆಗೂ ವಿಧಿವತ್ತಾದ ಪೂಜೆಗಳು ನೆರವೇರುತ್ತವೆ. ಭಜನೆ, ಜಾನಪದ ನತ್ಯಗಳು, ಕೋಲಾಟ, ಕರಡೆ, ವೀರಗಾಸೆ, ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಸೇರಿದಂತೆ ಮೊದಲಾದ ಕಾರ್ಯಕ್ರಮ ನಡೆಯುತ್ತವೆ.
  ಒಂಬತ್ತನೆ ದಿನದಂದು ವಿಶೇಷವಾಗಿ ಇಲ್ಲಿ ಗಣಂಗಳ ಸೇವೆ (ಜಂಗಮರ ಸೇವೆ) ನಡೆಯಲಿದ್ದು, ಅಂದು ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುವರು. ಅಲ್ಲದೆ ಆಗಮಿಸುವ ಭಕ್ತ ಸಮೂಹಕ್ಕೆ ಅನ್ನ ದಾಸೋಹ ನಡೆಯುವುದು.

 ವಿಶೇಷ ಊಟ: 
 ಇಲ್ಲಿ ಎಲ್ಲಾ ವಿಶೇಷ  ಹಬ್ಬದ ಊಟ ಅಂದರೆ ಅದು ಸಿಹಿ ಬೋಜನ ಅಂದ್ರೆ ತಪ್ಪಾಗುತ್ತೆ, ಇಲ್ಲಿ ಊರಹಬ್ಬದ ಊಟವೇ ವಿಶೇಷ. ಸ್ವರ್ಣ ಗೌರಿಯ ಆರಾಧನೆಯ ನಂತರ ಮೆರವಣಿಗೆಯ ನಂತರ  ರಾಗಿಮುದ್ದೆ, ಹುಳು ಸೊಪ್ಪು ಪರೇವು ಮಾಡಿ ಜನತೆ ಭರ್ಜರಿ  ಭೋಜನ ಮಾಡ್ತಾರೆ. ಇದು ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಇದನ್ನು  ಇಲ್ಲಿ ಎಲ್ಲರೂ  ಮಾಡುವುದರಿಂದ ಇಲ್ಲಿ ತನ್ನದೇ ಆದ ಸಾಂಸ್ಕೃತಿಕ ಮನೋಭಾವ ಬೆಳೆದಿದೆ.
   ಹೌದು ಇಂತಹ ಭವ್ಯವಾದ ಸ್ವರ್ಣ ಗೌರಿ  ವೈಭವದ ಆಚರಣೆಯಲ್ಲಿ ನೀವೂ ಭಾಗಿಯಾಗಿ. ಸುಮಂಗಲೆಯರ ಹಬ್ಬಕ್ಕೆ ಸಂಭ್ರಮ ತನ್ನಿ.



   



ರಾಮಗಿರಿ ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ._RAMAGIRI Karisiddeswara Temple




 - ಮಾಲತೇಶ್ ಅರಸ್ ಹರ್ತಿಮಠ
 ಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ, ಹೂ ಬಿರಿದು ನಿಂತ ಗಿಡಗಂಟೆಗಳು, ಗಂಧ, ಹೊನ್ನೆ, ಬೀಟೆ ಸೇರಿದಂತೆ ವಿವಿಧ ಬಗೆಯ ಮರಗಳ ಸುಮಧುರ ಘಮಲು, ಸುವಾಸನೆಯಿಂದ ಕೂಡಿದ ವನ ಸುಮಗಳು, ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಕಣ್ಣ ತುಂಬಾ ಕಾಣುವ  ಜೇನು  ಗೂಡುಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು,  ಕಿವಿಗಿಂಪಾದ ಜಾಗಟೆ ನಿನಾದ, ಕರಡಿಗೆ ಸದ್ದು....

 ಸುಂದರ ಬೆಟ್ಟಗಳ ನಡುವೆ ಕಾಣುವ ಪಾವನ ಕ್ಷೇತ್ರ ಅದುವೇ.. ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ ಗುಡ್ಡಗಳ ನಡುವಿನ ರಾಮಗಿರಿ ಒಂದು ಸುಂದರ ತಾಣ. ಹಚ್ಚ ಹಸಿರಿನ ಬೆಟ್ಟದಲ್ಲಿ ನೆಲೆ ನಿಂತಿರುವ ದೇವಗೆ ನಿತ್ಯ ಪರಿಸರ ಅಭಿಷೇಕ. ನಿತ್ಯ ಸಹಸ್ರಾರು ಭಕ್ತರ ಭೇಟಿ ಮತ್ತು  ಬೆಟ್ಟದ ಮುಂಭಾಗದ ಕಾಣುವ ಕೆರೆಯಿಂದಾಗಿ ಇಲ್ಲಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ.
 ಕೋಟೆಗಳ ನಾಡೆಂದೇ ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸುಪ್ರಸಿದ್ದ  ಕ್ಷೇತ್ರವೆಂದೇ ಹೆಸರು ಪಡೆದಿರುವುದೇ ಹೊಳಲ್ಕೆರೆ ತಾಲೂಕಿನ ರಾಮಗಿರಿ ಸುಕ್ಷೇತ್ರ. ಇಲ್ಲಿ ಕನಸುಗಳು ಅರಳುತ್ತವೆ. ಮನಸುಗಳು ಸಂಭ್ರಮಿಸುತ್ತವೆ. ಭಕ್ತಿಯ ಜತೆಗೆ ಇಲ್ಲಿ ಪರಿಸರ ದೇವತೆಯೇ ಎದ್ದು ಬರುತ್ತಾಳೆ ಎಂಬ ಭಾವನೆ ಮೂಡುತ್ತದೆ.

