Monday, January 21, 2013
Friday, January 18, 2013
Vikhyath Urs ------Poem
ನಮ್ಮ ಮನೆಯ ನಗು.... Chitradurga Fort Baby
ಭುವಿಗಿಳಿದು ಬಂದ.. ಪ್ರೀತಿಯ ಕಂದ
ಮನೆಯಲಿ ತುಂಬಿತು ಆನಂದ
ಭಂಡಾರದೊಡೆಯನ ವರಪುತ್ರ
ಅರಸು ವಂಶದ ಕುಲಪುತ್ರ
ರಾಜ್ಯೋತ್ಸವದ ಮಾಸದಲಿ
ತುಳಸಿ ಹಬ್ಬದ ಸುದಿನದಲಿ
ಧರೆಗಿಳಿದ ಕನ್ನಡದ ಮುತ್ತು
ನಮ್ಮ ಮನೆಗೆ ಬಂದ ಸಂಪತ್ತು
ಶೃತಿ - ಅರಸು ಮಗನಾಗಿ
ಕೃಷ್ಣ ಸ್ವರೂಪದ ಕುಡಿಯಾಗಿ
ಹರ್ತಿಕೋಟೆಯ ಹುಲಿಯಾಗಿ
ಎಲ್ಲರ ಮುದ್ದಿನ ಚೆಲುವಾಗಿ
ಅಕ್ಷರ ಕಲಿವ ಮುನ್ನವೇ ನುಡಿವ
ಅಂಬೆಗಾಲ ಇಡುತ ಮೆಲ್ಲನೆ ನಡೆವ
ಕಿಲ ಕಿಲ ಕಿಲ ಕಿಲ ನಗುವಿನಲಿ
ಸುಂದರ ಪ್ರೀತಿಯು ಜೊತೆಯಲ್ಲಿ
ಅಕ್ಷರ ಲೋಕದ ಅಮೃತ ಕ್ಷಣ
ಗುರುಕುಲ ಪಾಠದ ಹೂರಣ
ಜನಿಸಿದ ದಿನವೇ ಅಮ್ಮ ಅಂದ
ಸರ್ವರ ಮಡಿಲಲಿ ಜಗದಾನಂದ
ಬೆಳಗಲಿ ಬೆಳಗಲಿ ಅಧಿಪತಿಯಾಗಿ
ಸರ್ವೋದಯವಾಗಲಿ ಅನಿಕೇತನನಾಗಿ
- ಮಾಲತೇಶ್ ಅರಸ್ ಹರ್ತಿಮಠ
25 ರಾಜ್ಯೋತ್ಸವ 2012
Malathesh Urs Harthimath ( Chitradurga Fort)
Monday, January 7, 2013
ಭಂಡಾರದೊಡೆಯ
- ಮಾಲತೇಶ್ ಅರಸ್ ಹರ್ತಿಮಠ
ತುಂಗಭದ್ರ ದಡೆಯಲಿ, ಪವಿತ್ರ ಸುಕ್ಷೇತ್ರದಲಿ
ಕೋಟಿ ಕೋಟಿ ಭಕ್ತರ ಹರುಷದ ಹೊಳೆಯಲಿ
ಉಕ್ಕಿ ಹರಿಯುವ ಗೊರವಯ್ಯರ ದೋಣಿಯಾತ್ರೆ
ಲಕ್ಷೋಪಲಕ್ಷ ಭಕ್ತರ ಮೈಲಾರದ ಜಾತ್ರೆ
ಢಮರುಗ, ಕೊಳಲು, ಗೆಜ್ಜೆಯ ಸದ್ದು
ಬರುತ್ತಿದ್ದಾನೆ ಏಳುಕೋಟಿ ಭಂಡಾರದಿಂದೆದ್ದು
ಚಾಂಗಮಲೋ ಚಾಂಗಮಲೋ
ಮೈಲಾರದಲಿ ದೈವ-ಭಕ್ತರ ಸಮಾಗಮ
ಮುಗಿಲು ಮುಟ್ಟಿದೆ ಮೈಲಾರದ ಅಂಗಳದಲಿ
ಕೋಟಿ ಭಕ್ತರ ವೇಷ - ಘೋಷ.
ಢಮರುಗ ರಿಂಗಣ. ಗಂಟೆಯ ಸದ್ದಣ
ದೀವಟಿಗೆ ಬೆಳಕಿನ ಸಿಂಚನ, ಚಾಟಿಏಟಿನ ಕಂಪನ.
ದೋಣಿಯಲಿ ಹಾಲು ತುಪ್ಪ ಪಂಚಾಮೃತ
ಭಕುತರ ಮನದಲಿ ಏಳುಕೋಟಿಯ ಸೆಳೆತ
ಭಂಡಾರದೊಡೆಯ ನೀ... ಮೈಲಾರಲಿಂಗ
ನೋವನ್ನು ಕಳೆದು ನಲಿವು ನೀಡೋ ದೈವ
ಸ್ವಯಂ ಭೂಲಿಂಗಕೆ ತುಂಗೆಯ ಅಭಿಷೇಕ
ಗೊರವಯ್ಯನ ಜೋಳಿಗೆಯಲಿ ಶಕ್ತಿಯ ಜಾಗ
ಹೊಳೆಯುತಿವೆ ನಿನ್ನಯ ದಿವ್ಯ ಪಾದುಕಿಗಳೆರಡು
ವಿಶ್ವದ ತುಂಬಾ ನಡೆದಾಡಿದ ದೇವ ಕಣ್ತುಂಬಿ ನೋಡು
ಪರಶೆಯಲಿ ಜೋಡೆತ್ತುಗಳ ಸಾಲು ಸಾಲು ಬಂಡಿ
ಭಕ್ತರ ಹರಕೆಯಲ್ಲಿ ತುಂಬಿದೆ ದೈವದ ಹುಂಡಿ
ಗಂಗಿಮಾಳವ್ವ, ಚಿಕ್ಕಯ್ಯ ದೊಡ್ಡಯ್ಯರಿಗೂ ನಮಿಪೆ
ಭಂಡಾರದೊಡೆಯ ಇರಲಿ ದೇವ ನಿನ್ನಯ ಕೃಪೆ
ಕರಿಯ ಕಂಬಳಿಯ ತೊಟ್ಟ ಸಹಸ್ರಾರು ಗೊರವರು.
ಗದ್ದುಗೆಯಲಿ ಗುರು ವೆಂಕಪ್ಪಯ್ಯ ಒಡೆಯರು
ಶ್ವೇತ ತೇಜನ ಮೇಲೆ ಗುರು ಒಡೆಯರ ಸವಾರಿ
ಡೆಂಗಪ್ಪನ ಮರಡಿಯಲಿ ಕುಳಿತಿಹನು ಮೈಲಾರಿ.
ಬುಡಕಟ್ಟು - ಜಾನಪದ ಸಂಸ್ಕೃತಿಯ ಅನಾವರಣ
ಸಮುದ್ರದಲೆಯಷ್ಟು ಭಕ್ತರೇ ತುಂಬಿದ ತಾಣ
ಕೋಟಿ ಮನಗಳ ಮುಂದೆ ಬೃಹತ್ ಬಯಲಿನಲಿ
ಬಿಲ್ಲನೇರಿದ ಗೊರವಯ್ಯ ನುಡಿವ ಕಾರಣಿಕ
ಜಗದ ಒಡೆಯ ನೀನು ನನ್ನ ಒಡಲಿಗೆ
ಮೌನವಾಗುವುದು ಜಗವು ನಿನ್ನ ಸದ್ದಲೇ ಸದ್ದಿಗೆ
ಚಾಂಗಮಲೋ ಚಾಂಗಮಲೋ ಉದ್ಘೋಷ ನಿನಗೆ
ಅವತರಿಸಿ ಬಾ ಪವಾಡ ಪುರುಷ ನೀ ಮತ್ತೊಮ್ಮೆ ಭುವಿಗೆ..
