Sunday, February 2, 2014

ರಾಮಗಿರಿ ನಮ್ ಮೇಷ್ಟ್ರು. Ramagiri Nam Teacher_ Malathesh Urs


  ನಮ್ ಮೇಷ್ಟ್ರು.                                                                      (12.12.2012)                                                                    
  - ಮಾಲತೇಶ್ ಅರಸ್ 
 
   @ ಬೆತ್ತದ ಏಟಿನ ರುಚಿ : ಫಸ್ಟ್‌ಕ್ಲಾಸ್‌ನಲ್ಲಿ ಪಾಸ್
   @ ತಂಗಟೆ ಬರಲು ಏಟು : ಮನದಲ್ಲೇ ಉಳಿದ ಪೂರ್ಣ ಪದ್ಯ
   @ ಗೋಲಿ, ಲಗೋರಿ, ಚಿನ್ನಿಕೋಲು, ಮರಕೋತಿ ಆಟಗಳೆಲ್ಲಾ ಕಣ್ಮರೆ
   @ 20 ವರ್ಷ ಹಿಂದಿನ ನೆನಪಿನ ಬುತ್ತಿ.
   @ ಟಿವಿಯವರು ಕಾದಿದ್ದು ಮರ್ಯಾದೆ ಹರಾಜು  ಹಾಕ್ತಾರೆ


