Friday, January 9, 2015

ಶ್ರೀ ಮೈಲಾರಲಿಂಗೇಶ್ವರ ದೇವಾಲಯ, ಕಳವಿಭಾಗಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ_Kalavibhagi Mylaralingeswara



ಶ್ರೀ ಮೈಲಾರಲಿಂಗೇಶ್ವರ ದೇವಾಲಯ, 
ಕಳವಿಭಾಗಿ,   ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
                                                              
  ಶ್ರೀ ರಂಗನಾಥ ಸ್ವಾಮಿಯ ಮುಂಭಾಗ ಎಡಭಾಗದಲ್ಲಿರುವುದು ಮೈಲಾರಲಿಂಗೇಶ್ವರ ಸ್ವಾಮಿ ದೇವರು( ಭೈರವೇಶ್ವರ ಎಂದು ತಪ್ಪಾಗಿ ನಮೂದಾಗಿದೆ). ಮೈಲಾರಲಿಂಗೇಶ್ವರ ದೇವಾಲಯವು ಹಾಲುಮತ ಸಮುದಾಯ (ಕುರುಬ ಸಮುದಾಯ)ದವರಿಂದ ನಿರ್ಮಾಣವಾಗಿದೆ.  ಕಳವಿಭಾಗಿಯಲ್ಲಿ ಕುಂಚಿಟಿಗ ಮತ್ತು  ಕುರುಬರು  ಆರಂಭದಿಂದಲೂ ವಾಸಿಸುತ್ತಿದ್ದು, ಕುಂಚಿಟಿಗರು ಪಶು ಸಂಗೋಪನೆಯನ್ನು ಮತ್ತು ಕುರುಬರು ಕುರಿ ಸಾಕಣೆಯನ್ನು ತಮ್ಮ ಕಸುಬಾಗಿ ನಡೆಸುತ್ತಿದ್ದರು. ಅಲ್ಲದೆ ಉತ್ತಮ ಭಾಂಧವ್ಯ ಹೊಂದಿದ್ದರು.
 ಆಗ ಜತೆ ಜತೆಯಲ್ಲಿಯೇ ತಮ್ಮತಮ್ಮ ಜಾನುವಾರುಗಳಿಗೆ ಮೇವು ಉಣಿಸಲು ಹೋಗುವುದು ದಿನ ನಿತ್ಯವು ವಾಡಿಕೆಯಾಗಿತ್ತು. ಹಾಗೆ  ಕುರುಬ ಸಮುದಾಯದ ಆರೆ ಕುರುಬ ಕುಲದ ಹೆಣ್ಣು ಮಗಳು ಹಾಗೂ ಕುಂಚಿಟಿಗ ಸಮುದಾಯದ ಒಳಕಲ್ಲು ಕುಲದ ಗಂಡಿಗೂ ಪ್ರೇಮಾಂಕುರವಾಗಿ ಅದು ದಾಂಪತ್ಯಕ್ಕೂ ಕಾರಣವಾಯಿತು.
 ಇಂಥ  ಸಂದರ್ಭದಲ್ಲಿ  ಒಮ್ಮೆ ಯರಬಳ್ಳಿಯಲ್ಲಿ ವಾಸಿಸುವ ಭಕ್ತರಿಗೆ ಈ ಶ್ರೀ ರಂಗನಾಥ ಸ್ವಾಮಿಯ ಮೇಲೆ ಅಪಾರ ಭಕ್ತಿ ಬಂದು ಅದನ್ನು ತಮ್ಮೂರಿಗೆ ಸಾಗಿಸುವ ಕುರಿತು ಮಾತನಾಡಿಕೊಳ್ಳುತ್ತಿದ್ದದ್ದು  ಕುರಿ ಕಾಯುವ ವೇಳೆ ಈ ಕುರುಬರ ಹೆಣ್ಣು ಮಗಳ ಕಿವಿಗೆ ಬಿದ್ದಿದೆ.  