Wednesday, November 27, 2013

ಅನುದಾನವಿಲ್ಲದೆ ಬಳಲುತ್ತಿದೆ ಕನಕದಾಸ ಅಧ್ಯಯನ ಕೇಂದ್ರ



]
 *ಸಾಕಷ್ಟು ಸಂಶೋಧನೆಗಳ ಮಾಡಿದ್ರೂ ಪ್ರೋತ್ಸಾಹವಿಲ್ಲ *ಹುಸಿಯಾಗುತ್ತಿದೆ ಸರ್ಕಾರಿ ಸಹಾಯದ ನಿರೀಕ್ಷೆ
- ಮಾಲತೇಶ್ ಅರಸ್ ಹರ್ತಿಮಠ
 ಬೆಂಗಳೂರು: ರಾಜ್ಯ ಸರ್ಕಾರ ಕನಕ ಜಯಂತಿಗೆ ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಲೇ ಬಂದಿದ್ದರೂ ಕರ್ನಾಟಕ ಸರ್ಕಾರವೇ ಸ್ಥಾಪಿಸಿರುವ ರಾಷ್ಟ್ರೀಯ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಅನುದಾನ ನೀಡಿಲ್ಲ!
 ಸಂತಕವಿ ಕನಕದಾಸರ ಸಾಮಾಜಿಕ, ಸಾಂಸ್ಕೃತಿಕ, ಪಾರಮಾರ್ಥಿಕ ಚಿಂತನೆಗಳ ಜತೆಗೆ ಅವರ ಕಾವ್ಯಗಳು, ಕೀರ್ತನೆಗಳು,ದರ್ಶಿಸಲಪೇಕ್ಷಿಸುತ್ತಿರುವ ದಿಕ್ಕು ಮತ್ತು ಮಾನವೀಯ ಸಂದೇಶಗಳ ಕುರಿತು ಹೊಸ ಹೊಸ ಅಧ್ಯಯನಗಳು, ಸಂಶೋಧನೆಗಳು, ಪ್ರಕಟಣೆಗಳು ಹಾಗೂ ಇವುಗಳ ಪ್ರೋತ್ಸಾಹ ಮತ್ತು ಪ್ರಸಾರದ ಉದ್ದೇಶದಿಂದ ಸ್ಥಾಪಿಸಿರುವ ಈ ಸಂಶೋಧನಾ ಕೇಂದ್ರ ಇದೀಗ ಸರ್ಕಾರ ಮುಂದೆ ಅನುದಾನಕ್ಕಾಗಿ ಕೈ ಕಟ್ಟಿ ನಿಲ್ಲಬೇಕಿದೆ.
 ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ಅಧ್ಯಯನ ಕೇಂದ್ರವು ರಾಜ್ಯಾದ್ಯಂತ ಈಗಾಗಲೆ ಸಾಕಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದರೂ ಆರ್ಥಿಕ ಪ್ರೋತ್ಸಾಹವಿಲ್ಲದೆ ಬಸವಳಿದು ಹೋಗಿದೆ. ಕನಕದಾಸರ ಜೀವನ, ಸಂದೇಶ ಮತ್ತು ಸಾಹಿತ್ಯ ಕುರಿತಂತೆ ಅಧ್ಯಯನ, ಸಂಶೋಧನೆ, ಚಿಂತನೆ ನಡೆಸುವ ಈ ಕೇಂದ್ರಕ್ಕೆ ಈಗ ಬಲ ಸಿಗಬೇಕಿದೆ.
 ಕೇಂದ್ರದ ಕಾರ್ಯವೇನು?:
 ಕನಕದಾಸರ ದರ್ಶನವನ್ನು ಸಂಗೀತ- ದೃಶ್ಯ ಮಾಧ್ಯಮದಲ್ಲಿ ಪ್ರಚುರಪಡಿಸುವುದು, ಅವರ ಬದುಕು ಮತ್ತು ಕೃತಿ ದೇಶದ ಹಾಗೂ ವಿಶ್ವದ ಇತರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು, ಅಂಥ ಪ್ರಕಟಣೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಕೇಂದ್ರ ಮಾಡುತ್ತಿದೆ. ಗ್ರಂಥಗಳು, ಪತ್ರಿಕೆಗಳು, ಛಾಯಾಚಿತ್ರಗಳು, ಮೈಕ್ರೋ ಫಿಲಂಗಳು ಸಲಕರಣೆಗಳನ್ನುಳ್ಳ ಆಕರಗಳ ಗ್ರಂಥಾಲಯಗಳನ್ನು ಸ್ಥಾಪಿಸುವುದು. ಸಂಶೋಧನಾರ್ಥಿ ಹಾಗೂ ಸಾಹಿತ್ಯಾಭಿಮಾನಿಗಳಿಗೆ ಪರಾಮರ್ಶನ ಕಾರ್ಯಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡುವುದು. ಕನಕದಾಸರ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ಅಕಾಡೆಮಿಕ್ ಹಾಗೂ ಸಾರ್ವಜನಿಕ ವಲಯಗಳಲ್ಲಿ ಪ್ರಸ್ತುತಿಪಡಿಸುವುದು. ಹೊರ ರಾಜ್ಯ, ವಿದೇಶಗಳಿಗೆ ವಿದ್ವಾಂಸರನ್ನು ಕರೆದೊಯ್ದು ವಿಚಾರ ತಿಳಿಸುವ ಕೆಲಸ ಮಾಡುತ್ತಿದೆ.
 ಕನಕದಾಸರು ಹಾಗೂ ದಾಸ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯರಿಗೆ 75,000ರೂ. ನಗದು ಸೇರಿ ಕನಕ ಗೌರವ ಪುರಸ್ಕಾರ ಹಾಗೂ ಯುವ ಸಂಶೋಧಕರಿಗೆ 50,000 ರೂ. ನಗದು ಸೇರಿ ಕನಕ ಯುವ ಪುರಸ್ಕಾರ ನೀಡುತ್ತಿದೆ. ಇದಲ್ಲದೆ 3 ಸಂಶೋಧನಾರ್ಥಿಗಳಿಗೆ ತಲಾ 1 ಲಕ್ಷ ರೂ. ಫೆಲೋಶಿಪ್ ನೀಡಿ ವಿವಿಧ ವಿಷಯಗಳ ಮೇಲೆ ಸಂಶೋಧನೆ ನಡೆಸುವುದು ಸೇರಿ ಮತ್ತಿತರ ಕೆಲಸಗಳನ್ನು ಕೇಂದ್ರ ಮಾಡುತ್ತಿದೆ.
 ಈವರೆಗೆ ಏನೇನು ಮಾಡಿದೆ?
 ಕನಕದಾಸರ ಮರುದರ್ಶನ ಆಯಾಮಗಳು, ಸಾಹಿತ್ಯದಲ್ಲಿ ಜಾನಪದೀಯ- ಪುನಾಗ್ರಹಿಕೆಯ ನೆಲೆಗಳು, ಕೃತಿಗಳಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ, ಸಾಮಾಜಿಕ ಸಂವೇದನೆಯ ನೆಲೆಗಳು, ವರ್ತಮಾನದ ಯುವ ನೋಟ, ಹೀಗೆ ಅನೇಕ ಗೋಷ್ಠಿ, ಸಂವಾದ ಕಾರ್ಯಕ್ರಮಗಳನ್ನು ನಡೆಸಿದೆ. ಅಲ್ಲದೆ ಮಂಡಿತವಾದ ಪ್ರಬಂಧಗಳನ್ನು ಮತ್ತು ಸಂವಾದಗಳ ಪುಸ್ತಕ ಪ್ರಕಟಿಸಿದೆ. ಕನಕದಾಸರ ಆಶಯಗಳನ್ನು ಕುರಿತಂತೆ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿದೆ. ಕಾಲುದಾರಿ ಸಂತ ಪರಂಪರೆ ಮತ್ತು ಕನಕದಾಸರು ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿದ್ದು, ರಾಷ್ಟ್ರಮಟ್ಟದಿಂದ 34 ವಿದ್ವಾಂಸರನ್ನು ಕರೆತಂದು 700ಜನ ವಿದ್ಯಾರ್ಥಿಗಳಿಗೆ ವಿಚಾರವನ್ನು ತಿಳಿಸಿದೆ.
 ಹೀಗೆ ಅಪಾರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದರೂ ಸಂಬಂಧ ಪಟ್ಟವರು ಇತ್ತ ಗಮನ ಹರಿಸಿಲ್ಲ ಕಾರ್ಯಾನುಷ್ಠಾನ ಮಂಡಳಿ ಅಧ್ಯಕ್ಷರಾಗಿ ಕನ್ನಡ ಸಂಸ್ಕೃತಿ ಇಲಾಖೆ ಆಯುಕ್ತರು, ಹಾಗೂ ಸರ್ಕಾರ ಕೂಡಲೇ ಗಮನ ಹರಿಸಬೇಕೆಂಬುದು ಎಲ್ಲರ ಆಗ್ರಹ.