  ಮೇಷ್ಟ್ರು... 
  ಎಂಬ ಪದವೇ ಅದ್ಬುತ, ಅವರ ಪಾಠವೇ ಅಮೃತ, ಅವರ ಒಂದೊಂದು ಮಾತುಗಳೂ ನಮಗೆ ಮಾರ್ಗದರ್ಶಿ. ಅವರ ಒಂದೊಂದು ಹೊಡೆತಗಳು ನಮಗೆ ದಾರಿದೀಪ. ಅವರ ಒಂದೊಂದು ಮನೆ ಪಾಠವೂ ನಮಗೆ ಜೀವನದ ಪಾಠವಾಗಿದ್ದವು. ಅವರ ಒಂದೊಂದು ಶನಿವಾರವೂ ನಮಗೆ ದೈಹಿಕ ಶಕ್ತಿ ತರುತ್ತಿದ್ದವು.
  ಆದರೇ ಇಂದು ನಾವು ಕಳೆದು ಹೋಗುತ್ತಿದ್ದೇವೆ. ಅಂದಿನ ಮೇಷ್ಟ್ರುಗಳಂತ ಮೇಷ್ಟ್ರುಗಳೇ ಇಲ್ಲದೇ ಪರಿತಪಿಸುತ್ತಿದ್ದೇವೆ. ಅವರ ಹೊಡೆತಗಳೆಂಬ ಶಿಕ್ಷೆ ಇಲ್ಲದೆ ಇಂದಿನ ಮಕ್ಕಳು ದಾರಿ ತಪ್ಪುತ್ತಿದ್ದಾರೆ.
  ಸುಮಾರು 20 ವರ್ಷಗಳ ಹಳೆಯ ನೆನಪುಗಳು ಹಾಗೂ  20 ವರ್ಷಗಳ ನಂತರದ ಮೇಷ್ಟ್ರುಗಳ ಸ್ಥಿತಿ ಇಲ್ಲಿದೆ.
  ‘‘ನಾನಾಗ 7 ನೇ ತರಗತಿ, ಚಿತ್ರದುರ್ಗ ಜಿಲ್ಲೆ ರಾಮಗಿರಿಯ ಸರ್ಕಾರಿ ಮಾದರಿ ಪಾಠಶಾಲೆಯಲ್ಲಿ  ಓದುವಾಗ ಮೇಷ್ಟ್ರುಗಳ ಪವರ್  ನೋಡಿದ ಹೊತ್ತು. ನಿಜಕ್ಕೂ ತಪ್ಪು ಮಾಡಿದ್ರೆ ಆಗುತ್ತಿದ್ದ ಶಿಕ್ಷೆಗಳ ಬಗ್ಗೆ ನಾನು ನೋಡಿದ ಕ್ಷಣ, ನಾನೇ ಅನುಭವಿಸಿದ ಸಂಭ್ರಮ.
  ನಾನು, ನಮ್ಮ ಗೆಳೆಯರ ಬಳಗದ ಪಿ. ಕುಮಾರ,  ಅಂಗಡಿ ಷಡಾಕ್ಷರಪ್ಪರ ರೇಣುಕ, ಯಾಲಕ್ಕಿ ವೈ.ಆರ್. ಗಿರೀಶ, ಪಕಾಲಿ ಸಂತೋಷ, ಶೆಟ್ಟಿ ಎಂದೇ ಬಿರುದಾಂಕಿತ ಪಾಳೇಗಾರ್ ಪ್ರಸನ್ನ, ನಾಯಕರಹಟ್ಟಿ ಓಂಕಾರ, ಮಂತ್ರಪ್ಳರ ಗಿರೀಶ, ಮೇಲಗಿರಿಹಟ್ಟಿ ಪ್ರಸನ್ನ, ಚಿನಗಾಳೆ ಚಿದಾನಂದ, ಆಚಾರಹಟ್ಟಿಯ ಕೆ.ಎನ್.ಶಿವಾನಂದಸ್ವಾಮಿ, ಎ.ಕೆ.ಹಟ್ಟಿ ಬಸವರಾಜ್ ಮತ್ತು ಗೆಳೆಯರಿಂದ ಸೆಕ್ರೇಟರಿ ಮಗ ಅಂತಾನೆ ಹಾಗೂ ಮೇಷ್ಟ್ರುಗಳಿಂದ ಚೆಲುವ ಅಂತ ಕರೆಸಿಕೊಳ್ಳುತ್ತಿದ್ದ ಮಾಲತೇಶ್ ಅರಸು, ಹೀಗೆ ನಮ್ಮದೇ ಆದ ತಂಡವೂ ಇತ್ತು. ಅಲ್ಲಿ ಸ್ನೇಹ ಹೊರತು ಜಾತಿಯ ಸುಳಿವಿರಲಿಲ್ಲ. ಇದರಲ್ಲಿ ಆಡುವವರು, ಓದುವವರು,  ಓದದೇ ಆಡುವವರು, ಆಡುತ್ತಲೇ ಓದುವವರು ಇದ್ದರು.  
   ನಾವಂದು  ಪ್ರೈಮರಿ ಸ್ಕೂಲು. ಮಿಡ್ಲಿಸ್ಕೂಲು,  ಹೈಸ್ಕೂಲುಗಳಲ್ಲಿ ಮೇಷ್ಟ್ರುಗಳ ಕೈಲಿ ಬಿಸಿ ಬಿಸಿ ಬೆತ್ತದೇಟು ತಿಂದದಕ್ಕೊ ಏನೋ.. ಇಂದು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡಿದ್ದೇವೆ ಎನ್ನುತ್ತಾರೆ ನನ್ನೊಡಲ ಗೆಳೆಯರು.
  ಹೌದು.. ಅಂದೊಂದಿತ್ತು ಕಾಲ. ಅದು ಮೇಷ್ಟ್ರುಗಳ ಕಾಲ ನಮ್ಮನ್ನು ತಿದ್ದುತ್ತಿದ್ದ ಕಾಲ. ಇಂದು ಬದಲಾಗಿದೆ, ಮೇಷ್ಟ್ರುಗಳು ಪಾಠ ಮಾಡುವುದನ್ನು  ಹೊರತು ಪಡಿಸಿ ಬೇರೇನು ಮಾಡುವಂತಿಲ್ಲ.
  ಅಂತಹ ಬಿಸಿ ಬಿಸಿ ಹೊಡೆತಗಳ ಅನುಭವ ಇಲ್ಲಿದೆ. ಎಲ್ಲವೂ ಇಂದಿಗೂ ಬಿಸಿ ಬಿಸಿ ಯಾಗಿಯೇ ಇವೆ.
 