Sunday, January 6, 2013
ಮಾಲತೇಶ್ ಅರಸ್ ಎಲ್.ವಿ. ಹರ್ತಿಕೋಟೆ
ವೈಯಕ್ತಿಕ ಪರಿಚಯ
ಮಾಲತೇಶ್ ಅರಸ್ ಹರ್ತಿಮಠ
ಎಂ.ಎ.,ಬಿ.ಎಡ್.,ಪಿಜಿಡಿಜೆ.,ಎಲ್.ಎಲ್‌ಬಿ (ಎಂ.ಎ.ರಾಜ್ಯಶಾಸ್ತ್ರ.,)
ಖಾಯಂ ವಿಳಾಸ:
ಮಾಲತೇಶ್ ಅರಸ್ ಎಲ್.ವಿ
ಪತ್ರಕರ್ತರು. ಮತ್ತು ಉಪನ್ಯಾಸಕರು.
ಹರ್ತಿಕೋಟೆ. ಹಿರಿಯೂರು ತಾಲೂಕು ಚಿತ್ರದುರ್ಗ ಜಿಲ್ಲೆ. ಕರ್ನಾಟಕ.
ಮೊ-9480472030 ಮನೆ-08191-286691
ಪೂರ್ಣ ಹೆಸರು : ಮಾಲತೇಶ್ ಅರಸ್ ಎಲ್.ವಿ
ತಂದೆ : ಎಲ್. ವೀರಭದ್ರಯ್ಯ ( ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್)
ತಾಯಿ : ವಿ. ವನಜಾಕ್ಷಮ್ಮ (ಗೃಹಿಣಿ)
ಜನ್ಮ ದಿನಾಂಕ : ಮೇ 21 .1980
ಸಂಪರ್ಕ : ಮೊ-9480472030 ಮನೆ-08191-286691
ಶೈಕ್ಷಣಿಕ ಅರ್ಹತೆ :
ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ. (2009)
ಬಿಎಡ್ : ಬ್ಯಾಚುಲರ್ ಆಫ್ ಎಜುಕೇಷನ್. (2006)
ಎಲ್ ಎಲ್ ಬಿ : ಕಾನೂನು ಪದವಿ (2012)
ಸ್ನಾತಕೋತ್ತರ ಡಿಪ್ಲೊಮಾ ಪತ್ರಿಕೋದ್ಯಮ.(2004)
ಬಿ ಎ : (2003)
ಡಿಪ್ರೋಮ ಎಲೆಕ್ಟ್ರಿಕಲ್ : (1997)
ಎಸ್ಎಸ್ಎಲ್ ಸಿ .(1995)
ಧ್ಯೇಯಗಳು
ನೊಂದವರಿಗೆ ಸಾಂತ್ವನ ಹೇಳಬಲ್ಲ, ಅಶಕ್ತರ ದನಿಯಾಗಬಲ್ಲ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಲೇಖನಿ ಝಳಪಿಸುವ ಎದೆಗಾರಿಕೆಯುಳ್ಳ ಪ್ರಾಮಾಣಿಕ ಪತ್ರಕರ್ತನಾಗಿ ಮಾಧ್ಯಮ ಲೋಕದಲ್ಲಿ ಗುರ್ತಿಸಿಕೊಳ್ಳಬೇಕು. ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಬೇಕು. ನಿರ್ಲಕ್ಷಿತ ವ್ಯಕ್ತಿ, ವಿಚಾರಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಹೆಬ್ಬಯಕೆಯಿಂದ ಪತ್ರಿಕೋಧ್ಯಮದಲ್ಲಿ ವೃತ್ತಿ ಮಾಡುತ್ತಿರುವೆ.
ಪ್ರಸ್ತುತ ವೃತ್ತಿ.
ವಿಜಯವಾಣಿ ಹಿರಿಯ ಉಪ ಸಂಪಾದಕ
ಅನುಭವ
ಸಮಯ ಟಿವಿ 24*7 ಕನ್ನಡ ನ್ಯೂಸ್ ಚಾನಲ್ ನಲ್ಲಿ ಚಿತ್ರದುರ್ಗ ಜಿಲ್ಲಾ ಹಿರಿಯ ವರದಿಗಾರನಾಗಿ 2 ವರ್ಷಗಳಿಂದ ಸೇವೆ.
ಸುವರ್ಣ ನ್ಯೂಸ್ 24*7 ಕನ್ನಡ ಚಾನಲ್‌ನಲ್ಲಿ ದಾವಣಗೆರೆ ಜಿಲ್ಲಾ ವರದಿಗಾರನಾಗಿ 4 ವರ್ಷಗಳ ಸೇವೆ
ವಿಜಯ ಕರ್ನಾಟಕ : ಐದು ವರ್ಷಗಳ ಕಾಲ ವರದಿಗಾರನಾಗಿ ಅನುಭವ
ಸೂರ್ಯೋದಯ : ಉಪ ಸಂಪಾದಕ/ವರದಿಗಾರನಾಗಿ ಒಂದು ವರ್ಷ ಸೇವೆ
ಪ್ರಜಾಪ್ರಗತಿ, ಮತ್ತು ಈ ಸಂಜೆಯಲ್ಲಿ ಚಿತ್ರದುರ್ಗ ಜಿಲ್ಲಾ ವರದಿಗಾರನಾಗಿ ಒಂದು ವರ್ಷ ಸೇವೆ
ಗಿರೀಶ ಕಾಲೇಜಿನಲ್ಲಿ ಶಿಕ್ಷಕನಾಗಿ ಮತ್ತು ದಾವಣಗೆರೆ ಬಾಪೂಜಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ.
ಹವ್ಯಾಸಗಳು
ಪುಸ್ತಕ ಓದುವುದು, ಸಂಗೀತ ಕೇಳುವುದು, ನ್ಯೂಸ್ ಚಾನೆಲ್ ನೋಡುವುದು, ಕಥೆ, ಕವನ, ಲೇಖನ ಸೇರಿದಂತೆ ಸೃಜನಶೀಲ ಬರವಣಿಗೆ. ಆತ್ಮ ಚರಿತ್ರೆ ಓದುವುದು. ಚಿತ್ರಕಲೆ, ಸಂಘಟನೆ. ಪತ್ರಿಕೆಗಳ ಅಧ್ಯಯನ. ಸೇವಾ ಮನೋಭಾವ. ಕವಿಗೊಷ್ಟಿ ಪರಿಸರ ಸಂರಕ್ಷಣೆ. ಮತ್ತು ವನ್ಯ ಜೀವಿಗಳ ಸಂರಕ್ಷಣೆ. ಹಳೆಯ ನಾಣ್ಯ ಮತ್ತು ನೋಟುಗಳ ಸಂಗ್ರಹ
ಆಸಕ್ತಿದಾಯಕ ಕ್ಷೇತ್ರಗಳು
ಪತ್ರಿಕೋಧ್ಯಮ, ರಾಜಕೀಯ, ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಕೃಷಿ ಸಂಶೋಧನೆ, ಕ್ರೀಡೆ
ಪ್ರಶಸ್ತಿಗಳು :
೧ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ. ಕರ್ನಾಟಕ
ಸರ್ಕಾರ. (2007-08)
೨ ರಾಜೀವ್ ಗಾಂಧಿ ರಾಜ್ಯ ಯುವ ಪ್ರಶಸ್ತಿ : ಭಾರತ ರಾಷ್ಟ್ರೀಯ ಯುವ ಕ್ಷೇಮಾಭ್ಯುದಯ ಪ್ರತಿಷ್ಟಾನ
ಮೈಸೂರು. (2006-07)
೩ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ : ಯುವಜನ ಸೇವೆಯಲ್ಲಿ ಮತ್ತು ಪರಿಸರ ಸಂರಕ್ಷಣೆಗಾಗಿ ಚಿತ್ರದುರ್ಗ
ಜಿಲ್ಲಾಡಳಿತ. (2006)
೪ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ : ನೆಹರು ಯುವ ಕೇಂದ್ರ ಚಿತ್ರದುರ್ಗ. ಕೇಂದ್ರ ಸರ್ಕಾರ (2004)
೫ ಜಿಲ್ಲಾ ಅತ್ಯುತ್ತಮ ಯುವಕ ಸಂಘ ಪ್ರಶಸ್ತಿ : ನೆಹರು ಯುವ ಕೇಂದ್ರ ಚಿತ್ರದುರ್ಗ. (2003)
೬ ಎನ್.ಎಸ್.ಎಸ್ ಪ್ರಶಸ್ತಿ : ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಕುವೆಂಪು ವಿಶ್ವ ವಿದ್ಯಾನಿಲಯ.