    323 ಮೆಟ್ಟಿಲು:  
 ರಾಮಗಿರಿ ಕ್ಷೇತ್ರ 21 ದೇವಾಲಯಗಳನ್ನು ಒಳಗೊಂಡಿರುವ  ಹೋಬಳಿ. ಇಲ್ಲಿ ವಿರಕ್ತಮಠ, ಮರಿದೇವರ ಮಠ, ಚರಂತಮಠಗಳೂ ಇವೆ. ಇಲ್ಲಿರುವ ಈ ಕರಿಸಿದ್ದೇಶ್ವರ ಸ್ವಾಮಿ ಮತ್ತು ವೀರಭದ್ರಸ್ವಾಮಿ ಬೆಟ್ಟ ಹತ್ತಲು 323 ಮೆಟ್ಟಿಲು ಹತ್ತಬೇಕು. ಬೆಟ್ಟವನ್ನು ಪ್ರವೇಶಿಸಿದಾಗ ಎಡಭಾಗದಲ್ಲಿ ಗಜಾನನ ದೇವಾಲಯ ಬಲಭಾಗದಲ್ಲಿ ಬಸವೇಶ್ವರ ದೇವಾಲಯ. ಮುನ್ನೆಡೆದರೇ ಅಲ್ಲಿ  ಪಾದ ಘಟ್ಟ, ನಡುವೆ ಬೈರಸಿದ್ದೇಶ್ವರ ಸ್ವಾಮಿ ಗುಹೆ. ಮೆಲ್ಲನೇ ಏರುತ್ತಲೇ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಾಲಯ ಮತ್ತು ಉದ್ಬವಲಿಂಗ ಗೋಚರವಾಗುತ್ತದೆ.
 ಬಲಭಾಗದಲ್ಲಿ ವೀರಭದ್ರೇಶ್ವರ ದೇಗುಲವೂ ರಾರಾಜಿಸುತ್ತದೆ.

   ಬೆಟ್ಟದಲ್ಲಿ ಬಾವಿ :
 ಬೆಟ್ಟದ ಮೇಲಿರುವ ದೇವಾಲಯದೊಳಗೆ ಗಂಗಮ್ಮನ ಬಾವಿ ಇದೆ. ಇದು ಮಳೆ ಬಂದಾದ ನೀರು ತಳ ತಲುಪುತ್ತದೆ. ಮಳೆ ಬಾರದೇ ಬರ ಎದುರಾಗುವ ವೇಳೆ ಬಾವಿ ನೀರು ಮೇಲೆ ಬರುವ ಮೂಲಕ  ಮುನ್ಸೂಚನೆ ನೀಡುತ್ತದೆ.  ಈ ಬಾವಿ ಕಾಶಿಯಿಂದ ಸಂಪರ್ಕ ಇದೆ ಎಂಬ ನಂಬಿಕೆ.   ಈ ನೀರು ಹಲವು ರೋಗಗಳಿಗೆ ಸಂಜೀವಿನಿಯಿದ್ದಂತೆ. ಬೆಟ್ಟದ ತುತ್ತ ತುದಿಯನ್ನ ಮೇಲ್ದುರ್ಗವೆಂದು ಕರೆಯುತ್ತಾರೆ ಇಲ್ಲಿಯೂ ಉದ್ಬವ ಲಿಂಗವಿದೆ. ಅದಕ್ಕೆ ಹರಿಹರೇಶ್ವರ ಎಂಬ ಹೆಸರಿದೆ.
   ಪುರಾಣ ಪ್ರಸಿದ್ದ: 
 ರಾಮಾಯಣದಲ್ಲಿ ಈ ತಾಣವನ್ನು ಹಾಲುರಾಮೇಶ್ವರ, ರಾಮದೇವರು ಎನ್ನಲಾಗುತ್ತಿತ್ತು ಎಂಬ ನಂಬಿಕೆ ಇದೆ. ದೇವರು ಬೆಟ್ಟದಲ್ಲಿ ನೆಲೆಸಿರುವ ಕಾರಣ ರಾಮ ಮತ್ತು ಗಿರಿ (ಬೆಟ್ಟ) ಸೇರಿ ರಾಮಗಿರಿ ಎಂಬ ಹೆಸರು ಬಳಕೆಗೆ ಬಂದಿದೆ ಎನ್ನಲಾಗಿದೆ. ಜೊತೆಗೆ ಇಲ್ಲಿ ಸಾಧು ಸಂತರು ನೆಲೆಸಿ ಸ್ಥಳದ ಮಹಿಮೆ ಮತ್ತಷ್ಟು ಹೆಚ್ಚಿಸಿದ್ದಾರೆ. ಇಲ್ಲಿ ಪ್ರತಿ ವರ್ಷವೂ ಭಕ್ತರು
 ಕರಿಸಿದ್ದೇಶ್ವರನಿಗೆ ಮಾಲೆ ಹಾಕುತ್ತಾರೆ.
 ಕಾರ್ತಿಕೋತ್ಸವ ; 