  ಘಟನೆ 1: 
  ಕನ್ನಡದ ಕಟ್ಟಾಳು, ಕನ್ನಡ ಪಾಠವನ್ನು ರಸಗುಲ್ಲದಂತೆ ಬಾಯಿಗಿಳಿಸುವ ಪ್ರತಿಭೆ, ನೋಡಿದರೇ ಅಪ್ಪಿಕೊಳ್ಳಬೇಕೆನ್ನುವಷ್ಟು ಮುದ್ದಾದ ಮೊಗ, ಸದಾ ಹಸನ್ಮುಖಿ, ಸದಾ ಚಿಂತನೆ, ಸದಾ ಕಾಲವೂ ಮಕ್ಕಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಚಾಟಿ ಏಟಿನ ಮೇಷ್ಟ್ರು.. ಹೌದು ಇವರೇ ನಮ್ಮ ಪ್ರೀತಿಯ ಮೇಷ್ಟ್ರು ರಂಗಾಪುರದ ರಾಜಪ್ಪನವರು.
   ಇವರ ಕೈ ಹೊಡೆತ ತಿಂದ ಶಿಷ್ಯರೆಲ್ಲಾ ಇಂದು ಅವರನ್ನು ಸ್ಮರಿಸುತ್ತಿದ್ದಾರೆ. ಶಿಕ್ಷೆ ಅಂದ್ರೆ ಅವರದ್ದು. ಒಂದೇ ಮಾತು, ಒಂದೇ ಹೊಡೆತ ವಾರ್ಷಿಕೋತ್ಸವವಾದರೂ ಮರೆಯುವ ಹಾಗಿಲ್ಲ.
  ಅಂದು ಶನಿವಾರ, ಹೇಳಿದ ಪದ್ಯವನ್ನು ಗಟ್ ಮಾಡಿಕೊಂಡು (ಕಂಠಪಾಠ) ಬರದಿದ್ದರೇ, ಸ್ಕೂಲಲ್ಲಿ ಎಲ್ಲರ ಎದುರು ನಿಂತು ಹೇಳದಿದ್ದರೇ ಬೀಳುತ್ತಿದ್ದ ಹೊಡೆತಗಳು ಅಷ್ಟಿಷ್ಟಲ್ಲ. ಅವುಗಳನ್ನು ನೆನಸಿಕೊಂಡರೇ ಇಂದಿಗೂ  ಮೈ ಚಳಿ ಓಡಿಹೋಗುತ್ತದೆ.
 
  ಛಡಿ ಛಂ ಛಂ... ವಿದ್ಯೆ ಘಂ ಘಂ ಘಂ ..... ಎಂಬ ಗಾದೆಯಂತೆ  ಅಂದು ನಾಲ್ಕೇಟು ಹಾಕಿ ಕಲಿಸಿ ಕೊಟ್ಟ  ವಿದ್ಯೆಯೇ ಇಂದಿಗೂ ಹಸಿರು. ಯಾವುದೇ ಸಂದರ್ಭದಲ್ಲಿ ಕೇಳಿದರೂ ನೂಲ್ವಲ್ಯಾಕೇ.... ಚನ್ನೀ ....ನೂಲ್ವಲ್ಯಾಕೇ.... ಚನ್ನೀ ....
   ರಾಟಿಲ್ಲೋ  ಜಾಣಾ.... ರಾಟಿಲ್ಲೋ ಜಾಣಾ.........ಎಂಬ ಪದ್ಯವನ್ನು ನಮ್ಮ ವಾರಿಗೆಯವರು ಯಾರೂ ಮರೆತಿಲ್ಲ.
   ಪ್ರತಿದಿನ ಕೊನೆಯ ಪೀರಿಯಡ್‌ನಲ್ಲಿ ಕನ್ನಡ ಪದ್ಯವನ್ನು  ಸಾಮೂಹಿಕವಾಗಿ ಇಡೀ ಸೆಕ್ಷನ್ನಿನವರೆಲ್ಲರೂ ಹೇಳಬೇಕು. ಶನಿವಾರ
  ಮಾರ‌್ನಿಂಗ್ ಸ್ಕೂಲ್. ಮೊದಲ ಪೀರಿಯಡ್ ಕನ್ನಡ. ಆಗ ಯಾರಿಗೆ ಎಬ್ಬಿಸಿ ಕೇಳುತ್ತಾರೋ ಅವರು ಪದ್ಯ ಹೇಳಬೇಕು.. ಇಲ್ಲದಿದ್ದರೆ ಗಂಟೆ ಗಟ್ಟಲೆ ಕಿವಿ ಹಿಡಿದು ಬಗ್ಗುವ, ಕಿವಿಗೆ ಹರಳು (ಸಣ್ಣ ಕಲ್ಲು ಚೂರು) ಇಟ್ಟು ಮೇಲೆಕ್ಕೆ ಎತ್ತುವ, ಬೆತ್ತದ ಬಿಸಿ ಬಿಸಿ ಏಟು ತಿನ್ನುವುದಕ್ಕೆ ಸಿದ್ಧರಾಗಬೇಕು.