೭ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ : ಬಿ.ಎ ಅಧ್ಯಯನ ಮಾಡುವಾಗ ಕಾಲೇಜಿನ ಆಡಳಿತ ಮಂಡಳಿ.
೮ ಯುವ ಸಾಹಿತಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಪುರಸ್ಕಾರ
೯ ಚುಟುಕು ಕವಿ ರತ್ನ ಪ್ರಶಸ್ತಿ.
ಪುರಸ್ಕಾರ ಮತ್ತು ಸನ್ಮಾನಗಳು :
ಸಮಾಜ ಸೇವೆಗಾಗಿ , ಪತ್ರಕರ್ತನಾಗಿ, ಯುವ ಸಾಹಿತಿಯಾಗಿ ಸೇವಾ ಕಾರ್ಯ ನಿರ್ವಹಿಸಿದ್ದಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವುದಕ್ಕೆ ಸಂದ ಗೌರವಗಳು.
* ರಾಜ್ಯ ಸರ್ಕಾರದ ಪರವಾಗಿ ಯುವ ಜನ ಸೇವಾ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಮತ್ತು ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಸನ್ಮಾನಿಸಿ ಪುರಸ್ಕರಿಸಿದ್ದಾರೆ.
* ಮಠಾಧೀಶರುಗಳಾದ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮರುಘಾ ಶರಣರು, ಕಾಗೀನೆಲೆ ಕನಕ ಗುರುಪೀಠದ . ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ. ಹೊಸದುರ್ಗದ ಕನಕ ಮಠದ ಶ್ರೀ ಈಶ್ವರಾನಂದಪುರಿ ಮಹಾ ಸ್ವಾಮೀಜಿ. ಬಾಳೆ ಹೊನ್ನೂರು ಪೀಠದ ರಂಭಾಪುರಿ ಶ್ರೀಗಳು. ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ, ದಾವಣಗೆರೆ ಪಂಚಮಸಾಲಿ ಮಠದ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿ. ಸೇರಿದಂತೆ ಅನೇಕ ಶ್ರೀಗಳು ಸನ್ಮಾನಿಸಿ ಗೌರವಿಸಿದ್ದಾರೆ.
* ಕನ್ನಡ ಸಾಹಿತ್ಯ ಪರಿಷತ್ತು. ಮಕ್ಕಳ ಸಾಹಿತ್ಯ ವೇದಿಕೆ.
ಕೃತಿಗಳು :
ಅಪ್ಪ ಮತ್ತು ನಾನು : ಚೊಚ್ಚಲ ಕವನ ಸಂಕಲನ 2008.
ವೃತ್ತಿ ಅನುಭವ
* ಸರಿಸುಮಾರು 500 ಕ್ಕೂ ಹೆಚ್ಚು ಬೈ ಲೈನ್ ಸ್ಟೋರಿಗಳು ಸೇರಿದಂತೆ ರಾಜ್ಯದ ಪ್ರಮುಖ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಹಾಗೂ ಚಳುವಳಿಗಾರರು. ಸ್ವಾಮೀಜಿಗಳ ನೇರ ಸಂದರ್ಶನದ ಅನುಭವವನ್ನು ಸಮಯ ಟಿವಿ ಬಿತ್ತರಿಸಿದೆ.
* ಸುವರ್ಣ ನ್ಯೂಸ್ 24*7 ಟೂ ಎಂ.ಬಿ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ 2000ಕ್ಕೂ ಹೆಚ್ಚು ಬೈ ಲೈನ್ ಸ್ಟೋರಿ ಹಾಗೂ ವಿಶೇಷ ಸೆಗ್ಮೇಂಟ್‌ಗಳನ್ನು ನೀಡಿದ್ದೇನೆ. ಅಲ್ಲದೆ ಸಂಸತ್ ಚುನಾವಣೆ. ವಿಧಾನ ಸಭೆ ಸೇರಿದಂತೆ ಮಹಾನಗರ ಪಾಲಿಕೆಯ ಚುನಾವಣೆಗಳನ್ನು ವರದಿ ಮಾಡಿದ ಅನುಭವ.
* ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿದ ಪೋಟೋ ಸಹಿತ ಸುಮಾರು 120 ಲೇಖನಗಳು ಪ್ರಕಟಗೊಂಡಿವೆ.
ಕೆಲ ವಿಶೇಷ ವರದಿಗಳ ಕಿರು ಚಿತ್ರಣ.
ದಾವಣಗೆರೆಯಲ್ಲಿ ನಕಲಿ ಬೆಣ್ಣೆದೋಸೆ ( ತನಿಖಾ ವರದಿ)
ಹೊನ್ನಾಳಿಯಲ್ಲಿ ಬಂಧಿತರಾದ ಬೈಕ್ ಕಳ್ಳರ ಸೋಗಿನ ಉಗ್ರರು (ತನಿಖಾ ವರದಿ)
ಚಿತ್ರದುರ್ಗದ ಅಕ್ರಮ ಅಕ್ಕಿ ಮಾಫೀಯಾ, ( ತನಿಖಾ ವರದಿ)
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮತ್ತು ಹಿರಿಯೂರು ಅಕ್ರಮ ಮರಳು ಮಾಫಿಯಾ (ಸರಣಿ ತನಿಖಾ ವರದಿ)
ಭದ್ರಾ ಮೇಲ್ದಂಡೆ ಹೋರಾಟ (ಸರಣಿ ವರದಿ)
ಹಕ್ಕಿ ಪಿಕ್ಕಿ ಜನಾಂಗದ ಕ್ಷ ಕಿರಣ ವರದಿ.
ಇಂಪ್ಯಾಕ್ಟ್ ಆದ ದಾವಣಗೆರೆ ಮಲ್ಟಿಜಿಮ್ ವರದಿ. (ಕ್ರೀಡಾ ವರದಿ)
ದಾವಣಗೆರೆಯಲ್ಲಿ ಕಳ್ಳ ಸ್ವಾಮೀಜಿ ಬಯಲಿಗೆ. (ತನಿಖಾ ವರದಿ)
ಸ್ವಾತಂತ್ರ್ಯೋತ್ಸವದ ವಿಶೇಷ ಅರ್ಧ ತಾಸಿನ ಸ್ಟೋರಿ.
ಕಾರ್ಗಿಲ್ ಯುದ್ದದ ನೆನಪಿನ ವಿಶೇಷ ಅರ್ಧ ತಾಸಿನ ಸ್ಟೋರಿ
ಚಿತ್ರದುರ್ಗದಲ್ಲಿ ನಿಲ್ಲದ ಕಲ್ಲು ಗಣಿಗಾರಿಕೆ. ಪರಿಸರ ನಾಶ (ಸರಣಿ ವರದಿ)
* ಮಾಲತೇಶ್ ಅರಸ್ ಹರ್ತಿಮಠ
ರಮಣೀಯ ರಾಮಗಿರಿ ಕರಿಸಿದ್ದೇಶ್ವರ ಬೆಟ್ಟ.
