Friday, January 9, 2015

ಮಾರಮ್ಮ ದೇವತೆ ,ಕಳವಿಭಾಗಿ ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

ಮಾರಮ್ಮ ದೇವತೆ ,ಕಳವಿಭಾಗಿ   ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

ಕಳವಿಭಾಗಿ ಗ್ರಾಮದಲ್ಲಿ ನೆಲೆಸಿರುವ ಸ್ವಾಮಿಯ ಸನ್ನಿಧಿಯ ಪಕ್ಕದಲ್ಲಿ ಮಾರಮ್ಮ ದೇವತೆಯಾಗಿ ಪ್ರಸನ್ನ ದೇವತೆಯಾಗಿ ಕಂಗೊಳಿಸುವಳು. ಆದ್ದರಿಂದ ಸ್ವಾಮಿಯ ತಂಗಿಯನ್ನು ಪಕ್ಕದಲ್ಲೇ ಇರಿಸಿಕೊಂಡು ಆ ದೇವತೆಗೆ ಪ್ರತಿವರ್ಷದಲ್ಲಿ ಆ ದೇವತೆಯ ಸನ್ನಿಧಿಯಲ್ಲಿರುವ ಕೇಲುಗಳು(ರಾಕ್ಷಸ ರೂಪದಲ್ಲಿರುವವರು) ಹಾಗೂ ಕಾಳ-ಕರಾಳ ರೂಪದಲ್ಲಿರುವ ಭೂತವೇಷಗಳು ಪ್ರತಿವರ್ಷದಲ್ಲಿ ವೈಶಾಖ ಮಾಸದಲ್ಲಿ ಮಾರಮ್ಮ ದೇವತೆಗೆ ಸಿಹಿ ಪದಾರ್ಥದ ನೈವೇದ್ಯವನ್ನು ಮಾಡಿ ಆ ದೇವತೆಗೆ ಪೂಜೆಯನ್ನು ಮಾಡುವರು.
  ನಂತರ ವಿಜೃಂಭಣೆಯಿಂದ ಸೋಮಗಳನ್ನು ಮತ್ತು ಭೂತಪ್ಪಗಳನ್ನು ಪೂಜಿಸಿಕೊಂಡು ಊರಿನ ಹೊರಭಾಗದಲ್ಲಿರುವ ಒಂದು ಬೇವಿನ ಕಟ್ಟೆಯ ಸನ್ನಿಧಿಗೆ ಹೋಗಿ ಕೂರಿಸಿ ಅಲ್ಲಿ ಚಿಗಳಿ ತಂಬಿಟ್ಟು 101 ಎಡೆಯನ್ನು ಹಾಕಿಸಿಕೊಂಡು ಖಡ್ಗಾಯುಧಗಳಿಗೆ ಪೂಜಿಸಿಕೊಂಡು ಅಮ್ಮನವರನ್ನು ಸೋಮ ಮತ್ತು ಭೂತಪ್ಪಗಳನ್ನು ಕರೆದುಕೊಂಡು ಅಲ್ಲೆ ಸ್ವಲ್ಪ ದೂರದಲ್ಲಿ ಬಂದು ಸೋಮ-ಭೂತಪಗಳಿಗೆ ಹೊಳೆ ಪೂಜೆ ಮಾಡಿಸಿ ಮೇಕೆಮರಿಯನ್ನು ಆಹುತಿ ಕೊಡುವರು. ನಂತರ ಊರಿನ ಭಾಗದಲ್ಲಿ ಬಂದು ಕುರಿಮರಿಯನ್ನು ಆಹುತಿ ಕೊಟ್ಟು ಅಮ್ಮನವರನ್ನು ದೇವಾಲಯಕ್ಕೆ ಕರೆದುಕೊಂಡು ಬಂದು ಸ್ಥಾಪಿಸುವರು.
  ಊರಿನ ಬಾಗಿಲಲ್ಲಿ ಕರವುಗಲ್ಲಿನಲ್ಲಿ ಸೋಮಗಳನ್ನು ಇಟ್ಟು ಚಿಕ್ಕದಾದ ಬೇವಿನ ಸೊಪ್ಪಿನಿಂದ ಗುಡಿಸಲನ್ನು ಕಟ್ಟುವರು. ಆ ಗುಡಿಸಲಿನಲ್ಲಿ ಸೋಮಗಳನ್ನಿಟ್ಟು ಪುನಃ ಕೋಣವನ್ನು ಅಂದಿನ ರಾತ್ರಿ ಗ್ರಾಮದಲ್ಲೆ ಆದಿ ಜನಾಂಗದವರು ಹಿಡಿದುಕೊಂಡು ಪ್ರತಿಯೊಂದು ಮನೆಗೆ ಹೋಗಿ ರಾಗಿ ಹಇಟ್ಟು ಮುಂತಾದುವುಗಳನ್ನು ತೆಗೆದುಕೊಂಡು ಬೆಳಗಿನಜಾವ ಆ ಕೋಣವನ್ನು