 ಬಟ್ಟೆಯನ್ನು ಸಿಂಬೆ ರೀತಿ ಸುತ್ತಿ ತಯಾರಾದ ದೀಪಗಳನ್ನು ಬೆಟ್ಟದ ತುಂಬಾ ಮತ್ತು ಬೆಟ್ಟಕ್ಕೆ ಹತ್ತುವ ಪ್ರತಿ ಮೆಟ್ಟಿಲುಗಳ ಎರಡು ಬದಿ ಹಚ್ಚುವ ಮೂಲಕ ದೀಪೋತ್ಸವ ಕಾರ್ತಿಕೋತ್ಸವ ನಡೆಯುತ್ತದೆ. ಇದು ಲಕ್ಷ ದೀಪೋತ್ಸವ ಎಂದೇ ಖ್ಯಾತಿಗಳಿಸಿದೆ.
   ಬಾಳೆ ಪರಿಷೆ : 
  ಈ ಜಾತ್ರೆಯ ವಿಶೇಷ ಬಾಳೆಹಣ್ಣಿನ ಪರಿಷೆ. ಉತ್ಸವದ ಕೇಂದ್ರ ಬಿಂದುವೆಂದರೇ ಬಾಳೆಹಣ್ಣಿನ ರಾಶಿ. ಭಕ್ತರು ಹರಕೆಯ ಬಾಳೆಹಣ್ಣುಗಳನ್ನು ಬೆಟ್ಟದ ಮುಂಭಾಗದ ದ್ವಾರ ಬಾಗಿಲು ಮುಂಭಾಗ ದೊಡ್ಡ ರಾಶಿ ಹಾಕಿ ಪೂಜೆ ಮಾಡುತ್ತಾರೆ.  ಈ ರಾಶಿ ನೋಡಲು ಒಂದು ಸುಂದರ ಹಳದಿ ಬೆಟ್ಟದಂತೆ ಕಾಣುತ್ತದೆ. ನಂತರ ಈ ರಾಶಿ ಬಾಳೆಹಣ್ಣುಗಳನ್ನು ಪ್ರಸಾದವಾಗಿ ಹಂಚಲಾಗುತ್ತದೆ.  ಇದರ ಜೊತೆ ಉತ್ಸವ ಹೂವಿನ ಉತ್ಸವ, ಕದಳಿ ಸೇವೆ, ಪಲ್ಲಕ್ಕಿ ಉತ್ಸವ, ವೀರಗಾಸೆ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.
 ಬಾಳೆ ಮಂಟಪ : 
 ಕರಿಸಿದ್ದೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಕರಿಯಮ್ಮ ದೇವಿಯನ್ನು ಚರಂತ ಮಠದ ಮುಂಭಾಗ ಬಾಳೆ ದಿಂಡು, ವೀಳ್ಯದ ಎಲೆ ಮತ್ತು ನಾನಾ ರೀತಿ ಹೂಗಳನ್ನು ಬಳಸಿ ಮಂಟಪ ನಿರ್ಮಿಸಲಾಗುತ್ತದೆ. ಅಲ್ಲಿ ದೇವರನ್ನು ಪವಡಿಸಲಾಗುತ್ತದೆ. ಇದು ವಿಶೇಷವಾಗಿ ಬಾಳೆ ದಿಂಡಿನ ಮಂಟಪವಾಗಿರುತ್ತದೆ. ತಾವೂ ಕೂಡ ರಾಮಗಿರಿ ಕ್ಷೇತ್ರಕ್ಕೊಮ್ಮೆ ಭೇಟಿ ಕೊಡಿ. ಪವಾನರಾಗಿ.
   ಎರಡು ದಾರಿಗಳು: 
 ಇಲ್ಲಿ ಶ್ರಾವಣ ಬಂದರೆ ಸಾಕು ಎಲ್ಲಿಲ್ಲದ ಹಿಗ್ಗು. ಇನ್ನೂ ಕಡೇ ಕಾರ್ತಿಕ ಬಂದ್ರೆ ಊರ ಹಬ್ಬವೇ ನಡೆಯುತ್ತದೆ. ಇನ್ನು ಬೆಟ್ಟವನ್ನು ತಲುಪಲು ಎರಡು ದಾರಿಗಳಿವೆ. ಒಂದು ಮೆಟ್ಟಿಲುಗಳಿಂದ ಹತ್ತುವುದು. ಇನ್ನೊಂದು ಸಾಹಸದ ದಾರಿ. ಸಾಹಸ ಪ್ರವೃತ್ತಿಯ ಚಾರಣಿಗಳಿಗೆ ಕಲ್ಲು ಮುಳ್ಳಿನ ದಾರಿ ಇಷ್ಟವಾಗುತ್ತದೆ. ಬೆಟ್ಟದೊಳಗೊಂದು ರಸ್ತೆ ಇದ್ದು ಕಲ್ಲು ಮುಳ್ಳುಗಳ ಹಾದಿಯನ್ನು ಹಾಸುತ್ತದೆ.


 ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ 
 ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯ ರಾಮಗಿರಿ ಐತಿಹಾಸಿಕತೆಯನ್ನು ಹೊಂದಿರುವ ಮಹಾಕ್ಷೇತ್ರ. ಹೊಳಲ್ಕೆರೆ ತಾಲೂಕು ರಾಮಗಿರಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ ಹಾಗೂ ವಿನೂತನ ಬಾಳೇಹಣ್ಣು ಪರಿಷೆ ನಡೆಯತ್ತದೆ.  ನಡು ರಾತ್ರಿಯಲ್ಲಿ ಹಬ್ಬದ ಸಂಭ್ರಮದ ಜೊತೆಗೆ ಹೊಸವರ್ಷದ ಸಂಭ್ರವನ್ನು ಆಚರಿಸಬಹುದು. ರಾಜ್ಯದ ನಾನಾ ಭಾಗಗಳಿಂದ ಮೂರರಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ.

   ಹಸಿರ ಸೊಬಗು ಕಾಣಾ.
   ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ ಇದು. ಬೆಟ್ಟದ ತಪ್ಪಲು, ಹೂ ಬಿರಿದು ನಿಂತ ಗಿಡ ಗಂಟೆಗಳು, ವಿವಿಧ ಬಗೆಯ ಮರಗಳ ಘಮಲು, ಸುವಾಸನೆಯಿಂದ ಕೂಡಿದ ವನಸುಮಗಳ ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು, ಇವೆಲ್ಲವೂ ಬೆಟ್ಟಹೊಕ್ಕರೇ ಸಾಕು ನಿಮಗೆ ಸಿಗುತ್ತವೆ.
 ಲಿಂಗ ಉದ್ಭವ
365 ಮೆಟ್ಟಿಲುಗಳಿರುವ ರಾಮಗಿರಿ ಬೆಟ್ಟ ನೋಡಲು ಆಕರ್ಷಕವಾಗಿ ಕಾಣುತ್ತದೆ. ಗ್ರಾಮಕ್ಕೆ ತನ್ನದೇ ಆದ ಕುತೂಹಲಭರಿತ ಇತಿಹಾಸವಿದೆ. `ಹಿಂದಿನ ಕಾಲದಲ್ಲಿ ಈ ಪ್ರದೇಶ ದಂಡಕಾರಣ್ಯವಾಗಿತ್ತು. ಶ್ರೀರಾಮ ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿಗೆ ಬಂದು ತಂಗಿದ್ದ. ಶ್ರೀರಾಮನಿಗೆ ನಿತ್ಯ ಪೂಜೆ ಸಲ್ಲಿಸಲು ಇಲ್ಲಿ ಯಾವುದೇ ವ್ಯವಸ್ಥೆಗಳಿರಲಿಲ್ಲ. ಆಗ ಇಲ್ಲಿಗೆ ಬಂದ ಒಬ್ಬ ಋಷಿಮುನಿಯನ್ನು ಶ್ರೀರಾಮ ಪೂಜೆಗೆ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾನೆ. ಆಗ ಋಷಿ ಅಲ್ಲಿ ಒಂದು ಲಿಂಗ ಉದ್ಭವವಾಗುವಂತೆ ಮಾಡಿದರು. ಪೂಜೆಗೆ ಬೇಕಾದ ನೀರಿಗಾಗಿ ಬೆತ್ತ (ಊರುಗೋಲು)ದಿಂದ ನೆಲ ಮುಟ್ಟಿ ನೀರು ಚಿಮ್ಮುವಂತೆ ಮಾಡಿ `ತೃಪ್ತಿಯಾಗುವಂತೆ ಪೂಜಿಸು' ಎಂದು ಹೇಳಿದರಂತೆ. ರಾಮ ಹಲವು ದಿನ ಇಲ್ಲಿ ತಂಗಿದ್ದರಿಂದ ಇದು `ರಾಮನಗಿರಿ' ಆಗಿ ಬರಬರುತ್ತ `ರಾಮಗಿರಿ' ಆಯಿತು ಎಂದು ಹಿರಿಯರು ದಂತಕತೆ ಹೇಳುತ್ತಾರೆ.
ದೇವರಿಗೆ ಕರಿಸಿದ್ದೇಶ್ವರ ಅಂತ ಹೆಸರು ಬಂದಿದ್ದಕ್ಕೂ ಒಂದು ಪವಾಡ ಕತೆಯಿದೆ. ಹಿಂದೆ ಹೈದರಾಲಿ ಬಾಗೂರು ಪಟ್ಟಣದ ಮೇಲೆ ಯುದ್ದ ಮಾಡಲು ಸೈನ್ಯ ಸಮೇತ ಇದೇ ಮಾರ್ಗದಲ್ಲಿ ಹೋಗುತ್ತಿದ್ದಾಗ ಇಲ್ಲಿ ಅವರ ಪ್ರೀತಿಯ ಪಟ್ಟದ ಆನೆ ಸಾವನ್ನಪ್ಪಿತು. ಬೆಟ್ಟದ ಮೇಲಿದ್ದ ದೇವರು ಸಾಧುವಿನ ವೇಷದಲ್ಲಿ ಬಂದು `ನಿನ್ನ ಆನೆ ಸತ್ತಿಲ್ಲ, ತಟ್ಟಿ ಎಬ್ಬಿಸು' ಎಂದು ಹೇಳಿತ್ತು. ರಾಜ ಆನೆಯನ್ನು ತಟ್ಟಿದಾಗ ಎದ್ದು ನಿಂತುಕೊಂಡಿತು. ಆನೆ (ಕರಿ)ಯನ್ನು ಬದುಕಿಸಿದ (ಸಿದ್ಧಿಸಿದ)ದೇವರಿಗೆ ಅಂದಿನಿಂದ ಕರಿಸಿದ್ದೇಶ್ವರ ಎಂದು ಹೆಸರು ಬಂತು. ನಂತರ ರಾಜ ಬಾಗೂರು ಪಟ್ಟಣಕ್ಕೆ ಹೇಗೆ ಹೋಗಬೇಕು ಎಂದು ಕೇಳಿದಾಗ ಇಲ್ಲಿನ ಜನ `ಮೂರು ಸಮುದ್ರಗಳನ್ನು (ಚನ್ನ ಸಮುದ್ರ, ಗುಂಡ ಸಮುದ್ರ, ಗಂಗಸಮುದ್ರ ಗ್ರಾಮದ ಹೆಸರುಗಳು) ದಾಟಿ ಹೋದರೆ ಬಾಗೂರು ಸಿಗುತ್ತದೆ ಎಂದರಂತೆ. ಆಗ ರಾಜ ಮೂರು ಸಮುದ್ರ ದಾಟಲಾಗುವುದಿಲ್ಲ ಎಂದು ಹೆದರಿ ವಾಪಸ್ ಹೋದನಂತೆ ಎಂದು ಗ್ರಾಮದ ಹಿರಿಯರು ಪುರಾಣ ಕತೆ ಹೇಳುತ್ತಾರೆ.
ದೇವಾಲಯದ ಒಳಗೆ ಒಂದು ಪುಷ್ಕರಣಿ ಇದೆ. ದೇವರ ಅಪ್ಪಣೆಯಂತೆ ವಿವಿಧ ರೋಗಗಳ ನಿವಾರಣೆಗಾಗಿ ಇಂದಿಗೂ ಇದರ ನೀರನ್ನು ಕೊಡಲಾಗುತ್ತದೆ. ಬರಗಾಲದ ಮುನ್ಸೂಚನೆಗೆ ಇದರಲ್ಲಿನ ನೀರು ಮೇಲೇರುತ್ತದೆ. ಮಳೆ ಬರುವ ಸೂಚನೆ ಇದ್ದರೆ ನೀರು ಕೆಳಕ್ಕೆ ಹೋಗುತ್ತದೆ' ಎಂದು ಅನುಭವಿಗಳು ನುಡಿಯುತ್ತಾರೆ.