* ಡಿಸೆಂಬರ್ 31 ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ
* ರಾಜ್ಯದಲ್ಲಿಯೇ ಜರುಗುವ ವಿನೂತನ ಬಾಳೆಹಣ್ಣು ಪರಿಷೆ
* ಬೆಟ್ಟದ ತುಂಬಾ ದೀಪಗಳ ಕಲರವ
* 323 ಮೆಟ್ಟಿಲುಗಳ ಮೇಲೆ ಭಕ್ತರ ಸ್ವರ್ಗ
* ರೋಗಗಳಿಗೆ ಸಂಜೀವಿನಿ ಬೆಟ್ಟದ ಮೇಲಿನ ಬಾವಿ ನೀರು
* ತುತ್ತ ತುದಿಯಲಿ ಶಿವಲಿಂಗವಿರುವ ‘ಮೇಲ್ದುರ್ಗ ’
* ಹಸಿರ ಸೊಬಗಿನ ವೈಭವ, ಗಂಧದ ಬಟ್ಟಲು ಹೂಗಳ ಸ್ವಾಗತ
* ಬರ ಬಂದರೇ ತುಂಬುವ ಬಾವಿ.
ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ, ಹೂ ಬಿರಿದು ನಿಂತ ಗಿಡಗಂಟೆಗಳು, ಗಂಧ, ಹೊನ್ನೆ, ಬೀಟೆ ಸೇರಿದಂತೆ ವಿವಿಧ ಬಗೆಯ ಮರಗಳ ಸುಮಧುರ ಘಮಲು, ಸುವಾಸನೆಯಿಂದ ಕೂಡಿದ ವನ ಸುಮಗಳು, ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಕಣ್ಣ ತುಂಬಾ ಕಾಣುವ ಜೇನು ಗೂಡುಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು, ಕಿವಿಗಿಂಪಾದ ಜಾಗಟೆ ನಿನಾದ, ಕರಡಿಗೆ ಸದ್ದು....
ಸುಂದರ ಬೆಟ್ಟಗಳ ನಡುವೆ ಕಾಣುವ ಪಾವನ ಕ್ಷೇತ್ರ ಅದುವೇ.. ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ ಗುಡ್ಡಗಳ ನಡುವಿನ ರಾಮಗಿರಿ ಒಂದು ಸುಂದರ ತಾಣ. ಹಚ್ಚ ಹಸಿರಿನ ಬೆಟ್ಟದಲ್ಲಿ ನೆಲೆ ನಿಂತಿರುವ ದೇವಗೆ ನಿತ್ಯ ಪರಿಸರ ಅಭಿಷೇಕ. ನಿತ್ಯ ಸಹಸ್ರಾರು ಭಕ್ತರ ಭೇಟಿ ಮತ್ತು ಬೆಟ್ಟದ ಮುಂಭಾಗದ ಕಾಣುವ ಕೆರೆಯಿಂದಾಗಿ ಇಲ್ಲಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ.
ಕೋಟೆಗಳ ನಾಡೆಂದೇ ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸುಪ್ರಸಿದ್ದ ಕ್ಷೇತ್ರವೆಂದೇ ಹೆಸರು ಪಡೆದಿರುವುದೇ ಹೊಳಲ್ಕೆರೆ ತಾಲೂಕಿನ ರಾಮಗಿರಿ ಸುಕ್ಷೇತ್ರ. ಇಲ್ಲಿ ಕನಸುಗಳು ಅರಳುತ್ತವೆ. ಮನಸುಗಳು ಸಂಭ್ರಮಿಸುತ್ತವೆ. ಭಕ್ತಿಯ ಜತೆಗೆ ಇಲ್ಲಿ ಪರಿಸರ ದೇವತೆಯೇ ಎದ್ದು ಬರುತ್ತಾಳೆ ಎಂಬ ಭಾವನೆ ಮೂಡುತ್ತದೆ.
323 ಮೆಟ್ಟಿಲು:
ರಾಮಗಿರಿ ಕ್ಷೇತ್ರ 21 ದೇವಾಲಯಗಳನ್ನು ಒಳಗೊಂಡಿರುವ ಹೋಬಳಿ. ಇಲ್ಲಿ ವಿರಕ್ತಮಠ, ಮರಿದೇವರ ಮಠ, ಚರಂತಮಠಗಳೂ ಇವೆ. ಇಲ್ಲಿರುವ ಈ ಕರಿಸಿದ್ದೇಶ್ವರ ಸ್ವಾಮಿ ಮತ್ತು ವೀರಭದ್ರಸ್ವಾಮಿ ಬೆಟ್ಟ ಹತ್ತಲು 323 ಮೆಟ್ಟಿಲು ಹತ್ತಬೇಕು. ಬೆಟ್ಟವನ್ನು ಪ್ರವೇಶಿಸಿದಾಗ ಎಡಭಾಗದಲ್ಲಿ ಗಜಾನನ ದೇವಾಲಯ ಬಲಭಾಗದಲ್ಲಿ ಬಸವೇಶ್ವರ ದೇವಾಲಯ. ಮುನ್ನೆಡೆದರೇ ಅಲ್ಲಿ ಪಾದ ಘಟ್ಟ, ನಡುವೆ ಬೈರಸಿದ್ದೇಶ್ವರ ಸ್ವಾಮಿ ಗುಹೆ. ಮೆಲ್ಲನೇ ಏರುತ್ತಲೇ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಾಲಯ ಮತ್ತು ಉದ್ಬವಲಿಂಗ ಗೋಚರವಾಗುತ್ತದೆ. ಬಲಭಾಗದಲ್ಲಿ ವೀರಭದ್ರೇಶ್ವರ ದೇಗುಲವೂ ರಾರಾಜಿಸುತ್ತದೆ.
ಬೆಟ್ಟದಲ್ಲಿ ಬಾವಿ :
ಬೆಟ್ಟದ ಮೇಲಿರುವ ದೇವಾಲಯದೊಳಗೆ ಗಂಗಮ್ಮನ ಬಾವಿ ಇದೆ. ಇದು ಮಳೆ ಬಂದಾದ ನೀರು ತಳ ತಲುಪುತ್ತದೆ. ಮಳೆ ಬಾರದೇ ಬರ ಎದುರಾಗುವ ವೇಳೆ ಬಾವಿ ನೀರು ಮೇಲೆ ಬರುವ ಮೂಲಕ ಮುನ್ಸೂಚನೆ ನೀಡುತ್ತದೆ. ಈ ಬಾವಿ ಕಾಶಿಯಿಂದ ಸಂಪರ್ಕ ಇದೆ ಎಂಬ ನಂಬಿಕೆ. ಈ ನೀರು ಹಲವು ರೋಗಗಳಿಗೆ ಸಂಜೀವಿನಿಯಿದ್ದಂತೆ. ಬೆಟ್ಟದ ತುತ್ತ ತುದಿಯನ್ನ ಮೇಲ್ದುರ್ಗವೆಂದು ಕರೆಯುತ್ತಾರೆ ಇಲ್ಲಿಯೂ ಉದ್ಬವ ಲಿಂಗವಿದೆ. ಅದಕ್ಕೆ ಹರಿಹರೇಶ್ವರ ಎಂಬ ಹೆಸರಿದೆ.