 ಬಾಕ್ಸ್...
 ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತು:
 ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಗ್ರಹಣ ಶಿಬಿರ. ವಿದ್ವಾಂಸರು ಹಾಗೂ ಸಂಗೀತ ಕಲಾವಿದರಿಂದ ಕನಕದಾಸರ ಕುರಿತು ಉಪನ್ಯಾಸ, ವಾಚನ, ಗಾಯನದ ಮೂಲಕ ತತ್ವಾದರ್ಶ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ.  60 ಕಾರ್ಯಕ್ರಮಗಳನ್ನು ಜಿಲ್ಲೆಗೆ ಎರಡರಂತೆ ರೂಪಿಸಿದ್ದು  ಈ ವರ್ಷದ ನವೆಂಬರ್ ಹತ್ತರೊಳಗೆ 46 ಕಾಲೇಜುಗಳಲ್ಲಿ 46 ಶಿಬಿರಗಳನ್ನು ಮಾಡಿದೆ.ಅಲ್ಲದೆ ಇದರ ಪ್ರಯೋಜನವನ್ನು 14,620 ವಿದ್ಯಾರ್ಥಿಗಳು ಪಡೆದಿದ್ದಾರೆ. ಕನಕ ಸಂಸ್ಕೃತಿ ಕಮ್ಮಟವನ್ನು ನಡೆಸಿ ಪರಸ್ಪರ ಸಂವಾದದ ಮೂಲಕ ಕಾವ್ಯಗಳನ್ನು ಗಮಕದ ಮೂಲಕ ಗ್ರಹಿಸಿಕೊಳ್ಳುವ ರೀತಿಯಲ್ಲಿ ಈ ಕಮ್ಮಟಗಳನ್ನು ಆಯೋಜಿಸಲಾಗಿದ್ದು 1,940 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.


 ಕೋಟ್..
   ರಾಜ್ಯಾದ್ಯಾಂತ ವಿವಿಧ ಸಮಾರಂಭಗಳನ್ನು ಮಾಡುತ್ತಿದ್ದು  ಅನೇಕ ಕಡೆಗಳಿಂದ, ಕಾಲೇಜುಗಳಿಂದ ಕಾರ್ಯಕ್ರಮ ಮಾಡುವಂತೆ ಒತ್ತಡಗಳು ಬರುತ್ತಿವೆ. ಈಗ ನೀಡುವ 25ಲಕ್ಷ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ.  ಸರ್ಕಾರ ಹೆಚ್ಚಿನ ಅನುದಾನ  ಬಿಡುಗಡೆ ಮಾಡಬೇಕು. ಆಗ ಮಾತ್ರ ಕೇಂದ್ರ ಸ್ಥಾಪನೆಯ ಸದ್ಬಳಕೆಯಾಗುತ್ತದೆ.
 ಕಾ.ತ ಚಿಕ್ಕಣ್ಣ.  ಸಮನ್ವಯಾಧಿಕಾರಿ. 
 ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ

No comments:

Post a Comment