Saturday, November 23, 2013

ಹರಿದ ಕಂಬಳಿ ಹೊದ್ದು... -ಮಾಲತೇಶ್ ಅರಸ್ ಹರ್ತಿಮಠ, ಬೆಂಗಳೂರು

ಹರಿದ ಕಂಬಳಿ ಹೊದ್ದು..
  
  ಹನಿ ಮಳೆಗೂ ಸೋರುವ ಹಳೆ ಮನೆ
  ಸರಸರ ಬೀಳುವುದು ಮಾಳಿಗೆಯ ಮಣ್ಣು
  ಅಜ್ಜನ ಕಾಲದ ಅರಮನೆಗೆ ವಯಸ್ಸಾಯ್ತು
  ಅಜ್ಜಿಯ ಬದುಕಿಗೆ ಎಂಬತ್ತರ ಹರೆಯವಾಯ್ತು
 
  ಸುತ್ತಲೂ ಹಳೆ ಗೋಡೆ ಬಿದ್ದ ಜಾಗ
  ನನ್ನಜ್ಜಿಯೊಂದಿಗೆ ಆಡುವ ನನ್ನ ಮಗ
  ಕತ್ತಲೆಯ ಕೋಣೆಯಲಿ ಜತೆಯಲಿ
  ಮಲಗಿದ್ದರು ಹರಿದ ಕಂಬಳಿ ಹೊದ್ದು
 
  ಎಣ್ಣೆ ಇಲ್ಲದೆ ಉರಿಯದೇ ನಿಂತ ದೀಪ
  ಮುರಿದ ತೇಪೆ ಹಾಕಿದ ಹಳೆ ಬಿಂದಿಗೆ
  ಹಜಾರದ ಕಲ್ಲು ಕಟ್ಟೆಯೇ ಹಾಸಿಗೆ
  ಕಿತ್ತೋಗುತಿದೆ ಮಣ್ಣ ಕಟ್ಟೆ ಬಚ್ಚಲು
 
  ಅಳುವ ಮಗನ ದನಿಗೆ ಅಜ್ಜಿಯ ದನಿ
  ಒಲೆಯ ಮುಂದೆ ನನ್ನಾಕೆಯ ಕಾಯಕ
  ಭಂಡಾರದೊಡೆಯನ ನೆನಹುತ್ತ
  ನಿದ್ದೆ ಮಾಡಿದರು ಹರಿದ ಕಂಬಳಿ ಹೊದ್ದು
 
  ಕಟಿ ಕಟಿ ಸದ್ದಾಗುವ ಮನೆ ಬಾಗಿಲು
  ದನದ ಕೊಟ್ಟಿಗೆಯಲ್ಲೀಗ ಊಟ
  ಸಗಣಿ ಸಾರಿಸಿದ ನೆಲದಲ್ಲೇ ಆಟ
  ನಿತ್ಯ ಬದುಕಿಗೆ ಹೊಂದಿಕೊಂಡ ಹಳೆ ಜೀವ
 
  ಮುಂಜಾನೆ ಎದ್ದು ಮತ್ತೆ ಕೂಲಿಯ ಹರಸಿ
  ಬದುಕು ಸಾಗುತ್ತಿದೆ ಕಷ್ಟಗಳ ದೂರ ಸರಿಸಿ
  ನಾನೂ, ಅಜ್ಜಿ, ನನ್ನಾಕೆ, ನನ್ನಮಗ
  ಮಲಗಿದೆವು ಹರಿದ ಕಂಬಳಿ ಹೊದ್ದು.
                                                                 -ಮಾಲತೇಶ್ ಅರಸ್ ಹರ್ತಿಮಠ, ಬೆಂಗಳೂರು
 
 
  

No comments:

Post a Comment