ಪ್ರಾಣಬಲಿ ಕೊಡುವರು. ನಂತರ ಆ ಕೋಣನ ಕಾಲನ್ನು ಕಡಿದು ಅದರ ಬಾಯಲ್ಲಿಟ್ಟು, ಆ ಕೋಣನ ತಲೆಯ ಮೇಲೆ ದೀಪ ಹಚ್ಚುವರು. ನಂತರ ಆ ದೇವತೆಯ ಹೆಸರಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಮೇಕೆ, ಕುರಿ, ಕೋಳಿಗಳನ್ನು ಆಹುತಿ ಕೊಡುವರು ಹಾಗು ಇಡೀ ಗ್ರಾಮದ ಹೆಣ್ಣುಮಕ್ಕಳಿಲ್ಲರೂ ಹರಕೆಯ ರೂಪದಲ್ಲಿ ಬೇವಿನ ಸೊಪ್ಪಿನಲ್ಲೇ ಸೀರೆಯಾಕಾರವಾಗಿ ಸೊಂಟಕ್ಕೆ ಬಿಗಿದು ತಲೆಯ ಮೇಲೆ ಆರತಿಯನ್ನು ಹೊತ್ತುಕೊಂಡು ಶ್ರೀ ದೇವಿಯ ಪ್ರದಕ್ಷಿಣೆಯನ್ನು ಹಾಕುವರು.
 ಇದು ಈ ಊರಿನ ಗ್ರಾಮದಲ್ಲಿರುವ ಜನಾಂಗದ ಕುಲದೇವತೆಯಾಗಿ, ಪ್ರಸನ್ನ ಮಾತೃಕೆಯಾಗಿ ಇರುವಂತಹ ಸೇವಾಕಾರ್ಯಗಳು ಪುನಃ ಇಲ್ಲಿಂದ ಹೋಗಿರುವ ಇದೇ ಹಿರಿಯೂರು ತಾಲ್ಲೂಕಿಗೆ ಸಂಬಂಧಪಟ್ಟ ಕಳವಿಭಾಗಿ ಊರಿಗೆ ಪೂರ್ವದಲ್ಲಿರುವ ಸಕ್ಕರದ ಮಾರಮ್ಮ ಮತ್ತು ಹೊಸಕೋಟೆಯಲ್ಲಿ ನೆಲೆಸಿರುವ ಅರಳಿಮಾರಮ್ಮ ಸಮೇತ ಸಮೇತ ಆ ಗ್ರಾಮದಲ್ಲಿ ಕಂಗೊಳಿಸುತ್ತಿದೆ ಈ ಮಾರಮ್ಮ.
  ಈ ಕುಲದೇವತೆಗಳಿಗೆ ಒಳಕಲ್ಲು ಗೋತ್ರದ ಹಿರೇ ಹೆಂಡತಿ ಮಕ್ಕಳಾದವರು ಸಕ್ಕರದ ಮಾರಮ್ಮನಿಗೆ ನಡೆದುಕೊಂಡು ಸೇವೆಗೆ ಪಾತ್ರರಾಗಿದ್ದಾರೆ. ಹೊಸಕೋಟೆಯ ಅರಳಿಮಾರಮ್ಮ ದೇವತೆಗೆ ಚಿಕ್ಕ ಹೆಂಡತಿಯ ಮಕ್ಕಳು ನಡೆದುಕೊಂಡು ಆ ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ ಹಾಗೂ ಆ ತಾಯಿಯ ಸೇವಾ ಕಾರ್ಯಗಳಿಗೂ ಈ ಸಮೂಹದವರು ಪಾಲ್ಗೊಂಡು ಆ ಮಹಾಲಕ್ಷ್ಮಿಯ ಸೇವೆಯನ್ನು ಮಾಡುವರು.
  ಈ ಮೂರು ದೇವತೆಗಳು ಶ್ರೀ ರಂಗನಾಥ ಸ್ವಾಮಿಯ ತಂಗಿಯರು. ಆದ್ದರಿಂದ ಯಾವುದೇ ಒಂದು ಸೇವಾಕಾರ್ಯದಲ್ಲಿ ಮಾರಮ್ಮ ದೇವತೆಯು ಶ್ರೀ ಸ್ವಾಮಿಯ ಜೊತೆಯಲ್ಲಿ ಹೋಗುವರು ಹಾಗು ಕಾಳ-ಕರಾಳ ಭೂತಪ್ಪಗಳು ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡು ಹೋಗುವರು.
  ಇದು ಆದಿಯಿಂದ ಬಂದಿರುವ ಇತಿಹಾಸದ ಚರಿತ್ರೆ ಹಾಗು ಪದ್ಧತಿಯಾಗಿದೆ.



No comments:

Post a Comment