ರಾಮಗಿರಿ ನಮ್ ಮೇಷ್ಟ್ರು. Ramagiri Nam Teacher_ Malathesh Urs


  ನಮ್ ಮೇಷ್ಟ್ರು.                                                                      (12.12.2012)                                                                    
  - ಮಾಲತೇಶ್ ಅರಸ್ 
 
   @ ಬೆತ್ತದ ಏಟಿನ ರುಚಿ : ಫಸ್ಟ್‌ಕ್ಲಾಸ್‌ನಲ್ಲಿ ಪಾಸ್
   @ ತಂಗಟೆ ಬರಲು ಏಟು : ಮನದಲ್ಲೇ ಉಳಿದ ಪೂರ್ಣ ಪದ್ಯ
   @ ಗೋಲಿ, ಲಗೋರಿ, ಚಿನ್ನಿಕೋಲು, ಮರಕೋತಿ ಆಟಗಳೆಲ್ಲಾ ಕಣ್ಮರೆ
   @ 20 ವರ್ಷ ಹಿಂದಿನ ನೆನಪಿನ ಬುತ್ತಿ.
   @ ಟಿವಿಯವರು ಕಾದಿದ್ದು ಮರ್ಯಾದೆ ಹರಾಜು  ಹಾಕ್ತಾರೆ


  ಮೇಷ್ಟ್ರು... 
  ಎಂಬ ಪದವೇ ಅದ್ಬುತ, ಅವರ ಪಾಠವೇ ಅಮೃತ, ಅವರ ಒಂದೊಂದು ಮಾತುಗಳೂ ನಮಗೆ ಮಾರ್ಗದರ್ಶಿ. ಅವರ ಒಂದೊಂದು ಹೊಡೆತಗಳು ನಮಗೆ ದಾರಿದೀಪ. ಅವರ ಒಂದೊಂದು ಮನೆ ಪಾಠವೂ ನಮಗೆ ಜೀವನದ ಪಾಠವಾಗಿದ್ದವು. ಅವರ ಒಂದೊಂದು ಶನಿವಾರವೂ ನಮಗೆ ದೈಹಿಕ ಶಕ್ತಿ ತರುತ್ತಿದ್ದವು.
  ಆದರೇ ಇಂದು ನಾವು ಕಳೆದು ಹೋಗುತ್ತಿದ್ದೇವೆ. ಅಂದಿನ ಮೇಷ್ಟ್ರುಗಳಂತ ಮೇಷ್ಟ್ರುಗಳೇ ಇಲ್ಲದೇ ಪರಿತಪಿಸುತ್ತಿದ್ದೇವೆ. ಅವರ ಹೊಡೆತಗಳೆಂಬ ಶಿಕ್ಷೆ ಇಲ್ಲದೆ ಇಂದಿನ ಮಕ್ಕಳು ದಾರಿ ತಪ್ಪುತ್ತಿದ್ದಾರೆ.
  ಸುಮಾರು 20 ವರ್ಷಗಳ ಹಳೆಯ ನೆನಪುಗಳು ಹಾಗೂ  20 ವರ್ಷಗಳ ನಂತರದ ಮೇಷ್ಟ್ರುಗಳ ಸ್ಥಿತಿ ಇಲ್ಲಿದೆ.
  ‘‘ನಾನಾಗ 7 ನೇ ತರಗತಿ, ಚಿತ್ರದುರ್ಗ ಜಿಲ್ಲೆ ರಾಮಗಿರಿಯ ಸರ್ಕಾರಿ ಮಾದರಿ ಪಾಠಶಾಲೆಯಲ್ಲಿ  ಓದುವಾಗ ಮೇಷ್ಟ್ರುಗಳ ಪವರ್  ನೋಡಿದ ಹೊತ್ತು. ನಿಜಕ್ಕೂ ತಪ್ಪು ಮಾಡಿದ್ರೆ ಆಗುತ್ತಿದ್ದ ಶಿಕ್ಷೆಗಳ ಬಗ್ಗೆ ನಾನು ನೋಡಿದ ಕ್ಷಣ, ನಾನೇ ಅನುಭವಿಸಿದ ಸಂಭ್ರಮ.
  ನಾನು, ನಮ್ಮ ಗೆಳೆಯರ ಬಳಗದ ಪಿ. ಕುಮಾರ,  ಅಂಗಡಿ ಷಡಾಕ್ಷರಪ್ಪರ ರೇಣುಕ, ಯಾಲಕ್ಕಿ ವೈ.ಆರ್. ಗಿರೀಶ, ಪಕಾಲಿ ಸಂತೋಷ, ಶೆಟ್ಟಿ ಎಂದೇ ಬಿರುದಾಂಕಿತ ಪಾಳೇಗಾರ್ ಪ್ರಸನ್ನ, ನಾಯಕರಹಟ್ಟಿ ಓಂಕಾರ, ಮಂತ್ರಪ್ಳರ ಗಿರೀಶ, ಮೇಲಗಿರಿಹಟ್ಟಿ ಪ್ರಸನ್ನ, ಚಿನಗಾಳೆ ಚಿದಾನಂದ, ಆಚಾರಹಟ್ಟಿಯ ಕೆ.ಎನ್.ಶಿವಾನಂದಸ್ವಾಮಿ, ಎ.ಕೆ.ಹಟ್ಟಿ ಬಸವರಾಜ್ ಮತ್ತು ಗೆಳೆಯರಿಂದ ಸೆಕ್ರೇಟರಿ ಮಗ ಅಂತಾನೆ ಹಾಗೂ ಮೇಷ್ಟ್ರುಗಳಿಂದ ಚೆಲುವ ಅಂತ ಕರೆಸಿಕೊಳ್ಳುತ್ತಿದ್ದ ಮಾಲತೇಶ್ ಅರಸು, ಹೀಗೆ ನಮ್ಮದೇ ಆದ ತಂಡವೂ ಇತ್ತು. ಅಲ್ಲಿ ಸ್ನೇಹ ಹೊರತು ಜಾತಿಯ ಸುಳಿವಿರಲಿಲ್ಲ. ಇದರಲ್ಲಿ ಆಡುವವರು, ಓದುವವರು,  ಓದದೇ ಆಡುವವರು, ಆಡುತ್ತಲೇ ಓದುವವರು ಇದ್ದರು.  
   ನಾವಂದು  ಪ್ರೈಮರಿ ಸ್ಕೂಲು. ಮಿಡ್ಲಿಸ್ಕೂಲು,  ಹೈಸ್ಕೂಲುಗಳಲ್ಲಿ ಮೇಷ್ಟ್ರುಗಳ ಕೈಲಿ ಬಿಸಿ ಬಿಸಿ ಬೆತ್ತದೇಟು ತಿಂದದಕ್ಕೊ ಏನೋ.. ಇಂದು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡಿದ್ದೇವೆ ಎನ್ನುತ್ತಾರೆ ನನ್ನೊಡಲ ಗೆಳೆಯರು.
  ಹೌದು.. ಅಂದೊಂದಿತ್ತು ಕಾಲ. ಅದು ಮೇಷ್ಟ್ರುಗಳ ಕಾಲ ನಮ್ಮನ್ನು ತಿದ್ದುತ್ತಿದ್ದ ಕಾಲ. ಇಂದು ಬದಲಾಗಿದೆ, ಮೇಷ್ಟ್ರುಗಳು ಪಾಠ ಮಾಡುವುದನ್ನು  ಹೊರತು ಪಡಿಸಿ ಬೇರೇನು ಮಾಡುವಂತಿಲ್ಲ.
  ಅಂತಹ ಬಿಸಿ ಬಿಸಿ ಹೊಡೆತಗಳ ಅನುಭವ ಇಲ್ಲಿದೆ. ಎಲ್ಲವೂ ಇಂದಿಗೂ ಬಿಸಿ ಬಿಸಿ ಯಾಗಿಯೇ ಇವೆ.
 