  ಘಟನೆ: 2
  ಅಂದು ನನ್ನ ಗೆಳೆಯ ಪಾಳೇಗಾರ್‌ಪ್ರಸನ್ನ ಬೆಳ್ಳಂಬೆಳಗ್ಗೆಯೇ ಹೊದೆ ತಿಂದಿದ್ದ. ನಮ್ಮ ದೈಹಿಕ ಶಿಕ್ಷಕರೂ ಆಗಾಗ ಕನ್ನಡ ಪದ್ಯ ಮಾಡುತ್ತಿದ್ದ ನಿಜಲಿಂಗಪ್ಪ ಮೇಷ್ಟ್ರರಿಂದ ಗೂಸಾ ಬಿದ್ದಿದ್ದವು. ಅದಕ್ಕೆ ನಿದರ್ಶನದಂತೆ ನಡೆಯಿತು.
  ತಿಂದ ಹೊಡೆತದ ಬಗ್ಗೆ ಮನೆಯಲ್ಲಿ ಹೋಗಿ ಹೇಳಿದರೆ ಅಲ್ಲಿ ಮತ್ತೊಂದು ಗೂಸಾ ಬೀಳುತ್ತಿತ್ತು. ಹಾಗಾಗಿ ಸದ್ದಿಲ್ಲದೇ ಸೈಲೆಂಟಾಗಿರೋದೇ ಸೂತ್ರ. ದಾರಿಯಲ್ಲಿ ಅಪ್ಪ, ಅಮ್ಮನಿಗೇನಾದರೂ ಮೇಷ್ಟ್ರು ಸಿಕ್ಕಾಗ ನಮ್ಮ ಹುಡುಗ ಹೆಂಗ್ ಓದುತ್ತಾನೆ ಎಂಬ ಪ್ರಶ್ನೆ  ಕೇಳಿದಾಗ  ನಮ್ಮ ಹಿಸ್ಟರಿ ಗೊತ್ತಾಗುತ್ತಿತ್ತು.
  ಮೇಷ್ಟ್ರೇ.... ಚನ್ನಾಗಿ ಹೊಡೆಯಿರಿ ಎಂಬಲ್ಲಿಗೆ ಸಂಭಾಷಣೆ ಮುಕ್ತಾಯವಾಗಿತ್ತು. ಏಯ್... ನಿನ್ನೆ  ನಿಮ್ಮಪ್ಪ ಸಿಕ್ಕಿದ್ದ ಕಣೋ...ಚನ್ನಾಗಿ ಚಚ್ಚು ಅಂತಾ ಹೇಳಿದ್ದಾರೆ. ದನಾ ಕಾಯೋನೇ... ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲ.. ಮಷ್ಕೀರಿ ಮಾಡ್ತೀಯಾ.. ಎಂಬ ಮಂಗಳಾರತಿಯೊಂದಿಗೆ ಇನ್ನಷ್ಟು ಬೋನಸ್ ಹೊಡೆತ.
  ಹೀಂಗೆ ಶಿಕ್ಷೆಯಡಿಯಲ್ಲೇ ಬೆಳೆದ ನಮ್ಮ ಶಿಕ್ಷಣದಕ್ಕೂ, ಇಂದಿನ ಶಿಕ್ಷಾ ರಹಿತ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವನ್ನೂ ಗುರುತಿಸಬಹುದು.
 