ಪ್ರಿಯಕರನ ಮನೆ ದೇವರನ್ನೇ ಕದಿಯುವ ಸಂಚಿಗೆ ಮನದಲ್ಲೇ ತೀವ್ರ ಆಕ್ರೋಶಗೊಂಡ ಆಕೆ ಹೊಲಮರೆಯಲ್ಲಿ ಯಾವುದೇ ದೇವರನ್ನು ಸಾಗಿಸುವಾಗ ಇನ್ನೊಂದು ದೇವರು ಆಗ ಭಾಗದಲ್ಲಿದ್ದರೇ ಅದನ್ನು  ಸಾಗಿಸುವಂತಿಲ್ಲ ಎಂಬ ಸಂಪ್ರದಾಯದಂತೆ ಆಕೆ ಯರಬಳ್ಳಿ - ಗೊಲ್ಲರಹಟ್ಟಿ ಕಡೆಗೆ ಸರಿಯಾಗಿ ಇಲ್ಲಿ ತನ್ನ ಮನೆ ದೇವರಾದ ಮೈಲಾರಲಿಂಗೇಶ್ವರರನ್ನು ಪ್ರತಿಷ್ಠಾಪಿಸಿದ್ದಾಳೆ. ಅಂದಿನಿಂದ  ಇದು ಆರೆ ಕುರುಬ ಹೆಣ್ಣುಮಗಳು ಪ್ರತಿಷ್ಠಾಪಿಸಿದ್ದು ಎಂದು  ಕರೆಸಿಕೊಳ್ಳುತ್ತಿದೆ.
 ಈಕೆಗೆ ಈ ವಿಗ್ರಹ ಎಲ್ಲಿಂದ ಬಂತು ಎಂದು ಸುಮಾರು 14-15 ವರ್ಷಗಳ ಹಿಂದೆಯೇ ಹಿರಿಯರಾದ ದಿವಂಗತ ಗುಡ್ಡದ ರಂಗಯ್ಯ. ಕಳವಿಭಾಗಿ (ಅಶೋಕಪ್ಪ ಅವರ ತಂದೆ), ಶ್ರೀ ಗುರುಸಿದ್ದಯ್ಯ ಒಡೆಯರ್, ಪೀಠಾಧಿಪತಿಗಳು ಹರ್ತಿಮಠ. ಚಳ್ಳಕೆರೆಯಪ್ಪ ಕುರುಬ ಸಮಾಜದ ಹಿರಿಯರು ಹರ್ತಿಕೋಟೆ. ಇವರನ್ನು ಸೇರಿದಂತೆ ಅನೇಕರನ್ನು ಪ್ರಶ್ನಿಸಿದಾಗ  ಈ ಮೇಲಿನ ಸತ್ಯ ಘಟನೆಯನ್ನು ಅನಾವರಣಗೊಳಿಸಿದ್ದಾರೆ.
 ವಿಜಯನಗರ ಸಾಮ್ರಾಜ್ಯದವರು, ಮೈಸೂರು ರಾಜರ ಆಳ್ವಿಕೆಯ ಹರ್ತಿಕೋಟೆ ಮಹಾಸಂಸ್ಥಾನಕ್ಕೆ ಬರುವ ವೇಳೆ ಅವರು ಈ ಕಳವಿಭಾಗಿಯ ಬಯಲು ಪ್ರದೇಶದಲ್ಲಿ ತಂಗುತ್ತಿದ್ದರು. ಆಗ ಅವರಿಗೆ ದಣಿವಾಗಿದೆ. ದಣಿವನ್ನು ನೀಗಿಸಲು ಸುತ್ತಲೂ ನೀರಿಗೆ ಹುಡುಕಾಡಿದರೂ ಸಿಕಿಲ್ಲ. ಆಗ ಅಲ್ಲಿಯೇ  ಕುರಿಯನ್ನು ಮೇಯಿಸುತ್ತಿದ್ದ ಆರೆ ಕುರುಬರ ಹೆಣ್ಣುಮಗಳು ದೊರೆಗಳಿಗೆ ಕುರಿ ಹಾಲನ್ನು ನೀಡುವ ಮೂಲಕ ಅವರ ದಣಿವು ನೀಗಿಸಿದರು. ಆಗ ಅವರು ನಿನಗೆ ಏನು ಬೇಕಮ್ಮ ಎಂದು ಕೇಳಿದಾಗ ನನಗೊಂದು ಮೈಲಾರಿಯ ಅರ್ಥಾತ್ ಮೈಲಾರಲಿಂಗನ ವಿಗ್ರಹ ಮಾಡಿಸಿಕೊಡಿ ಎಂದು ಕೇಳಿದಾಗ ಅವರು ಈ  ತ್ರಿಶೂಲ ಮತ್ತು ಡಮರುಗ ಹಿಡಿದ ಮೈಲಾರಲಿಂಗ ವಿಗ್ರಹ  ನೀಡಿದ್ದಾರೆ.