  ಘಟನೆ 1: 
  ಕನ್ನಡದ ಕಟ್ಟಾಳು, ಕನ್ನಡ ಪಾಠವನ್ನು ರಸಗುಲ್ಲದಂತೆ ಬಾಯಿಗಿಳಿಸುವ ಪ್ರತಿಭೆ, ನೋಡಿದರೇ ಅಪ್ಪಿಕೊಳ್ಳಬೇಕೆನ್ನುವಷ್ಟು ಮುದ್ದಾದ ಮೊಗ, ಸದಾ ಹಸನ್ಮುಖಿ, ಸದಾ ಚಿಂತನೆ, ಸದಾ ಕಾಲವೂ ಮಕ್ಕಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಚಾಟಿ ಏಟಿನ ಮೇಷ್ಟ್ರು.. ಹೌದು ಇವರೇ ನಮ್ಮ ಪ್ರೀತಿಯ ಮೇಷ್ಟ್ರು ರಂಗಾಪುರದ ರಾಜಪ್ಪನವರು.
   ಇವರ ಕೈ ಹೊಡೆತ ತಿಂದ ಶಿಷ್ಯರೆಲ್ಲಾ ಇಂದು ಅವರನ್ನು ಸ್ಮರಿಸುತ್ತಿದ್ದಾರೆ. ಶಿಕ್ಷೆ ಅಂದ್ರೆ ಅವರದ್ದು. ಒಂದೇ ಮಾತು, ಒಂದೇ ಹೊಡೆತ ವಾರ್ಷಿಕೋತ್ಸವವಾದರೂ ಮರೆಯುವ ಹಾಗಿಲ್ಲ.
  ಅಂದು ಶನಿವಾರ, ಹೇಳಿದ ಪದ್ಯವನ್ನು ಗಟ್ ಮಾಡಿಕೊಂಡು (ಕಂಠಪಾಠ) ಬರದಿದ್ದರೇ, ಸ್ಕೂಲಲ್ಲಿ ಎಲ್ಲರ ಎದುರು ನಿಂತು ಹೇಳದಿದ್ದರೇ ಬೀಳುತ್ತಿದ್ದ ಹೊಡೆತಗಳು ಅಷ್ಟಿಷ್ಟಲ್ಲ. ಅವುಗಳನ್ನು ನೆನಸಿಕೊಂಡರೇ ಇಂದಿಗೂ  ಮೈ ಚಳಿ ಓಡಿಹೋಗುತ್ತದೆ.
 
  ಛಡಿ ಛಂ ಛಂ... ವಿದ್ಯೆ ಘಂ ಘಂ ಘಂ ..... ಎಂಬ ಗಾದೆಯಂತೆ  ಅಂದು ನಾಲ್ಕೇಟು ಹಾಕಿ ಕಲಿಸಿ ಕೊಟ್ಟ  ವಿದ್ಯೆಯೇ ಇಂದಿಗೂ ಹಸಿರು. ಯಾವುದೇ ಸಂದರ್ಭದಲ್ಲಿ ಕೇಳಿದರೂ ನೂಲ್ವಲ್ಯಾಕೇ.... ಚನ್ನೀ ....ನೂಲ್ವಲ್ಯಾಕೇ.... ಚನ್ನೀ ....
   ರಾಟಿಲ್ಲೋ  ಜಾಣಾ.... ರಾಟಿಲ್ಲೋ ಜಾಣಾ.........ಎಂಬ ಪದ್ಯವನ್ನು ನಮ್ಮ ವಾರಿಗೆಯವರು ಯಾರೂ ಮರೆತಿಲ್ಲ.
   ಪ್ರತಿದಿನ ಕೊನೆಯ ಪೀರಿಯಡ್‌ನಲ್ಲಿ ಕನ್ನಡ ಪದ್ಯವನ್ನು  ಸಾಮೂಹಿಕವಾಗಿ ಇಡೀ ಸೆಕ್ಷನ್ನಿನವರೆಲ್ಲರೂ ಹೇಳಬೇಕು. ಶನಿವಾರ
  ಮಾರ‌್ನಿಂಗ್ ಸ್ಕೂಲ್. ಮೊದಲ ಪೀರಿಯಡ್ ಕನ್ನಡ. ಆಗ ಯಾರಿಗೆ ಎಬ್ಬಿಸಿ ಕೇಳುತ್ತಾರೋ ಅವರು ಪದ್ಯ ಹೇಳಬೇಕು.. ಇಲ್ಲದಿದ್ದರೆ ಗಂಟೆ ಗಟ್ಟಲೆ ಕಿವಿ ಹಿಡಿದು ಬಗ್ಗುವ, ಕಿವಿಗೆ ಹರಳು (ಸಣ್ಣ ಕಲ್ಲು ಚೂರು) ಇಟ್ಟು ಮೇಲೆಕ್ಕೆ ಎತ್ತುವ, ಬೆತ್ತದ ಬಿಸಿ ಬಿಸಿ ಏಟು ತಿನ್ನುವುದಕ್ಕೆ ಸಿದ್ಧರಾಗಬೇಕು.