ಪುರಾಣ ಪ್ರಸಿದ್ದ:
ರಾಮಾಯಣದಲ್ಲಿ ಈ ತಾಣವನ್ನು ಹಾಲುರಾಮೇಶ್ವರ, ರಾಮದೇವರು ಎನ್ನಲಾಗುತ್ತಿತ್ತು ಎಂಬ ನಂಬಿಕೆ ಇದೆ. ದೇವರು ಬೆಟ್ಟದಲ್ಲಿ ನೆಲೆಸಿರುವ ಕಾರಣ ರಾಮ ಮತ್ತು ಗಿರಿ (ಬೆಟ್ಟ) ಸೇರಿ ರಾಮಗಿರಿ ಎಂಬ ಹೆಸರು ಬಳಕೆಗೆ ಬಂದಿದೆ ಎನ್ನಲಾಗಿದೆ. ಜೊತೆಗೆ ಇಲ್ಲಿ ಸಾಧು ಸಂತರು ನೆಲೆಸಿ ಸ್ಥಳದ ಮಹಿಮೆ ಮತ್ತಷ್ಟು ಹೆಚ್ಚಿಸಿದ್ದಾರೆ. ಇಲ್ಲಿ ಪ್ರತಿ ವರ್ಷವೂ ಭಕ್ತರು ಕರಿಸಿದ್ದೇಶ್ವರನಿಗೆ ಮಾಲೆ ಹಾಕುತ್ತಾರೆ.
ಕಾರ್ತಿಕೋತ್ಸವ ;
ಬಟ್ಟೆಯನ್ನು ಸಿಂಬೆ ರೀತಿ ಸುತ್ತಿ ತಯಾರಾದ ದೀಪಗಳನ್ನು ಬೆಟ್ಟದ ತುಂಬಾ ಮತ್ತು ಬೆಟ್ಟಕ್ಕೆ ಹತ್ತುವ ಪ್ರತಿ ಮೆಟ್ಟಿಲುಗಳ ಎರಡು ಬದಿ ಹಚ್ಚುವ ಮೂಲಕ ದೀಪೋತ್ಸವ ಕಾರ್ತಿಕೋತ್ಸವ ನಡೆಯುತ್ತದೆ. ಇದು ಲಕ್ಷ ದೀಪೋತ್ಸವ ಎಂದೇ ಖ್ಯಾತಿಗಳಿಸಿದೆ.
ಬಾಳೆ ಪರಿಷೆ :
ಈ ಜಾತ್ರೆಯ ವಿಶೇಷ ಬಾಳೆಹಣ್ಣಿನ ಪರಿಷೆ. ಉತ್ಸವದ ಕೇಂದ್ರ ಬಿಂದುವೆಂದರೇ ಬಾಳೆಹಣ್ಣಿನ ರಾಶಿ. ಭಕ್ತರು ಹರಕೆಯ ಬಾಳೆಹಣ್ಣುಗಳನ್ನು ಬೆಟ್ಟದ ಮುಂಭಾಗದ ದ್ವಾರ ಬಾಗಿಲು ಮುಂಭಾಗ ದೊಡ್ಡ ರಾಶಿ ಹಾಕಿ ಪೂಜೆ ಮಾಡುತ್ತಾರೆ. ಈ ರಾಶಿ ನೋಡಲು ಒಂದು ಸುಂದರ ಹಳದಿ ಬೆಟ್ಟದಂತೆ ಕಾಣುತ್ತದೆ. ನಂತರ ಈ ರಾಶಿ ಬಾಳೆಹಣ್ಣುಗಳನ್ನು ಪ್ರಸಾದವಾಗಿ ಹಂಚಲಾಗುತ್ತದೆ. ಇದರ ಜೊತೆ ಉತ್ಸವ ಹೂವಿನ ಉತ್ಸವ, ಕದಳಿ ಸೇವೆ, ಪಲ್ಲಕ್ಕಿ ಉತ್ಸವ, ವೀರಗಾಸೆ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.
ಬಾಳೆ ಮಂಟಪ :
ಕರಿಸಿದ್ದೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಕರಿಯಮ್ಮ ದೇವಿಯನ್ನು ಚರಂತ ಮಠದ ಮುಂಭಾಗ ಬಾಳೆ ದಿಂಡು, ವೀಳ್ಯದ ಎಲೆ ಮತ್ತು ನಾನಾ ರೀತಿ ಹೂಗಳನ್ನು ಬಳಸಿ ಮಂಟಪ ನಿರ್ಮಿಸಲಾಗುತ್ತದೆ. ಅಲ್ಲಿ ದೇವರನ್ನು ಪವಡಿಸಲಾಗುತ್ತದೆ. ಇದು ವಿಶೇಷವಾಗಿ ಬಾಳೆ ದಿಂಡಿನ ಮಂಟಪವಾಗಿರುತ್ತದೆ. ತಾವೂ ಕೂಡ ರಾಮಗಿರಿ ಕ್ಷೇತ್ರಕ್ಕೊಮ್ಮೆ ಭೇಟಿ ಕೊಡಿ. ಪವಾನರಾಗಿ.
ಬಾಕ್ಸ್ :
ಎರಡು ದಾರಿಗಳು:
ಇಲ್ಲಿ ಶ್ರಾವಣ ಬಂದರೆ ಸಾಕು ಎಲ್ಲಿಲ್ಲದ ಹಿಗ್ಗು. ಇನ್ನೂ ಕಡೇ ಕಾರ್ತಿಕ ಬಂದ್ರೆ ಊರ ಹಬ್ಬವೇ ನಡೆಯುತ್ತದೆ. ಇನ್ನು ಬೆಟ್ಟವನ್ನು ತಲುಪಲು ಎರಡು ದಾರಿಗಳಿವೆ. ಒಂದು ಮೆಟ್ಟಿಲುಗಳಿಂದ ಹತ್ತುವುದು. ಇನ್ನೊಂದು ಸಾಹಸದ ದಾರಿ. ಸಾಹಸ ಪ್ರವೃತ್ತಿಯ ಚಾರಣಿಗಳಿಗೆ ಕಲ್ಲು ಮುಳ್ಳಿನ ದಾರಿ ಇಷ್ಟವಾಗುತ್ತದೆ. ಬೆಟ್ಟದೊಳಗೊಂದು ರಸ್ತೆ ಇದ್ದು ಕಲ್ಲು ಮುಳ್ಳುಗಳ ಹಾದಿಯನ್ನು ಹಾಸುತ್ತದೆ.
ಬಾಕ್ಸ್:
ಡಿಸೆಂಬರ್ 31 ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ
ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯ ರಾಮಗಿರಿ ಐತಿಹಾಸಿಕತೆಯನ್ನು ಹೊಂದಿರುವ ಮಹಾಕ್ಷೇತ್ರ. ಹೊಳಲ್ಕೆರೆ ತಾಲೂಕು ರಾಮಗಿರಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ ಹಾಗೂ ವಿನೂತನ ಬಾಳೇಹಣ್ಣು ಪರಿಷೆ ಡಿಸೆಂಬರ್ 31ರಂದು ನಡೆಯಲಿದೆ. ನಡು ರಾತ್ರಿಯಲ್ಲಿ ಹಬ್ಬದ ಸಂಭ್ರಮದ ಜೊತೆಗೆ ಹೊಸವರ್ಷದ ಸಂಭ್ರವನ್ನು ಆಚರಿಸಬಹುದು. ರಾಜ್ಯದ ನಾನಾ ಭಾಗಗಳಿಂದ ಮೂರರಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಇದೀಗ ಇಲ್ಲಿ ಕಾಣುತ್ತಿರುವ ಪ್ರಕೃತಿ ವರ್ಣಕ್ಷೇತ್ರದ ಬೆಟ್ಟ ವಿದ್ಯುತ್ ಹಾಗೂ ಅಗ್ನಿ ದೀಪಾಲಂಕಾರ ಸಜ್ಜಾಗಿದೆ.
ಬಾಕ್ಸ್ :
ಹಸಿರ ಸೊಬಗು ಕಾಣಾ.
ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ ಇದು. ಬೆಟ್ಟದ ತಪ್ಪಲು, ಹೂ ಬಿರಿದು ನಿಂತ ಗಿಡ ಗಂಟೆಗಳು, ವಿವಿಧ ಬಗೆಯ ಮರಗಳ ಘಮಲು, ಸುವಾಸನೆಯಿಂದ ಕೂಡಿದ ವನಸುಮಗಳ ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು, ಇವೆಲ್ಲವೂ ಬೆಟ್ಟಹೊಕ್ಕರೇ ಸಾಕು ನಿಮಗೆ ಸಿಗುತ್ತವೆ.
ಪೋಟೋ ; ಸುಂದರ ಬೆಟ್ಟದ ಮತ್ತು ದೇಗುಲ ಪೋಟೋಗಳಿವೆ
ಹೊಸ ಬದುಕು ಕಟ್ಟೋಣ....
ಬಂತು ಹೊಸವರುಷ
ಭದ್ರ ಬುನಾದಿ ಹಾಕೋಣ
ಭವಿಷ್ಯದ ಸೌಧ ನಿರ್ಮಿಸೋಣ
ಇಂದಿನಿಂದ
ಎಲ್ಲವೂ ಹೊಸತಾಗಿರಲಿ
ಬದುಕು ಸುಂದರವಾಗಿರಲಿ
ಉತ್ಸಾಹ ಪುಟಿದೇಳಲಿ
ಕನಸುಗಳು ಅರಳಲಿ
ಹೊಸ ಯೋಜನೆಗಳಿರಲಿ
ಹೊಸ ನಿರ್ಧಾರಗಳಿರಲಿ
ಹೊಸ ಆಸೆಗಳು ಚಿಗುರಲಿ
ಬದುಕು ನೈಜವಾಗಿರಲಿ
ಕಾಯಕ ಆದರ್ಶವಾಗಿರಲಿ
ಹುಮ್ಮಸ್ಸಿನೊಂದಿಗೆ
ಸಂಕಲ್ಪದೊಂದಿಗೆ
ಹೊಸ ಗೆಳೆತನವ ಕಟ್ಟೋಣ
ಕೋಪ, ಅಸೂಯೆ,
ದ್ವೇಷವ ಸುಟ್ಟು ಹಾಕೋಣ
ಉತ್ತಮ ಬದುಕಿಗೆ
ಮುನ್ನುಡಿ ಬರೆಯೋಣ
ಹೊಸ ಗುರಿಯೊಂದಿಗೆ
ಜೀವನ ನಡೆಸೋಣ
ಹೊಸ ಬದುಕು ಕಟ್ಟೋಣ....
ಹೊಸತಾಗಿ ಬಾಳೋಣ
-ಮಾಲತೇಶ್ ಅರಸ್ ಹರ್ತಿಮಠ.
ವಿಜಯವಾಣಿ, ಬೆಂಗಳೂರು. 9480472030
Saturday, January 5, 2013
* ಮಾಲತೇಶ್ ಅರಸ್ ಹರ್ತಿಮಠ
ಚಿತ್ರದುರ್ಗದ ಕೋಟೆ ತುಂಬಾ ರಾಮಾಚಾರಿ ಹೆಜ್ಜೆ ಗುರುತುಗಳು......
* ನಾಗರಹಾವಿನ ಸರದಾರನ ನೆನಪು
* ಕೋಟೆ, ಕಾಲೇಜು, ಗರಡಿ ಮನೆಯಲ್ಲಿ ವಿಷ್ಣು ಜಪ
* ಕೋಟೆನಾಡಿನಿಂದ ಮೇರು ನಟ ಉದಯ
ಚಿತ್ರದುರ್ಗದ ಕೋಟೆಗೂ ವಿಷ್ಣುವರ್ಧನ್‌ಗೂ ಅವಿನಾಭಾವ ಸಂಬಂಧ. ಏಳು ಸುತ್ತಿನ, ಸಿಡಿಲಿಗೂ ಬೆಚ್ಚದ ಐತಿಹಾಸಿಕ ಕೋಟೆ ಒಳ ಆವರಣದ ಪ್ರತಿ ಜಾಗದಲ್ಲೂ ವಿಷ್ಣುವರ್ಧನ್ ಹೆಜ್ಜೆ ಗುರುತುಗಳಿವೆ.
1972 ರಲ್ಲಿ ನಿರ್ದೆಶಕ ಪುಟ್ಟಣ್ಣ ಕಣಗಾಲ್, ಸಂಪತ್ ಕುಮಾರ್ ಎಂಬ ಚಿಗುರು ಮೀಸೆ ಯುವಕನನ್ನು ನಾಗರಹಾವಿನ ಮೂಲಕ ಚಿತ್ರದುರ್ಗದ ಕೋಟೆಗೆ ಕರೆತಂದು ರಾಮಾಚಾರಿಯಾಗಿ ನಿಲ್ಲಿಸಿದಾಗ ಕನ್ನಡ ಕಲಾಲೋಕ ವಿಷ್ಣುವರ್ಧನ್ ಎಂಬ ಮೇರು ನಟನ ಉದಯವಾಯಿತು. ವಿಷ್ಣು ಅಗಲಿ ಇಂದಿಗೆ (30.12.2012) ಮೂರು ವರ್ಷ ಆದರೂ ಚಿತ್ರದುರ್ಗದಲ್ಲಿ ಸದಾ ವಿಷ್ಣು ಜಪ ಇದ್ದೇ ಇದೆ.
‘‘ ಕನ್ನಡನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ..
ಹೌದು.. ಡಾ. ವಿಷ್ಣುವರ್ಧನ್ ಎಂಬ ಅಪ್ರತಿಮ ನಾಯಕ ಹೊರಹೊಮ್ಮಿಸಿದ ಹಾಡಿದು. ಚಿತ್ರದುರ್ಗದ ಐತಿಹಾಸಿಕತೆಯನ್ನು ಬೆಚ್ಚಿ ಬೀಳಿಸುವಂತ ಹಾಡನ್ನು ಕೇಳುವಾಗ ರೋಮಗಳು ಎದ್ದೇಳುತ್ತವೆ. ಮನಸ್ಸು ಪುಟಿಯುತ್ತದೆ. ನಿಜಕ್ಕು ಇಲ್ಲಿ ನಾವೇ ಹೋರಾಟಕ್ಕೆ ನಿಂತಿದ್ದೇವೆಂಬ ಭಾವನೆ ಬೀರುತ್ತದೆ.
