Wednesday, November 27, 2013

ಅಣಬೆ : ಮಳೆಗಾಲದ ಗೆಳೆಯ, ಚಳಿಗಾಲದ ಸಂಗಾತಿ


*ಹಲವು ರೋಗಗಳಿಗೆ ರಾಮಬಾಣ
*ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿ
*ಕ್ಯಾನ್ಸರ್ ಬರುವ ಸಾಧ್ಯತೆ ಶೇ 70 ರಷ್ಟು ಕಡಿಮೆ
*ಗುರುಕುಲ, ಋಷಿ ಸಂಸ್ಕೃತಿ ಕಾಲದಿಂದಲೂ ಆಯುರ್ವೇದಗಳಿಗೆ ಬಳಕೆ
-ಮಾಲತೇಶ್ ಅರಸ್ ಹರ್ತಿಮಠ
ಅಣಬೆ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಹೌದು ವರ್ಷಕ್ಕೊಮ್ಮೆ ಅಣಬೆ ತಿನ್ನದೇ ಹೋದರೇ ಅದು ರುಚಿಸದು.
ಏಕೆಂದರೇ ಹಳ್ಳಿಯ ಮಂದಿ ವರ್ಷಕ್ಕೊಮ್ಮೆಯಾದರೂ ಅಣಬೆ ತಿನ್ನ ಬೇಕೆಂದು ಕೊಂಡಿರುತ್ತಾರೆ. ಪ್ರಕೃತಿಯ ವಿಶೇಷ ಕೊಡುಗೆಯಾಗಿ ಅಣಬೆ ಮಳೆಗಾಲದಲ್ಲಿ ಆಗಮಿಸಿ ಚಳಿಗಾಲದಲ್ಲಿ ಎಲ್ಲೆಡೆ ಸಿದ್ದವಾಗಿರುತ್ತದೆ. ಕಾಡಿನ ಹಾದಿಯಲ್ಲಿ ಸಾಗುತ್ತಾ ಹೋಗುತ್ತಿದ್ದರೇ ಸಾಕಷ್ಟು ಕಣ್ಣಿಗೆ ಕಾಣುತ್ತವೆ.
ಇದರ ಭೋಜನ ನಿಜಕ್ಕೂ ಮಾಂಸಹಾರದ ರುಚಿಯನ್ನು ಹೊರಹಾಕುತ್ತದೆ ಎನ್ನುತ್ತಾರೆ ಗ್ರಾಮೀಣರು. ಮಳೆಗಾಲ ಬಂತು ಎಂದರೇ ಸಾಕು ಮನೆ ಮನೆಗಳಲ್ಲಿ ಈ ಅಣಬೆ ಸಾಂಬಾರು ವಾಸನೆ ಮೂಗಿಗೆ ಬಡಿಯುತ್ತದೆ.
ಇದು ಕೇವಲ ಈಗಿನದಲ್ಲಿ ಪುರಾತನ ಕಾಲದಿಂದಲೂ ಅಂದರೇ ಗುರುಕುಲ, ಋಷಿ ಸಂಸ್ಕೃತಿ ಕಾಲದಿಂದಲೂ ಆಯುರ್ವೇದಗಳಿಂದ ಬಳಕೆಯಾಗಿದೆ.
ರೋಗಗಳಿಗೆ ರಾಮಬಾಣ:
ಶಿಲೀಂದ್ರ ಜಾತಿಗೆ ಸೇರಿದ ಅಣಬೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪ್ರೋಟಿನ್, ವಿಟಮಿನ್, ಮಿನಿರಲ್, ಅಮೋನೋ ಆಸಿಡ್ ಎಂಬ ಅಂಶವನ್ನು ಹೊಂದಿದೆ. ಅಲ್ಲದೆ ರೋಗ ನಿರೋಧಕ ಶಕ್ತಿ ಹೊಂದಲು ಇದು ಅತ್ಯಂತ ಮುಖ್ಯವಾಗಿದ್ದು ಹಲವು ರೋಗಗಳಿಗೆ ರಾಮಬಾಣ ಎನಿಸಿದೆ.