  ಮೇಷ್ಟ್ರು ಜತೆಯಲ್ಲಿ ನಾನು.
  ನಾನಾಗ ಹತ್ತನೇ ತರಗತಿ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಶೆಟ್ಟಿಹಳ್ಳಿಯ ಶ್ರೀ ವೀರಾಂಜನೇಯ ಪ್ರೌಢಶಾಲೆಯಲ್ಲಿ ಅಧ್ಯಯನ. ಮಲ್ಲಾಡಿಹಳ್ಳಿ  ಅನಾಥ ಸೇವಾಶ್ರಮದ ಸ್ಕೂಲು ಇದು. ಶಿಸ್ತು, ಶ್ರದ್ಧೆ, ನೀತಿ ನಿಯಮಗಳು ಚಾಚೂ ತಪ್ಪದೇ ಪಾಲಿಸಲೇ ಬೇಕಿತ್ತು. ಆಗ ಅಲ್ಲಿ  ಪರಿಸರವೇ ಉಸಿರು.  ಗಿಡಗಳ ಬೆಳಸಿ, ಮರಗಳ ಉಳಿಸಿ  ಎನ್ನುತ್ತಿದ್ದ ಶ್ರೀಕಂಠಪ್ಪ ಮೇಷ್ಟ್ರು, ಆರ್.ಬಿ.ಹೆಚ್ ಎಂದೆ ಫೇಮಸ್ಸಾಗಿದ್ದ ಹಂಪಣ್ಣ ಮೇಷ್ಟ್ರು, ರಾಷ್ಟ್ರ ಭಾಷೆ ಹಿಂದಿ ಬೋಧಿಸುತ್ತಿದ್ದ ಲಮಾಣಿ. ಸರಿಯಾದ ಸಮಯಕ್ಕೆ ಬೆಲ್ ಹೊಡೆದು ನಮ್ಮನ್ನು ಕೊಠಡಿಗೆ  ಕಳಿಸುತ್ತಿದ್ದ ಜಯಣ್ಣ ಎಲ್ಲರ ಜತೆಗೆ ನಾನು  ಕೂಡಾ ಜೊತೆಯಲ್ಲಿದ್ದೆ.
  ನಿತ್ಯ ಅಡುಗೆ ಮಾಡುವುದು,  ಪಾತ್ರೆ ತೊಳೆಯುವುದು ಹೀಗೆ ಎಲ್ಲವೂ ನಡೆಯುತ್ತಿದ್ದ ಕಾಲ ಅದು. ಆದರೇ ಇಂದು ಶಿಕ್ಷಕರು ಅಂದ್ರೆ  ಶಿಕ್ಷೆ ಅನುಭವಿಸುವರು ಎನ್ನುವಂತಾಗಿದೆ.
  ಮೇಷ್ಟ್ರುಗಳು ಮಾತಾಡಂಗಿಲ್ಲ. ಪಾಲಕರು ಹರಿಹಾಯುತ್ತಾರೆ. ಟಿವಿಯವರು ಕಾದಿದ್ದು ಮರ್ಯಾದೆ ಹರಾಜು ಹಾಕುತ್ತಾರೆ. ಅದೇನೆ ಇರಲಿ ನಾವೂ ನಮ್ಮ ಮೇಷ್ಟ್ರುಗಳ ಬಗ್ಗೆ  ಗೌರವದಿಂದಿರೋಣ. ಮಕ್ಕಳನ್ನು ಆದರ್ಶರನ್ನಾಗಿಸುವವರನ್ನು  ಆದರ್ಶ ವ್ಯಕ್ತಿಗಳಂತೆ ಪೂಜಿಸೋಣ.
 
  ಇಂದು ನಾನು ಮೇಷ್ಟ್ರಾಗಿದ್ದಾಗ ಇವುಗಳನ್ನೆಲ್ಲಾ ಪ್ರಯೋಗಿಸಲಾಗದ ನಿಸ್ಸಾಯಕತೆಯ ಭಾವ. ದಂಡಿಸುವ ಹಕ್ಕಿದ್ದರೂ ಪ್ರಯೋಗಿಸುವ ಹಕ್ಕಿರಲಿಲ್ಲ ಎಂಬ ಭಾವ. ದಾರಿ ತಪ್ಪುವ ಮಕ್ಕಳಿಗೆ ದಾರಿದೀಪವಾಗಬೇಕಾದರೂ ಮೌನವಾಗಿರಬೇಕಾದ ಅನಿವಾರ್ಯ.
 