ರಾಷ್ಟ್ರಕ್ಕೆ ಮತ್ತೊಮ್ಮೆ ಲೋಕಾರ್ಪಣೆ:
ಇಂದಿಗೂ ಚಿತ್ರದುರ್ಗ ಅಂದ್ರೆ ಸಿನಿಮಾ ರಂಗದಲ್ಲಿ ವಿಷ್ಣುವರ್ಧನ್ ನೆನಪು ಚಿರಸ್ಥಾಯಿಯಾಗಿದೆ. ವಿಷ್ಣುವರ್ಧನ್‌ಗೆ ಚಿತ್ರದುರ್ಗ ಅಂದ್ರೆ ಬಲು ಪ್ರೀತಿ. ಅದು ಇದೇ ಕೋಟೆಯಲ್ಲಿ ನಾಗರಹಾವು ಚಿತ್ರೀಕರಣ ನಡೆಯುವಾಗ ಪುಟ್ಟಣ್ಣ ಕಣಗಾಲ್ ಸಿನಿಮಾ ಶೂಟಿಂಗ್ ನಡೆಯುತ್ತೆ ಅಂತ ಜನ ವೀಕ್ಷಣೆಗೆ ಸಾಲು ಸಾಲು ಬಂದಿದ್ರು. ಪುಟ್ಟಣ್ಣ ಕಣಗಾಲ್ ಕನ್ನಡ ನಾಡು ಕಂಡ ಧೀಮಂತ ನಿರ್ದೇಶಕ, ಅಂತಹ ಕಣಗಾಲ್ ಯುವಕ ವಿಷ್ಣುವರ್ಧನ್ ಅವರಿಗೆ ನಟನೆ ಕಲಿಸುತ್ತಿದ್ದ ಬಗೆ ನೋಡಿ ಈ ಯುವಕ ಮುಂದೊಂದು ದಿನ ಮಹಾನ್ ನಟನಾಗುತ್ತಾನೆ ಎಂಬ ಅನಿಸಿಕೆ ಕೋಟೆಯಲ್ಲಿ ಪ್ರತಿಧ್ವನಿಸಿದ್ದವು. ಅದು ಹುಸಿಯಾಗಲಿಲ್ಲ. ದುರ್ಗದ ನೆಲ ವಿಷ್ಣುವರ್ಧನ್ ಉದಯಕ್ಕೆ ಕಾರಣವಾಗಿತ್ತು. ಅಂದಿನಿಂದಲೂ ಇಂದಿನವರೆಗೂ ನಾಗರಹಾವಿನ ಮೂಲಕ ದುರ್ಗದ ಕೋಟೆಯೇ ರಾಷ್ಟ್ರಕ್ಕೆ ಮತ್ತೊಮ್ಮೆ ಲೋಕಾರ್ಪಣೆಯಾಯಿತು.
ಕ್ಯಾಜೇ ಬುಲ್ ಬುಲ್ ಮಾತಾಡಕಿಲ್ವಾ :
ಕೋಟೆಯ ಮುಂದೆ ಮದಕರಿನಾಯಕ ನಿರ್ಮಿಸಿದ ನಾಗರಹಾವು ಕಲ್ಲಿನ ಕೆತ್ತನೆ ನಿಜಕ್ಕೂ ನಾಗರಹಾವು ಸಿನಿಮಾಕ್ಕೆ ಮತ್ತಷ್ಟು ಶಕ್ತಿ ತುಂಬಿಕೊಟ್ಟಿತು. ನಾಗರಹಾವು ಚಿತ್ರದ ಸಂಪೂರ್ಣ ಚಿತ್ರೀಕರಣ ದುರ್ಗದಲ್ಲಿಯೇ ನಡೆದಿತ್ತು. ರಂಗಯ್ಯನ ಬಾಗಿಲು ಬಳಿ ಜಲೀಲ್ ಪಾತ್ರದ ಅಂಬರೀಶ್, ಆರತಿಗೆ ‘ ಕ್ಯಾಜೇ ಬುಲ್ ಬುಲ್ ಮಾತಾಡಕಿಲ್ವಾ ’ ಎಂದು ಅಣಕಿಸಿದ್ದನ್ನು ಮುರುಘಾ ರಾಜೇಂದ್ರ ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಕುಳಿತು ಜಲೀಲ್ ( ಅಂಬರೀಶ್) ಕಿರುಕುಳ ತಪ್ಪಿಸಿದರೇ ನಿನ್ನ ತಂಗಿ ಅಲುವೇಲು(ಆರತಿ) ಕೊಟ್ಟು ಮದುವೆ ಮಾಡ್ತೀಯಾ ಎಂದು ವರದ (ಶಿವರಾಂ)ಗೆ ವಿಷ್ಣುವರ್ಧನ್ ತಾಕೀತು ಮಾಡುವುದು. ರಂಗಯ್ಯನ ಬಾಗಿಲು ಬಳಿ ಜಲೀಲ್‌ನೊಂದಿಗೆ ಫೈಟ್ ಮಾಡುವ ದೃಶ್ಯಗಳು, ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪರೀಕ್ಷೆ ಬರೆಯುವಾಗ ರಾಮಾಚಾರಿ ತೊಡೆ ತುಂಬಾ ಕಾಪಿ ಚೀಟಿ ಅಂಟಿಸಿಕೊಂಡು ಕುಳಿತ ದೃಶ್ಯಗಳು. ಮಾರ್ಗರೇಟ್‌ಗೂ ಮುತ್ತಿಕ್ಕಿ ಪ್ರಾಚಾರ್ಯರಿಂದ ಬೈಸಿಕೊಂಡ ದೃಶ್ಯಗಳು ವಿಷ್ಣುವರ್ಧನ್ ರೂಪದಲ್ಲಿ ಇಂದಿಗೂ ದುರ್ಗದ ಜನರ ಮನದಲ್ಲಿ ಅಚ್ಚೊತ್ತಿವೆ.
ಅಲ್ಲದೆ ಇಲ್ಲಿ ನಾಗರಹಾವಿನ ನಂತರ ಸಖತ್ ಸಿನಿಮಾಗಳು ಶೂಟಿಂಗ್ ನಡೆಸಿವೆ. ಕಲ್ಲರಳಿ ಹೂವಾಗಿ, ಮೈಲಾರಿ, ಹುಡುಗರು, ಪರೋಡಿ, ಹೀಗೆ ಸಿನಿಮಾಕ್ಕೆ ಚಿತ್ರದುರ್ಗವನ್ನು ನಾಗರಹಾವು ತಳಪಾಯ ಹಾಕಿಕೊಟ್ಟಿದೆ.
ಲವ್ ಅಂಡ್ ಡೆತ್ ಸ್ಪಾಟ್:
ಹಾಗೆ ನೋಡಿದರೇ ಐತಿಹಾಸಿಕ ಕೋಟೆ ಆವರಣದ ತುತ್ತ ತುದಿ ತುಪ್ಪದ ಕೊಳ ಒಂದರ್ಥದಲ್ಲಿ ರಾಮಾಚಾರಿ ವಿಷ್ಣುವರ್ಧನ್ ಅವರ ಲವ್ ಅಂಡ್ ಡೆತ್ ಸ್ಪಾಟ್ ಕೂಡಾ ಹೌದು. ಮಾರ್ಗರೇಟ್‌ಳೊಂದಿಗೆ ಗಾಢವಾದ ಪ್ರೀತಿಯಲ್ಲಿ ಮುಳುಗಲು ಪುಟ್ಟಣ್ಣ ಆ ಸ್ಪಾಟ್ ಮಾಡಿಕೊಂಡಿದ್ದರು. ಅಂತಿಮವಾಗಿ ರಾಮಾಚಾರಿ ಮಾರ್ಗರೇಟ್‌ಳೊಂದಿಗೆ ಅಲ್ಲಿಂದ ಕೆಳಗೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಚಲನಚಿತ್ರ ದೃಷ್ಟಿಯಿಂದ ಚಿತ್ರದುರ್ಗದ ಕೋಟೆ ಅಂತರ ಧರ್ಮಿಯ ಪ್ರೇಮಿಗಳಿಗೆ ದುರಂತದ ಸಂದರ್ಭ ಸೃಷ್ಠಿಸಿದೆ. ನಾಗರಹಾವಿನಲ್ಲಿ ರಾಮಾಚಾರಿ ಮಾರ್ಗರೇಟ್‌ಗಳೊಂದಿಗೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ. ಅದೇ ರೀತಿ ಕಲ್ಲರಳಿ ಹೂವಾಗಿ ಚಿತ್ರದಲ್ಲಿಯು ಕೂಡಾ ಜಯದೇವ(ವಿಜಯ್ ರಾಘವೇಂದ್ರ )ನೂರ್ ಜಹಾನ್ ರ ಕೊಲೆಯಾಗುತ್ತದೆ.