  ಘಟನೆ: 2
  ಅಂದು ನನ್ನ ಗೆಳೆಯ ಪಾಳೇಗಾರ್‌ಪ್ರಸನ್ನ ಬೆಳ್ಳಂಬೆಳಗ್ಗೆಯೇ ಹೊದೆ ತಿಂದಿದ್ದ. ನಮ್ಮ ದೈಹಿಕ ಶಿಕ್ಷಕರೂ ಆಗಾಗ ಕನ್ನಡ ಪದ್ಯ ಮಾಡುತ್ತಿದ್ದ ನಿಜಲಿಂಗಪ್ಪ ಮೇಷ್ಟ್ರರಿಂದ ಗೂಸಾ ಬಿದ್ದಿದ್ದವು. ಅದಕ್ಕೆ ನಿದರ್ಶನದಂತೆ ನಡೆಯಿತು.
  ತಿಂದ ಹೊಡೆತದ ಬಗ್ಗೆ ಮನೆಯಲ್ಲಿ ಹೋಗಿ ಹೇಳಿದರೆ ಅಲ್ಲಿ ಮತ್ತೊಂದು ಗೂಸಾ ಬೀಳುತ್ತಿತ್ತು. ಹಾಗಾಗಿ ಸದ್ದಿಲ್ಲದೇ ಸೈಲೆಂಟಾಗಿರೋದೇ ಸೂತ್ರ. ದಾರಿಯಲ್ಲಿ ಅಪ್ಪ, ಅಮ್ಮನಿಗೇನಾದರೂ ಮೇಷ್ಟ್ರು ಸಿಕ್ಕಾಗ ನಮ್ಮ ಹುಡುಗ ಹೆಂಗ್ ಓದುತ್ತಾನೆ ಎಂಬ ಪ್ರಶ್ನೆ  ಕೇಳಿದಾಗ  ನಮ್ಮ ಹಿಸ್ಟರಿ ಗೊತ್ತಾಗುತ್ತಿತ್ತು.
  ಮೇಷ್ಟ್ರೇ.... ಚನ್ನಾಗಿ ಹೊಡೆಯಿರಿ ಎಂಬಲ್ಲಿಗೆ ಸಂಭಾಷಣೆ ಮುಕ್ತಾಯವಾಗಿತ್ತು. ಏಯ್... ನಿನ್ನೆ  ನಿಮ್ಮಪ್ಪ ಸಿಕ್ಕಿದ್ದ ಕಣೋ...ಚನ್ನಾಗಿ ಚಚ್ಚು ಅಂತಾ ಹೇಳಿದ್ದಾರೆ. ದನಾ ಕಾಯೋನೇ... ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲ.. ಮಷ್ಕೀರಿ ಮಾಡ್ತೀಯಾ.. ಎಂಬ ಮಂಗಳಾರತಿಯೊಂದಿಗೆ ಇನ್ನಷ್ಟು ಬೋನಸ್ ಹೊಡೆತ.
  ಹೀಂಗೆ ಶಿಕ್ಷೆಯಡಿಯಲ್ಲೇ ಬೆಳೆದ ನಮ್ಮ ಶಿಕ್ಷಣದಕ್ಕೂ, ಇಂದಿನ ಶಿಕ್ಷಾ ರಹಿತ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವನ್ನೂ ಗುರುತಿಸಬಹುದು.
 
  ಮೇಷ್ಟ್ರು ಜತೆಯಲ್ಲಿ ನಾನು.
  ನಾನಾಗ ಹತ್ತನೇ ತರಗತಿ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಶೆಟ್ಟಿಹಳ್ಳಿಯ ಶ್ರೀ ವೀರಾಂಜನೇಯ ಪ್ರೌಢಶಾಲೆಯಲ್ಲಿ ಅಧ್ಯಯನ. ಮಲ್ಲಾಡಿಹಳ್ಳಿ  ಅನಾಥ ಸೇವಾಶ್ರಮದ ಸ್ಕೂಲು ಇದು. ಶಿಸ್ತು, ಶ್ರದ್ಧೆ, ನೀತಿ ನಿಯಮಗಳು ಚಾಚೂ ತಪ್ಪದೇ ಪಾಲಿಸಲೇ ಬೇಕಿತ್ತು. ಆಗ ಅಲ್ಲಿ  ಪರಿಸರವೇ ಉಸಿರು.  ಗಿಡಗಳ ಬೆಳಸಿ, ಮರಗಳ ಉಳಿಸಿ  ಎನ್ನುತ್ತಿದ್ದ ಶ್ರೀಕಂಠಪ್ಪ ಮೇಷ್ಟ್ರು, ಆರ್.ಬಿ.ಹೆಚ್ ಎಂದೆ ಫೇಮಸ್ಸಾಗಿದ್ದ ಹಂಪಣ್ಣ ಮೇಷ್ಟ್ರು, ರಾಷ್ಟ್ರ ಭಾಷೆ ಹಿಂದಿ ಬೋಧಿಸುತ್ತಿದ್ದ ಲಮಾಣಿ. ಸರಿಯಾದ ಸಮಯಕ್ಕೆ ಬೆಲ್ ಹೊಡೆದು ನಮ್ಮನ್ನು ಕೊಠಡಿಗೆ  ಕಳಿಸುತ್ತಿದ್ದ ಜಯಣ್ಣ ಎಲ್ಲರ ಜತೆಗೆ ನಾನು  ಕೂಡಾ ಜೊತೆಯಲ್ಲಿದ್ದೆ.
  ನಿತ್ಯ ಅಡುಗೆ ಮಾಡುವುದು,  ಪಾತ್ರೆ ತೊಳೆಯುವುದು ಹೀಗೆ ಎಲ್ಲವೂ ನಡೆಯುತ್ತಿದ್ದ ಕಾಲ ಅದು. ಆದರೇ ಇಂದು ಶಿಕ್ಷಕರು ಅಂದ್ರೆ  ಶಿಕ್ಷೆ ಅನುಭವಿಸುವರು ಎನ್ನುವಂತಾಗಿದೆ.
  ಮೇಷ್ಟ್ರುಗಳು ಮಾತಾಡಂಗಿಲ್ಲ. ಪಾಲಕರು ಹರಿಹಾಯುತ್ತಾರೆ. ಟಿವಿಯವರು ಕಾದಿದ್ದು ಮರ್ಯಾದೆ ಹರಾಜು ಹಾಕುತ್ತಾರೆ. ಅದೇನೆ ಇರಲಿ ನಾವೂ ನಮ್ಮ ಮೇಷ್ಟ್ರುಗಳ ಬಗ್ಗೆ  ಗೌರವದಿಂದಿರೋಣ. ಮಕ್ಕಳನ್ನು ಆದರ್ಶರನ್ನಾಗಿಸುವವರನ್ನು  ಆದರ್ಶ ವ್ಯಕ್ತಿಗಳಂತೆ ಪೂಜಿಸೋಣ.
 