 ಈ ರೀತಿಯಾಗಿ ಪುಟ್ಟ ಗುಡಿಯನ್ನು  ಸುಣ್ಣದ ಕಲ್ಲು ಮತ್ತು ಮರಳಿನಿಂದ ನಿರ್ಮಿಸಿದ ಆಕೆ  ನಿತ್ಯ ಪೂಜಿಸುತ್ತಿದ್ದಳು. ನಿತ್ಯವೂ ಇಲ್ಲಿ  ಮೈಲಾರಲಿಂಗೇಶ್ವರ ಗುಡಿ ಪೂಜೆಗೆ ಸಲ್ಲುತ್ತಿತ್ತು. ಇಬ್ಬರೂ ಬಂದು ಆತ ರಂಗನಾಥನಿಗೆ ಮತ್ತು ಈಕೆ  ಮೈಲಾರಲಿಂಗೇಶ್ವರಗೆ  ಪೂಜಿಸುತ್ತಿದ್ದರು. ಹೀಗೆ ಕುರುಬರ ಹೆಣ್ಣು ಮಗಳಿಂದ ನಿರ್ಮಿಸಿದ  ಈ ಗುಡಿಗೆ ಶ್ರೀ ರಂಗನಾಥ ಸ್ವಾಮಿ ಜೊತೆಯಲ್ಲಿಯೇ   ಇಂದು ಕೂಡಾ ಪೂಜೆ ಸಾಗುತ್ತಿದೆ.
  ಕೆಲವು ಮಾಹಿತಿಗಳ ಪ್ರಕಾರ  ಶ್ರೀ ರಂಗನಾಥ ಸ್ವಾಮಿ, ತಿರುಪತಿ ವೆಂಕಟೇಶ  ಸ್ವರೂಪಿ, ಆತ ನಾಮ ಧರಿಸುವವನು. ಮೈಲಾರಲಿಂಗೇಶ್ವರ  ವಿಭೂತಿ, ಭಂಡಾರ ಪ್ರಿಯ.  ಇದು  ಅವಿನಾಭಾವ ಸಂಬಂಧ ಎಂಬುದು ಹಿರೇ ಮೈಲಾರದಲ್ಲಿಯೂ ಗೋಚರಿಸುತ್ತದೆ.
 ಹೀಗೆ ಅಂದಿನಿಂದ ಇಂದಿನವರೆಗೂ ಇದು  ಭಾವೈಕ್ಯತೆಯ , ಭಕ್ತಿಯ ಸಂಕೇತವಾಗಿ ಇಲ್ಲಿ ಕುರುಬರೂ ಭಾಗಿಯಾಗಿದ್ದಾರೆ. ಅದೇ ರೀತಿ  ಹರಕೆ ಹೊತ್ತಿದ್ದ ಭಕ್ತರೊಬ್ಬರು ನಾಗರ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿರುವುದು ಕಂಡು ಬರುತ್ತದೆ. ಇಲ್ಲಿಯ ಸೇವಾಕಾರ್ಯಗಳಿಗೆ ಎಲ್ಲರೂ ಸಹ ಪಾತ್ರರಾಗಿದ್ದಾರೆ.
 ಇದೀಗ ದೇವಾಲಯ 2010ರಲ್ಲಿ ಜೀರ್ಣೋದ್ದಾರಗೊಂಡ ನಂತರ  ದೇವಾಲಯ ನಳನಳಿಸುತ್ತಿದೆ. ವೈಭವವಾಗಿ ನಿರ್ಮಿಸಲ್ಪಟ್ಟಿದೆ.  ಕುಂಚಿಟಿಗರ ಶ್ರೀ ರಂಗನಾಥ ಸ್ವಾಮಿ ಜತೆಯಲ್ಲಿಯೇ  ಕುರುಬರ ಮೈಲಾರಲಿಂಗೇಶ್ವರ, ಸರ್ವರ ನಾಗದೇವತೆ ಮತ್ತು ಸರ್ವ ಭಕ್ತರ ಆಂಜನೇಯ ಸ್ವಾಮಿಯ ಸನ್ನಿಧಿ ಎಂದು ಕರೆಯಲ್ಪಡುತ್ತಿದೆ.


 ಮಾಹಿತಿ   ಗುಡ್ಡದ ರಂಗಯ್ಯ. ಹಿರಿಯರು.  ಕಳವಿಭಾಗಿ (ಅಶೋಕಪ್ಪ ಅವರ ತಂದೆ)
                ಗುರುಸಿದ್ದಯ್ಯ ಒಡೆಯರ್ ಪೀಠಾಧಿಪತಿಗಳು ಹರ್ತಿಮಠ.
                 ಚಳ್ಳಕೆರೆಯಪ್ಪ ಕುರುಬರು, ಹರ್ತಿಕೋಟೆ. ಇನ್ನೂ ಅನೇಕರು...
 =====================================

No comments:

Post a Comment