ನಾಗರಹಾವು ಚಿತ್ರಿಕರಣವಾಗುವಾಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ. ಮೋಡ ಮುಸುಕಿದರೇ ತಾಸುಗಟ್ಟಲೇ ಶೂಟಿಂಗ್ ನಿಲ್ಲಿಸಲಾಗುತ್ತಿತ್ತಂತೆ, ಸೂರ್ಯ ಕಂಡಾಕ್ಷಣ ಆರಂಭಿಸಲಾಗುತ್ತಿತ್ತು. ತರಾಸು ಅವರ ನಾಗರಹಾವು, ಸರ್ಪಮತ್ಸರ, ಎರಡು ಹೆಣ್ಣು ಒಂದು ಗಂಡು ಕಥೆಗಳನ್ನಾಧರಿಸಿ ನಾಗರಹಾವು ಚಿತ್ರ ನಿರ್ಮಿಸಲಾಗಿತ್ತು, ತರಾಸು ಅವರ ಹೈಸ್ಕೂಲ್‌ನಲ್ಲಿ ನಡೆಯುವ ಪ್ರೇಮದ ಘಟನೆಗಳನ್ನಾಧರಿಸಿ ಕಥೆ ಬರೆದಿದ್ದರು ಇವೆಲ್ಲವುಗಳನ್ನು ಸೇರಿಸಿ ಪುಟ್ಟಣ್ಣ ಹೊಸ ಸ್ಕ್ರಿಪ್ಟ್ ಬರೆದು ಕಾಲೇಜು ಸನ್ನಿವೇಶಗಳಿಗೆ ಅಳವಡಿಸಿಕೊಂಡಿದ್ದರು. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಪುಟ್ಟಣ್ಣ ಹೀರೋ ಇಮೇಜ್ ನೀಡಿದ್ದರು. ಚಾಮಯ್ಯ ಮೇಷ್ಟ್ರು, ರಾಮಾಚಾರಿ, ಅಲುವೇಲು, ಮಾರ್ಗರೇಟ್, ಅಷ್ಟೇ ಏಕೆ ಪದೇ ಪದೇ ದೇವ್ರೆ ದೇವ್ರೆ ಎನ್ನುತ್ತಿದ್ದ ಚಾಮಯ್ಯ ಮೇಷ್ಟ್ರು ಪತ್ನಿ ಎಲ್ಲವೂ ಗಮನ ಸೆಳೆದಿದ್ದವು.
ಕೇರೆಹಾವು:
ಆದ್ರೆ ನಾಗರಹಾವು ಸಿನಿಮಾ ಬಿಡುಗೆಯಾದಾಗ ಸ್ವತಃ ತರಾಸು ಇದೊಂದು ಕೇರೆ ಹಾವು ಎಂದು ಬಣ್ಣಿಸಿ ವಿವಾದ ಸೃಷ್ಟಿಸಿದ್ದರು. ಈ ವೇಳೆ ವಿಷ್ಣುವರ್ಧನ್ ಸ್ವತಃ ಆತಂಕಕ್ಕೆ ಒಳಗಾಗಿದ್ದರು. ಮೊದಲ ಚಿತ್ರ ಸೋತರೇ ಮುಂದೇನು? ಎಂಬ ಚಿಂತೆ ಅವರಲ್ಲಿ ಮೂಡಿತ್ತು. ಆದರೇ ಪರಿಸ್ಥಿತಿ ಬೇರೆಯೇ ಆಗಿತ್ತು. ನಾಗರಹಾವು ಯಶಸ್ವಿಯಾಯ್ತು. ವಿಷ್ಣು ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ.
ನಾಗರಹಾವು ಚಿತ್ರ ನೂರನೇ ದಿನ ಸಂಭ್ರಮದ ಹಬ್ಬ ಯಶಸ್ವಿಯಾಗಿ ನಡೆದಿತ್ತು. ಚಿತ್ರದುರ್ಗಕ್ಕೆ ಚಿತ್ರದುರ್ಗವೇ ಸಕ್ಕರೆಯ ಸಿಹಿಯಲ್ಲಿ ಮಿಂದು ಹೋಗಿತ್ತು. ಮನೆ ಮನೆಯಲ್ಲಿ ಹಬ್ಬ. ಮನೆ ಮಗ ಗೆದ್ದ ಸಂಭ್ರಮ. ಎಲ್ಲರ ಮನೆಯಲ್ಲು ಕನ್ನಡ ನಾಡಿನ ವೀರ ರಮಣಿಯ ಹಾಡು ಗುನುಗುತ್ತಿತ್ತು. ಒಂದೊಂದು ಹಾಡುಗಳು ಇಲ್ಲಿ ಸಾಕಷ್ಟು ಖುಷಿಯನ್ನು ಕೊಡುತ್ತವೆ, ಸಾಕಷ್ಟು ಮುದವನ್ನು ಕೊಡುತ್ತವೆ.
ಇದೇ ವಿಷ್ಣುವರ್ಧನ್ ಮತ್ತು ಚಿತ್ರದುರ್ಗದ ಕೋಟೆಗೂ ಇರುವ ಪ್ರೀತಿ, ಒಲವು, ಅಕ್ಕರೆ, ಜೀವ ಎಂದು ಜನ ನೆನಪಿಸಿಕೊಳ್ಳುತ್ತಿದ್ದಾರೆ. ರಾಮಾಚಾರಿ, ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಅಗಲಿಕೆಯನ್ನು ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ ಬಹುಶಃ ಡಾ. ರಾಜ್‌ಕುಮಾರ್ ಅವರ ನಂತರ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಹೃದಯವಂತ, ಪ್ರೀತಿ ಪಾತ್ರ ನಟ ಕನ್ನಡ ಚಿತ್ರರಂಗದಲ್ಲಿ ಸಿಗಲಿಕ್ಕಿಲ್ಲ. ಸಿಗುವುದೂ ಇಲ್ಲ ಎಂದು ಇಂದಿಗೂ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಅದು ಅಕ್ಷರಶಃ ಸತ್ಯ.
ಬಾಕ್ಸ್ :
ಅಕ್ಷರಶಃ ಇಂದು ನಮ್ಮೊಟ್ಟಿಗೆ ಅಂದಿನ ವಿಷ್ಣು ಕೂಡಾ ಇಲ್ಲ. ವಿಷ್ಣು ಮೇಷ್ಟ್ರಾಗಿದ್ದ ಚಾಮಯ್ಯ ಮೇಷ್ಟ್ರು ಅಶ್ವಥ್ ಕೂಡಾ ಇಲ್ಲ. ಇದೇ ಗುರು ಶಿಷ್ಯ ಸಂಬಂಧ ಅಲ್ಲವೇ, ಆದ್ರೆ ಅವರ ಹೆಜ್ಜೆ ಗುರುತುಗಳಿವೆ. ಕೋಟೆಯಲ್ಲಿ ಚಾಮಯ್ಯ ಮೇಷ್ಟ್ರು ಸದ್ದು ಇಂದೂ ಇದೆ. ಮೇಷ್ಟ್ರೇ ಮೇಷ್ಟ್ರೇ ನಾನು ತಪ್ಪು ಮಾಡಿಲ್ಲ ಮೇಷ್ಟ್ರೇ ಎಂದು ರಾಮಾಚಾರಿ ಅಬ್ಬರಿಸುವ ಧ್ವನಿಗಳಿವೆ.
ಇಂದು ವಿಷ್ಣು ಅಗಲಿಕೆಯಿಂದ ಈ ಐತಿಹಾಸಿಕ ಕೋಟೆ. ಕಾಲೇಜು, ಕ್ರೀಡಾಂಗಣ, ಈ ಗರಡಿ ಮನೆಗಳು ವಿಷ್ಣು ಇಲ್ಲದೇ ಖಾಲಿ ಖಾಲಿಯಾಗಿ ಉಳಿದಿವೆ. ಕೇವಲ ನೆನಪಿನೊಂದಿಗೆ...
Friday, January 4, 2013
Subscribe to:
Posts (Atom)