  (((ನನ್ನ ಗೆಳೆಯ ಶಿವರಾಜ್‌ನ ಅನುಭವ)))
   ಒಂದ ರಿಂದ  ನಾಲ್ಕನೇ ತರಗತಿ ಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ  ನಾನು ತಂದೆಯವರ ವರ್ಗಾವಣೆ ಹಿನ್ನೆಲೆಯಲ್ಲಿ ಕಾನ್ವೆಂಟ್ ಶಾಲೆಗೆ ಸೇರುವುದು ಅನಿವಾರ್ಯವಾಯಿತು. ಸಮವಸ್ತ್ರದ ಬಗ್ಗೆ ತಿಳಿಯದಿದ್ದ ನನಗೆ ಇಲ್ಲಿನ ಟೈ- ಬೆಲ್ಟ್, ಶೂ ಬಹಳವೇ ಕಿರಿಕಿರಿಯುಂಟು ಮಾಡುತ್ತಿತ್ತು. ಇದು ಶಿಸ್ತು ಅಥವಾ ಶಿಕ್ಷೆಯೋ ಎಂಬುದು  ಈಗಲೂ ಗೊಂದಲ.
   10ನೇತರಗತಿಗೆ ಬರುತ್ತಿದ್ದಂತೆ ಪುಂಡಾಟಿಕೆ ಮೇರೆ ಮೀರಿತ್ತು. ಸಮವಸ್ತ್ರ ಧರಿಸುವುದು ಅವಮಾನವೇನೋ ಎಂಬತ್ತಾಗಿತ್ತು.  ಔಟ ಷರ್ಟ್ ಮಾಡಿ ಮೇಷ್ಟ್ರು ಕೈ ಯಲ್ಲಿ ಏಟು ತಿನ್ನುವುದು ಪ್ರೇಸ್ಟೀಜ್ ಎನಿಸುತ್ತಿತ್ತು. ಶರ್ಟ್ ಒಂದು ಗುಂಡಿಯನ್ನು ಬಿಚ್ಚಿ ಓಡಾಡಿದರೇ ಅದೇ ಏನೊ ಸ್ಕೋಪ್, ಟೈ ಧರಿಸಿ ಶಾಲಾ ಕೊಠಡಿಗೆ  ಹೋಗುತ್ತಿದ್ದಂತೆ ಅದನ್ನು ತೆಗೆದು ಜೇಬಿಗಿಳಿಸುತ್ತಿದ್ದೆ( ಪ್ರಾರ್ಥನೆಯಲ್ಲಿನ ಟೈ  ಕಟ್ಟದಿದ್ದರೇ ಮನೆಗೆ ಓಡಿಸುತ್ತಿದ್ದರು)
  ಒಂದು ಇಂಗ್ಲೀಷ್ ಮೇಷ್ಟ್ರು  ನನ್ನ ಅಂಗಿ ಒಂದು ಗುಂಡಿಯನ್ನು ಬಿಚ್ಚಿದ್ದನ್ನು ಅಚಾನಕ್ ಗಮನಿಸಿ ಎಲ್ಲಿ ಟೈ ಎಂದರು. ಅದಕ್ಕೆ ನಾನೇನು ಸಬೂಬು ಹೇಳಲು ಪ್ರಯತ್ನಿಸುತ್ತಿದ್ದಂತೆ ನನ್ನ ಪ್ರಾಣ( ತಿನ್ನುವ) ಸ್ನೇಹಿತ ಟೈ ಬಿಚ್ಚಿ ಪ್ಯಾಂಟ್ ಜೇಬಿನಲ್ಲಿಟ್ಟು ಕೊಂಡಿದ್ದಾನೆ ಎಂದು ಸತ್ಯ ಹೇಳಿಬಿಟ್ಟ. ಅದಕ್ಕೆ ಮೇಷ್ಟ್ರು   ನುಡಿದದ್ದು ಹೀಗೆ....
  ‘‘ ಇಂಗ್ಲೀಷ್ ಕಲಿತರೇ ಭವಿಷ್ಯದಲ್ಲಿ ನೀನು ಅಂಗಿ ಗುಂಡಿ ಹಾಕಿಕೊಂಡು ಜಮ್ ಅಂತಾ ಉತ್ತಮ ಹುದ್ದೆಗೇರಿ ಓಡಾಡುತ್ತಿಯಾ.. ಇಲ್ಲವಾದರೇ ಕೊನೆಯವರೆಗೆಊ  ಬೀದಿ ತಿರುತ್ತೀಯಾ...
   ಇಂದಿಗೂ ನಾನು ಅಂಗಿಯ ಒಂದು ಬಟನ್ ಹಾಕೋಲ್ಲ.
  - ಶಿವರಾಜ್.
 

No comments:

Post a Comment