ಇದನ್ನು ಹಲವೆಡೆ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ. ಅಣಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ, ಮತ್ತು ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಜಾತಿಯ ಅಣಬೆಗಳನ್ನು ಕಾಣಬಹುದಾಗಿದೆ. ಆದರೇ ಮಳೆಗಾಲದಲ್ಲಿ ದೊರೆಯುವ ಪ್ರಕೃತಿ ದತ್ತ ನೈಸರ್ಗಿಕ ಅಣಬೆ ಎಲ್ಲಿಲ್ಲದ ಬೇಡಿಕೆ.
ಸಾಮಾನ್ಯವಾಗಿ ಈ ಅಣಬೆ ಮಳೆಗಾಲದಲ್ಲಿ ಸಿಡಿಲು ಗುಡುಗಿನ ಸದ್ದು ಆರಂಭವಾದ ಕೂಡಲೇ ಇವು ನೆಲದಿಂದ ಹುಟ್ಟುತ್ತವೆ ಎಂಬ ನಂಬಿಕೆ ಇದೆ. ಇವು ಬೆಳೆದಾಗ ಇವುಗಳ ಮೇಲೆ ಮರದ ಎಲೆಗಳು ಬಿದ್ದರೇ ಹಾಳಾಗುತ್ತವೆ. ಹಲವೆಡೆ ಇವು ಒಂದೊಂದಾಗಿ ಕಣ್ಣಿಗೆ ಗೋಚರಿಸಿದರೇ ಇನ್ನೂ ಹಲವೆಡೆ ರಾಶಿರಾಶಿಯಾಗಿ ಕಾಣ ಸಿಗುತ್ತವೆ.
ವಿವಿಧ ಬಗೆಗಳು:
ರುಚಿಕಟ್ಟಾದ ಸುವಾಸನೆ ಭರಿತ ಸೃಷ್ಟಿಸುವ ಅಣಬೆಯಲ್ಲಿ ವಿವಿಧ ನಮೂನೆ ಕಾಣಬಹುದು. ಪುಟಾಣಿ ಅಣಬೆ, ದೊಡ್ಡ ಅಣಬೆ, ಬಿಳಿ ಅಣಬೆ, ಬೋಗಿ ಅಣಬೆ, ಎಣ್ ಅಣಬೆ, ಕಲ್ ಅಣಬೆ ಹೀಗೆ ನಾನಾ ಬಗೆಯ ಅಣಬೆ ಕಾಣಬಹುದಾಗಿದೆ. ಹೀಗೆ ನಾನಾ ಬಗೆಯ ಅಣಬೆಗಳಿದ್ದರೂ ಅವುಗಳಲ್ಲೂ ವಿಷಪೂರಿತ ಅಣಬೆಗಳೂ ಇವೆ. ಗ್ರಾಮೀಣರು ನೋಡಿದ ಕೂಡಲೇ ಇದು ವಿಷಪೂರಿತ ಎಂದು ತಟ್ಟನೇ ಕಂಡು ಹಿಡಿಯುತ್ತಾರೆ. ಹೀಗಾಗಿ ಬಳಸುವಾಗ ಎಚ್ಚರ ಅತ್ಯಗತ್ಯ.
ಕೆಲವು ಬಾರಿ ಅಣಬೆಗಳ ಮೇಲೆ ಕ್ರಿಮಿ ಕೀಟಗಳು ವಿಷಾಹಾರಿ ಜಂತುಗಳು ಸಂಚರಿಸಿದ್ದರೂ, ಜೊಲ್ಲನ್ನು ಸ್ಪುರಿಸಿದ್ದರೇ ಅದು ವಿಷಯುಕ್ತವಾಗಿರುತ್ತದೆ , ಹೀಗಾಗಿ ನೈಸರ್ಗಿಕ ಅಣಬೆ ಎಷ್ಟು ಒಳ್ಳೆಯದೋ ಅಷ್ಟೇ ಅಪಾಯಕಾರಿ ಎನ್ನುತ್ತಾರೆ ರೈತ ಸಂಗೇನಹಳ್ಳಿ ರಾಮಪ್ಪ.
ಅಣಬೆ ಸಸ್ಯಹಾರಿ ಆಗಿದ್ದರೂ ಅದನ್ನು ಮಾಂಸಹಾರದ ಗುಂಪಿಗೆ ಸೇರಿಸಲಾಗಿದೆ. ಈಗ ಎಲ್ಲರೂ ಮಾಂಸಹಾರವನ್ನ ಸಸ್ಯಹಾರವಂತೆ ಸೇವಿಸುವುದು ಮಾಮೂಲಾಗಿರುವುದರಿಂದ ಕೆಲವರನ್ನು ಹೊರತು ಪಡಿಸಿ ಇದನ್ನು ಎಲ್ಲರೂ ಬಳಸುತ್ತಾರೆ.
ರೈತರಿಗೆ ಉತ್ತಮ ಲಾಭ:
ಅಣಬೆಯನ್ನು ಇದೀಗ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಆರ್ಥಿಕವಾಗಿ ಸದೃಢರಾಗಲು ರೈತರೂ ಇದೀಗ ಹೆಚ್ಚು ಹೆಚ್ಚು ಅಣಬೆ ಬೇಸಾಯದತ್ತ ಗಮನಹರಿಸುತ್ತಿದ್ದಾರೆ.
ಅಣಬೆಯಿಂದಾಗುವ ಪ್ರಯೋಜನ:
*ಪ್ರತಿ ದಿನವೂ ಒಂದು ಅಣಬೆಯನ್ನು ಸೇವಿಸುತ್ತಿದ್ದರೇ ಕ್ಯಾನ್ಸರ್ ಬರುವ ಸಾಧ್ಯತೆ ಶೇ 70 ರಷ್ಟು ಕಡಿಮೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
* ಸ್ತನ ಕ್ಯಾನ್ಸರ್‌ಗೆ ಇದು ರಾಮಬಾಣ ಎನ್ನಲಾಗಿದೆ. ಶೇ93 ರಷ್ಟು ಸ್ತನ ಕ್ಯಾನ್ಸರ್ ತಗುಲುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ
* ಇದು ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ. ಇದರಲ್ಲಿರುವ ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.
* ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿ ಎಂದರೇ ಅದು ಅಣಬೆ.
* ಎಲುಬಿಗೆ ಶಕ್ತಿಯನ್ನು ನೀಡುವ ಜೊತೆಗೆ ಕ್ಯಾಲ್ಸಿಯಂ, ರಕ್ತ ಹೀನತೆ ನಿವಾರಿಸುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ.
* ವಿಟಮಿನ್ ಬಿ 2 ಶಕ್ತಿಯನ್ನು ನೀಡಲು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ತುಂಬಾ ಅಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ 2 ಮತ್ತು ವಿಟಮಿನ್ ಬಿ3 ಇರುವುದರಿಂದ ದೇಹಕ್ಕೆ ಇದು ತುಂಬಾ ಉತ್ತಮ

ಅಣಬೆಯಲ್ಲಿ ಬೊಜ್ಜಿನ ಅಂಶವಿಲ್ಲ. ಕಡಿಮೆ ಕಾರ್ಬೋ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವುದಿಂದ ಬೊಜ್ಜು ಕರಗಿಸುವುದು ಸುಲಭ. ಇದು ದೇಹದಲ್ಲಿರುವ ಅಧಿಕ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮಧುಮೇಹ ಇರುವ ಜನರಿಗೆ ಇದು ಅತ್ಯುತ್ತಮ ಎನ್ನುತ್ತಾರೆ. ಡಾ. ವೆಂಕಟೇಶ್ ಅವರು.

No comments:

Post a Comment