  ಇಂದು ನಾನು ಮೇಷ್ಟ್ರಾಗಿದ್ದಾಗ ಇವುಗಳನ್ನೆಲ್ಲಾ ಪ್ರಯೋಗಿಸಲಾಗದ ನಿಸ್ಸಾಯಕತೆಯ ಭಾವ. ದಂಡಿಸುವ ಹಕ್ಕಿದ್ದರೂ ಪ್ರಯೋಗಿಸುವ ಹಕ್ಕಿರಲಿಲ್ಲ ಎಂಬ ಭಾವ. ದಾರಿ ತಪ್ಪುವ ಮಕ್ಕಳಿಗೆ ದಾರಿದೀಪವಾಗಬೇಕಾದರೂ ಮೌನವಾಗಿರಬೇಕಾದ ಅನಿವಾರ್ಯ.
 
  (((ನನ್ನ ಗೆಳೆಯ ಶಿವರಾಜ್‌ನ ಅನುಭವ)))
   ಒಂದ ರಿಂದ  ನಾಲ್ಕನೇ ತರಗತಿ ಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ  ನಾನು ತಂದೆಯವರ ವರ್ಗಾವಣೆ ಹಿನ್ನೆಲೆಯಲ್ಲಿ ಕಾನ್ವೆಂಟ್ ಶಾಲೆಗೆ ಸೇರುವುದು ಅನಿವಾರ್ಯವಾಯಿತು. ಸಮವಸ್ತ್ರದ ಬಗ್ಗೆ ತಿಳಿಯದಿದ್ದ ನನಗೆ ಇಲ್ಲಿನ ಟೈ- ಬೆಲ್ಟ್, ಶೂ ಬಹಳವೇ ಕಿರಿಕಿರಿಯುಂಟು ಮಾಡುತ್ತಿತ್ತು. ಇದು ಶಿಸ್ತು ಅಥವಾ ಶಿಕ್ಷೆಯೋ ಎಂಬುದು  ಈಗಲೂ ಗೊಂದಲ.
   10ನೇತರಗತಿಗೆ ಬರುತ್ತಿದ್ದಂತೆ ಪುಂಡಾಟಿಕೆ ಮೇರೆ ಮೀರಿತ್ತು. ಸಮವಸ್ತ್ರ ಧರಿಸುವುದು ಅವಮಾನವೇನೋ ಎಂಬತ್ತಾಗಿತ್ತು.  ಔಟ ಷರ್ಟ್ ಮಾಡಿ ಮೇಷ್ಟ್ರು ಕೈ ಯಲ್ಲಿ ಏಟು ತಿನ್ನುವುದು ಪ್ರೇಸ್ಟೀಜ್ ಎನಿಸುತ್ತಿತ್ತು. ಶರ್ಟ್ ಒಂದು ಗುಂಡಿಯನ್ನು ಬಿಚ್ಚಿ ಓಡಾಡಿದರೇ ಅದೇ ಏನೊ ಸ್ಕೋಪ್, ಟೈ ಧರಿಸಿ ಶಾಲಾ ಕೊಠಡಿಗೆ  ಹೋಗುತ್ತಿದ್ದಂತೆ ಅದನ್ನು ತೆಗೆದು ಜೇಬಿಗಿಳಿಸುತ್ತಿದ್ದೆ( ಪ್ರಾರ್ಥನೆಯಲ್ಲಿನ ಟೈ  ಕಟ್ಟದಿದ್ದರೇ ಮನೆಗೆ ಓಡಿಸುತ್ತಿದ್ದರು)
  ಒಂದು ಇಂಗ್ಲೀಷ್ ಮೇಷ್ಟ್ರು  ನನ್ನ ಅಂಗಿ ಒಂದು ಗುಂಡಿಯನ್ನು ಬಿಚ್ಚಿದ್ದನ್ನು ಅಚಾನಕ್ ಗಮನಿಸಿ ಎಲ್ಲಿ ಟೈ ಎಂದರು. ಅದಕ್ಕೆ ನಾನೇನು ಸಬೂಬು ಹೇಳಲು ಪ್ರಯತ್ನಿಸುತ್ತಿದ್ದಂತೆ ನನ್ನ ಪ್ರಾಣ( ತಿನ್ನುವ) ಸ್ನೇಹಿತ ಟೈ ಬಿಚ್ಚಿ ಪ್ಯಾಂಟ್ ಜೇಬಿನಲ್ಲಿಟ್ಟು ಕೊಂಡಿದ್ದಾನೆ ಎಂದು ಸತ್ಯ ಹೇಳಿಬಿಟ್ಟ. ಅದಕ್ಕೆ ಮೇಷ್ಟ್ರು   ನುಡಿದದ್ದು ಹೀಗೆ....
  ‘‘ ಇಂಗ್ಲೀಷ್ ಕಲಿತರೇ ಭವಿಷ್ಯದಲ್ಲಿ ನೀನು ಅಂಗಿ ಗುಂಡಿ ಹಾಕಿಕೊಂಡು ಜಮ್ ಅಂತಾ ಉತ್ತಮ ಹುದ್ದೆಗೇರಿ ಓಡಾಡುತ್ತಿಯಾ.. ಇಲ್ಲವಾದರೇ ಕೊನೆಯವರೆಗೆಊ  ಬೀದಿ ತಿರುತ್ತೀಯಾ...
   ಇಂದಿಗೂ ನಾನು ಅಂಗಿಯ ಒಂದು ಬಟನ್ ಹಾಕೋಲ್ಲ.
  - ಶಿವರಾಜ್.